» »ಸೈನಿಕರ ಹಿರಿಮೆ ಸಾರುವ ಹನುಮಾನ್ ಟೋಕ್!

ಸೈನಿಕರ ಹಿರಿಮೆ ಸಾರುವ ಹನುಮಾನ್ ಟೋಕ್!

Written By:

ಇದು ಆಂಜನೇಯನ ದೇವಾಲಯ ಹೊಂದಿರುವ ಹಾಗೂ ಅದರ ಹಿನ್ನೆಲೆಯಲಿ ಅತ್ಯಾಕರ್ಷಕ ಸೃಷ್ಟಿ ಸೌಂದರ್ಯ ಕರುಣಿಸುವ ಅದ್ಭುತ ತಾಣ. ಈ ದೇವಾಲಯಕ್ಕೆ ಭೇಟಿ ನೀಡಿದರೆ ಖಂಡಿತವಾಗಿಯೂ ನಿಮ್ಮ ಮೈಮನಗಳಲ್ಲಿ ವಿದ್ಯುತ್ ಸಂಚಾರ ಆಗದೆ ಇರಲಾರದು. ಏಕೆಂದರೆ ಇದು ಸಂಪೂರ್ಣವಾಗಿ ಭಾರತೀಯ ಸೇನೆಯ ಒಂದು ಘಟಕದಿಂದ ನಿರ್ವಹಿಸಲ್ಪಡುತ್ತದೆ.

ಅಷ್ಟಕ್ಕೂ ಅದರಲ್ಲಿರುವ ವಿಶೇಷ ಏನೆಂಬುದು ನಿಮಗನಿಸಿದರೆ, ಇದನ್ನು ತಿಳಿಯಿರಿ. ಈ ದೇವಾಲಯದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿರುವ ಅರ್ಚಕರು ಕಂಡುಬರುವುದಿಲ್ಲ. ಬದಲಾಗಿ ಭಾರತೀಯ ಸೈನಿಕರೆ ಇಲ್ಲಿ ಅರ್ಚಕರ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ ಅದೂ ಸಹ ಸಮವಸ್ತ್ರದಲ್ಲಿ. ಏಕೆಂದರೆ ಇದು ಸೇನೆಯ "ಮೊದಲು ಕರ್ತವ್ಯ ನಂತರ ನಂಬಿಕೆ" ಸಿದ್ಧಾಂತದ ಮೇಲೆ ನಡೆಯುತ್ತದೆ.

ಸೈನಿಕರ ಹಿರಿಮೆ ಸಾರುವ ಹನುಮಾನ್ ಟೋಕ್!

ಚಿತ್ರಕೃಪೆ: shankar s.

ನಿರ್ದಿಷ್ಟ ದಿನಗಳಿಗೊಮ್ಮೆ ಸರತಿಯಂತೆ ಸೈನಿಕರು ಇಲ್ಲಿ ಅರ್ಚಕನ ಕರ್ತವ್ಯ ನಿಭಾಯಿಸುತ್ತಾನೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಸೈನಿಕ ಯಾವುದೆ ಜಾತಿ-ಪಂಗಡದವನಾಗಿರಲಿ ಈ ದೇವಾಲಯದಲ್ಲಿ ತನ್ನ ಸರತಿ ಬಂದಾಗ ಹಿಂದು ಸಾಂಪ್ರದಾಯಿಕ ರೀತಿಯಲ್ಲೆ ಭಕ್ತರಿಗೆ ತಿಲಕವಿಟ್ಟು, ಪ್ರಸಾದ ನೀಡುತ್ತಾನೆ. ನಮ್ಮ ಸೈನಿಕರ ಹಿರಿಮೆ ಇದಲ್ಲದೆ ಮತ್ತಿನ್ನೇನು? ರೋಮ ರೋಮಗಳು ಸೆಟೆದೇಳುವಂತೆ ಮಾಡುತ್ತದೆ ಇದನ್ನು ತಿಳಿದಾಗ.

ಇನ್ನೂ ಸ್ಥಳ ಪುರಾಣಕ್ಕೆ ಬಂದಾಗ, ಈ ಕ್ಷೇತ್ರವು ರಾಮಾಯಣ ಕಾಲದಿಂದಲೂ ಮಹತ್ವ ಪಡೆದ ತಾಣವಾಗಿದೆ. ರಾಮಾಯಣ ಯುದ್ಧ ಸಂದರ್ಭದಲ್ಲಿ ಲಕ್ಷ್ಮಣನು ರಾವಣನ ಮಗನಾದ ಇಂದ್ರಜೀತನ ಮಾಯಾ ಬಾಣದ ಹೊಡೆತಕ್ಕೆ ಒಳಗಾಗಿ ಪ್ರಾಣ ಭೀತಿ ಎದುರಿಸಿದಾಗ ಅವನಿಗೆ ಸಂಜೀವಿನಿ ಗಿಡ ಮೂಲಿಕೆಯ ಅವಶ್ಯಕತೆ ಎದುರಾಗುತ್ತದೆ. ಆದರೆ ಅದು ಕೇವಲ ಹಿಮಾಲಯದ ತಪ್ಪಲಿನಲ್ಲಿ ಮಾತ್ರ ಲಭಿಸುವುದೆಂದು ಗೊತ್ತಾಗುತ್ತದೆ.

ಸೈನಿಕರ ಹಿರಿಮೆ ಸಾರುವ ಹನುಮಾನ್ ಟೋಕ್!

ಚಿತ್ರಕೃಪೆ: Giridhar Appaji Nag Y

ಅದಕ್ಕಾಗಿ ತಡ ಮಾಡದೆ ಆಂಜನೇಯನು ತನ್ನ ದೈತ್ಯ ಸ್ವರೂಪ ಪಡೆದು ಹಾರುತ್ತ ಹಿಮಾಲಯ ತಲುಪಿ ಅಲ್ಲಿ ಸಂಜೀವಿನಿ ಸಸ್ಯ ಗೊತ್ತಾಗದೆ ಶಿಖರಾನ್ನೆ ತರಲು ಪ್ರಾರಂಭಿಸುತ್ತಾನೆ. ಹೀಗೆ ಶಿಖರ ಹೊತ್ತು ಹಾರುತ್ತಿದ್ದ ಹನುಮ ವಿಶ್ರಾಂತಿಗಾಗಿ ಕೆಲ ಸಮಯ ತಂಗಿದ್ದ ಸ್ಥಳವೆ ಇದಾಗಿದೆ. ಹಾಗಾಗಿ ಇಲ್ಲಿ ಆಂಜನೇಯನ ಮಂದಿರ ನಿರ್ಮಾಣ ಮಾಡಿ ಹನುಮನನ್ನು ಪೂಜಿಸಲಾಗುತ್ತದೆ.

ಇದು ಗುಡ್ಡವೊಂದರ ಮೇಲೆ ನೆಲೆಸಿದ್ದು ಮೆಟ್ಟಿಲುಗಳ ಮೂಲಕ ಈ ದೇವಾಲಯವನ್ನು ಪ್ರವೇಶಿಸಬಹುದಾಗಿದೆ. ಈ ದೇವಾಲಯದ ಘನತೆ, ಹಿರಿಮೆ ಒಂದೆಡೆಯಾದರೆ, ಇದು ನೆಲೆಸಿರುವ ತಾಣ ಹಾಗೂ ಅದರ ಸುತ್ತಮುತ್ತಲಿನ ಪರಿಸರ, ಅಮೋಘ ಸೃಷ್ಟಿ ಸೌಂದರ್ಯ ಮತ್ತೊಂದೆಡೆ ಬಲವಾಗಿ ಪ್ರಕೃತಿಪ್ರಿಯರನ್ನು ಚುಂಬಕದಂತೆ ಸೆಳೆಯುತ್ತದೆ.

ಸೈನಿಕರ ಹಿರಿಮೆ ಸಾರುವ ಹನುಮಾನ್ ಟೋಕ್!

ಚಿತ್ರಕೃಪೆ: Bobinson K B

ಹಿಮಾಲಯದ ಅದರಲ್ಲೂ ವಿಶೇಷವಾಗಿ ಕಂಚನಜುಂಗಾ ಪರ್ವತ ಶ್ರೇಣಿಗಳ ಅತ್ಯುನ್ನತ ಹಾಗೂ ಉತ್ಕೃಷ್ಟ ನೋಟಗಳನ್ನು ಸವಿಯುವ ಬಯಕೆ ಇದ್ದಲ್ಲಿ ಹನುಮಾನ್ ಟೋಕ್ ಹೇಳಿ ಮಾಡಿಸಿದಂತಹ ತಾಣ. ಇನ್ನೂ ಈ ಕ್ಷೇತ್ರ ಎಲ್ಲಿದೆ ಅಂದರೆ, ಇದು ಈಶಾನ್ಯ ಭಾರತದ ಸಿಕ್ಕಿಂ ರಾಜ್ಯದ ರಾಜಧಾನಿ ನಗರ ಗ್ಯಾಂಗ್ಟಕ್ ನಿಂದ ಕೇವಲ ಏಳು ಕಿ.ಮೀ ಗಳಷ್ಟು ದೂರದಲ್ಲಿದೆ.

ಭೋಗಾಪುರೇಶ ಹಣುಮಂತನ ಮಹಿಮೆ ಅಪಾರ!

ಗ್ಯಾಂಗ್ಟಕ್ ನಿಂದ ಬಾಡಿಗೆ ರಿಕ್ಷಾಗಳು ಹಾಗೂ ಕಾರುಗಳು ಹನುಮಾನ್ ಟೋಕ್ ಗೆ ಕರೆದೊಯ್ಯಲು ಸದಾ ದೊರೆಯುತ್ತವೆ. ಸಿಕ್ಕಿಂ ಅನ್ನು ಪಶ್ಚಿಮ ಬಂಗಾಳದ ಸಿಲಿಗುರಿಯಿಂದ ತಲುಪಬಹುದಾಗಿದ್ದು ಬಸ್ಸುಗಳು ದೊರೆಯುತ್ತವೆ. ನೀವು ಗ್ಯಾಂಗ್ಟಕ್ ಪ್ರವಾಸ ಮಾಡಿದ್ದೆ ಆದಲ್ಲಿ ಈ ಸುಂದರ ಹಾಗೂ ಅದ್ಭುತವಾದ ಹನುಮಾನ್ ಟೋಕ್ ಅನ್ನು ನೋಡಲು ಮರೆಯದಿರಿ.

Please Wait while comments are loading...