Search
  • Follow NativePlanet
Share
» »ಕಲ್ಲರಳಿ ಹೂವಾದಂತಹ ಕಲಬುರುಗಿ ಪ್ರವಾಸ ತಾಣ

ಕಲ್ಲರಳಿ ಹೂವಾದಂತಹ ಕಲಬುರುಗಿ ಪ್ರವಾಸ ತಾಣ

ಹಿಂದೆ ಗುಲಬರ್ಗಾ ಎಂದು ಕರೆಯಲ್ಪಡುತ್ತಿದ್ದ ಇಂದಿನ ಕಲಬುರಗಿಯು ಉತ್ತರ ಕರ್ನಾಟಕದಲ್ಲಿ ಸ್ಥಿತವಿರುವ ಒಂದು ಪ್ರಸಿದ್ಧ ಐತಿಹಾಸಿಕ ಪ್ರವಾಸಿ ತಾಣವಾಗಿ ಗಮನಸೆಳೆಯುತ್ತದೆ

By Divya

ಬೇಸಿಗೆಯಲ್ಲಿ ಸುಮಾರು 46 ಡಿಗ್ರಿ ತಾಪಮಾನ, ಚಳಿಗಾಲದಲ್ಲಿ ಕಡಿಮೆ ಎಂದರೂ 15 ಡಿಗ್ರಿ ತಾಪಮಾನ ಇರುವ ಜಾಗಕ್ಕೆ ಪ್ರವಾಸ ಹೋಗುವುದು ಎಂದರೆ ಮೂಗು ಮುರಿಯುವವರೇ ಹೆಚ್ಚು. ಜೊತೆಗೆ ಬಯಲು ಸೀಮೆ, ಬರೇ ಕಲ್ಲು ಮಣ್ಣುಗಳಿಂದಲೇ ಕೂಡಿರುವ ಪ್ರದೇಶ, ಅದರಲ್ಲೇನಿದೆ ವಿಶೇಷ ಎಂದು ಸುಮ್ಮನಾಗುತ್ತಾರೆ.

ಅಂತಹ ಜಾಗದಲ್ಲೂ ವಿಸ್ಮಯ ಎನ್ನುವ ಸಂಗತಿಗಳಿರುತ್ತವೆ ಎನ್ನುವುದನ್ನು ನಾವು ಮರೆಯಬಾರದು. ನಿಜ, ನಾನು ಹೇಳುತ್ತಿರುವುದು ಕರ್ನಾಟಕದ ಎರಡನೇ ಅತಿದೊಡ್ಡ ಜಿಲ್ಲೆ ಕಲಬುರಗಿ (ಗುಲ್ಬರ್ಗ)ಬಗ್ಗೆ. ಇಲ್ಲಿ ತಾಪಮಾನ ಹೆಚ್ಚಿದ್ದರೂ ನೋಡುವಂತಹ ಪ್ರದೇಶಗಳು ಸಾಕಷ್ಟಿದೆ. ತೊಗರಿ ಕಣಜ ಎಂದು ಕರೆಯಲ್ಪಡುವ ಈ ಜಿಲ್ಲೆಯಲ್ಲಿ ಅನೇಕ ರಾಜರು ಆಳಿರುವ ಇತಿಹಾಸವಿದೆ.

ಕಲ್ಲರಳಿ ಹೂವಾದಂತಹ ಕಲಬುರುಗಿ ಪ್ರವಾಸ ತಾಣ

ಕಲಬುರಗಿ ಕೋಟೆ, ಚಿತ್ರಕೃಪೆ: wikimedia

ಬಹುಮನಿ ಕೋಟೆ

1347ರಲ್ಲಿ ನಿರ್ಮಿಸಲಾದ ಈ ಕೋಟೆ ಪ್ರಾಚೀನ ಇಸ್ಲಾಮಿಕ್ ವಾಸ್ತು ಶಿಲ್ಪವನ್ನು ಒಳಗೊಂಡಿದೆ. ರಾಜ ಗುಲಚಂದ್ ನಿರ್ಮಿಸಿರುವ ಈ ಕೋಟೆ 38,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಶತ್ರುಗಳ ದಾಳಿಯನ್ನು ತಡೆಗಟ್ಟಲು ಕೋಟೆಯ ಸುತ್ತಲೂ ಕಾಲುವೆಯನ್ನು ತೋಡಿ, ಕೃಷ್ಣ ಹಾಗೂ ಭೀಮ ನದಿಯ ಹರಿವು ಬರುವಂತೆ ಮಾಡಲಾಗಿದೆ. ಇಲ್ಲಿ 15 ಗೋಪುರ, 26 ಬಂದೂಕುಗಳನ್ನು ಒಳಗೊಂಡಿತ್ತು. ನಂತರದ ದಿನದಲ್ಲಿ ಪರ್ಷಿಯನ್ ವಾಸ್ತು ಶೈಲಿಯಲ್ಲಿ ಬದಲಾವಣೆ ಮಾಡಲಾಯಿತು ಎಂದು ಹೇಳಲಾಗುತ್ತದೆ. ಈ ಮಸೀದಿ ಈಗ ಐದು ದೊಡ್ಡ ಗುಮ್ಮಟ, 75 ಸಣ್ಣ ಗುಮ್ಮಟ, 250 ಕಮಾನುಗಳನ್ನು ಒಳಗೊಂಡಿದೆ. ಭಾರತೀಯ ಪುರಾತತ್ವ ಇಲಾಖೆ ಇದನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿದೆ.

ಬಂದೇ ನವಾಜ್ ದರ್ಗಾ

ಹಜ್ರತ್ ಖ್ವಾಜಾ ಬಂದಾ ನವಾಜ್ ಗೆಸು ದರಸ್ ಭಾರತದ ಒಬ್ಬ ಮಹಾನ್ ಸೂಫಿ ಸಂತ. ಈತ ಎಲ್ಲಾ ಧರ್ಮ ಹಾಗೂ ಜಾತಿಯ ಬಗ್ಗೆ ಸಮಾನವಾದ ನಿಲುವನ್ನು ಹೊಂದಿದ್ದ ಎನ್ನಲಾಗುತ್ತದೆ. 1422ರಲ್ಲಿ ಮರಣ ಹೊಂದಿದ ನಂತರ ಅವರ ಮಸೀದಿಯೇ ಬಂದೇ ನವಾಜ್ ದರ್ಗಾ ಆಯಿತು. ಅದು ಈಗ ಯಾತ್ರಾಸ್ಥಳವಾಗಿದೆ ಎನ್ನುತ್ತಾರೆ. ಇದರ ಗೋಡೆ ಹಾಗೂ ಮೇಲ್ಛಾವಣಿಯ ಮೇಲೆ ಟರ್ಕಿಷ್ ಮತ್ತು ಇರಾನಿ ಶೈಲಿಯ ವರ್ಣ ಚಿತ್ರಗಳಿವೆ.

ಕಲ್ಲರಳಿ ಹೂವಾದಂತಹ ಕಲಬುರುಗಿ ಪ್ರವಾಸ ತಾಣ

ಶರಣಬಸವೇಶ್ವರ ದೇವಾಲಯ, ಚಿತ್ರಕೃಪೆ: wikimedia

ಶರಣ ಬಸವೇಶ್ವರ ದೇವಸ್ಥಾನ

ಕಲಬುರುಗಿಯ ಮಧ್ಯದಲ್ಲಿರುವ ಈ ದೇಗುಲ 12ನೇ ಶತಮಾನದಲ್ಲಿ ನಿರ್ಮಿಸಲಾಯಿತು. 12ನೇ ಶತಮಾನದ ವಾಸ್ತುಕಲೆಯನ್ನು ಹೊಂದಿರುವ ಈ ದೇಗುಲದಲ್ಲಿ ಪಂಚಲೋಹದ ಕಲಶವನ್ನು ನೋಡಬಹುದು. ದೇವಸ್ಥಾನದ ಗರ್ಭ ಗೃಹದಲ್ಲಿ ಶರಣ ಬಸವೇಶ್ವರರ ಸಮಾಧಿಯಿದೆ. ಸುತ್ತಮುತ್ತ ಬಹಳಷ್ಟು ಸ್ಥಂಭಗಳು, ಸಭಾ ಮಂಟಪ ಹಾಗೂ ಪ್ರದಕ್ಷಿಣಾಪಥವಿದೆ. ಗುಡಿಯ ಸುತ್ತ ಆನೆ, ಸವಿಲು, ಗಿಳಿ, ಗರುಡ ಹಾಗೂ ಹೂವಿನ ಶಿಲೆಯ ಶಿಲ್ಪಗಳಿವೆ. ಇಲ್ಲಿ ಸಂಕ್ರಾಂತಿ ಹಾಗೂ ವಿಜಯದಶಮಿಯನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ ಎಂದು ಹೇಳಲಾಗುತ್ತದೆ. ಶರಣ ಬಸವೇಶ್ವರ ಮಹಾದಾಸೋಹ ಜಾತ್ರೆ ಪ್ರತಿ ವರ್ಷ ಮಾರ್ಚ್ ಇಂದ ಏಪ್ರಿಲ್‍ವರೆಗೆ ಇರುತ್ತದೆ.

ಕಲ್ಲರಳಿ ಹೂವಾದಂತಹ ಕಲಬುರುಗಿ ಪ್ರವಾಸ ತಾಣ

ಚಿತ್ರಕೃಪೆ: wikimedia

ಬುದ್ಧವಿಹಾರ

70 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಬುದ್ಧವಿಹಾರ ರಾಷ್ಟ್ರದ ಅತಿ ದೊಡ್ಡ ವಿಹಾರದಲ್ಲಿ ಒಂದು. ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ಬುದ್ಧವಿಹಾರ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಉತ್ತಮ ಕರಕುಶಲಾಕೃತಿ, 170 ಕಂಬಗಳನ್ನು ಒಳಗೊಂಡಿದೆ. ಇಲ್ಲಿಯ ಪ್ರತಿಯೊಂದು ಕಲೆಯು ಅಜಂತಾ ಹಾಗೂ ಎಲ್ಲೋರ ಶಿಲ್ಪಕಲೆಯನ್ನು ಪ್ರತಿಬಿಂಬಿಸುತ್ತದೆ. ವಿಹಾರ್ ಮೈದಾನದ ಮೊದಲ ಮಹಡಿಯಲ್ಲಿ ಗೌತಮ ಬುದ್ಧನ ಎರಡು ಮನೋಹರ ಮೂರ್ತಿಗಳು, ಕಪ್ಪು ಕಲ್ಲಿನಲ್ಲಿ ಕೆತ್ತಲಾದ ಆರು ಅಡಿ ಎತ್ತರದ ಒಂದು ವಿಗ್ರಹವನ್ನು ನೆಲಮಹಡಿಯಲ್ಲಿ ಸ್ಥಾಪಿಸಲಾಗಿದೆ.

ಚಂದ್ರಲಂಬಾ ದೇವಸ್ಥಾನ

ಚಿತ್ರಾಪುರ ತಾಲೂಕಿನ ಸನ್ನತಿ ಎನ್ನುವ ಚಿಕ್ಕ ಗ್ರಾಮದಲ್ಲಿ ಚಂದ್ರಲಂಬಾ ದೇವಸ್ಥಾನವಿದೆ. ಇಲ್ಲಿ ಶ್ರೀ ಲಕ್ಷ್ಮಿ ಚಂದ್ರಲಾ ಪರಮೇಶ್ವರಿ ದೇವಿಯನ್ನು ಆರಾಧಿಸಲಾಗುತ್ತದೆ. ಇದು ಭೀಮ ನದಿಯ ದಡದಲ್ಲಿದೆ.

ಪಯಣದ ಹಾದಿ

ಬೆಂಗಳೂರಿನಿಂದ 635 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ರೈಲ್ವೇ ಸಂಚಾರ ಸೂಕ್ತವಾದದ್ದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X