• Follow NativePlanet
Share
» »ಒಮ್ಮೆಯಾದರೂ ವಿಶ್ವೇಶ್ವರಯ್ಯ ಜನ್ಮಸ್ಥಳಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ!

ಒಮ್ಮೆಯಾದರೂ ವಿಶ್ವೇಶ್ವರಯ್ಯ ಜನ್ಮಸ್ಥಳಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ!

Posted By: Manasa

ಮಕ್ಕಳಿಗೆ ಅದರಲ್ಲೂ ಶಾಲೆಯಲ್ಲಿ ಓದುತ್ತಿರುವ ವಯಸ್ಸಿನವರಿಗೆ ನಾವು ತಪ್ಪದೆ ನಮ್ಮ ದೇಶದ ಮಹಾನುಭಾವರ ಬಗ್ಗೆ, ಅವರ ಸಾಧನೆ, ಅವರ ಬಾಲ್ಯ, ಅವರು ಪಟ್ಟ ಕಷ್ಟ, ಅವರು ಪಡೆದ ಪ್ರಶಸ್ತಿಗಳು, ಹೀಗೆ ಇತರ ಅನೇಕ ಸ್ಫೂರ್ತಿದಾಯಕ ವಿಷಯಗಳನ್ನು ಹೇಳುತ್ತಿರಬೇಕು. ಖಾಲಿ ಹಾಳೆಯಂತಹ ಅವರ ಮನಸ್ಸಿನಲ್ಲಿ ನಾವು ದೊಡ್ಡದೇನನ್ನೋ ಸಾಧಿಸುವ ಆಸೆಯೆಂಬ ಬೀಜವನ್ನು ಬಿತ್ತಬೇಕು. ಮಕ್ಕಳು ತಾವು ನೋಡಿದ ಹಾಗೂ ಕೇಳಿದ ವಿಷಯಗಳಿಂದ ಬಹಳಷ್ಟು ಪ್ರಭಾವಿತರಾಗುತ್ತಾರೆ. ಅದರಲ್ಲೂ ನಮ್ಮವರು ಅಥವಾ ನಮ್ಮ ಹತ್ತಿರದವರು ಬಹಳಷ್ಟು ಸಾಧಿಸಿದಾಗ ಅವರು ನಾವು ಕೂಡ ಮಾಡಬಲ್ಲೆವು ಅಂದು ಪ್ರೇರಿತರಾಗುತ್ತಾರೆ. ಇಂತಹ ಒಂದು ಸ್ಫೂರ್ತಿದಾಯಕ ಸ್ಥಳ ನಮ್ಮ ಬೆಂಗಳೂರಿಗೆ ಅತಿ ಹತ್ತಿರದಲ್ಲಿ ಇರುವ - ಮುದ್ದೇನಹಳ್ಳಿ ಗ್ರಾಮ. ಇದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದ್ದು, ನಮ್ಮ ಬೆಂಗಳೂರಿಗೆ ಅರವತ್ತು ಕಿಮಿ ದೂರ ಇದೆ.

ಈ ಊರಿನ ವಿಶೇಷ ಏನೆಂದು ಕೇಳುತ್ತೀರಾ? ಕನ್ನಡಿಗರ ಹೆಮ್ಮೆ ಭಾರತ ರತ್ನ ಪ್ರಶಸ್ತಿ ಪಡೆದ ಸರ್. ಎಂ. ವಿಶ್ವೇಶ್ವರಯ್ಯನವರ ಜನ್ಮ ಸ್ಥಳ. ಇಂದಿಗೂ ಭಾರತೀಯರೇ ಅಲ್ಲದೆ ಬ್ರಿಟಿಷರು ಕೂಡ ಗೌರವಿಸುವ ಹಾಗೂ ಆಶ್ಚರ್ಯ ಪಡುವ ಪ್ರತಿಭಾವಂತ ಇಂಜಿನಿಯರ್ ನಮ್ಮ ವಿಶ್ವೇಶ್ವರಯ್ಯನವರು. ಮೈಸೂರು ರಾಜ್ಯದ ದಿವಾನರಾಗಿ ಕಾರ್ಯ ನಿರ್ವಹಿಸಿದ ಇವರು ಕೆ ಆರ್ ಎಸ್ ಅಣೆಕಟ್ಟನ್ನು ಕಟ್ಟಿ ಕನ್ನಡ ನಾಡಿಗೆ ಕುಡಿಯುವ ಹಾಗೂ ಕೃಷಿಗೆ ನೀರು ಹೊಂದಿಸಿಕೊಟ್ಟ ಮಹಾನುಭಾವರು.

Visvesvaraya Museum

ಬೆಂಗಳೂರಿನಿಂದ ದೇವನಹಳ್ಳಿಯ ಮಾರ್ಗವಾಗಿ ಚಿಕ್ಕಬಳ್ಳಾಪುರ ತಲುಪುವುದಕ್ಕೆ ಸ್ವಲ್ಪ ಮುಂಚಿತವಾಗಿ ಎಡಕ್ಕೆ ತಿರುಗಿದರೆ ಮುದ್ದೇನಹಳ್ಳಿ ಗ್ರಾಮವು ಸಿಗುತ್ತದೆ. ಇದು ನಂದಿ ಬೆಟ್ಟಕ್ಕೆ ಬಹಳ ಹತ್ತಿರವಿದ್ದು ಎರಡನ್ನೂ ಜೊತೆಯಲ್ಲಿ ಕೂಡ ನೋಡಬಹುದು.

ಮುದ್ದೇನಹಳ್ಳಿಯಲ್ಲಿ ವಿಶ್ವೇಶ್ವರಯ್ಯನವರ ಮನೆಯನ್ನು ಪುಟ್ಟ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಿದ್ದಾರೆ. ಇಲ್ಲಿ ಅವರ ಛಾಯಾ ಚಿತ್ರಗಳು, ಅವರ ಪ್ರಶಸ್ತಿ, ಪುರಸ್ಕಾರಗಳು, ಅವರ ದಿನ ಬಳಕೆಯ ವಸ್ತುಗಳು, ಕನ್ನಡಕ, ಪುಸ್ತಕಗಳು, ಕೆ ಆರ್ ಎಸ್ ಡ್ಯಾಂ ನ ಪ್ರತಿರೂಪ, ಹಾಗೂ ಇತರ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ 'ಭಾರತ ರತ್ನ' ಪುರಸ್ಕಾರವಾದ ಮೆಡಲ್ ನೋಡಿ ಮೈ ರೋಮಾಂಚನಗೊಳ್ಳುತ್ತದೆ.
ಅಲ್ಲೇ ಪಕ್ಕದಲ್ಲಿ ಅವರ ಸಮಾಧಿ ಇದ್ದು ಅದಕ್ಕೆ ನಮಸ್ಕರಿಸುವಾಗ ಕಣ್ಣು ತುಂಬಿ ಬಾರದೆ ಇರುವುದಿಲ್ಲ. ಎಂತಹ ಮಹಾನುಭಾವರು ಹುಟ್ಟಿದ ಊರಿನಲ್ಲಿ ನಾವು ಇದ್ದೇವೆ ಎಂಬ ಭಾವ ಬಹಳ ಶ್ರೇಷ್ಟವಾದುದು.

ವಿಶ್ವೇಶ್ವರಯ್ಯನವರ ಮನೆ ತೋರಿಸಿ ಅವರ ಬಗ್ಗೆ ಮಕ್ಕಳಿಗೆ ಹೇಳಿ. ಅವರ ಸಾಧನೆಗಳಲ್ಲಿ ಕೆಲವನ್ನು ನಾವು ಕೆಳಗೆ ಕೊಟ್ಟಿದ್ದೇವೆ: ಬ್ರಿಟಿಷರು ಇಂಗ್ಲಂಡಿನಲ್ಲಿ ಒಂದು ತಾಂತ್ರಿಕ ತೊಂದರೆಯಾದಾಗ ಅಲ್ಲಿನ ಇಂಜಿನಿಯರ್ ಗಳು ಅದನ್ನು ಸರಿಮಾಡಲಾರದೆ, ವಿಶ್ವೇಶ್ವರಯ್ಯನವರನ್ನು ಅಲ್ಲಿಗೆ ಕರೆಸಿಕೊಂಡರು. ಅವರು ತೊಂದರೆ ಪರಿಹರಿಸಿದಾಗ ನೀಡಿದ ಕಾಣಿಕೆಯನ್ನು ನೀವು ನಮ್ಮ ದೇಶವನ್ನು ದಬ್ಬಾಳಿಕೆ ಮಾಡುತ್ತಿರುವುದರಿಂದ ನಾನು ಯಾವುದೇ ಕಾಣಿಕೆ ನಿಮ್ಮಿಂದ ತೆಗೆದುಕೊಳ್ಳುವುದಿಲ್ಲ ಎಂದು ನಿರಾಕರಿಸಿದ ಉನ್ನತ ಮೌಲ್ಯ ಹೊಂದಿರುವವರು.

Visvesvaraya Museum

ಹೈದರಾಬಾದಿನ ಕುಡಿಯುವ ನೀರು ಸರಬರಾಜಿನ ವ್ಯವಸ್ಥೆ, ತಿರುಪತಿಯಿಂದ ತಿರುಮಲ ಬೆಟ್ಟಕ್ಕೆ ಹತ್ತುವ ರಸ್ತೆ ನಿರ್ಮಾಣ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಸ್ಟಾಪನೆ, ಪುಣೆ ಹಾಗೂ ಮುಂಬೈನಲ್ಲಿ ಅನೇಕ ಮುಖ್ಯ ಕೆಲಸಗಳು, ಅನೇಕ ಕಾರ್ಖಾನೆಗಳ ಸ್ಥಾಪನೆ ಹೀಗೆ ನಮ್ಮ ದೇಶಕ್ಕೆ ಅವರ ಕೊಡುಗೆಗಳು ಎಷ್ಟೋ.

ಭಾರತ ದೇಶದ ಅತ್ಯುನ್ನತ ಪ್ರಶಸ್ತಿಯಾದ 'ಭಾರತ ರತ್ನ' ಮುಡಿಗೆ ಏರಿಸಿಕೊಂಡ ಸರ್ ಎಂ ವಿಶ್ವೇಶ್ವರಯ್ಯನವರು ನಮ್ಮ ಕರ್ನಾಟಕದವರು ಎಂಬ ಹೆಮ್ಮ ನಮ್ಮದು. ಅವರ ಸಾಧನೆ ನಮ್ಮ ಮುಂದಿನ ತಲೆಮಾರಿಗೆ ಸ್ಫೂರ್ತಿಯಾಗಲಿ. ಹಳ್ಳಿಯಲ್ಲಿ ಹುಟ್ಟಿ, ಸಣ್ಣ ವಯಸ್ಸಿಗೆ ತಂದೆಯನ್ನು ಕಳೆದುಕೊಂಡು ತಮ್ಮ ವಿದ್ಯೆಯಿಂದ ನಿಷ್ಠೆಯಿಂದ ಮೇರು ಪರ್ವತದಂತೆ ಬೆಳೆದ ವ್ಯಕ್ತಿ ನಮ್ಮ ಮಕ್ಕಳಿಗೆ ಗುರುವಾಗಲಿ. ನೋಡುತ್ತಲೇ ರೋಮಾಂಚನಗೊಳಿಸುವ ಭಾರತ ರತ್ನ ಮೆಡಲ್ ನಮ್ಮ ಮಕ್ಕಳ ಗುರಿಯಾಗಲಿ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ