Search
  • Follow NativePlanet
Share
» »ಒಂದೇ ಬಂಡೆಯಲ್ಲಿ ಕೆತ್ತಲಾದ 1200 ವರ್ಷ ಹಳೆಯದಾದ ದೇವಸ್ಥಾನ!

ಒಂದೇ ಬಂಡೆಯಲ್ಲಿ ಕೆತ್ತಲಾದ 1200 ವರ್ಷ ಹಳೆಯದಾದ ದೇವಸ್ಥಾನ!

By ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ

ತಂತ್ರಜ್ಞಾನ ಮುಂದುವರಿದಿರುವ ಈ ಕಾಲದಲ್ಲಿ ಅದೆಷ್ಟೇ ಗಗನಚುಂಬಿ ಕಟ್ಟಡಗಳನ್ನು ಕಟ್ಟಿದರೂ ಅದು ವಿಶೇಷ ಅನ್ನಿಸುವುದಿಲ್ಲ. ಆದರೆ ಸರಿ ಸಮಾರು ಹನ್ನೆರಡನೇ ಶತಮಾನಗಳ ಹಿಂದೆ ಕೇವಲ ಕೈ ಸಲಕರಣೆಗಳನ್ನು ಬಳಸಿ ತನ್ನ ಕಲಾ ನೈಪುಣ್ಯತೆಯಿಂದ ಹಾಗೂ ಶ್ರಮದಿಂದ ಬೃಹತ್ ಬಂಡೆಯೊಂದನ್ನು ಕೆತ್ತಿ ದೇವಸ್ಥಾನ ನಿರ್ಮಿಸುತ್ತಾರೆ ಅಂದರೆ ಅದು ಆಶ್ಚರ್ಯದ ಸಂಗತಿಯೇ ಹೌದು.

ನಾವೀಗ ಹೇಳ ಹೊರಟಿರುವುದು ಅಂತಹದ್ದೇ ಒಂದು ದೇವಸ್ಥಾನದ ಬಗ್ಗೆ. ಮಹಾರಾಷ್ಟ್ರ ಜಿಲ್ಲೆಯ ಔರಂಗಾಬಾದ್ ನಗರದಿಂದ 29 ಕಿಲೋಮೀಟರ್ ದೂರದಲ್ಲಿ ವಿಶ್ವ ವಿಖ್ಯಾತ ವಿಹಾರತಾಣ ಎಲ್ಲೋರ ಗುಹಾ ದೇವಳಗಳಿವೆ.

ಅಲ್ಲಿರುವ 34 ದೇಗುಲಗಳ ಪೈಕಿ ಏಕ ಶಿಲೆಯಿಂದ ನಿರ್ಮಾಣವಾದ ಕೈಲಾಸ ದೇಗುಲದ ಬಗ್ಗೆ ತಿಳಿಸಲು ಈ ಲೇಖನ. ಈ ದೇವಸ್ಥಾನವು ಸರಿಸುಮಾರು 8ನೇ ಶತಮಾನದಲ್ಲಿ ಕರಕುಶಲ ಶಿಲ್ಪಿಗಳಿಂದ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗಿದೆ. ಆಗಿನ ಕಾಲದಲ್ಲಿ ಬರಿಗೈಯಲ್ಲಿ ಉಳಿಗಳನ್ನು ಬಳಸಿ ಅದೇ ರೀತಿ ಕಲ್ಲಿನ ಸಾಗಾಟಕ್ಕಾಗಿ ಆನೆಗಳನ್ನು ಬಳಸಿ ಈ ದೇವಾಲಯ ನಿರ್ಮಿಸಲಾಗಿದೆ.

ಒಂದೇ ಬಂಡೆಯಲ್ಲಿ ಕೆತ್ತಲಾದ 1200 ವರ್ಷ ಹಳೆಯದಾದ ದೇವಸ್ಥಾನ!

ಚಿತ್ರಕೃಪೆ: Y.Shishido

ಸರಿ ಸುಮಾರು 6ನೇ ಹಾಗೂ 10ನೇ ಶತಮಾನದಲ್ಲಿ, ಭಾರತದ ಹಲವು ಪ್ರಾಂತ್ಯಗಳಲ್ಲಿ ಆಳ್ವಿಕೆ ನಡೆಸಿದ ರಾಷ್ಟ್ರಕೂಟ ಸಂಸ್ಥಾನದ ಅರಸರಾದ ಒಂದನೇಯ ಕೃಷ್ಣರಾಜರಿಂದ ನಿರ್ಮಾಣವಾದ ದೇಗುಲವಿದು ಎಂದು ಹೇಳಲಾಗಿದೆ. ಈ ದೇವಾಲಯದಲ್ಲಿ ಪೂಜೆ ಸಂದಾಯವಾಗುವುದು ಕೈಲಾಸನಾಥನಿಗೆ ಅರ್ಥಾತ್ ಪರಶಿವನಿಗೆ.

ನಿರ್ಮಾಣ : ಈ ದೇವಸ್ಥಾನ ಸರಿಸುಮಾರು 8ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎಂದು ಅಂದಾಜಿಸಲಾಗಿದೆ. ಇದನ್ನು ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಶಿವನ ವಾಸಸ್ಥಾನ ಕೈಲಾಸವನ್ನು ಹೋಲುವಂತೆ ನಿರ್ಮಾಣ ಮಾಡಲಾಗಿದೆ.

ಈ ಏಕಶಿಲಾ ದೇವಳವನ್ನು ನಿರ್ಮಿಸಲು ಸರಿಸುಮಾರು ಇಪ್ಪತ್ತು ವರ್ಷಗಳನ್ನು ವ್ಯಯಿಸಲಾಗಿದೆ. ಶಿಲ್ಪ ಶಾಸ್ತೃಜ್ಞರ ಪ್ರಕಾರ ದೇವಳದ ಶಿಲ್ಪಗಳ ಮೇಲಿರುವ ಗುರುತನ್ನು ಆಧರಿಸಿ ನಿರ್ಮಾಣಕ್ಕೆ ಮೂರು ಬಗೆಯ ಉಳಿಗಳನ್ನು ಬಳಸಲಾಗಿದೆ ಎಂದು ಅಂದಾಜಿಸಲಾಗಿದೆ. ಈ ದೇವಸ್ಥಾನವನ್ನು ವಾಸ್ತು ಶಾಸ್ತ್ರದ ಪ್ರಕಾರ ರಚಿಸಲಾದ ನಕ್ಷೆಯಂತೆ, ಮೇಲಿನಿಂದ ಕೆಳಕ್ಕೆ ಲಂಬವಾಗಿ ಶಿಲೆಯನ್ನು ಕೊರೆದು ದೇವಳ ನಿರ್ಮಿಸಲಾಗಿದೆ.

ಒಂದೇ ಬಂಡೆಯಲ್ಲಿ ಕೆತ್ತಲಾದ 1200 ವರ್ಷ ಹಳೆಯದಾದ ದೇವಸ್ಥಾನ!

ಚಿತ್ರಕೃಪೆ: G41rn8

ಬಾಹ್ಯ ವಿನ್ಯಾಸ : ಸುಂದರ ಕೆತ್ತನೆಗಳಿಂದ ಕೂಡಿದ ಬಹುಮಹಡಿಯ ಪ್ರವೇಶದ್ವಾರಕ್ಕೆ ಹೊಂದಿಕೊಂಡಂತೆ U ಆಕಾರದ ಅಂಗಣ ಹೊಂದಿದೆ. ಮೇಲ್ಛಾವಣಿಯ ಕಂಬಗಳ ಬಳಿ ಅಳವಡಿಸಲಾದ ಬೃಹತ್ ಶಿಲ್ಪ ಫಲಕಗಳಲ್ಲಿ ಇತಿಹಾಸವನ್ನು ಕೆತ್ತಲಾಗಿದೆ.

ಅದೇ ರೀತಿ ಅದಕ್ಕೆ ಹೊಂದಿಕೊಂಡಂತೆ ಹೊರಾಂಗಣದಲ್ಲಿ ದೇವಾನುದೇವತೆಗಳ ಬೃಹತ್ ಶಿಲ್ಪಗಳನ್ನು ಕೆತ್ತಲಾಗಿದೆ . ಅದೇ ರೀತಿ ಎಲ್ಲ ಶಿವನ ದೇವಸ್ಥಾನದಲ್ಲಿ ಇರುವಂತೆ ಶಿವಲಿಂಗಕ್ಕೆ ಎದುರಾಗಿ ನಂದಿಯ ಶಿಲ್ಪವನ್ನು ಕೆತ್ತಲಾಗಿದೆ . ತಳಭಾಗದಲ್ಲಿ ಆನೆಗಳ ಆಕೃತಿಯನ್ನು ಕೆತ್ತಿ ,ಪೂರ್ತಿ ದೇವಳವು ಆನೆಯ ಶಿಲ್ಪದ ಮೇಲೆ ನಿಂತಂತೆ ಭಾಸವಾಗುತ್ತದೆ.

ಒಂದೇ ಬಂಡೆಯಲ್ಲಿ ಕೆತ್ತಲಾದ 1200 ವರ್ಷ ಹಳೆಯದಾದ ದೇವಸ್ಥಾನ!

ಚಿತ್ರಕೃಪೆ: Sanjay Acharya

ಒಳ ವಿನ್ಯಾಸ : ದೇವಳದ ಒಳಾಂಗಣದಲ್ಲಿ ಅನೇಕ ಶಿಲ್ಪಗಳುಳ್ಳ ಕಂಬಗಳು, ಕಿಟಕಿಗಳು, ಕೋಣೆಗಳು ಹಾಗೂ ಸಭಾಭವನ ಇದೆ. ಗರ್ಭಗುಡಿಯ ಹೃದಯಭಾಗದಲ್ಲಿ ಕಲ್ಲಿನ ಶಿವಲಿಂಗ ಪ್ರತಿಷ್ಠಾಪಿಸಲಾಗಿದೆ.

ಅದೇ ರೀತಿ ಗರ್ಭ ಗುಡಿಯ ಹೊರಾಂಗಣದ ತುಂಬೆಲ್ಲಾ ವಿವಿಧ ದೇವಾನುದೇವತೆಗಳ ಶಿಲ್ಪ ಕಲಾಕೃತಿಗಳು, ಕಾಮಪ್ರಚೋದಿತ ಪುರುಷರು ಹಾಗೂ ಮಹಿಳೆಯರು, ಪ್ರಾಣಿಗಳು ಮುಂತಾದ ಸುಂದರ ಕಲಾಕೃತಿಗಳು ಆಗಿನ ಕಾಲದ ಶಿಲ್ಪಿಗಳ ಕಲಾನೈಪುಣ್ಯತೆಯನ್ನು ಜಗತ್ತಿಗೆ ಸಾರುತ್ತಿವೆ. ಪ್ರಾಂಗಣದಲ್ಲಿರುವ ಧ್ವಜ ಸ್ಥಂಬದಲ್ಲಿ ಶಿವನ ಮಹಿಮೆ ಸಾರುವ ಅನೇಕ ಬಗೆಯ ಶಿಲ್ಪ ಕಲಾಕೃತಿಗಳನ್ನು ಕೆತ್ತಲಾಗಿದೆ.

ಪ್ರವಾಸ ಹೊರಡುವ ಯೋಜನೆಯಿದ್ದರೆ ಈ ಸ್ಥಳವನ್ನು ನೀವು ಆಯ್ದುಕೊಳ್ಳಬಹುದು. ನಮ್ಮ ಪುರಾತನ ದೇವಾಲಯದ ಶಿಲ್ಪಕಲೆಗಳನ್ನು ಕಣ್ತುಂಬಿಕೊಂಡು ಬನ್ನಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X