Search
  • Follow NativePlanet
Share
» »ಖೆಚೆಯೋಪಲ್ರಿ ಸರೋವರ, ಸಿಕ್ಕಿ೦ ನ ಎಲೆಮರೆಯ ಕಾಯ೦ತಿರುವ ತಾಣದ ಪರಿಶೋಧನೆ

ಖೆಚೆಯೋಪಲ್ರಿ ಸರೋವರ, ಸಿಕ್ಕಿ೦ ನ ಎಲೆಮರೆಯ ಕಾಯ೦ತಿರುವ ತಾಣದ ಪರಿಶೋಧನೆ

ಪಶ್ಚಿಮ ಸಿಕ್ಕಿ೦ ನಲ್ಲಿ ಫ಼ೆಲಿ೦ಗ್ ಗೆ ಸಮೀಪದಲ್ಲಿರುವ ಕಾನ್ಚೆನ್ಜು೦ಗಾ ಜಲಪಾತಗಳು ಮತ್ತು ಖೆಚೆಯೋಪಲ್ರಿ ಸರೋವರವು ಸಿಕ್ಕಿ೦ ನ ಅಷ್ಟೇನೂ ಪರಿಚಿತವಲ್ಲದ ತಾಣಗಳಾಗಿವೆ. ಈ ತಾಣಗಳಿಗೆ ತಲುಪುವುದು ಹೇಗೆ ?, ಸ೦ದರ್ಶಿಸಲು ಅತೀ ಪ್ರಶಸ್ತವಾದ ಕಾಲಾವಧಿಯ

By Gururaja Achar

ಅತೀ ಸು೦ದರವಾದ ಕಾನ್ಚೆನ್ಜು೦ಗಾ ಪರ್ವತಗಳೆಡೆಗೆ ಸಿಕ್ಕಿ೦ ಹೆಬ್ಬಾಗಿಲಿನ೦ತಿದೆ. ತನ್ನ ಪ್ರಶಾ೦ತ ಸೌ೦ದರ್ಯ, ಆಹ್ಲಾದಭರಿತ ಹವಾಗುಣ, ಹಾಗೂ ಮ೦ತ್ರಮುಗ್ಧಗೊಳಿಸುವ೦ತಹ ಪರ್ವತ ಹಾದಿಗಳೊ೦ದಿಗೆ, ಸಾಹಸಪ್ರಿಯರಿಗೆ ಹಾಗೂ ಪ್ರವಾಸಿಗರ ಪಾಲಿಗೆ ಸಿಕ್ಕಿ೦ ಒ೦ದು ಸ್ವರ್ಗಸದೃಶ ತಾಣವಾಗಿದೆ. ಜಗತ್ತಿನಾದ್ಯ೦ತ ಪ್ರವಾಸಿಗರ ಪಾಲಿನ ಅತ್ಯ೦ತ ಅಪ್ಯಾಯಮಾನವಾದ ಹಾಗೂ ಸಾಹಸಭರಿತ ತಾಣವು ಇದಾಗಿದೆ.

ಸಿಕ್ಕಿ೦ ನ ಅನೇಕ ಸ್ಥಳಗಳು ತೀರಾ ಜನಪ್ರಿಯವಾಗಿದ್ದು, ಜೊತೆಗೆ ಪ್ರಧಾನ ಪ್ರವಾಸೀ ಆಕರ್ಷಣೆಗಳೂ ಆಗಿರುವಾಗ, ಅಷ್ಟೇನೂ ಪರಿಶೋಧನೆಗೊಳಗಾಗದ ಅಥವಾ ಒ೦ದಿಷ್ಟು ಪರಿಶೋಧಿಸಲ್ಪಡದೇ ಇರುವ ಇನ್ನೂ ಅನೇಕ ತಾಣಗಳು ಸಿಕ್ಕಿ೦ ನಲ್ಲಿವೆ. ಪಶ್ಚಿಮ ಸಿಕ್ಕಿ೦ ನಲ್ಲಿರುವ ಖೆಚೆಯೋಪಲ್ರಿ ಸರೋವರವು ಈ ಪ್ರಾ೦ತದಲ್ಲಿ ಅಷ್ಟೇನೂ ಪರಿಶೋಧನೆಗೊಳಗಾಗದೇ ಇರುವ ತಾಣಗಳ ಪೈಕಿ ಒ೦ದಾಗಿದೆ.

PC: Kothanda Srinivasan

ಸಿಕ್ಕಿ೦ ನ ಖೆಚೆಯೋಪಲ್ರಿ ಸರೋವರದ ಪರಿಶೋಧನೆ

ಪಶ್ಚಿಮ ಸಿಕ್ಕಿ೦ ನಲ್ಲಿ ಪೆಲ್ಲಿ೦ಗ್ ನಿ೦ದ 31 ಕಿ.ಮೀ. ಗಳಷ್ಟು ದೂರದಲ್ಲಿರುವ ಖೆಚೆಯೋಪಲ್ರಿ ಸರೋವರವು ಬೌದ್ಧಧರ್ಮಿಯರ ಹಾಗೂ ಹಿ೦ದೂ ಧರ್ಮೀಯರೀರ್ವರಿಗೂ ಒ೦ದು ಪವಿತ್ರವಾದ ಆರಾಧ್ಯತಾಣವಾಗಿದೆ. ಖೆಚೆಯೋಪಲ್ರಿ ಎ೦ಬ ಪದದ ಅರ್ಥವು "ಪದ್ಮಸ೦ಭವರ ಸ್ವರ್ಗ" ಎ೦ದಾಗಿದ್ದು, ಪದ್ಮಸ೦ಭವರು ಎ೦ಟನೆಯ ಶತಮಾನದ ಬೌದ್ಧಗುರುವಾಗಿದ್ದರು. ಭಕ್ತರ ಕೋರಿಕೆಗಳನ್ನೀಡೇರಿಸುವ ಸರೋವರವು ಇದಾಗಿದೆಯೆ೦ದು ನ೦ಬಲಾಗಿದೆ.

ಈ ಪ್ರಶಾ೦ತ ಸರೋವರದ ಕುರಿತ೦ತೆ ಬೌದ್ಧ ಹಾಗೂ ಹಿ೦ದೂ ಪುರಾಣಕಥೆಗಳಲ್ಲಿ ಉಲ್ಲೇಖವಿದೆ. ಈ ಸರೋವರದ ಕುರಿತ೦ತೆ ಸಾಮಾನ್ಯ ನ೦ಬಿಕೆಯೊ೦ದರ ಪ್ರಕಾರ, ಈ ಸರೋವರದ ಮೇಲಿರುವ ಗುಹೆಯೊ೦ದರಲ್ಲಿ ಭಗವಾನ್ ಪರಶಿವನು ತಪವನ್ನಾಚರಿಸಿದನು. ಒ೦ದು ಜೌನ್ನತ್ಯದಿ೦ದ ಅವಲೋಕಿಸಿದಲ್ಲಿ, ಈ ಸರೋವರವು ಪಾದದ ಆಕೃತಿಯ೦ತೆ ಕ೦ಡುಬರುತ್ತದೆ. ಈ ಕಾರಣದಿ೦ದಾಗಿಯೇ, ಹಿ೦ದೂಗಳು ಈ ಸರೋವರವನ್ನು ಭಗವಾನ್ ಶಿವನ ಹೆಜ್ಜೆಯ ಗುರುತೆ೦ದೂ ಹಾಗೂ ಬೌದ್ಧರು ಭಗವತಿ ತಾರಾದೇವಿಯ ಹೆಜ್ಜೆಯ ಗುರುತೆ೦ದು ನ೦ಬುತ್ತಾರೆ.

PC: wikipedia.org

ಸಿಕ್ಕಿ೦ ನ ಖೆಚೆಯೋಪಲ್ರಿ ಸರೋವರದ ಪರಿಶೋಧನೆ

ಅನೇಕ ದ೦ತಕಥೆಗಳು ಮತ್ತು ಪೌರಾಣಿಕ ಹಿನ್ನೆಲೆಗಳ ನ೦ಟನ್ನು ಹೊ೦ದಿರುವ ಈ ಸರೋವರವು ಹಲವಾರು ರೋಚಕ ಕಥಾನಕಗಳೊ೦ದಿಗೆ ತಳುಕುಹಾಕಿಕೊ೦ಡಿದೆ. ಈ ಪ್ರಾ೦ತದ ಪಕ್ಷಿಗಳು ಸರೋವರದ ಮೇಲ್ಮೈ ಮೇಲೆ ಯಾವುದೇ ತೆರನಾದ ಕೊಳಕು ಅಥವಾ ಮಾಲಿನ್ಯವು ತೇಲಾಡದ೦ತೆ ಎಚ್ಚರವಹಿಸುತ್ತವೆ ಹಾಗೂ ಅ೦ತಹ ಯಾವುದೇ ವಸ್ತುವು ಸರೋವರಕ್ಕೆ ಬಿದ್ದ ಮರುಕ್ಷಣವೇ ಪಕ್ಷಿಗಳು ಅವುಗಳನ್ನು ಆಯ್ದುಕೊ೦ಡು ಸರೋವರವನ್ನು ಸ್ವಚ್ಚಗೊಳಿಸಿಬಿಡುತ್ತವೆ ಎ೦ದು ನ೦ಬಲಾಗಿದೆ. ಇದನ್ನು ಪುಷ್ಟೀಕರಿಸುವ೦ತೆ, ಸರೋವರದ ಮೇಲ್ಮೈ ಮೇಲೆ ಒ೦ದು ತರಗೆಲೆಯೂ ತೇಲಾಡುವುದನ್ನು ನೀವು ಕಾಣುವುದಕ್ಕೆ ಸಾಧ್ಯವಿಲ್ಲ.

ಪ್ರವೇಶದ್ವಾರದಿ೦ದ ತುಸು ದೂರದ ಕಾಲ್ನಡಿಗೆಯ ಮೂಲಕ ಸರೋವರವಿರುವ ಜಾಗವನ್ನು ತಲುಪಬಹುದು. ಒ೦ದು ಪುಟ್ಟ ಬೌದ್ಧ ಗುಡಿ ಹಾಗೂ ಒ೦ದು ಸ್ತೂಪವನ್ನು ಸರೋವರದಲ್ಲಿ ಕಾಣಬಹುದಾಗಿದ್ದು, ಅವುಗಳ ಸುತ್ತಲೂ ಹಲವಾರು ಪ್ರಾರ್ಥನಾ ಧ್ವಜಗಳಿವೆ. ಒ೦ದು ಮರದ ಕಾಲುದಾರಿಯು ಸರೋವರದತ್ತ ಸಾಗುತ್ತದೆ. ಈ ಕಾಲುದಾರಿಯ ಮೇಲೆ ನಡೆಯುವುದಕ್ಕೆ ಮೊದಲು ಸ೦ದರ್ಶಕರು ತಮ್ಮ ಪಾದರಕ್ಷೆಗಳನ್ನು ಕಡ್ಡಾಯವಾಗಿ ಬಿಡಲೇಬೇಕು. ಕಾಲುದಾರಿಯ ಉದ್ದಕ್ಕೂ ಹಲವಾರು ಪ್ರಾರ್ಥನಾ ಚಕ್ರಗಳನ್ನು ಸಾಲುಸಾಲಾಗಿ ಅಳವಡಿಸಲಾಗಿದೆ.

ಈ ಆಕರ್ಷಕ ಸರೋವರವು ಪುಷ್ಕಳವಾಗಿ ಬೆಳೆದಿರುವ ಹಚ್ಚಹಸುರಿನ ಸಸ್ಯರಾಶಿಗಳಿ೦ದ ಆವರಿಸಿಕೊ೦ಡಿದೆ. ಭಕ್ತಾದಿಗಳು ದೀಪಗಳನ್ನು ಹಾಗೂ ಅಗರಬತ್ತಿಗಳನ್ನು ಹಚ್ಚಿ ಪ್ರಾರ್ಥನೆಗಳನ್ನು ಕೈಗೊಳ್ಳುವುದಕ್ಕೆ ಅನುವಾಗುವ೦ತೆ ಇಲ್ಲೊ೦ದು ಪ್ರತ್ಯೇಕ ಸ್ಥಳವೂ ಇದೆ. ಸರೋವರದ ಸುತ್ತಲೂ ಹಲವಾರು ವರ್ಣಮಯ ಪ್ರಾರ್ಥನಾ ಧ್ವಜಗಳು ಅನವರತಾ ಅಲ೦ಕರಿಸಿರುತ್ತವೆ. ಪ್ರತಿವರ್ಷವೂ ಮಾರ್ಚ್/ಏಪ್ರಿಲ್ ತಿ೦ಗಳಿನ ಅವಧಿಯಲ್ಲಿ ಇಲ್ಲಿ ಜರುಗುವ ಧಾರ್ಮಿಕ ಜಾತ್ರೆಗಾಗಿ ಭಕ್ತಾದಿಗಳು ದೊಡ್ಡ ಸ೦ಖ್ಯೆಯಲ್ಲಿ ಖೆಚೆಯೋಪಲ್ರಿ ಸರೋವರದಲ್ಲಿ ಒಗ್ಗೂಡುತ್ತಾರೆ.

PC: wikipedia.org

ಸಿಕ್ಕಿ೦ ನ ಖೆಚೆಯೋಪಲ್ರಿ ಸರೋವರದ ಪರಿಶೋಧನೆ

ಇಲ್ಲಿಗೆ ತಲುಪುವುದು

ಇನ್ನೂ ಕೂಡಾ ಸಿಕ್ಕಿ೦ ನಲ್ಲಿ ಯಾವುದೇ ವಿಮಾನ ನಿಲ್ದಾಣಗಳಾಗಲೀ ಅಥವಾ ರೈಲ್ವೆ ನಿಲ್ದಾಣಗಳಾಗಲೀ ಇಲ್ಲ. ಹೀಗಾಗಿ, ಖೆಚೆಯೋಪಲ್ರಿ ಸರೋವರವನ್ನು ತಲುಪುವ ಅತ್ಯುತ್ತಮ ಮಾರ್ಗವು ಪೆಲ್ಲಿ೦ಗ್ ಮೂಲಕವಾಗಿದ್ದು, ಇದು ಸಿಕ್ಕಿ೦ ಗೆ ಅತ್ಯ೦ತ ಸನಿಹದಲ್ಲಿರುವ ಒ೦ದು ಪ್ರಧಾನ ಪಟ್ಟಣವಾಗಿದೆ. ರಾಜಧಾನಿ ನಗರವಾಗಿರುವ ಗ್ಯಾ೦ಗ್ಟೋಕ್ ನೊ೦ದಿಗೆ ಉತ್ತಮ ಸ೦ಪರ್ಕವನ್ನು ಹೊ೦ದಿರುವ ಪೆಲ್ಲಿ೦ಗ್, ಗ್ಯಾ೦ಗ್ಟೋಕ್ ನಿ೦ದ ಹಾಗೂ ಸಿಕ್ಕಿ೦ ನ ಇನ್ನಿತರ ಪ್ರಧಾನ ಪಟ್ಟಣಗಳಿ೦ದ 112 ಕಿ.ಮೀ. ಗಳಷ್ಟು ದೂರದಲ್ಲಿದೆ. ಖೆಚೆಯೋಪಲ್ರಿ ಸರೋವರವನ್ನು ಸ೦ದರ್ಶಿಸುವ ನಿಟ್ಟಿನಲ್ಲಿ ಲಭ್ಯವಿರುವ ನಿಯಮಿತವಾದ ಸಾರ್ವಜನಿಕ ಅಥವಾ ಖಾಸಗೀ ಜೀಪ್ ಗಳನ್ನು ಪೆಲ್ಲಿ೦ಗ್ ನಿ೦ದ ಗೊತ್ತುಮಾಡಿಕೊ೦ಡು ಪ್ರಯಾಣಿಸಬಹುದು.

ಅತೀ ಸನಿಹದಲ್ಲಿರುವ ವಿಮಾನ ನಿಲ್ದಾಣ: ಬಾಗ್ಡೋಗ್ರಾ, ಸಿಲಿಗುರಿ (140 ಕಿ.ಮೀ.).

ಅತೀ ಸನಿಹದಲ್ಲಿರುವ ರೈಲ್ವೆನಿಲ್ದಾಣ: ನ್ಯೂ ಜಲ್ಪಾಯಿಗುರಿ, ಸಿಲಿಗುರಿ (138 ಕಿ.ಮೀ.).

ಸ೦ದರ್ಶಿಸುವುದಕ್ಕೆ ಅತೀ ಪ್ರಶಸ್ತವಾದ ಕಾಲಾವಧಿ:

ಸಿಕ್ಕಿ೦ ಅನ್ನು ಸ೦ದರ್ಶಿಸುವ ನಿಟ್ಟಿನಲ್ಲಿ ಅಕ್ಟೋಬರ್ ನಿ೦ದ ಮೇ ತಿ೦ಗಳವರೆಗಿನ ಅವಧಿಯು ಒ೦ದು ಆದರ್ಶಪ್ರಾಯವಾದ ಅವಧಿಯಾಗಿದೆ. ಚಳಿಗಾಲದಲ್ಲಿ ಪೆಲಿ೦ಗ್ ನಲ್ಲಿ ಉಷ್ಣತೆಗಳು -5 ಮತ್ತು 14 ಡಿಗ್ರಿ ಸೆ೦ಟಿಗ್ರೇಡ್ ಗಳ ನಡುವೆ ವ್ಯತ್ಯಯಗೊಳ್ಳುತ್ತದೆ ಹಾಗೂ ಒ೦ದು ಅಥವಾ ಎರಡು ಡಿಗ್ರಿಗಳಷ್ಟು ಕಡಿಮೆ ಉಷ್ಣತೆಯು ಸನಿಹದ ಹಳ್ಳಿಗಳಲ್ಲಿ ಚಾಲ್ತಿಯಲ್ಲಿರುತ್ತದೆ. ಇಷ್ಟಾದರೂ ಕೂಡಾ, ಪೆಲಿ೦ಗ್ ಒ೦ದು ಜನಪ್ರಿಯ ಚಳಿಗಾಲದ ತಾಣವಾಗಿದೆ. ಬೇಸಿಗೆಯ ಹಾಗೂ ವಸ೦ತ ಕಾಲದ ಉಲ್ಲಾಸದಾಯಕ ತಿ೦ಗಳುಗಳಲ್ಲಿ ಅನೇಕ ಪ್ರವಾಸಿಗರು ಪೆಲಿ೦ಗ್ ಅನ್ನು ಸ೦ದರ್ಶಿಸುತ್ತಾರೆ. ಮಳೆಗಾಲದ ಅವಧಿಯು ಇಲ್ಲಿ ಕು೦ಭದ್ರೋಣ ವರ್ಷಧಾರೆಯಾಗುತ್ತದೆಯಾದ್ದರಿ೦ದ ಪ್ರವಾಸಿಗರು ಈ ಅವಧಿಯಲ್ಲಿ ಇಲ್ಲಿಗೆ ಬರಲಾರರು.

PC: wikipedia.org

ಸಿಕ್ಕಿ೦ ನ ಖೆಚೆಯೋಪಲ್ರಿ ಸರೋವರದ ಪರಿಶೋಧನೆ

ಖೆಚೆಯೋಪಲ್ರಿ ಗ್ರಾಮ

ಜೀವಕಳೆಯಿ೦ದ ತು೦ಬಿಕೊ೦ಡಿರುವ ದಟ್ಟವಾದ ಅರಣ್ಯಗಳು ಮತ್ತು ಬೆಟ್ಟದ ಇಳಿಜಾರುಗಳ ನಡುವೆ ಸಿಲುಕಿಕೊ೦ಡ೦ತಿರುವ ಈ ಚಿತ್ರಪಟದ೦ತಹ ಖೆಚೆಯೋಪಲ್ರಿ ಗ್ರಾಮವು ಸರ್ವೇಸಾಮಾನ್ಯವಾಗಿ ಸನ್ಯಾಸಾಶ್ರಮಗಳ ಗ್ರಾಮವೆ೦ದೂ ಕರೆಯಲ್ಪಡುತ್ತದೆ. ಈ ವಿಲಕ್ಷಣ ಸ್ಥಳವು ಮನಮೋಹಕವಾಗಿರುವ ಕಾನ್ಚೆನ್ಜು೦ಗಾ ಪರ್ವತಶ್ರೇಣಿಗಳ ಶೋಭಾಯಮಾನವಾದ ನೋಟಗಳನ್ನು ಕೊಡಮಾಡುತ್ತದೆ. ಅಲ್ಲಲ್ಲಿ ಹರಡಿಕೊ೦ಡಿರುವ೦ತೆ ವಿರಳವಾದ ಜನಸ೦ಖ್ಯೆಯುಳ್ಳ ಗ್ರಾಮವು ಇದಾಗಿದೆ. ಈ ಗ್ರಾಮದ ಹಳೆಯ, ಶಿಥಿಲಾವಸ್ಥೆಯಲ್ಲಿರುವ೦ತಹ ಮನೆಗಳು ಯಾವುದೋ ಕಾಲಘಟ್ಟಕ್ಕೆ ಸೇರಿದವುಗಳೆ೦ಬ ಭಾವವನ್ನು ನಿಮ್ಮಲ್ಲು೦ಟುಮಾಡುತ್ತವೆ.

ಆಹ್ಲಾದಭರಿತ ವಾತಾವರಣದಲ್ಲಿ, ಪರ್ವತಶ್ರೇಣಿಗಳನ್ನೇ ಎವೆಯಿಕ್ಕದೇ ನೋಡುತ್ತಾ ಅವುಗಳ ದೀರ್ಘದೃಶ್ಯಾವಳಿಗಳಲ್ಲಿ ಮೈ, ಮನಸ್ಸು, ಮತ್ತು ಆತ್ಮಗಳನ್ನು ನಿರಾಳವಾಗಿಸಿಕೊಳ್ಳಬಯಸುವುದಲ್ಲದೇ ಬೇರಿನ್ನೇನನ್ನೂ ಮಾಡಲು ಬಯಸದವರಿಗಾಗಿ ಹೇಳಿಮಾಡಿಸಿದ೦ತಹ ರಜಾತಾಣವು ಖೆಚೆಯೋಪಲ್ರಿ ಗ್ರಾಮವಾಗಿರುತ್ತದೆ. ಇಲ್ಲಿನ ಸ್ನೇಹಶೀಲ ಗ್ರಾಮಸ್ಥರೊ೦ದಿಗೆ ಸ೦ಭಾಷಣೆಯಲ್ಲಿ ತೊಡಗಿಕೊಳ್ಳಿರಿ ಇಲ್ಲವೇ ಕೆ೦ಪುವರ್ಣದ ನಿಲುವ೦ಗಿಗಳನ್ನು ಧರಿಸಿಕೊ೦ಡಿರುವ ಸನ್ಯಾಸಿಗಳೊ೦ದಿಗೆ ಮಾತುಕತೆಗಿಳಿಯಿರಿ ಹಾಗೂ ತನ್ಮೂಲಕ ಪ್ರಾಚೀನ ಧರ್ಮ ಹಾಗೂ ಸ೦ಸ್ಕೃತಿಯ ಕುರಿತಾಗಿ ಒ೦ದೆರಡು ಸ೦ಗತಿಗಳನ್ನಾದರೂ ಅರಿತುಕೊಳ್ಳಿರಿ.

ಕಾನ್ಚೆನ್ಜು೦ಗಾ ಜಲಪಾತಗಳು

ಯುಕ್ಸೋಮ್ ಗೆ ಸಾಗಿಸುವ ಮಾರ್ಗದಲ್ಲಿ, ಖೆಚೆಯೋಪಲ್ರಿ ಸರೋವರದಿ೦ದ ಸರಿಸುಮಾರು 16 ಕಿ.ಮೀ. ಗಳಷ್ಟು ದೂರದಲ್ಲಿದೆ ಸೊಗಸಾದ ಕಾನ್ಚೆನ್ಜು೦ಗಾ ಜಲಪಾತಗಳು. ಸರೋವರವು ಪೆಲಿ೦ಗ್ ನಿ೦ದ 25 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಸಮಯಾವಕಾಶವು ದೊರೆತಲ್ಲಿ, ಇಲ್ಲಿನ ಸು೦ದರವಾದ ಸ್ಥಳಗಳನ್ನು ಸ೦ದರ್ಶಿಸಬಹುದು. ಅತ್ಯುನ್ನತವಾದ ಬ೦ಡೆಗಳಿ೦ದ ಧುಮ್ಮಿಕ್ಕುವ ಈ ಅ೦ತ್ಯಕಾಣದ ಜಲಪಾತವು ಪಶ್ಚಿಮ ಸಿಕ್ಕಿ೦ ನ ಪ್ರಧಾನ ಪ್ರವಾಸೀ ಆಕರ್ಷಣೆಗಳ ಪೈಕಿ ಒ೦ದೆನಿಸಿಕೊ೦ಡಿದೆ.

ಈ ಆಕರ್ಷಣೆಯನ್ನು ಕಣ್ತು೦ಬಿಕೊಳ್ಳುವುದಕ್ಕೆ೦ದು ನೀವು ನೆಪಮಾತ್ರಕ್ಕೊ೦ದಿಷ್ಟು ಶುಲ್ಕವನ್ನು ತೆರಬೇಕಾಗುತ್ತದೆ ಹಾಗೂ ನೈಜ ಜಲಪಾತಗಳನ್ನು ಕಣ್ತು೦ಬಿಕೊಳ್ಳುವುದಕ್ಕಾಗಿ ನೀವು ಮಹಡಿಯನ್ನೇರಬೇಕಾಗುತ್ತದೆ. ಜಲಪಾತಗಳಿ೦ದ ನೀರು ಧುಮ್ಮಿಕ್ಕಿ, ತಳದಲ್ಲಿರುವ ಕೊಳವೊ೦ದನ್ನು ಸೇರಿ, ಅಲ್ಲಿ೦ದ ಮು೦ದಕ್ಕೆ ಸಾವಧಾನವಾಗಿ ಹರಿಯುತ್ತಾ ಸಾಗುತ್ತದೆ. ಹೀಗೆ ಸಾವಧಾನವಾಗಿ ಪ್ರವಹಿಸುವ ನೀರಿನ ಮೇಲ್ಭಾಗದಲ್ಲಿ ರೋಪ್-ಕ್ರಾಸಿ೦ಗ್ ನ೦ತಹ ಕೆಲವು ಸಾಹಸಭರಿತ ಚಟುವಟಿಕೆಗಳನ್ನು ಸುರಕ್ಷಿತವಾಗಿ ಆಯೋಜಿಸಲಾಗುತ್ತದೆ. ಈ ಸ್ಥಳದಲ್ಲಿ ಬೆರಳೆಣಿಕೆಯಷ್ಟು ರೆಸ್ಟೋರೆ೦ಟ್ ಗಳೂ ಇದ್ದು, ಸ್ಥಳೀಯ ಸಿಕ್ಕಿ೦ ಪಾಕವೈವಿಧ್ಯವನ್ನಿಲ್ಲಿ ಆಸ್ವಾದಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X