Search
  • Follow NativePlanet
Share
» »ಕರ್ನಾಟಕದ ಮನಮೋಹಕ ಸೂರ್ಯಾಸ್ತಗಳು!

ಕರ್ನಾಟಕದ ಮನಮೋಹಕ ಸೂರ್ಯಾಸ್ತಗಳು!

By Vijay

ಮೂಡಣದಿ ಉದಯಿಸಿ ಪಡುವಣದಿ ಮುಳುಗುವಾಗ ಬಾನಂಗಳಕೆ ಹೊಳಪು ನೀಡುತ ಜಾರುವ ರವಿಯು ನೋಡಲು ಬಲು ಆಕರ್ಷಕನಾಗಿರುತ್ತಾನೆ. ಹೀಗೆ ಮುಳುಗುತ್ತಿರುವ ಸೂರ್ಯ ಆಕಾಶದಲ್ಲಿ ಅದೇನೇನೊ ಚಿತ್ತಾರಗಳನ್ನು ಬಿಡಿಸುತ್ತಾನೆ. ಅದಕ್ಕೆ ಮತ್ತಷ್ಟು ಇಂಬು ನೀಡುತ್ತವೆ ನಾಟಕೀಯವಾಗಿ ಆಡುವ ಮೋಡಗಳು. ಈ ಒಟ್ಟಾರೆ ದೃಶ್ಯವು ಮನಮೋಹಕ.

ಹೀಗಾಗಿ ಸೂರ್ಯಾಸ್ತದ ನೋಟಕ್ಕೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ ಪ್ರಕೃತಿ ಪ್ರಿಯರಿಂದ. ಅದಕ್ಕೆಂದೆ ಕೆಲ ಸ್ಥಳಗಳು ಅದರಲ್ಲೂ ವಿಶೇಷವಾಗಿ ಬೆಟ್ಟ-ಗುಡ್ಡಗಳು, ನದಿ ತಟಗಳು, ಕಡಲ ತೀರಗಳು ಸಾಕಷ್ಟು ಹೆಸರುವಾಸಿಯಾಗಿರುತ್ತವೆ.

ಭಾರತದ ಕೆಲವು ಅದ್ಭುತ ಸೂರ್ಯೋದಯಗಳು!

ಸೂರ್ಯಾಸ್ತದ ದೃಶ್ಯಗಳು ಸಾಮಾನ್ಯವಾಗಿ ಬಲು ಆಕರ್ಷಕವಾಗಿರುತ್ತವೆ. ಸೂರ್ಯನ ಕಿರಣಗಳು ಆಕಾಶದ ವಾತಾವರಣದೊಂದಿಗೆ ಸಂಯೋಜನೆಗೊಂಡು ಬಣ್ಣಗಳ ಓಕುಳಿಯಾಟ ಆಡುವುದನ್ನು ಕಂಡಾಗ ಮನಸ್ಸು ಪುಳಕಿತಗೊಳ್ಳದೆ ಇರಲಾರದು. ಒಮ್ಮೊಮ್ಮೆ ಸೂರ್ಯಾಸ್ತವು ಮತ್ತೊಂದು ಹೊಸದಿನದ ಹೊಸ ಭರವಸೆಯನ್ನು ಕೊಡುತ್ತಿರುವ ಹಾಗನಿಸುತ್ತದೆ.

ಪ್ರಸ್ತುತ ಲೇಖನದಲ್ಲಿ ಕರ್ನಾಟಕದ ಹಲವು ಸುಂದರ ಸ್ಥಳಗಳಲ್ಲಿ ಸೂರ್ಯಾಸ್ತದ ನೋಟಗಳು ಹೇಗಿರುತ್ತವೆ ಎಂಬುದರ ಕುರಿತು ತಿಳಿಸುತ್ತದೆ. ಈ ಸ್ಥಳಗಳಿಗೆ ನೀವು ಭೇಟಿ ನೀಡಿದಾಗ ಅಲ್ಲಿನ ಸುಂದರ ಸಂಜೆಯನ್ನು ನೋಡಲು ಮರೆಯದಿರಿ.

ವರ್ಣನಾತೀತ

ವರ್ಣನಾತೀತ

ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನಲ್ಲಿರುವ ನೀಲ್ಕುಂದ ಹಳ್ಳಿಯಿಂದ ಎರಡು ಕಿ.ಮೀ ದೂರದಲ್ಲಿರುವ ಭೀಮನ ಗುಡ್ಡ/ಭೀಮನ ಎರಿ ಗುಡ್ಡ ಅಥವಾ ಭೀಮನವರೆ ಗುಡ್ಡ ಎಂಬಲ್ಲಿಂದ ಕಂಡುಬರುವ ಅಮೋಘ ಸೂರ್ಯಾಸ್ತವಿದು. ನೀಲ್ಕುಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಮಳೆ ಪಡೆಯುವ ಪ್ರದೇಶವಾಗಿದೆ. ಭೀಮನ ಗುಡ್ಡ ಅಘನಾಶಿನಿ ನದಿ ಹಾಗೂ ಸುತ್ತಲಿನ ಕಣಿವೆಯ ಅದ್ಭುತ ದೃಶ್ಯಾವಳಿಗಳನ್ನು ಒದಗಿಸುತ್ತದೆ. ಸೂರ್ಯಾಸ್ತದ ನೋಟಕ್ಕೆ ಸಾಕಷ್ಟು ಹೆಸರುವಾಸಿಯಾಗಿದೆ. ಶಿರಸಿಯಿಂದ ಸುಮಾರು 30 ಕಿ.ಮೀ ದೂರದಲ್ಲಿ ಈ ಗುಡ್ಡವಿದೆ.

ಚಿತ್ರಕೃಪೆ: SachinRM

ತೀರ್ಥಹಳ್ಳಿ

ತೀರ್ಥಹಳ್ಳಿ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಆಗುಂಬೆಯು ಕರ್ನಾಟಕದಲ್ಲಿಯೆ ಅತಿ ಹೆಚ್ಚು ಮಳೆಯನ್ನು ಪಡೆವ, ಪಶ್ಚಿಮಘಟ್ಟಗಳ ದಟ್ಟ ಹಸಿರಿಂದ ಆವರಿಸಿರುವ, ಮಳೆಗಾಡು ಸಂಶೋಧನಾ ಕೇಂದ್ರ ಹೊದಿರುವ ಅದ್ಭುತ ಪ್ರವಾಸಿ ಸ್ಥಳವಾಗಿದೆ. ಡಾ.ರಾಜಕುಮಾರ್ ಅವರು ತಮ್ಮ ಒಂದು ಚಿತ್ರದಲ್ಲಿ ಹಾಡಿರುವಂತೆ "ಆಗುಂಬೆಯ ಪ್ರೇಮ ಸಂಜೆಯ..." ಹಾಡನ್ನು ಮರೆಯುವ ಹಾಗೆ ಇಲ್ಲ. ಅದೆ ರೀತಿಯಾಗಿ ಆಗುಂಬೆಯ ಸೂರ್ಯಾಸ್ತ ನೋಟವನ್ನೂ ಸಹ ಮರೆಯುವ ಹಾಗಿಲ್ಲ. ಅಷ್ಟು ಮನಮೋಹಕವಾಗಿರುತ್ತದೆ ಆಗುಂಬೆಯ ಸೂರ್ಯಾಸ್ತ.

ಚಿತ್ರಕೃಪೆ: Magiceye

ಪಟ್ಟದಕಲ್ಲು

ಪಟ್ಟದಕಲ್ಲು

ಬಾಗಲಕೋಟೆ ಜಿಲ್ಲೆಯಲ್ಲಿರುವ ಅದ್ಭುತ ಹಾಗೂ ಐತಿಹಾಸಿಕ ಪ್ರವಾಸಿ ಕೆಂದ್ರವಾದ ಪಟ್ಟದಕಲ್ಲು ಗಮನಸೆಳೆವ ಅತಿ ಪುರಾತನ ದೇವಾಲಯಗಳ ಸುಂದರ ಸಮೂಹವಾಗಿದೆ. ಸುಮಾರು ಆರರಿಂದ ಏಳನೇಯ ಶತಮಾನದಲ್ಲಿ ನಿರ್ಮಿತವಾದ ಅಮೋಘ ಶಿಲ್ಪಕಲೆ ಹಾಗೂ ವಾಸ್ತುಶೈಲಿ ಹೊಂದಿರುವ ಇಲ್ಲಿನ ದೇವಾಲಯಗಳು ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿದ್ದು ಇಲ್ಲಿ ದೇವಾಲಯಗಳ ಹಿನ್ನೆಲೆಯಲ್ಲಿ ಸೂರ್ಯಾಸ್ತವನ್ನು ನೋಡುವುದೆ ಒಂದು ಚೆಂದದ ಅನುಭವವಾಗಿದೆ. ಮತ್ತೊಂದು ಪ್ರಸಿದ್ಧ ಸ್ಥಳವಾದ ಬಾದಾಮಿಗೆ ಬಲು ಹತ್ತಿರದಲ್ಲಿದೆ ಪಟ್ಟದಕಲ್ಲು.

ಚಿತ್ರಕೃಪೆ: T Kempanna

ಗಿಡಮರಗಳ ಹಿನ್ನೆಲೆಯಲ್ಲಿ

ಗಿಡಮರಗಳ ಹಿನ್ನೆಲೆಯಲ್ಲಿ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಬಂಡೀಪುರ ರಾಷ್ಟ್ರೀಯ ಉದ್ಯಾನವು ಒಂದು ಅದ್ಭುತ ಪ್ರವಾಸಿ ತಾಣವಾಗಿದೆ. ಕುಟುಂಬ ಸಮೇತರಾಗಿ ಜಂಗಲ್ ಸಫಾರಿ ಮಾಡಲು ಯೋಗ್ಯವಾದ ಈ ಕಾಡಿನಲ್ಲಿ ಅಲೆಯುವಾಗ/ವಿಹರಿಸುವಾಗ ಸಾಲು ಸಾಲು ಬೆಳೆದಿರುವ ಗಿಡ-ಮರಗಲ ಮಧ್ಯದಿಂದ ಬಚ್ಚಿಕೊಂಡ ಮುಳುಗುತ್ತಿರುವ ಸೂರ್ಯನನ್ನು ಕಂಡಾಗ ಯಾರಿಗಾದರೂ ಸರಿ ಸಂತಸವಾಗದೆ ಇರಲಾರದು.

ಚಿತ್ರಕೃಪೆ: Fredinpaul

ಚಿಕ್ಕಮಗಳೂರು

ಚಿಕ್ಕಮಗಳೂರು

ಚಿಕ್ಕಮಗಳೂರಿನ ಪಶ್ಚಿಮ ಘಟ್ಟಗಳ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ನೆಲೆಸಿರುವ ಮುಳ್ಳಯ್ಯನಗಿರಿ ಶಿಖರವು ಕರ್ನಾಟಕದ ಅತಿ ಎತ್ತರ ಶಿಖರವಾಗಿದೆ. ಇದು ಚಾರಣಕ್ಕೆ ಪ್ರಸಿದ್ಧವಾಗಿದ್ದು ಇಲ್ಲಿನ ಸೂರ್ಯಾಸ್ತವು ನೋಡಲು ಬಲು ನಯನಮನೋಹರವಾಗಿರುತ್ತದೆ.

ಚಿತ್ರಕೃಪೆ: Kashishsehgal

ತರಿಕೆರೆ

ತರಿಕೆರೆ

ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಗಿರಿಧಾಮ ಪ್ರದೇಶವಾದ ಕೆಮ್ಮಣ್ಣುಗುಂಡಿಯು ಸುಂದರ ಸೂರ್ಯಾಸ್ತದ ನೋಟಕ್ಕೂ ಸಹ ಸಾಕಷ್ಟು ಹೆಸರುವಾಸಿಯಾಗಿದೆ. ಇಲ್ಲಿ ಕೆಲವು ವೀಕ್ಷಣಾ ಗೋಪುರಗಳಿದ್ದು ಅಲ್ಲಿಂದ ಗಿರಿಧಾಮದ ಹಾಗೂ ಸೂರ್ಯಾಸ್ತದ ವಿಹಂಗಮ ನೋಟವನ್ನು ಸವಿಯಬಹುದಾಗಿದೆ.

ಚಿತ್ರಕೃಪೆ: RakeshRaju M

ಆಕರ್ಷಕ

ಆಕರ್ಷಕ

ತೀರ್ಥಹಳ್ಳಿ ಸಾಕಷ್ಟು ಧಾರ್ಮಿಕ ಮಹತ್ವ ಪಡೆದ ಪ್ರವಾಸಿ ಕ್ಷೇತ್ರವಾಗಿದೆ. ತುಂಗಾ ನದಿ ತಟದಲ್ಲಿ ನೆಲೆಸಿರುವ ತೀರ್ಥಹಳ್ಳಿಯಲ್ಲಿ ನೋಡಲು ಹಲವಾರು ಪ್ರವಾಸಿ ಆಕರ್ಷಣೆಗಳಿವೆ. ಅಂತಹ ಆಕರ್ಷಣೆಗಳ ಪೈಕಿ ಒಂದಾಗಿದೆ ಸಿದ್ಧೇಶ್ವರ ಬೆಟ್ಟ. ಚಾರಣಕ್ಕೆ ಯೋಗ್ಯವಾದ ಈ ಬೆಟ್ಟದ ಮೇಲಿಂದ ಸುಂದರವಾದ ಸಂಜೆಯ ಹಿತಕರವಾದ ಅನುಭವವನ್ನು ಪಡೆಯಬಹುದಾಗಿದೆ.

ಚಿತ್ರಕೃಪೆ: Manjeshpv

ನಾಗರಹೊಳೆ

ನಾಗರಹೊಳೆ

ಕೊಡಗು ಹಾಗೂ ಮೈಸೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವು ಒಂದು ಆಕರ್ಷಕ ಪ್ರವಾಸಿ ತಾಣವಾಗಿದೆ. ಇಲ್ಲಿ ಹರಿದಿರುವ ಕಬಿನಿ ನದಿಯ ತಟವು ತನ್ನ ವೈಭವದಿಂದ ಪ್ರವಾಸಿಗರನ್ನು ಸೆಳೆಯುತ್ತದೆ ಹಾಗೂ ಇಲ್ಲಿನ ಸೂರ್ಯಾಸ್ತ ನೋಟವು ನೋಡಲು ಬಲು ಸೊಗಸಾಗಿರುತ್ತದೆ.

ಚಿತ್ರಕೃಪೆ: Shriya Palchaudhuri

ಹಾಸನ

ಹಾಸನ

ಹಾಸನ ಜಿಲ್ಲೆಯಲ್ಲಿರುವ ಶ್ರವಣಬೆಳಗೊಳವು ಜೈನರ ಪಾಲಿಕ ಕಾಶಿಯಾಗಿದ್ದು ಬಾಹುಬಲಿ/ಗೊಮ್ಮಟೇಶ್ವರನ ಎತ್ತರದ ಪ್ರತಿಮೆಯಿಂದಾಗಿ ಸಾಕಷ್ಟು ಪ್ರಖ್ಯಾಅತಿಗಳಿಸಿದ ಕ್ಷೇತ್ರವಾಗಿದೆ. ಇಲ್ಲಿರುವ ಚಂದ್ರಗಿರಿ ಹಾಗೂ ವಿಂಧ್ಯಗಿರಿ ಬೆಟ್ಟಗಳ ಮೇಲೆ ನಿಂತು ನೋಡಿದಾಗ ಮುಳುಗುತ್ತಿರುವ ಸೂರ್ಯ ನಾಳಿನ ಹೊಸ ಭರವಸೆಯನ್ನು ಕೊಡುತ್ತಿದ್ದಾನೆ ಎಂದು ಭಾಸ ಮುಡಿಸುವಂತಿರುತ್ತದೆ.

ಚಿತ್ರಕೃಪೆ: Nithin bolar k

ಮಂಡ್ಯ

ಮಂಡ್ಯ

ಮಂಡ್ಯ ಜಿಲ್ಲೆಯ ದ್ವೀಪ ಪಟ್ಟಣವಾದ ಶ್ರೀರಂಗಪಟ್ಟಣ ತನ್ನಲ್ಲಿರುವ ಶ್ರೀರಂಗನಾಥನ ದೇವಾಲಯದಿಂದಾಗಿ ಸಾಕಷ್ಟು ಮಹತ್ವ ಪಡೆದಿದೆ. ಈ ಪುಟ್ಟ ದ್ವೀಪ ಪಟ್ಟಣವು ಅಲ್ಲಲ್ಲಿ ಕವಲೊಡದು ಹರಿಯುವ ಕಾವೇರಿ ನದಿಯಿಂದ ಸುತ್ತುವರೆದಿದ್ದು ಆಕರ್ಷಕ ಪ್ರಕೃತಿ ಸೌಂದರ್ಯದಿಂದ ಕೂಡಿದೆ. ಅದರಂತೆ ಇಲ್ಲಿಂದ ಕಂಡುಬರುವ ಸುರ್ಯಾಸ್ತವೂ ಸಹ ಅಷ್ಟೆ ಸೊಗಸಾಗಿರುತ್ತದೆ.

ಚಿತ್ರಕ್ರುಪೆ: Ilya Mauter

ಹಂಪಿ

ಹಂಪಿ

ನಿಮಗಿದು ಗೊತ್ತೆ? ಹಂಪಿಯು ತಾನು ಒದಗಿಸುವ ಅತ್ಯಂತ ಆಕರ್ಷಕ ಸೂರ್ಯಾಸ್ತದ ನೋಟಗಳಿಗೂ ಸಹ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ಬಳಿಯಿರುವ ವಿಶ್ವವಿಖ್ಯಾತ ಹಂಪಿಯು ಹಳೆಯ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಸಾರುವ, ಯುನೆಸ್ಕೊದಿಂದ ಮಾನ್ಯತೆ ಪಡೆದಿರುವ ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿದೆ.

ಚಿತ್ರಕೃಪೆ: Harshap3001

ಸುಂದರ ಸಂಜೆ

ಸುಂದರ ಸಂಜೆ

ಹಲವು ದಂತಕಥೆಗಳು, ಆಂಜನೇಯನ ಹುಟ್ಟಿದ ಸ್ಥಳ, ರಾಮಾಯಣದ ದಂಡಕಾರಣ್ಯದ ಭಾಗ ಹೀಗೆ ಹಲವಾರು ಪ್ರಸಂಗಗಳೊಂದಿಗೆ ನಂಟನ್ನು ಹೊಂದಿರುವ ಹಂಪಿಯು ಬಂಡೆಗಲ್ಲುಗಳಿಂದ ಕೂಡಿದ ಬೆಟ್ಟ ಪ್ರದೇಶಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿರುವ ಬೆಟ್ಟಗಳ ಮೇಲೆ ಕುಳಿತು ಸೂರ್ಯಾಸ್ತದ ದೃಶ್ಯಗಳನ್ನು ನೋಡುವುದೆಂದರೆ ಹಲವಾರು ಪ್ರವಾಸಿಗರಿಗೆ ಬಲು ನೆಚ್ಚಿನ ಚಟುವಟಿಕೆ.

ಚಿತ್ರಕೃಪೆ: ShivaRajvanshi

ಪಶ್ಚಿಮಘಟ್ಟ

ಪಶ್ಚಿಮಘಟ್ಟ

ಶಿವಮೊಗ್ಗದ ಪಶ್ಚಿಮಘಟ್ಟಗಳಲ್ಲಿ ಬರುವ ಕೊಡಚಾದ್ರಿ ಶಿಖರವು ಆಕರ್ಷಕ ಪ್ರವಾಸಿ ತಾಣವಾಗಿದೆ. ಸಾಹಸ ಬಯಸುವ ಪ್ರವಾಸಿಗರಿರಲಿ, ಪ್ರಕೃತಿ ಹಾಗೂ ಪ್ರಾಣಿ ಪ್ರೀಯ ಪ್ರವಾಸಿಗರಿರಲಿ ಇಬ್ಬರನ್ನೂ ಆಕರ್ಷಿಸುವ ಸುಂದರ ಶಿಖರ ಪ್ರದೇಶ ಇದಾಗಿದೆ. ವೈವಿಧ್ಯಮಯ ಪ್ರಾಣಿ-ಪಕ್ಷಿ-ಗಿಡಮರಗಳಿಂದ ಸಮ್ಪದ್ಭರಿತವಾಗಿರುವ ಕೊಡಚಾದ್ರಿ ತನ್ನ ಸುಂದರ ಸೂರ್ಯಾಸ್ತದ ದೃಶ್ಯದಿಂದಾಗಿಯೂ ಗಮನಸೆಳೆಯುತ್ತದೆ.

ಚಿತ್ರಕೃಪೆ: Chinmayahd

ಪ್ರೇಮಸಂಜೆ

ಪ್ರೇಮಸಂಜೆ

ಕರ್ನಾಟಕದ ಅತ್ಯಂತ ಅದ್ಭುತವಾದ ಪ್ರವಾಸಿ ಸ್ಥಳವಾಗಿ ಗಮನಸೆಳೆವ ಗಿರಿಧಾಮವೆಂದರೆ ಪ್ರಾಯಶಃ ಕೊಡಗು ಮಾತ್ರ. ಇಲ್ಲಿನ ಪ್ರಕೃತಿಯ ಅಂದ ಚೆಂದ, ಚಹಾ ತೋಟಗಳ ಘಮ ಘಮ ಪರಿಮಳ, ಹಿತಕರವಾದ ವಾತಾವರಣ, ಕಲ್ಮಶರಹಿತ ಪರಿಸರ ಪ್ರವಾಸಿಗರನ್ನು ಬಹುವಾಗಿ ಆಕರ್ಷಿಸುತ್ತವೆ. ಅಂತೆಯೆ ಇಲ್ಲಿನ ಸೂರ್ಯಾಸ್ತ ನೋಟವೂ ಸಹ ಸಾಕಷ್ಟು ಗಮನಸೆಳೆಯುತ್ತದೆ.

ಚಿತ್ರಕೃಪೆ: Subharnab Majumdar

ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರ

ಬೆಂಗಳೂರಿನಿಂದ 60 ಕಿ.ಮೀ ಹಾಗೂ ದೊಡ್ಡಬಳ್ಳಾಪುರ-ಗೌರಿಬಿದನೂರು ಮಾರ್ಗದಲ್ಲಿ ದೊಡ್ಡಬಳ್ಳಾಪುರದಿಂದ ಹತ್ತು ಕಿ.ಮೀ ಗಳಷ್ಟು ದೂರದಲ್ಲಿರುವ ಮಾಕಳಿದುರ್ಗವು ಚಾರಣಕ್ಕೆ ಹೇಳಿಮಾಡಿಸಿದಂತಹ ಆಕರ್ಷಕ ತಾಣವಾಗಿದೆ. ವಾರಾಂತ್ಯದ ರಜೆಗಳಲ್ಲಿ ಸಾಕಷ್ಟು ಜನ ಬೆಂಗಳೂರಿಗರು ಚಾರಣಕ್ಕೆಂದು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಸೂರ್ಯಾಸ್ತವೂ ಸಹ ನೋಡಲು ಬಲು ಆಕರ್ಷಕವಾಗಿರುತ್ತದೆ.

ಚಿತ್ರಕೃಪೆ: Adityamadhav83

ಅರಬ್ಬಿ ಸಮುದ್ರ

ಅರಬ್ಬಿ ಸಮುದ್ರ

ಅರಬ್ಬಿ ಸಮುದ್ರದ ತೀರದಲ್ಲಿರುವ ಉಡುಪಿ ನಗರವು ಆಕರ್ಷಕ ಪ್ರವಾಸಿ ಕ್ಷೇತ್ರವಾಗಿದೆ. ಇದು ಮೂಲತಃ ತನ್ನಲ್ಲಿರುವ ಕೃಷ್ಣ ಮಠದಿಂದಾಗಿ ದೇಶದಲ್ಲೆ ಸಾಕಷ್ಟು ಹೆಸರುವಾಸಿಯಾಗಿದೆ. ಅಲ್ಲದೆ ಸುಂದರ ಕಡಲ ಕಿನಾರೆಗಳನ್ನು ಹೊಂದಿರುವ ಈ ಪಟ್ಟಣ ತೀರದಿಂದ ಕಂಡುಬರುವ ಸುಂದರ ಸೂರ್ಯಾಸ್ತದ ನೋಟಗಳಿಂದಾಗಿ ಗಮನಸೆಳೆಯುತ್ತದೆ.

ಚಿತ್ರಕೃಪೆ: SajjadF

ಮೇಲುಕೋಟೆ

ಮೇಲುಕೋಟೆ

ಮಂಡ್ಯ ಜಿಲ್ಲೆಯ ಮೇಲುಕೋಟೆ ಒಂದು ಪ್ರಸಿದ್ಧ ಧಾರ್ಮಿಕ ಪ್ರವಾಸಿ ಸ್ಥಳವಾಗಿದೆ. ಇಲ್ಲಿರುವ ಚೆಲುವನಾರಾಯಣಸ್ವಾಮಿ ದೇವಸ್ಥಾನ ಹಾಗೂ ಬೆಟ್ಟದ ಮೇಲಿರುವ ಯೋಗ ನರಸಿಂಹ ದೇವಸ್ಥಾನಗಳು ಸಾಕಷ್ಟು ಪ್ರಸಿದ್ಧಿ ಪಡೆದಿವೆ. ಬೆಟ್ಟದ ಮೇಲಿರುವ ಯೋಗನರಸಿಂಹ ದೇವಸ್ಥಾನದ ಹಿನ್ನಿಲೆಯಲ್ಲಿ ಕಂಡುಬರುವ ಸೂರ್ಯಾಸ್ತದ ದೃಶ್ಯ ಎಂಥವರನ್ನೂ ಮೂಕವಿಸ್ಮಿತಗೊಳಿಸುತ್ತದೆ. ಅಲ್ಲದೆ ಈ ದೇವಾಲಯದ ಗಮ್ಮತ್ತು ಮತ್ತಷ್ಟು ಹೆಚ್ಚುವಂತೆ ಮಾಡುತ್ತದೆ.

ಚಿತ್ರಕೃಪೆ: Bikashrd

ಜೋಯಿಡಾ

ಜೋಯಿಡಾ

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸುಪಾ ಆಣೆಕಟ್ಟು ತನ್ನ ಜಲಾಶಯಕ್ಕೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಅದರಂತೆ ಇಲ್ಲಿ ಕಂಡುಬರುವ ಸೂರ್ಯಾಸ್ತ ದೃಶ್ಯ ನಯನಮನೋಹರವಾಗಿರುತ್ತದೆ.

ಚಿತ್ರಕೃಪೆ: Chinmayisk

ಮೈಸೂರು ಬಳಿ

ಮೈಸೂರು ಬಳಿ

ಮಂಡ್ಯ ಜಿಲ್ಲೆಯಲ್ಲಿರುವ ಆದರೆ ಮೈಸೂರು ನಗರಕ್ಕೆ ಅತಿ ಹತ್ತಿರದಲ್ಲಿರುವ ಕೆ ಆರ್ ಎಸ್ ಜಲಾಶಯದ ಹಿನ್ನೀರು ಪ್ರದೇಶವು ಮನಮೋಹಕ ಸೂರ್ಯಾಸ್ತಕ್ಕೆ ಸಾಕ್ಷಿಯಾಗುತ್ತದೆ.

ಚಿತ್ರಕೃಪೆ: Yashhegde

ತುಮಕೂರು

ತುಮಕೂರು

ಬೆಂಗಳೂರು ಬಳಿಯಿರುವ ಪುಟ್ಟ ಗಿರಿಧಾಮ ಪ್ರದೇಶವೆ ತುಮಕೂರು ಜಿಲ್ಲೆಯ ದೇವರಾಯನದುರ್ಗ. ಈ ಗಿರಿಧಾಮವೂ ಸಹ ಕೆಲವು ಪ್ರಸಿದ್ಧ ದೇವಾಲಯಗಳಿಗೆ ತವರಾಗಿದೆ. ಹಾಗಾಗಿ ಧಾರ್ಮಿಕ ಆಸಕ್ತರು ಹಾಗೂ ನಿಸರ್ಗ ಪ್ರೇಮಿಗಳಿಬ್ಬರೂ ಭೇಟಿ ಮಾಡಬಹುದಾದ ಆಕರ್ಷಕ ಪ್ರಕೃತ್ ಸೌಂದರ್ಯವಿರುವ ತಾಣ ಇದಾಗಿದೆ. ಇಲ್ಲಿನ ಸೂರ್ಯಾಸ್ತ ನೋಟವೂ ಸಹ ಕಣ್ಣಿಗೆ ಕಟ್ಟುವ ಹಾಗಿರುತ್ತದೆ.

ಚಿತ್ರಕೃಪೆ: Siddarth P Raj

ಮಂಗಳೂರು

ಮಂಗಳೂರು

ಮಂಗಳೂರಿನ ಉಲ್ಲಾಳದಲ್ಲಿ ಹರಿದಿರುವ ನೇತ್ರಾವತಿ ನದಿಗೆ ನಿರ್ಮಿಸಲಾದ ಸೇತುವೆ ಸಾಮಾನ್ಯವಾಗಿ ಛಾಯಾಗ್ರಾಹಕರ ಪಾಲಿನ ನೆಚ್ಚಿನ ಸ್ಥಳವಾಗಿದೆ. ಅದರಲ್ಲೂ ಇಲ್ಲಿನ ಸೂರ್ಯಾಸ್ತ ನೋಟವಂತೂ ವರ್ಣನಾತೀತ.

ಚಿತ್ರಕೃಪೆ: Nithin Bolar k

ಮನಮೋಹಕ

ಮನಮೋಹಕ

ರಾಜಧಾನಿ ನಗರ ಬೆಂಗಳೂರಿನ ಲಾಲ್ ಬಾಗ್, ರಾಗಿಗುಡ್ಡ, ಎತ್ತರದ ಕಚೇರಿ ಕಟ್ಟಡಗಳು ಸೇರಿದಂತೆ ಹಲವಾರು ಭಾಗಗಳು ಆಕರ್ಷಕವಾದ ಸೂರ್ಯಾಸ್ತದ ನೋಟವನ್ನು ಒದಗಿಸುತ್ತವೆ. ಆದರೆ ನಿರಮ್ತರ ಕೆಲಸ, ರಭಸದ ಜೀವನಶೈಲಿಯ ಪರಿಣಾಮ್ಮವಾಗಿ ಬಹಳಷ್ಟು ಜನರು ಈ ಸುಂದರ ದೃಶ್ಯದಿಂದ ವಂಚಿತರಾಗುತ್ತಿರುವುದು ದುರದೃಷ್ಟಕರ. ಆದರೆ ಒಮ್ಮೆ ಯೋಚಿಸಿ ಅಲ್ಪ ಸಮಯ ಮಾಡಿಕೊಂಡು ಇಂತಹ ಒಂದು ಸುಂದರ ದೃಶ್ಯ ವೀಕ್ಷಿಸಿದರೆ ಮನಸ್ಸು ಮತ್ತೆ ಪ್ರಸನ್ನಗೊಳ್ಳಬಹುದು. ಆದರೆ ಪ್ರಕೃತಿಯ ಆನಂದವನ್ನು ಸವಿಯುವ ಸೂಕ್ಷ್ಮ ಮನಸ್ಸಿರಬೇಕಷ್ಟೆ.

ಚಿತ್ರಕೃಪೆ: mproopesh

ಕುಮಟಾ

ಕುಮಟಾ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ಕಡಲ ತೀರ ಹೊಂದಿರುವ ಒಂದು ತಾಲೂಕು ಪ್ರದೇಶ. ಇಲ್ಲಿನ ಕಡಲ ತೀರ ಪ್ರಶಾಂತವಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಕಂಡುಬರುವ ಸೂರ್ಯಾಸ್ತದ ದೃಶ್ಯ ಸಾಕಷ್ಟು ಸುಂದರವಾಗಿರುತ್ತದೆ.

ಚಿತ್ರಕೃಪೆ: rajesh kamat

ಮಂಗಳೂರು

ಮಂಗಳೂರು

ಮಂಗಳೂರು ಕರ್ನಾಟಕದ ಪ್ರಮುಖ ನಗರಗಳಲ್ಲೊಂದಾಗಿದ್ದು ಬಂದರು ನಗರವಾಗಿ, ಪ್ರವಾಸಿ ತಾಣವಾಗಿ ಸಾಕಷ್ಟು ಜನರನ್ನು ಆಕರ್ಷಿಸುತ್ತದೆ. ಮಂಗಳೂರು ಕಡಲ ತೀರವು ನೋಡಲು ಸಾಕಷ್ಟು ಸುಂದರವಾಗಿದ್ದು ದಿನನಿತ್ಯ ನೂರಾರು ಪ್ರವಾಸಿಗರಿ ಈ ಕಡಲ ತೀರಕ್ಕೆ ಭೇಟಿ ನೀಡುತ್ತಾರೆ. ಈ ಕಡಲ ತೀರದ ಸೂರ್ಯಾಸ್ತವು ಬಹಳವೆ ಚೆಂದವಾಗಿರುತ್ತದೆ.

ಚಿತ್ರಕೃಪೆ: Dattatreya N R

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more