
ಭಾರತದ ಈಶಾನ್ಯ ಭಾಗವು ನಿಜಕ್ಕೂ ನಯನ ಮನೋಹರ ಪ್ರಕೃತಿ ದೃಶ್ಯಾವಳಿಗಳಿಂದ ಕೂಡಿರುವ ಅದ್ಭುತ ಭೂಮಿಯಾಗಿದೆ. ಸಮುದ್ರ ಮಟ್ಟಗಳಿಂದ ಸಾಕಷ್ಟು ಎತ್ತರದಲ್ಲಿರುವ ಈ ಭಾಗವು ದಟ್ಟ ಹಸಿರಿನ ಕಾಡುಗಳು, ಹಿಮಾಲಯ ಪರ್ವತಗಳ ಸಾಮಿಪ್ಯ, ಎತ್ತರದ ಬೆಟ್ಟಗುಡ್ಡಗಳಿಂದ ತುಂಬಿದ್ದು ಅಹ್ಲಾದಕರ ಹಾಗೂ ಕಲ್ಮಶರಹಿತ ವಾತಾವರಣವನ್ನು ಹೊಂದಿದೆ.
ಇದು ಭಾರತದ ಇತರೆ ಭಾಗಗಳು ಅಭಿವೃದ್ಧಿ ಹೊಂದಿರುವ ರೀತಿಯಲ್ಲಿ ಇನ್ನೂ ಅಭಿವೃದ್ಧಿ ಹೊಂದಿಲ್ಲದ ಕಾರಣ ಹಾಗೂ ಅರಣ್ಯನಾಶಗಳ ಪ್ರಮಾಣ ಗಣನೀಯ ಸಂಖ್ಯೆಯಲ್ಲಿ ಕಡಿಮೆಯಿರುವ ಕಾರಣ ಇಲ್ಲಿನ ಹವಾಮಾನ ಸಾಕಷ್ಟು ಆರೋಗ್ಯಕರವಾಗಿದೆ ಅಂತೆಯೆ ನದಿ ಕೆರೆಗಳೂ ಸಹ ಸಾಕಷ್ಟು ಶುದ್ಧವಾಗಿವೆ. ಮೇಘಾಲಯ ಈಶಾನ್ಯ ಭಾರತದಲ್ಲಿರುವ ಅಂತಹ ಒಂದು ಸ್ಥಳಗಳಲ್ಲೊಂದಾಗಿದೆ.
ನಿಮಗಿಷ್ಟವಾಗಬಹುದಾದ : ಶಿಲ್ಲಾಂಗ್ ನಿಂದ ಚಿರಾಪುಂಜಿ ರಸ್ತೆ ಪ್ರವಾಸ
ಮೇಘಾಲಯ ಮೂಲತಃ ಈಶಾನ್ಯ ಭಾರತದ ರಾಜ್ಯಗಳಲ್ಲೊಂದಾಗಿದೆ ಹಾಗೂ ಇಲ್ಲಿನ ಸೃಷ್ಟಿ ಸೌಂದರ್ಯವು ಎಂಥವರ ಹೃದಯವನ್ನೂ ಸಹ ಒಂದೆ ಕ್ಷಣದಲ್ಲಿ ಅಪಹರಿಸಿ ಬಿಡುತ್ತದೆ. ಪ್ರಸ್ತುತ ಲೇಖನವು, ಜೀವನದಲ್ಲಿ ಒಂದು ಸಲವಾದರೂ ಸರಿ, ಮೇಘಾಲಯ ರಾಜ್ಯಕ್ಕೊಮ್ಮೆ ಏಕೆ ಭೇಟಿ ನೀಡಬೇಕೆಂಬುದರ ಕುರಿತು ತಿಳಿಸುತ್ತದೆ. ಲೇಖನದ ಮೂಲಕ ಈ ರಾಜ್ಯದ ನಾನಾ ಭಾಗಗಳಲ್ಲಿರುವ ಹಲವಾರು ಸ್ಥಳಗಳ ಆಕರ್ಷಣೆಗಳು ಯಾವ ರೀತಿಯಾಗಿ ನೋಡುಗರ ಕಣ್ಣಿಗೆ ಕಟ್ಟುತ್ತವೆ ಎಂದು ತಿಳಿಯಬಹುದು.
ಪ್ರಸ್ತುತ ಲೇಖನದಲ್ಲಿ ಮೇಘಾಲಯ ರಾಜ್ಯಕ್ಕೆ ಭೇಟಿ ನೀಡಲು ಪ್ರೇರೇಪಿಸುವಂತಹ ಅಲ್ಲಿನ ಕೆಲವು ಆಕರ್ಷಕ ಸ್ಥಳಗಳ, ಪ್ರಾಕೃತಿಕ ದೃಶ್ಯಗಳ ನಯನ ಮನೋಹರ ದೃಶ್ಯಾವಳಿಗಳನ್ನು ಯಾದೃಚ್ಛಿಕವಾಗಿ ನೀಡಲಾಗಿದೆ. ಈ ಚಿತ್ರಗಳನ್ನು ನೋಡಿದಾಗ ಅಲ್ಲಿನ ಸೃಷ್ಟಿ ಸೌಂದರ್ಯಕ್ಕೆ ಮಾರು ಹೋಗಿ, ಒಮ್ಮೆಯಾದರೂ ಸ್ಥಳಕ್ಕೆ ಭೇಟಿ ನೀಡಲೇಬೇಕೆಂಬ ಆಸೆ ನಿಮಗೆ ಬರದಿರಲು ಸಾಧ್ಯವೆ ಇಲ್ಲ.

ಮನಸೆಳೆವ ಮೇಘಾಲಯ :
ಅಬ್ಬಾ..ಒಂದು ಕ್ಷಣ ಮಂತ್ರಮುಗ್ಧರಾಗುವಂತೆ ಮಾಡುವ ಸುಂದರ ಜಲಪಾತ. ಅದಕ್ಕೆ ಮತ್ತಷ್ಟು ಇಂಬು ನೀಡುವಂತೆ ಎದುರಿಗೊಂದು ಪುರಾತನ ಸೇತುವೆ. ಸುತ್ತಲೂ ದಟ್ಟ ಹಸಿರು. ಈ ಜಲಪಾತವು ಮೇಘಾಲಯದ ಅತಿ ಸ್ವಚ್ಛ ಹಳ್ಳಿ ಎಂದು ಹೇಳಲ್ಪಡುವ ಮಾವ್ಲಿನ್ನಾಂಗ್ ನಿಂದ ಡಾವ್ಕಿಗೆ ತೆರಳುವ ಮಾರ್ಗದಲ್ಲಿ ಸಿಗುತ್ತದೆ.
ಚಿತ್ರಕೃಪೆ: Pradeep Kumar N

ಮನಸೆಳೆವ ಮೇಘಾಲಯ :
ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ನೊಂಗ್ರಿಯಾಟ್ ಗ್ರಾಮದಲ್ಲಿರುವ ನೈಸರ್ಗಿಕವಾಗಿ ಬೆಳೆದ ಮರದ ಬೇರಿನ ಸೇತುವೆ. ವಿಶೇಷವೆಂದರೆ ಮೇಘಾಲಯದ ಖಾಸಿ ಜನಾಂಗದವರು ಈ ರೀತಿಯಾಗಿ ನೈಸರ್ಗಿಕ ಸೇತುವೆಯನ್ನು ನಿರ್ಮಿಸುವುದರಲ್ಲಿ ಪಾಂಡಿತ್ಯ ಪಡೆದಿದ್ದಾರೆ. ಮೇಘಾಲಯದ ಹಲವು ಸ್ಥಳಗಳಲ್ಲಿ ಈ ರೀತಿಯ ವಿಸ್ಮಯಕರ ಬೇರಿನ ಸೇತುವೆಗಳನ್ನು ಕಾಣಬಹುದಾಗಿದೆ.
ಚಿತ್ರಕೃಪೆ: Sonty567

ಮನಸೆಳೆವ ಮೇಘಾಲಯ :
ಮೇಘಾಲಯ ರಾಜ್ಯದ ಪೂರ್ವ ಖಾಸಿ ಜಿಲ್ಲೆಯ ಪೈನುರ್ಸ್ಲಾ ಭಾಗದಲ್ಲಿರುವ ಈ ಹಳ್ಳಿಯು ಕೇವಲ ಭಾರತ ಮಾತ್ರವಲ್ಲ ಸಂಪೂರ್ಣ ಏಷಿಯಾ ಖಂಡದಲ್ಲೆ ಅತಿ ಸ್ವಚ್ಛವಿರುವ ಹಳ್ಳಿಯಾಗಿದೆ. ಹೌದು ನೀವು ಕೇಳುತ್ತಿರುವುದು ನಿಜ. ಇಲ್ಲಿನ ರಸ್ತೆಗಳ ಮೇಲಾಗಲಿ, ಅದಿ ಬದಿಗಳಲ್ಲಾಗಲಿ ಸ್ವಲ್ಪವೂ ಕಸ, ಗಲೀಜುಗಳು ಕಾಣಸಿಗದು. ಹಳ್ಳಿಯ ಒಂದು ಬೀದಿ.
ಚಿತ್ರಕೃಪೆ: Sai Avinash

ಮನಸೆಳೆವ ಮೇಘಾಲಯ :
ಡಾವ್ಕಿ ಸೇತುವೆ, ಮೇಘಾಲಯದ ಮತ್ತೊಂದು ನಯನ ಮನೋಹರ ಸ್ಥಳ ರಾಜಧಾನಿ ಶಿಲ್ಲಾಂಗ್ ನಿಂದ 95 ಕಿ.ಮೀ ದೂರವಿದೆ. ಇಲ್ಲಿನ ಉಮ್ಗಾಟ್ (Umngot river) ನದಿಗೆ ಅಡ್ಡಲಾಗಿ ಈ ಸೇತುವೆಯನ್ನು ಬ್ರಿಟೀಷರಿಂದ ನಿರ್ಮಿಸಲಾಗಿದೆ ಹಾಗೂ ಉಮ್ಗಾಟ್ ನದಿಯು ಪೂರ್ವ ಖಾಸಿ ಜಿಲ್ಲೆ ಹಾಗೂ ಪಶ್ಚಿಮ ಜಯಂತಿಯಾ ಹಿಲ್ಸ್ ಜಿಲ್ಲೆಗಳನ್ನು ನೈಸರ್ಗಿಕವಾಗಿ ಪ್ರತ್ಯೆಕಿಸುತ್ತದೆ.
ಚಿತ್ರಕೃಪೆ: Vikramjit Kakati

ಮನಸೆಳೆವ ಮೇಘಾಲಯ :
ಡಾವ್ಕಿಯ ಉಮ್ಗಾಟ್ ನದಿಯು ಬಹುಶಃ ಭಾರತದಲ್ಲೆ ಕಂಡುಬರುವ ಸ್ವಚ್ಛ ನೀರಿರುವ ನದಿಯಾಗಿದೆ. ಮೇಲಿನಿಂದ ನೋಡಿದರೆ ದೋಣಿಗಳು ಗಾಳಿಯಲ್ಲಿಯೆ ತೇಲುತ್ತಿವೆಯೇನೊ ಅನ್ನುವಂತೆ ಸ್ಪಷ್ಟವಾಗಿದೆ ಇದರ ನೀರು. ಅಲ್ಲದೆ ಪ್ರದೇಶದ ಬೆಸತರಿಗೆ ಮೀನು ಹಿಡಿಯುವ ಪ್ರಮುಖ ಮೂಲವಾಗಿದೆ ಈ ನದಿ.
ಚಿತ್ರಕೃಪೆ: Diablo0769

ಮನಸೆಳೆವ ಮೇಘಾಲಯ :
ಒಂದೆ ಬಾರಿಗೆ ಭೂಮಿಗೆ ಧುಮುಕುವ ರೀತಿಯ ಜಲಪಾತಗಳಲ್ಲಿ ಭಾರತದಲ್ಲಿ ಅತಿ ಎತ್ತರದ ಜಲಪಾತ ಎಂಬ ಖ್ಯಾತಿಗೆ ಪಾತ್ರವಾಗಿರುವ ನೊಹ್ಕಾಲಿಕಾಯ್ ಜಲಪಾತವಿರುವುದು ಮೇಘಾಲಯದ ಹೆಚ್ಚಿನ ಮಳೆ ಪಡೆಯುವ ನೆಚ್ಚಿನ ಸ್ಥಳವಾದ ಚಿರಾಪುಂಜಿಯ ಬಳಿಯಲ್ಲಿ. ಇದರ ಒಟ್ಟು ಎತ್ತರ 1115 ಅಡಿಗಳು.
ಚಿತ್ರಕೃಪೆ: Kunal Dalui

ಮನಸೆಳೆವ ಮೇಘಾಲಯ :
ಮೇಘಾಲಯದ ಪಶ್ಚಿಮ ಖಾಸಿಹಿಲ್ಸ್ ಜಿಲ್ಲೆಯ ನಾಂಗ್ ಸ್ಟಾಯ್ನ್ ಎಂಬಲ್ಲಿರುವ ಲ್ಯಾಂಗ್ ಶಿಯಾಂಗ್ ಜಲಪಾತದ ಅದ್ಭುತ ನೋಟ. ಇದರ ಎತ್ತರ 1,106 ಅಡಿಗಳೆಂದು ಹೇಳಲಾಗಿದ್ದರೂ ಖಚಿತ ಮಾಹಿತಿಗಳಿಲ್ಲ. ಆದರೆ ಎತ್ತರ ದೃಢಪಟ್ಟರೆ ಇದು ಭಾರತದ ಮೂರನೇಯ ಅತಿ ಎತ್ತರದ ಜಲಪಾತ ಎಂಬ ಖ್ಯಾತಿಗೆ ಪಾತ್ರವಾಗಬಹುದು.
ಚಿತ್ರಕೃಪೆ: Joist John L Nonglait

ಮನಸೆಳೆವ ಮೇಘಾಲಯ :
ಮೇಘಾಲಯದಲ್ಲಿರುವ ಸಿಜು ವನ್ಯಜೀವಿಧಾಮವು ಲೈಮ್ ಸ್ಟೋನ್ (ಸುಣ್ಣದಕಲ್ಲು) ಹಾಗೂ ಅದರಿಂದ ರಚನೆಯಾದ ನೈಸರ್ಗಿಕ ಗುಹೆಗಳಿಗೆ ಬಹು ಪ್ರಖ್ಯಾತವಾಗಿದೆ.
ಚಿತ್ರಕೃಪೆ: Uajith

ಮನಸೆಳೆವ ಮೇಘಾಲಯ :
ಮಾವ್ ಫ್ಲಾಂಗ್ ಆಣೆಕಟ್ಟು ಶಿಲ್ಲಾಂಗ್ ನಗರ ಕೇಂದ್ರದಿಂದ ಕೇವಲ 25 ಕಿ.ಮಿ ದೂರದಲ್ಲಿರುವ ಜಲಾಶಯವಾಗಿದೆ. ಈ ಒಂದು ಆಣೆಕಟ್ಟಿನ ನಿರ್ಮಾಣದ ಫಲವಾಗಿ ಇಂದು ಶಿಲ್ಲಾಂಗ್ ಪಟ್ಟಣಕ್ಕೆ ಹಾಗೂ ನಿವಾಸಿಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುತ್ತದೆ.
ಚಿತ್ರಕೃಪೆ: AmyNorth

ಮನಸೆಳೆವ ಮೇಘಾಲಯ :
ಉಮಿಯಮ್ ಜಲಾಶಯ, ಮೇಘಾಲಯದ ಶಿಲ್ಲಾಂಗ್ ನಗರ ಕೇಂದ್ರದಿಂದ ಕೇವಲ 16 ಕಿ.ಮೀ ದೂರದಲ್ಲಿರುವ ಸುಂದರ ಕೆರೆ ತಾಣವಾಗಿದೆ. ಉಮಿಯಮ್ ನದಿಗೆ ಆಣಕಟ್ಟು ನಿರ್ಮಿಸಲಾಗಿ ಈ ಕೆರೆಯು ರೂಪಗೊಂಡಿದೆ. ಇಲ್ಲಿನ ಸೂರ್ಯಾಸ್ತ ವರ್ಣರಂಜಿತವಾಗಿಯೂ ಅತ್ಯಂತ ಮನಮೋಹಕವಾಗಿಯೂ ಕಾಣುತ್ತದೆ.
ಚಿತ್ರಕೃಪೆ: Vikramjit Kakati

ಮನಸೆಳೆವ ಮೇಘಾಲಯ :
ಶಿಲ್ಲಾಂಗ್ ಜನರ ಹಾಗೂ ಮೇಘಾಲಯದ ಗುರುತರ ಪ್ರವಾಸಿ ಆಕರ್ಷಣೆಗಳಲ್ಲೊಂದಾಗಿದೆ ಈ ಕೆರೆ. ಇಲ್ಲಿ ಸಾಹಸಮಯ ಜಲಕ್ರೀಡೆಗಳು ಹಾಗೂ ದೋಣಿ ವಿಹಾರದ ಸೌಲಭ್ಯಗಳಿದ್ದು ಪಿಕ್ನಿಕ್ ತಾಣವಾಗಿ ಪ್ರಸಿದ್ಧಿ ಪಡೆದಿದೆ.
ಚಿತ್ರಕೃಪೆ: Benoy

ಮನಸೆಳೆವ ಮೇಘಾಲಯ :
ಪೂರ್ವ ಖಾಸಿಹಿಲ್ಸ್ ಜಿಲ್ಲೆಯಲ್ಲಿ ಶಿಲ್ಲಾಂಗ್ ನಿಂದ ಚಿರಾಪುಂಜಿಯೆಡೆ ಹೋಗುವ ಮಾರ್ಗದಲ್ಲಿ ಕಂಡುಬರುವ ನಯನ ಮನೋಹರ ಕಣಿವೆ ಪ್ರದೇಶ.
ಚಿತ್ರಕೃಪೆ: Sai Avinash

ಮನಸೆಳೆವ ಮೇಘಾಲಯ :
ಪಶ್ಚಿಮ ಖಾಸಿಹಿಲ್ಸ್ ಜಿಲ್ಲೆಯ ಮಾವ್ತಾಬಾ ಎಂಬ ಗ್ರಾಮಕ್ಕೆ ತೆರಳುವಾಗ ಅಡ್ಡಬರುವ ಈ ನದಿಯನ್ನು ಹಾಗೆಯೆ ವಾಹನಗಳಲ್ಲಿ ದಾಟಿ ಹೋಗಬೇಕು. ಯಾವುದೆ ಸೇತುವೆ ಇದಕ್ಕಿಲ್ಲ.
ಚಿತ್ರಕೃಪೆ: PhnomPencil

ಮನಸೆಳೆವ ಮೇಘಾಲಯ :
ಮೇಘಾಲಯದ ಮೂಲೆ ಮೂಲೆಗಳು ಸಾಕಷ್ಟು ರಮಣೀಯ ಪ್ರಕೃತಿ ವೈಭವದಿಂದ ಕೂಡಿದೆ. ಇಲ್ಲಿನ ಗ್ರಾಮಗಳ ಜನರು ಆಧುನಿಕತೆಯಿಂದ ದೂರವಿರುವುದರಿಂದ ಸಾಂಪ್ರದಾಯಿಕವಾಗಿ ಕಟ್ಟಿಗೆ, ಬೇರು ನಾರುಗಳಿಂದ ಸೇತುವೆಗಳನ್ನು ನಿರ್ಮಿಸಿರುವ ಬಗೆ ಕಂಡಾಗ ಅವರ ಕೌಶಲ್ಯತೆಗೆ ಒಂದು ಸಲಾಂ ಹೊಡೆಯಲೇಬೇಕು.
ಚಿತ್ರಕೃಪೆ: Ashwin Kumar

ಮನಸೆಳೆವ ಮೇಘಾಲಯ :
ಮದಂತಿರ್ಪೈಟ್ ಮೇಘಾಲಯ ರಾಜ್ಯದ ಜಯಂತಿಯಾಹಿಲ್ಸ್ ಜಿಲ್ಲೆಯ ಅಮ್ಲಾರೇಮ್ ಬ್ಲಾಕಿನಲ್ಲಿರುವ ಒಂದು ಗ್ರಾಮವಾಗಿದೆ. ತನ್ನ ನೈಜ ಪ್ರಕೃತಿ ಸೌಂದರ್ಯದಿಂದ ಭೆಟಿ ನೀಡಿದವರ ಮನವನ್ನು ಕದ್ದುಬಿಡುತ್ತದೆ.
ಚಿತ್ರಕೃಪೆ: Sharada Prasad CS

ಮನಸೆಳೆವ ಮೇಘಾಲಯ :
ಮೇಘಾಲಯದ ಲೈತ್ಮಾವ್ ಸಿಯಾಂಗ್ ಕಣಿವೆ ಪ್ರದೇಶದ ಸುಂದರ ದೃಶ್ಯ.
ಚಿತ್ರಕೃಪೆ: Rajesh Dutta

ಮನಸೆಳೆವ ಮೇಘಾಲಯ :
ಮೇಘಾಲಯದ ಶಿಲ್ಲಾಂಗ್ ನಗರದಲ್ಲಿರುವ ಪ್ರವಾಸಿ ಖ್ಯಾತಿಯ ಎಲಿಫಂಟ್ ಜಲಪಾತ. ಆನೆಯ ಸೊಂಡೆಯಂತಹ ಆಕಾರದಲ್ಲಿ ಇಲ್ಲಿ ನೀರು ಧುಮುಕುವುದನ್ನು ಕಾಣಬಹುದಾಗಿರುವುದರಿಂದ ಇದಕ್ಕೆ ಎಲಿಫಂಟ್ ಜಲಪಾತ ಎಂಬ ಹೆಸರು ಬಂದಿದೆ.
ಚಿತ್ರಕೃಪೆ: Ashwin Kumar

ಮನಸೆಳೆವ ಮೇಘಾಲಯ :
ಮೇಘಾಲಯದ ಲಿಂಪುಂಗ್ ಶ್ರಿಂಗನ್ ನಲ್ಲಿ ಕಂಡುಬರುವ ಸಹಜ ನಿಸರ್ಗ ಸೌಂದರ್ಯ. ಅತ್ಯಂತ ಪ್ರಶಾಂತತೆಯಿಂದ ಕೂಡಿದೆ ಈ ತಾಣ. ಕೇವಲ ಜುಳು ಜುಳು ಎಂದು ಹರಿಯುವ ನೀರಿನ ಸದ್ದು ಕಿವಿಗಗೆ ತಂಪನ್ನೆರೆಯುತ್ತದೆ.
ಚಿತ್ರಕೃಪೆ: Ashwin Kumar

ಮನಸೆಳೆವ ಮೇಘಾಲಯ :
ಭಾರತದಲ್ಲೆ ಅತಿ ಹೆಚ್ಚು ಪ್ರಮಾಣದ ಮಳೆ ಪಡೆಯುವ ಮೊದಲ ಮೂರು ಸ್ಥಳಗಳಲ್ಲೊಂದಾದ ಚಿರಾಪುಂಜಿಯ ಮಳೆಗಾಡಿನ ವಾತಾವರಣ.
ಚಿತ್ರಕೃಪೆ: Ashwin Kumar