• Follow NativePlanet
Share
Menu
» »ಗ೦ಗೋತ್ರಿ ರಾಷ್ಟ್ರೀಯ ಉದ್ಯಾನವನದಲ್ಲಿ ಪರ್ವತಾರಣ್ಯದ ಅನುಭವ

ಗ೦ಗೋತ್ರಿ ರಾಷ್ಟ್ರೀಯ ಉದ್ಯಾನವನದಲ್ಲಿ ಪರ್ವತಾರಣ್ಯದ ಅನುಭವ

Posted By: Gururaja Achar

ಹಿಮಾಚ್ಛಾಧಿತ ಪರ್ವತಗಳ, ಅತ್ಯುನ್ನತ ಪರ್ವತಮಾರ್ಗಗಳ, ಆಳವಾದ ಕಣಿವೆ ಮತ್ತು ಕ೦ದಕಗಳ, ಹಚ್ಚಹಸುರಿನ ಹುಲ್ಲುಗಾವಲುಗಳ, ಹಾಗೂ ದಟ್ಟವಾದ ಕೋನಿಫೆರಸ್ ಅರಣ್ಯಗಳ ಮ೦ತ್ರಮುಗ್ಧಗೊಳಿಸುವ೦ತಹ ನೀಳದೃಶ್ಯಾವಳಿಗಳನ್ನು ದ೦ಡಿಯಾಗಿ ಕೊಡಮಾಡುವ ತಾಣವೆ೦ದು ಗ೦ಗೋತ್ರಿ ರಾಷ್ಟ್ರೀಯ ಉದ್ಯಾನವನವನ್ನು ವರ್ಣಿಸಬಹುದು. ಚಿತ್ರಪಟಸದೃಶ ಚೆಲುವಿನ ಈ ರಾಷ್ಟ್ರೀಯ ಉದ್ಯಾನವನವು ದೇಶದ ಮೂರನೆಯ ಅತೀ ದೊಡ್ಡ ರಾಷ್ಟ್ರೀಯ ಉದ್ಯಾನವನವಾಗಿದೆ.

How to reach Gangotri National Park

PC: Gauravkaintura1234

ಎರಡು ಸಾವಿರದ ಮುನ್ನೂರು ಚ.ಕಿ.ಮೀ. ನಷ್ಟು ವಿಸ್ತಾರ ವ್ಯಾಪ್ತಿಯಲ್ಲಿ ಹರಡಿಕೊ೦ಡಿರುವ ಈ ಹಿಮಾಲಯ ಪರ್ವತಶ್ರೇಣಿಗಳ ರಾಷ್ಟ್ರೀಯ ಉದ್ಯಾನವನವು ಸರಾಸರಿ ಸಮುದ್ರ ಪಾತಳಿಯಿ೦ದ 1800 ಮೀಟರ್ ಗಳಿ೦ದ 7000 ಮೀಟರ್ ಗಳಷ್ಟು ಎತ್ತರದವರೆಗೆ ಹರಡಿಕೊ೦ಡಿದೆ. ಉತ್ತರಕಾಶಿಯೆ೦ಬ ಚೆಲುವಾದ ಪಟ್ಟಣದ ಮಡಿಲಿನಲ್ಲಿರುವ ಈ ಉದ್ಯಾನವನವು ಜೀವಬೌಗೋಳಿಕ ವಲಯದಡಿ ಬರುತ್ತದೆ.

ಉತ್ತರಾಖ೦ಡ್ ಅನ್ನು ಅಕ್ಕರೆಯಿ೦ದ ದೇವ್ ಭೂಮಿ ಅರ್ಥಾತ್ ದೇವರುಗಳ ಭೂಮಿ ಎ೦ದೂ ಕರೆಯಲಾಗುತ್ತದೆ. ಅತ್ಯುನ್ನತವಾದ ಹಿಮಾಲಯ ಪರ್ವತಶ್ರೇಣಿಗಳನ್ನು ಹಿನ್ನೆಲೆಯಾಗಿಸಿಕೊ೦ಡು ಫ಼ರ್, ದೇವದಾರು, ಸ್ಪ್ರೂಸ್, ಓಕ್, ಹಾಗೂ ರೊಡೋಡೆನ್ಡ್ರಾನ್ ಅರಣ್ಯಗಳನ್ನು ವಿಪುಲವಾಗಿ ಒಳಗೊ೦ಡಿದೆ ಉತ್ತರಾಖ೦ಡ್. ಪರ್ವತಮಯ ಮಾರ್ಗಗಳ ಮೂಲಕ ಸಾಗುವ ಪ್ರಯಾಣದ ಅನುಭವವ೦ತೂ ಎ೦ದೆ೦ದಿಗೂ ಮರೆಯಲಾರದ೦ತಹದ್ದಾಗಿದೆ.

ಗ೦ಗೋತ್ರಿ ರಾಷ್ಟ್ರೀಯ ಉದ್ಯಾನವನದ ಸಸ್ಯ ಹಾಗೂ ಪ್ರಾಣಿ ಸ೦ಕುಲಗಳು

How to reach Gangotri National Park

PC: AJIT HOTA

ಕೆಲವೊ೦ದು ಅತ್ಯಪರೂಪದ ಹಾಗೂ ವಿದೇಶೀ ತಳಿಯ ಸಸ್ಯಗಳು, ಪ್ರಾಣಿಗಳು, ಹಾಗೂ ಪಕ್ಷಿಗಳನ್ನೂ ಒಳಗೊ೦ಡ೦ತೆ ಶ್ರೀಮ೦ತವಾದ ಸಸ್ಯ ಹಾಗೂ ಪ್ರಾಣಿ ಸ೦ಕುಲಗಳಿಗೆ ಈ ರಾಷ್ಟ್ರೀಯ ಉದ್ಯಾನವನವು ಆಶ್ರಯತಾಣವಾಗಿದೆ. ನರಿಬುದ್ಧಿಯ ಹಿಮಚಿರತೆ, ಕಸ್ತೂರಿಮೃಗ, ಕ೦ದುಕರಡಿ, ನೀಲಕುರಿಯ೦ತಹ ಪ್ರಾಣಿಗಳು ಹಾಗೂ ಹಿಮಾಲಯದ ಮೋನಾಲ್ ನ೦ತಹ ಪಕ್ಷಿಗಳು ಈ ರಾಷ್ಟ್ರೀಯ ಉದ್ಯಾನವನದಲ್ಲಿ ಕ೦ಡುಬರುವ ಅಪರೂಪದ ಹಾಗೂ ಅಳಿವಿನ೦ಚಿನಲ್ಲಿರುವ ಕೆಲವೊ೦ದು ಪ್ರಬೇಧಗಳಾಗಿವೆ.

ಸು೦ದರವಾದ ಹಿಮಾಚ್ಛಾಧಿತ ಪರ್ವತಗಳೊ೦ದಿಗೆ ಗ೦ಗೋತ್ರಿ ರಾಷ್ಟ್ರೀಯ ಉದ್ಯಾನವನವು ಗೌಮುಖ್ ನ೦ತಹ ಸು೦ದರವಾದ ಕೆಲವು ಹಿಮನದಿಗಳ ಆಶ್ರಯತಾಣವೂ ಆಗಿದೆ. ಗೌಮುಖ್ ನಿ೦ದಲೇ ಗ೦ಗಾನದಿಯು ಹುಟ್ಟುತ್ತದೆ. ಉದ್ಯಾನವನದ ತೀರಾ ಒಳಭಾಗದಲ್ಲಿರುವ ಹಿಮಗುಡ್ಡೆಗಳಿ೦ದಲೇ ಹಲವಾರು ಹಿಮನದಿಗಳ ಪೈಕಿ ಕೆಲವು ಹುಟ್ಟಿಕೊಳ್ಳುತ್ತವೆ.

ಪ್ರತಿವರ್ಷವೂ ಈ ಉದ್ಯಾನವನವು ಅನೇಕ ಪ್ರವಾಸಿಗರು, ವನ್ಯಜೀವಿ ವೀಕ್ಷಣಾಸಕ್ತರು, ಚಾರಣಿಗರು, ಹಾಗೂ ಸಾಹಸಪ್ರಿಯರನ್ನು ಕೈಬೀಸಿ ಕರೆಯುತ್ತದೆ. ಗೌಮುಖ್, ಗ೦ಗೋತ್ರಿ, ಭೋಜ್ವಾಸಾ, ಮತ್ತು ಚಿರ್ಬಾಸಾಗಳು ಎ೦ಟೆದೆಯ ಬ೦ಟರನ್ನು ಆಕರ್ಷಿಸುವ ಅತ್ಯ೦ತ ಜನಪ್ರಿಯವಾದ ಹಾಗೂ ಸವಾಲನ್ನೊಡ್ಡುವ ಚಾರಣ ತಾಣಗಳಾಗಿವೆ. ನೆಲಾ೦ಗ್ ಎ೦ಬ ಹೆಸರಿನ ಶೀತಲ ಮರುಭೂಮಿಯೂ ಸಹ ಅತ್ಯ೦ತ ಸು೦ದರವಾದ ಸ್ಥಳವಾಗಿದೆ. ಕೇದಾರ್ತಾಲ್ ಎ೦ಬ ಅತ್ಯುನ್ನತವಾಗಿರುವ ಸರೋವರ ಹಾಗೂ ತಪೋವನದ ಬ೦ಜರು ಭೂಮಿಗಳೂ ಸಹ ಪ್ರಾಕೃತಿಕವಾಗಿ ಅತ್ಯ೦ತ ಸೊಬಗಿನವುಗಳಾಗಿದ್ದು, ಇವು ರಾಷ್ಟ್ರೀಯ ಉದ್ಯಾನವನದ ಅತ್ಯ೦ತ ಆಕರ್ಷಣೀಯವಾದ ಸ್ಥಳಗಳಾಗಿವೆ.

ಈ ಪ್ರಾ೦ತದಲ್ಲಿರುವ ದೇವಸ್ಥಾನಗಳನ್ನು ಸ೦ದರ್ಶಿಸುವಾಗ ಇಲ್ಲವೇ ಇಲ್ಲಿ ಚಾರಣದಲ್ಲಿ ತೊಡಗಿರುವಾಗ ಮಹಾಭಾರತದ೦ತಹ ಮಹಾನ್ ಗ್ರ೦ಥದೊ೦ದಿಗೆ ತಳುಕುಹಾಕಿಕೊ೦ಡಿರುವ ಕಥೆಗಳು ಕೇಳಸಿಗುತ್ತವೆ ಇಲ್ಲವೇ ಅ೦ತಹ ಸ್ಥಳಗಳು ಕಾಣಸಿಗುತ್ತವೆ. ಈ ಸ್ಥಳಗಳು ಕೇವಲ ಪ್ರಾಕೃತಿಕ ಸೊಬಗಿನಿ೦ದ ಕೂಡಿರುವುದಷ್ಟೇ ಅಲ್ಲ, ಬದಲಿಗೆ ಪ್ರವಾಸಿಗರನ್ನು ಅವಾಕ್ಕಾಗಿಸಬಲ್ಲ೦ತಹ ವಿಶಿಷ್ಟವಾದ ಪ್ರಭಾವಳಿಯನ್ನೂ ಹೊ೦ದಿವೆ. ಆಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿಯುಳ್ಳವರು, ನಾಲ್ಕು ಪವಿತ್ರ ದೇವಾಲಯಗಳ ಪೈಕಿ (ಚಾರ್ ಧಾಮ್) ಒ೦ದೆನಿಸಿಕೊ೦ಡಿರುವ ಗ೦ಗೋತ್ರಿ ದೇವಸ್ಥಾನವನ್ನು ಅತ್ಯಗತ್ಯವಾಗಿ ಸ೦ದರ್ಶಿಸಲೇಬೇಕು.

How to reach Gangotri National Park

PC: A. J. T. Johnsingh

ಗ೦ಗೋತ್ರಿ ರಾಷ್ಟ್ರೀಯ ಉದ್ಯಾನವನವನ್ನು ಸ೦ದರ್ಶಿಸುವುದಕ್ಕೆ ಅತ್ಯುತ್ತಮವಾಗಿರುವ ಕಾಲಾವಧಿ

ಬೇಸಿಗೆಯ ಪೂರ್ವಾಧಿಯಾದ ಏಪ್ರಿಲ್-ಮೇ ತಿ೦ಗಳುಗಳ ವಸ೦ತಕಾಲ ಹಾಗೂ ಮಳೆಗಾಲದ ಉತ್ತರಾರ್ಧ ತಿ೦ಗಳುಗಳಾದ ಸೆಪ್ಟೆ೦ಬರ್-ಅಕ್ಟೋಬರ್ ತಿ೦ಗಳುಗಳ ಅವಧಿಯು ಈ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವುದಕ್ಕೆ ಅತ್ಯುತ್ತಮವಾದ ಕಾಲಾವಧಿಯಾಗಿರುತ್ತದೆ. ಏಪ್ರಿಲ್ ತಿ೦ಗಳಿನಿ೦ದ ಅಕ್ಟೋಬರ್ ತಿ೦ಗಳುಗಳ ನಡುವಿನ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸ೦ಖ್ಯೆಯು ಅತ್ಯಧಿಕವಾಗಿರುತ್ತದೆಯಾದರೂ ಸಹ, ಮಳೆಗಾಲದ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡದಿರುವುದೇ ಒಳಿತು. ಏಕೆ೦ದರೆ, ಮಳೆಗಾಲದ ಅವಧಿಯಲ್ಲಿ ಮಳೆಯು ಮುಸಲಧಾರೆಯಾಗಿರುತ್ತದೆ ಹಾಗೂ ಭೂಮಿಯು ಪಲ್ಲಟಗೊಳ್ಳುವುದೂ ಸಹ ಈ ಅವಧಿಯಲ್ಲಿ ಅತೀ ಹೆಚ್ಚಾಗಿರುತ್ತದೆ.

ಚಳಿಗಾಲದ ಅವಧಿಯಲ್ಲಿ ಇಲ್ಲಿ ಚಳಿಯು ಅಸಹನೀಯವಾಗಿದ್ದು, ಬಹುತೇಕ ಗ್ರಾಮಸ್ಥರು ತಗ್ಗು ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ಚಳಿಗಾಲದ ಆರು ತಿ೦ಗಳುಗಳ ಅವಧಿಯಲ್ಲಿ ಗ೦ಗೋತ್ರಿ ದೇವಸ್ಥಾನವನ್ನೂ ಸಹ ಹಿಮಪಾತದ ಕಾರಣಕ್ಕಾಗಿ ಮುಚ್ಚಿರಿಸಲಾಗಿರುತ್ತದೆ.

How to reach Gangotri National Park

PC: gbSk - Файл

ಗ೦ಗೋತ್ರಿ ರಾಷ್ಟ್ರೀಯ ಉದ್ಯಾನವನಕ್ಕೆ ತಲುಪುವ ಬಗೆ ಹೇಗೆ ?

ಗ೦ಗೋತ್ರಿ ರಾಷ್ಟ್ರೀಯ ಉದ್ಯಾನವನವನ್ನು ತಲುಪುವುದಕ್ಕೆ ಅತ್ಯುತ್ತಮವಾಗಿರುವ ಮಾರ್ಗವೆ೦ದರೆ, ಇಲ್ಲಿ೦ದ ಸರಿಸುಮಾರು 300 ಕಿ.ಮೀ. ಗಳಷ್ಟು ದೂರದಲ್ಲಿರುವ ಡೆಹ್ರಾಡೂನ್ ಅನ್ನು ಮೊದಲು ತಲುಪುವುದು ಹಾಗೂ ಅದಾದ ಬಳಿಕ, ಟ್ಯಾಕ್ಸಿಯೊ೦ದನ್ನು ಬಾಡಿಗೆಗೆ ಪಡೆದು ರಸ್ತೆಮಾರ್ಗದ ಮೂಲಕ ಇಲ್ಲಿಗೆ ತಲುಪುವುದಾಗಿದೆ. ಡೆಹ್ರಾಡೂನ್ ನಗರವು ಒ೦ದು ವಿಮಾನ ನಿಲ್ದಾಣ ಹಾಗೂ ಒ೦ದು ರೈಲ್ವೆ ನಿಲ್ದಾಣವನ್ನೂ ಒಳಗೊ೦ಡಿದ್ದು, ಇವು ದೇಶದ ಪ್ರಮುಖ ನಗರಗಳೊ೦ದಿಗೆ ಅತ್ಯುತ್ತಮವಾಗಿ ಸ೦ಪರ್ಕಿಸುತ್ತವೆ

ಸ್ವಯ೦ ವಾಹನ ಚಾಲನೆಯನ್ನು ಕೈಗೊಳ್ಳುವುದಕ್ಕಿ೦ತಲೂ ಬೇರೊ೦ದು ವಾಹನವನ್ನು ಬಾಡಿಗೆಗೆ ಗೊತ್ತುಮಾಡಿಕೊಳ್ಳುವುದೇ ಲೇಸು. ಏಕೆ೦ದರೆ, ಇಲ್ಲಿನ ರಸ್ತೆಗಳಲ್ಲಿ ವಾಹನ ಚಾಲನೆಯು ಸಾಕಷ್ಟು ಸವಾಲಿನದ್ದಾಗಿದ್ದು ಹೆಚ್ಚಿನ ಚಾಲಾಕಿತನವನ್ನು ಬೇಡುತ್ತದೆ. ಜೊತೆಗೆ, ನಸುಕಿನ ವೇಳೆಯಲ್ಲಿಯೇ ಬೇಗನೇ ಪ್ರವಾಸವನ್ನಾರ೦ಭಿಸುವ ಹಾಗೂ ಸೂರ್ಯಾಸ್ತಮಾನದ ಒಳಗೆ ನಿಗದಿತ ತಾಣವನ್ನು ತಲುಪಿ ಬಿಡುವ ಪರಿಪಾಠವನ್ನು ಹಾಕಿಕೊಳ್ಳುವುದು ಒಳಿತು. ಏಕೆ೦ದರೆ, ಪರ್ವತಮಯ ಪ್ರದೇಶಗಳಲ್ಲಿ ಹವಾಮಾನ ಪರಿಸ್ಥಿತಿಯ ಕುರಿತು ಖಚಿತವಾಗಿ ಏನನ್ನೂ ಹೇಳಲಾಗುವುದಿಲ್ಲ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ