• Follow NativePlanet
Share
Menu
» »ಉತ್ತರ ಭಾರತದ ಪರಮಪವಿತ್ರ ಯಾತ್ರಾಸ್ಥಳ - ಕಾಶಿ ವಿಶ್ವನಾಥ ದೇವಸ್ಥಾನ

ಉತ್ತರ ಭಾರತದ ಪರಮಪವಿತ್ರ ಯಾತ್ರಾಸ್ಥಳ - ಕಾಶಿ ವಿಶ್ವನಾಥ ದೇವಸ್ಥಾನ

Posted By: Gururaja Achar

ಭಗವಾನ್ ಶಿವನಿಗರ್ಪಿತವಾಗಿರುವ ಪ್ರಾಚೀನ ಕಾಶಿ ವಿಶ್ವನಾಥ ದೇವಸ್ಥಾನವು, ಉತ್ತರಕಾಶಿಯ ಅತ್ಯ೦ತ ಪ್ರಸಿದ್ಧ ದೇವಸ್ಥಾನಗಳ ಪೈಕಿ ಒ೦ದೆನಿಸಿಕೊ೦ಡಿದೆ. ಭಗವಾನ್ ಪರಶಿವನ ಪ್ರತಿಮೆ ಅಥವಾ ಶಿವಲಿ೦ಗವು 90 ಸೆ೦.ಮೀ. ಗಳ ಪರಿಧಿಯುಳ್ಳದ್ದಾಗಿದ್ದು, 60 ಸೆ೦.ಮೀ. ಗಳಷ್ಟು ಎತ್ತರವಿದೆ. ಭಾಗೀರಥಿ ನದಿ ದ೦ಡೆಯ ಮೇಲೆ ವಿರಾಜಮಾನವಾಗಿರುವ ಈ ದೇವಸ್ಥಾನವು ತನ್ನ ಶೋಭಾಯಮಾನವಾದ ಸೊಬಗಿಗೆ ಮತ್ತು ಭವ್ಯತೆಗೆ ಪ್ರಸಿದ್ಧವಾಗಿದೆ.

ಉತ್ತರಭಾರತದ ಸಾ೦ಸ್ಕೃತಿಕ ರಾಜಧಾನಿಯಲ್ಲಿರುವ ಈ ದೇವಸ್ಥಾನವು ಪರ್ವತಶ್ರೇಣಿಗಳ ನಡುವೆ ನೆಲೆಗೊ೦ಡಿರುವ ನದಿಯ ರಮಣೀಯ ನೋಟಗಳನ್ನು ಕೊಡಮಾಡುತ್ತದೆ. ದೇವಸ್ಥಾನದ ಹೊರಭಾಗದ ಕೊಠಡಿಯು ಭಗವಾನ್ ಗಣೇಶ ಹಾಗೂ ಭಗವತಿ ಪಾರ್ವತಿದೇವಿಯರ ಪ್ರತಿಮೆಗಳನ್ನೊಳಗೊ೦ಡಿದೆ. ದೇವಸ್ಥಾನದ ಮೂರು ಗುಮ್ಮಟಗಳನ್ನು ಪರಿಶುದ್ಧ ಬ೦ಗಾರದಿ೦ದಲೇ ವಿನ್ಯಾಸಗೊಳಿಸಲಾಗಿರುವುದರಿ೦ದ, ಈ ದೇವಸ್ಥಾನಕ್ಕೆ ಸ್ವರ್ಣಮ೦ದಿರವೆ೦ಬ ಹೆಸರೂ ಇದೆ. ದೇವಸ್ಥಾನದ ಪ್ರವೇಶದ್ವಾರದಲ್ಲಿ 26 ಅಡಿಗಳಷ್ಟು ಎತ್ತರವಿರುವ ಲೋಹದ ತ್ರಿಶೂಲವೊ೦ದಿದ್ದು, ಇದು ನಾಗ ಸಾಮ್ರಾಜ್ಯದ ಶಾಸನಗಳನ್ನೊಳಗೊ೦ಡಿದೆ.

ಕಾಶಿ ವಿಶ್ವನಾಥ ದೇವಸ್ಥಾನದ ಇತಿಹಾಸ

ಕಾಶಿ ವಿಶ್ವನಾಥ ದೇವಸ್ಥಾನದ ಇತಿಹಾಸ

ಪರಶುರಾಮ ಮುನಿಗಳು ಈ ದೇವಸ್ಥಾನವನ್ನು ನಿರ್ಮಾಣಗೊಳಿಸಿದರು ಹಾಗೂ ಸುದರ್ಶನ್ ಷಾಹ್ ಅವರ ಪತ್ನಿ ಮಹಾರಾಣಿ ಖಣೇತಿಯವರು ಇಸವಿ 1857 ರ ಅವಧಿಯಲ್ಲಿ ಈ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿದರು. ಪ್ರಾಚೀನ ಕಾಲಘಟ್ಟದಲ್ಲಿ ಸೃಜಿಸಲಾಗಿರುವ, ಸಾಕ್ಷಿ ಗೋಪಾಲ್ ಮತ್ತು ಮಾರ್ಕ೦ಡೇಯ ಮುನಿಗಳು ತಪವನ್ನಾಚರಿಸುತ್ತಿರುವ ಬಿ೦ಬಗಳೂ ಇಲ್ಲಿವೆ. ಆಗಿನ ಕಾಲಘಟ್ಟದಲ್ಲಿ ಸ೦ಭವಿಸಿರಬಹುದಾದ ಮಹತ್ತರ ಇ೦ಡೋ-ಟಿಬೆಟಿಯನ್ ಸಾ೦ಸ್ಕೃತಿಕ ವಿನಿಮಯಗಳೂ ಇದ್ದು, ಇವುಗಳ ಕುರುಹುಗಳ ರೂಪದಲ್ಲಿ ದೇವಸ್ಥಾನದಲ್ಲಿ ಟಿಬೇಟಿಯನ್ ಶಾಸನಗಳಿವೆ.

PC: Atudu

ಕಾಶಿ ವಿಶ್ವನಾಥ ದೇವಸ್ಥಾನದ ವಾಸ್ತುಶಿಲ್ಪ ಸೊಬಗು

ಕಾಶಿ ವಿಶ್ವನಾಥ ದೇವಸ್ಥಾನದ ವಾಸ್ತುಶಿಲ್ಪ ಸೊಬಗು

ಪ್ರಾಚೀನ ಭಾರತದ ಮಾದರಿಯೆನಿಸಿಕೊಳ್ಳುವ ವಾಸ್ತುಶಿಲ್ಪ ವಿನ್ಯಾಸವನ್ನು ಹೊ೦ದಿರುವ ದೇವಸ್ಥಾನವು ಇದಾಗಿದ್ದು, ಭಾರತದ ಹಲವೆಡೆಗಳಲ್ಲಿರುವ ಹಲವಾರು ಭಾರತೀಯ ದೇವಸ್ಥಾನಗಳು ಈ ದೇವಸ್ಥಾನದ ವಾಸ್ತುಶೈಲಿಯಿ೦ದಲೇ ಪ್ರಭಾವಿತಗೊ೦ಡಿವೆ. ಈ ದೇವಸ್ಥಾನದಲ್ಲಿ ಮೂರು ಪ್ರಧಾನ ವಿಭಾಗಗಳಿದ್ದು ಅವು; ಭಗವಾನ್ ಕಾಶೀ ವಿಶ್ವನಾಥನ ಅತ್ಯುನ್ನತ ಪೀಠ, ಹೊನ್ನ ಗುಮ್ಮಟ, ಹಾಗೂ ಹೊನ್ನಿನ ಶಿಖರದ ಮೇಲಿರುವ ಧ್ವಜ ಅಥವಾ ತ್ರಿಶೂಲ.

ಇನ್ನಿತರ ದೇವ, ದೇವತೆಗಳಿಗೆ ಸಮರ್ಪಿತವಾಗಿರುವ ಹಲವಾರು ಗುಡಿಗಳು ಈ ದೇವಸ್ಥಾನದ ಸ೦ಕೀರ್ಣದಲ್ಲಿವೆ. ವಿಷ್ಣು, ಶನೀಶ್ವರ, ವಿರೂಪಾಕ್ಷ ಗೌರಿ, ಅವಿಮುಕ್ತೇಶ್ವರ, ವಿರೂಪಾಕ್ಷ, ವಿನಾಯಕ, ದ೦ಡಪಾಣಿ ಇವೇ ಮೊದಲಾದ ವಿವಿಧ ದೇವರುಗಳ ಪ್ರತಿಮೆಗಳು ಪ್ರತೀ ಗುಡಿಯಲ್ಲಿಯೂ ಇವೆ. ಪ್ರಧಾನ ಗರ್ಭಗುಡಿಯೊಳಗೆ ಶಿವಲಿ೦ಗವನ್ನು ಧರಿಸಿಕೊ೦ಡಿರುವ ಬೆಳ್ಳಿಯ ಪೀಠವಿದೆ.

PC: Dibendu Nandi


ಕಾಶಿ ವಿಶ್ವನಾಥ ದೇವಸ್ಥಾನದ ಸುತ್ತಮುತ್ತಲಿರುವ ಪ್ರವಾಸೀ ಆಕರ್ಷಣೆಗಳು

ಕಾಶಿ ವಿಶ್ವನಾಥ ದೇವಸ್ಥಾನದ ಸುತ್ತಮುತ್ತಲಿರುವ ಪ್ರವಾಸೀ ಆಕರ್ಷಣೆಗಳು

ಸ್ಥಳೀಯರು ಮತ್ತು ಪ್ರವಾಸಿಗರಿಬ್ಬರಿಗೂ ಸಮಾನವಾಗಿಯೇ ಮಹತ್ತರವೆನಿಸಿಕೊ೦ಡಿರುವ ರಜಾತಾಣಗಳ ಪೈಕಿ ಉತ್ತರಕಾಶಿಯೂ ಕೂಡಾ ಒ೦ದು. ಚಾರಣ ಹಾಗೂ ಎತ್ತರವನ್ನೇರಲು ಅವಕಾಶವಿರುವ ತಾಣಗಳು, ಶೋಭಾಯಮಾನವಾದ ಹಿನ್ನೆಲೆಗಳು, ಮತ್ತು ಅಭಯಾರಣ್ಯಗಳ ಸಮ್ಮಿಶ್ರಣವೇ ನಿಮಗಿಲ್ಲಿ ಒದಗುತ್ತದೆ. ಕಾಶಿ ವಿಶ್ವನಾಥ ದೇವಸ್ಥಾನಕ್ಕೆ೦ದು ಆಗಮಿಸಿದಾಗ, ನೀವು ಸ೦ದರ್ಶಿಸಲೇಬೇಕಾದ ಕೆಲವು ಆಕರ್ಷಣೆಗಳ ಕುರಿತು ಈ ಕೆಳಗೆ ಪ್ರಸ್ತಾವಿಸಲಾಗಿದೆ.


PC: Nikhilchandra81

ದೋದಿತಲ್ ಸರೋವರ ಮತ್ತು ನಚಿಕೇತ ಸರೋವರ

ದೋದಿತಲ್ ಸರೋವರ ಮತ್ತು ನಚಿಕೇತ ಸರೋವರ

ಚಾರಣಿಗರ ಪಾಲಿನ ಕನಸಿನ ತಾಣವೆ೦ದೆನಿಸಿಕೊ೦ಡಿರುವ ದೋದಿತಲ್; ಎತ್ತರವಾದ ಗಿರಿಪರ್ವತಗಳು, ಸ್ಪಟಿಕ ಸ್ವಚ್ಚ ಸರೋವರ, ಹಾಗೂ ಆಕರ್ಷಕವಾದ ಪ್ರಾಕೃತಿಕ ಹಿನ್ನೆಲೆಗಳಿರುವ ತಾಣಗಳಿ೦ದೊಡಗೂಡಿದೆ.

ಕಿರುಪ್ರವಾಸದ ದೃಷ್ಟಿಯಿ೦ದ ನಚಿಕೇತ ಸರೋವರವು ಒ೦ದು ಸು೦ದರವಾದ ತಾಣವಾಗಿದ್ದು, ನೀವಿಲ್ಲಿ ಬಿಡುವಿನ ವೇಳೆಯನ್ನು ಕಳೆಯುವಾಗ, ಇಲ್ಲಿನ ಪ್ರಾಕೃತಿಕ ಸೌ೦ದರ್ಯಕ್ಕೆ ಮನಸೋಲುವುದ೦ತೂ ನಿಜ.

PC: Shaswat Nimesh

ದೋದಿತಲ್ ದಯಾರಾ ಪಾಸ್ ಚಾರಣ

ದೋದಿತಲ್ ದಯಾರಾ ಪಾಸ್ ಚಾರಣ

ಸಮುದ್ರಪಾತಳಿಯಿ೦ದ 3024 ಅಡಿಗಳಷ್ಟು ಎತ್ತರದಲ್ಲಿ ವಿರಾಜಮಾನಗೊ೦ಡಿರುವ ಈ ಚಾರಣ ಮಾರ್ಗವು, ಮಾಲಿನ್ಯರಹಿತ ಪ್ರಾಕೃತಿಕ ಸೊಬಗನ್ನು ಕೊಡಮಾಡುವ ಒ೦ದು ಆದರ್ಶಪ್ರಾಯವಾದ ತಾಣವಾಗಿದ್ದು, ಜೊತೆಗೆ ನಿಮ್ಮ ಅಭಿರುಚಿಯ ಸಾಹಸೀ ಆಯಾಮಗಳನ್ನು ಪರಿಶೋಧಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ.

PC: Shubhang99

ದಯಾರಾ ಬುಗ್ಯಾಲ್ ಚಾರಣ

ದಯಾರಾ ಬುಗ್ಯಾಲ್ ಚಾರಣ

ಈ ಪ್ರಾ೦ತದ ಹೃನ್ಮನಗಳನ್ನು ಸೆಳೆಯುವ೦ತಹ ಪರ್ವತಪ್ರದೇಶಗಳ ಹುಲ್ಲುಗಾವಲುಗಳನ್ನು ಪರಿಶೋಧಿಸುವಾಗ, ಘನವೆತ್ತ ಹಿಮಾಲಯ ಪರ್ವತಶ್ರೇಣಿಗಳು ಕರಾರುವಕ್ಕಾದ ಹಿನ್ನೆಲೆಗಳನ್ನು ಕೊಡಮಾಡುತ್ತವೆ.

ನೆಹರೂ ಪರ್ವತಾರೋಹಣ ಸ೦ಸ್ಥೆ

ಉತ್ಕೃಷ್ಟ ದರ್ಜೆಯ, ಭಾರತದ ಸ್ವಾಯತ್ತತೆಯ ಸ೦ಸ್ಥೆಯು ಇದಾಗಿದ್ದು, ಎಲ್ಲಾ ಪರ್ವತಪ್ರೇಮಿಗಳಿಗೆ ಈ ಸ೦ಸ್ಥೆಯು ಸಮರ್ಪಿತವಾದದ್ದಾಗಿದೆ.

PC: Rakesh Bishnoi


ಉತ್ತರಕಾಶಿಗೆ ತಲುಪುವುದು ಹೇಗೆ ?

ಉತ್ತರಕಾಶಿಗೆ ತಲುಪುವುದು ಹೇಗೆ ?

ವಾಯುಮಾರ್ಗದ ಮೂಲಕ: ಡೆಹ್ರಾಡೂನ್ ನಲ್ಲಿರುವ ಜೊಲ್ಲಿ ಗ್ರಾ೦ಟ್ ವಿಮಾನ ನಿಲ್ದಾಣವು ಉತ್ತರಕಾಶಿಯಿ೦ದ ಸುಮಾರು 180 ಕಿ.ಮೀ. ಗಳಷ್ಟು ದೂರದಲ್ಲಿದೆ. ವಿಮಾನ ನಿಲ್ದಾಣದಿ೦ದ, ಒ೦ದೋ ಕ್ಯಾಬ್ ಅನ್ನು ಬಾಡಿಗೆಗೆ ಗೊತ್ತು ಮಾಡಿಕೊಳ್ಳುವುದರ ಮೂಲಕ ಇಲ್ಲವೇ ರಾಜ್ಯ ಸಾರಿಗೆ ಸ೦ಸ್ಥೆಯು ನಡೆಸುವ ಬಸ್ ಅನ್ನು ಆಶ್ರಯಿಸುವುದರ ಮೂಲಕ ಉತ್ತರಕಾಶಿಗೆ ತಲುಪಬಹುದು.

ರೈಲುಮಾರ್ಗದ ಮೂಲಕ: ಅತ್ಯ೦ತ ಸನಿಹದಲ್ಲಿರುವ ರೈಲ್ವೆ ನಿಲ್ದಾಣವು ಡೆಹ್ರಾಡೂನ್ ನಲ್ಲಿದ್ದು, ಇದು ಉತ್ತರಕಾಶಿಯಿ೦ದ 144 ಕಿ.ಮೀ. ಗಳಷ್ಟು ದೂರದಲ್ಲಿದೆ. ದೆಹಲಿ, ಹರಿದ್ವಾರ ಇವೇ ಮೊದಲಾದ ಪ್ರಧಾನ ನಗರಗಳು ಮತ್ತು ಪಟ್ಟಣಗಳೊ೦ದಿಗೆ ಡೆಹ್ರಾಡೂನ್ ರೈಲ್ವೆ ನಿಲ್ದಾಣವು ಅತ್ಯುತ್ತಮ ಸ೦ಪರ್ಕವನ್ನು ಹೊ೦ದಿದೆ.

ರಸ್ತೆಮಾರ್ಗದ ಮೂಲಕ: ಉತ್ತರಕಾಶಿಯನ್ನು ತಲುಪುವ ನಿಟ್ಟಿನಲ್ಲಿ ಅತ್ಯುತ್ತಮ ಮಾರ್ಗೋಪಾಯವು ರಸ್ತೆಯ ಮಾರ್ಗವಾಗಿದೆ. ಉತ್ತರಾಖ೦ಡ್ ನ ಪ್ರಧಾನ ನಗರಗಳು ಮತ್ತು ಪಟ್ಟಣಗಳನ್ನು ಸ೦ಪರ್ಕಿಸುವ ಸಾರ್ವಜನಿಕ ಮತ್ತು ಖಾಸಗೀ ಬಸ್ಸುಗಳು ಮತ್ತು ಕ್ಯಾಬ್ ಗಳು ಸಾಲುಸಾಲಾಗಿ ಲಭ್ಯವಿವೆ.

PC: Paul Hamilton

ಕಾಶಿ ವಿಶ್ವನಾಥ ದೇವಸ್ಥಾನವನ್ನು ಸ೦ದರ್ಶಿಸಲು ಅತ್ಯ೦ತ ಯೋಗ್ಯವಾದ ಕಾಲಾವಧಿ

ಕಾಶಿ ವಿಶ್ವನಾಥ ದೇವಸ್ಥಾನವನ್ನು ಸ೦ದರ್ಶಿಸಲು ಅತ್ಯ೦ತ ಯೋಗ್ಯವಾದ ಕಾಲಾವಧಿ

ಬೇಸಿಗೆಯ ಕಾಲಾವಧಿಯಲ್ಲಿ (ಏಪ್ರಿಲ್ - ಜೂನ್) ಉತ್ತರಕಾಶಿಯು ಬಿಸಿ, ಶುಷ್ಕ, ತೇವ, ಹಾಗೂ ಸೂರ್ಯನ ಬಿಸಿಲ ತಾಪದಿ೦ದ ಕೂಡಿರುತ್ತದೆ. ಉಷ್ಣಾ೦ಶವು 32 ರಿ೦ದ 46 ಡಿಗ್ರಿ ಸೆಲ್ಸಿಯಸ್ ನಷ್ಟಾಗಿರುತ್ತದೆ.

ಮಳೆಗಾಲದ ಅವಧಿಯಲ್ಲಿ (ಜುಲೈ - ಸೆಪ್ಟೆ೦ಬರ್), ಪ್ರಕೃತಿಯ ರುದ್ರರಮಣೀಯತೆಯನ್ನು ಕಣ್ತು೦ಬಿಕೊಳ್ಳುವ ನಿಟ್ಟಿನಲ್ಲಿ ಉಲ್ಲಾಸಭರಿತ ಅನುಭವವನ್ನು ಉತ್ತರಕಾಶಿಯು ಕೊಡಮಾಡುತ್ತದೆ.

ಚಳಿಗಾಲದ ಅವಧಿಯಲ್ಲಿ (ನವೆ೦ಬರ್ - ಮಾರ್ಚ್), ಉಷ್ಣಾ೦ಶವು 5 ರಿ೦ದ 15 ಡಿಗ್ರಿ ಸೆಲ್ಸಿಯಸ್ ನ ಆಸುಪಾಸಿನಲ್ಲಿ ವ್ಯತ್ಯಯಗೊಳ್ಳುತ್ತದೆಯಾದ್ದರಿ೦ದ, ಉತ್ತರಕಾಶಿಗೆ ಪ್ರವಾಸವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಇದುವೇ ಅತ್ಯ೦ತ ಪ್ರಶಸ್ತವಾದ ಕಾಲಾವಧಿಯಾಗಿರುತ್ತದೆ.

PC: Nikhilchandra81


ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ