» »ಸ್ಪರ್ಶಿಸಿದ ಲೋಹವನ್ನೆ ಸುವರ್ಣವಾಗಿಸುವ ಸ್ಪರ್ಶಲಿಂಗ!

ಸ್ಪರ್ಶಿಸಿದ ಲೋಹವನ್ನೆ ಸುವರ್ಣವಾಗಿಸುವ ಸ್ಪರ್ಶಲಿಂಗ!

Written By:

ನಾವು, ನೀವೆಲ್ಲ ಪಿರಮಿಡ್ ಅನ್ನು ಸಾಮಾನ್ಯವಾಗಿ ನೋಡಿಯೆ ನೋಡಿರುತ್ತೇವೆ. ಇದರ ಆಕಾರವೆ ಒಂದು ಆಕರ್ಷಕ ರೀತಿಯಲ್ಲಿರುವುದರಿಂದ ಜನರನ್ನು ಸ್ವಾಭಾವಿಕವಾಗಿ ಸೆಳೆಯುತ್ತದೆ. ಆದರೆ ಪಿರಮಿಡ್ ರೀತಿಯಲ್ಲೆ ಇತ್ತ ಪಿರಮಿಡ್ಡೂ ಅಲ್ಲದೆ ಅತ್ತ ನಿಖರವಾದ ದೇವಾಲಯ ಗೋಪುರದಂತೆಯೂ ಇರದೆ ಆದರೂ ವಿಶೇಷ ರಚನೆಗಳಿಂದ ಜನರನ್ನು ಆಕರ್ಷಿಸುವ ದೇವಾಲಯವೊಂದಿದೆ.

ಹೌದು, ಆ ದೇವಾಲಯವೆ ಗಳಗನಾಥೇಶ್ವರ ದೇವಾಲಯ. ಗಳಗನಾಥ ಎಂಬ ಗ್ರಾಮದಲ್ಲಿ ಈ ಅದ್ಭುತ ಆಕೃತಿಯ ದೇವಾಲಯವಿದ್ದು ಇಂದು ಭಾರತೀಯ ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಡುತ್ತಿದೆ. ಐತಿಹಾಸಿಕವಾಗಿ ಸಾಕಷ್ಟು ಪ್ರಾಮುಖ್ಯತೆ ಪಡೆದಿರುವ ಈ ದೇವಾಲಯವನ್ನು ಚಾಲುಕ್ಯ ದೊರೆ ವಿಕ್ರಮಾದಿತ್ಯನು ಹನ್ನೊಂದನೆಯ ಶತಮಾನದಲ್ಲಿ ನಿರ್ಮಿಸಿದನೆಂಬುದು ಇತಿಹಾಸದಿಂದ ತಿಳಿದುಬರುತ್ತದೆ.

ಸ್ಪರ್ಶಿಸಿದ ಲೋಹವನ್ನೆ ಸುವರ್ಣವಾಗಿಸುವ ಸ್ಪರ್ಶಲಿಂಗ!

ಚಿತ್ರಕೃಪೆ: Manjunath Doddamani Gajendragad

ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದಲ್ಲಿರುವ ಅತಿ ಸುಂದರ ಕೆತ್ತನೆಗಳ ದೇವಾಲಯಗಳಲ್ಲಿ ಒಂದಾಗಿರುವ ಗಳಗನಾಥೇಶ್ವರ ದೇವಾಲಯವು ತನ್ನ ಶ್ರೀಮಂತವಾದ ಹಾಗೂ ಅಷ್ಟೆ ಸೂಕ್ಷ್ಮವಾದ ಕೆತ್ತನೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ದೇವಾಲಯದಲ್ಲಿರುವ ಗರ್ಭ ಗುಡಿಯು ಪ್ರದಕ್ಷಿಣೆ ಹಾಕಲು ಅನುವಾಗುವಂತೆ ಎಲ್ಲ ಕಡೆಯಿಂದಲೂ ಮುಕ್ತವಾಗಿದ್ದು ಶಿವಲಿಂಗವನ್ನು ಅಚ್ಚುಕಟ್ಟಾಗಿ ಹೊಂದಿದೆ.

ದೇವಾಲಯದ ಒಳ ಗೋಡೆಗಳ ಮೇಲೆ ಹಲವಾರು ಶಿಲ್ಪಕಲೆಗಳನ್ನು ಮನೋಜ್ಞವಾಗಿ ಕೆತ್ತಲಾಗಿದೆ. ಅದರಲ್ಲಿ ಪಂಚತಂತ್ರದ ಕಥೆಗಳನ್ನು ವಿವರಿಸುವ, ಪೌರಾಣಿಕ ಪ್ರಸಂಗಗಳನ್ನು ಅನಾವರಣಗೊಳಿಸುವ ಕೆತ್ತನೆಗಳು ಪ್ರವಾಸಿಗರ ಗಮನಸೆಳೆಯುತ್ತವೆ. ವಿಶೇಷವಾಗಿ ಶಿವ ತಾಂಡವ ಹಾಗೂ ಶಿವನು ಅಂಧಕಾಸುರನನ್ನು ಸಂಹರಿಸುತ್ತಿರುವ ಪ್ರಸಂಗ ವಿವರಿಸುವ ಕೆತ್ತನೆ ಮನದಲ್ಲಿ ಹಾಗೆ ಉಳಿದುಬಿಡುತ್ತವೆ.

ಸ್ಪರ್ಶಿಸಿದ ಲೋಹವನ್ನೆ ಸುವರ್ಣವಾಗಿಸುವ ಸ್ಪರ್ಶಲಿಂಗ!

ಚಿತ್ರಕೃಪೆ: Kajasudhakarababu

ಶಿವನ ಸನ್ನಿಧಿಯ ಜೊತೆಗೆ ಇಲ್ಲಿ ಸುಬ್ರಹ್ಮಣ್ಯ ಹಾಗೂ ಗಣಪತಿಯರ ಸನ್ನಿಧಿಗಳನ್ನೂ ಸಹ ಕಾಣಬಹುದಾಗಿದೆ. ಇವುಗಳ ಜೊತೆಗೆ ಹಲವು ದೇವ ದೇವತೆಯರ, ನದಿ ದೇವಿಯರ, ಪಂಚ ಲಿಂಗಗಳ ಕೆತ್ತನೆಗಳು ನಯನಮನೋಹರವಾಗಿದ್ದು ಅಂದಿನ ನಿಪುಣ ಕೆತ್ತನೆಕಾರರನ್ನು ಪ್ರತಿ ಸಂದರ್ಭದಲ್ಲೂ ಶ್ಲಾಘಿಸುವಂತೆ ಮನ ಹುರುದುಂಬಿಸುತ್ತದೆ.

ತುಂಗಭದ್ರಾ ನದಿಯ ಬಲ ದಂಡೆಯಲ್ಲಿ ಪಸರಿಸಿರುವ ನಿಸರ್ಗ ಸೌಂದರ್ಯದ ಒಡಲಿನಲ್ಲಿ ಶಾಂತವಾಗಿ ನೆಲೆಸಿರುವ ಗಳಗನಾಥೇಶ್ವರ ದೇವಾಲಯವು ಗರ್ಭಗುಡಿ, ಅಂತರಾಳ ಹಾಗೂ ಮಂಟಪವನ್ನು ಹೊಂದಿರುವ ದೇವಾಲಯವಾಗಿದ್ದು ಇದರ ಒಟ್ಟಾರೆಯ ಗೋಪುರಾಕಾರವು ವಿಚಿತ್ರವಾದಂತಹ ಪಿರಮಿಡ್ ಶೈಲಿಯಲ್ಲಿದ್ದು ನೋಡಿದ ತಕ್ಷಣ ಆಕರ್ಷಿಸುತ್ತದೆ.

ಸ್ಪರ್ಶಿಸಿದ ಲೋಹವನ್ನೆ ಸುವರ್ಣವಾಗಿಸುವ ಸ್ಪರ್ಶಲಿಂಗ!

ಚಿತ್ರಕೃಪೆ: Dineshkannambadi

ಇನ್ನೂ ಬಲು ಮುಖ್ಯವಾಗಿ ದೇವಾಲಯದ ಕುರಿತು ಹೇಳಬೇಕೆಂದರೆ ಇಲ್ಲಿರುವ ಶಿವಲಿಂಗವನ್ನು ಸ್ಪರ್ಶ ಲಿಂಗವೆಂದು ಕರೆಯುತ್ತಾರೆ. ಐತಿಹ್ಯದಂತೆ ಇದೊಂದು ಅಸಾಮಾನ್ಯ ಶಿವಲಿಂಗವಾಗಿತ್ತು ಹಾಗೂ ಯಾವುದೆ ಲೋಹವನ್ನು ಇದಕ್ಕೆ ಸ್ಪರ್ಶಿಸಿದರೆ ಅದು ಬಂಗಾರವಾಗುತ್ತಿತ್ತು. ಇದರಿಂದ ಆಪತ್ತು ಎದುರಾಗಬಹುದೆಂದು ಮನಗಂಡ ಗರ್ಗ ಋಷಿಗಳು ಇದನ್ನು ಎಂದಿಗೂ ಮುಟ್ಟಲಾಗದಂತೆ ಗಳಗದಿಂದ ಮುಚ್ಚಿದರು.

ಹಾಗಾಗಿ ಇದಕ್ಕೆ ಗಳಗನಾಥೇಶ್ವರ ಎಂಬ ಹೆಸರು ಬಂದಿತೆನ್ನಲಾಗಿದೆ. ಆದರೆ ಅಭಿಷೇಕಕ್ಕೆ ತೊಂದರೆಯಾಗದಂತೆ ಮೇಲೊಂದು ರಂಧ್ರವನ್ನು ಮಾತ್ರ ಕೊರೆದರಂತೆ. ಈ ರೀತಿಯಾಗಿ ಗಳಗನಾಥೇಶ್ವರ ತನ್ನದೆ ಆದ ವೈಶಿಷ್ಟ್ಯತೆಯನ್ನು ಹೊಂದಿದ್ದಾನೆ. ಇನ್ನೂ ಈ ಸ್ಥಳ ಹಾಗೂ ದೇವಾಲಯದ ಕುರಿತು ಹೇಳುವಾಗ ಪ್ರಖ್ಯಾತ ಶ್ರೀ ವೆಂಕಟೇಶ್ವರ ತ್ರಿವಿಕ್ರಮಭಟ್ ಕುಲಕರ್ಣಿ ಅವರ ಕುರಿತು ಹೇಳದೆ ಇರಲು ಸಾಧ್ಯವೆ ಇಲ್ಲ.

ಸ್ಪರ್ಶಿಸಿದ ಲೋಹವನ್ನೆ ಸುವರ್ಣವಾಗಿಸುವ ಸ್ಪರ್ಶಲಿಂಗ!

ಚಿತ್ರಕೃಪೆ: Dineshkannambadi

ಕಾದಂಬರಿಗಳ ಪಿತಾಮಹ ಎಂದೆ ಕರೆಯಲ್ಪಡುವ ಹಾಗೂ ಜನಪ್ರೀಯವಾಗಿರುವ ವೆಂಕಟೇಶ್ವರ ಗಳಗನಾಥರು ಈ ದೇವಾಲಯದ ಮಂಟಪಗಳಲ್ಲಿ ಕುಳಿತುಕೊಂಡೆ ಕನ್ನಡದಲ್ಲಿ ಹಲವಾರು ಕಾದಂಬರಿಗಳನ್ನು ಪ್ರಕಟಿಸಿ ಸ್ವತಃ ಮಾರಿದ್ದಾರೆ. ಅನುಕೂಲಸ್ಥ ಕುಟುಂಬದಲ್ಲಿ ಹುಟ್ಟಿದ್ದರೂ ಸಹ ಕನ್ನಡ ಭಾಷೆಯ ಮೇಲೆ ಪ್ರೀತಿಯನ್ನು ಹೆಚ್ಚಿಸುವಂತೆ ಮಾಡಿರುವ ನಾಡಿನ ಹೆಮ್ಮೆಯ ಪುತ್ರರಲ್ಲಿ ಇವರೂ ಒಬ್ಬರು.

ಎಷ್ಟು ಸುಂದರ, ಹಾವೇರಿಯ ಸಿದ್ಧೇಶ್ವರ!

ಕಲೆಯ ಬಲೆಯಾಗಿ ಪತಂಗಗಳಂತೆ ಪ್ರವಾಸಿಗರನ್ನು ಆಕರ್ಷಿಸುವ ಗಳಗನಾಥವು ಹಾವೇರಿ ನಗರ ಕೇಂದ್ರದಿಂದ 45 ಕಿ.ಮೀ ಗಳಷ್ಟು ದೂರದಲ್ಲಿದೆ. ರಾಣೆಬೆನ್ನೂರಿನಿಂದ ಕೇವಲ 14 ಕಿ.ಮೀ ಗಳಷ್ಟು ದೂರದಲ್ಲಿರುವ ಗಳಗನಾಥವನ್ನು ಗುತ್ತಲದ ಮೂಲಕ ಸುಲಭವಾಗಿ ತೆರಳಬಹುದು. ಖಾಸಗಿ ಆಟೊಗಳು ಹಾಗೂ ಬಸ್ಸುಗಳು ಲಭ್ಯವಿರುತ್ತವೆ.

Please Wait while comments are loading...