ನಮ್ಮಲ್ಲಿ ಬಹುತೇಕರಿಗೆ ಉತ್ತರಾಖಂಡ ಅಥವಾ ಹಿಮಾಚಲಕ್ಕೆ ತೆರಳಿ ಅಲ್ಲಿನ ಹಿಮ, ಹಸಿರು, ನದಿ, ಬೆಟ್ಟ ಗುಡ್ಡಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೆಂಬುದು ಆಸೆ. ಆದರೆ ಎಲ್ಲರಿಗೂ ಅಲ್ಲಿಗೆ ಹೋಗಲು ಸಾಧ್ಯವಾಗದಿರಬಹುದು. ಆಗ ನಾವು ನಿರಾಶರಾಗಬೇಕಿಲ್ಲ. ಯಾಕೆಂದರೆ ಅಲ್ಲಿನಷ್ಟೇ ಸುಂದರವಾದ ಪರಿಸರ, ಹವಮಾನ, ಹಸಿರು ನಮ್ಮ ರಾಜ್ಯ ಕರ್ನಾಟದಲ್ಲೂ ಇದೆ. ಈ ಸ್ಥಳಗಳ ಸೌಂದರ್ಯವು ನಿಮ್ಮ ಮನಸ್ಸಿಗೆ ಹತ್ತಿರವಾಗುವುದಲ್ಲದೆ, ಮತ್ತೆ ಮತ್ತೆ ಭೇಟಿ ನೀಡಬೇಕೆನಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ ಬಿಡಿ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕರ್ನಾಟಕದಲ್ಲಿ ಪ್ರವಾಸಿ ತಾಣಗಳಿಗೆ ಕೊರತೆಯಿಲ್ಲ. ನೀವು ವಾರಂತ್ಯಕ್ಕೆ, ಒಂದು ವಾರಕ್ಕೆ ಅಥವಾ ತಿಂಗಳ ಪೂರ್ತಿ ಪ್ಲಾನ್ ಮಾಡಬಹುದು.
ಕರ್ನಾಟಕ್ಕೆ ಬರುವ ಪ್ರವಾಸಿಗರು ಅಥವಾ ಕನ್ನಡಿಗರು ಇಬ್ಬರೂ ಹೆಚ್ಚು ಇಷ್ಟಪಡುವ ಸ್ಥಳ ಕೊಡಗು. ಈ ಪ್ರಾಂತ್ಯವು ಪ್ರವಾಸೋದ್ಯಮದ ದೃಷ್ಟಿಯಿಂದಲೂ ಶ್ರೀಮಂತವಾಗಿದ್ದು, ಸ್ವರ್ಗದಷ್ಟೇ ಸುಂದರವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಕೊಡಗು ಹೊರತುಪಡಿಸಿ ಪ್ರವಾಸಿಗರು ಕರ್ನಾಟಕದಲ್ಲಿ ನದಿಗಳು, ಪರ್ವತಗಳು, ಜಲಪಾತಗಳು ಮತ್ತು ಕಣಿವೆಗಳು ಎಲ್ಲವನ್ನೂ ನೋಡಬಹುದು. ಜೊತೆಗೆ ಇಲ್ಲಿ ಟ್ರೆಕ್ಕಿಂಗ್ ಮತ್ತು ಕ್ಯಾಂಪಿಂಗ್ ಕೂಡ ಮಾಡಬಹುದು. ಒಂದು ಸ್ಥಳಕ್ಕೆ ಭೇಟಿ ನೀಡಿದಾಗ ನಿಮಗೆ ಅದರ ಸಮೀಪದಲ್ಲಿರುವ ಮತ್ತೊಂದು ಸ್ಥಳ ನೋಡಲು ಅವಕಾಶವಿರುತ್ತದೆ. ಅಂದಹಾಗೆ ಕೊಡಗು ಭೇಟಿ ನೀಡಿದ ನಂತರ ಮತ್ತೆ ನೀವು ಯಾವೆಲ್ಲಾ ಸ್ಥಳಗಳನ್ನು ನೋಡಬಹುದು ಎಂಬುದನ್ನು ನೋಡೋಣ ಬನ್ನಿ...

ಮಡಿಕೇರಿ
ಭಾರತದ ಸ್ಕಾಟ್ಲೆಂಡ್ ಕೊಡಗು ಪ್ರಕೃತಿ ಪ್ರಿಯರಿಗೆ ಮತ್ತು ಪ್ರವಾಸಿಗರಿಗೆ ಸ್ವರ್ಗವಾಗಿದೆ. ಪ್ರವಾಸಿಗರು ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮರುಳಾಗದೆ ಇರುವುದಿಲ್ಲ. ಇಲ್ಲಿನ ಕಾಡುಗಳು, ಕಣಿವೆಗಳು ಮತ್ತು ಪರಿಸರವು ಪ್ರವಾಸಿಗರನ್ನು ಭಾವನಾತ್ಮಕವಾಗಿಯೂ ಸೆಳೆಯುತ್ತವೆ. ಹಸಿರು, ದಟ್ಟವಾದ ಕಾಡುಗಳು, ಜಲಪಾತಗಳು, ಪರ್ವತಗಳು, ಚಹಾ ತೋಟಗಳು ಇಲ್ಲಿ ನೋಡಲು ಏನುಂಟು ಏನಿಲ್ಲ. ಕೊಡಗು ಕಾವೇರಿ ನದಿಯ ಮೂಲ ಸ್ಥಳವೂ ಆಗಿದೆ. ಸುಗಂದಭರಿತ ಮಸಾಲೆ ಮತ್ತು ಕಾಫಿ ತೋಟಗಳ ಘಮ ಆಸ್ವಾದಿಸಿ ನಂತರ ಹಂಪಿಗೆ ಭೇಟಿ ನೀಡಲು ಪ್ಲಾನ್ ಮಾಡಬಹುದು. ಏಕೆಂದರೆ ಕೊಡಗಿನಷ್ಟೇ ಕರ್ನಾಟಕದಲ್ಲಿರುವ ತುಂಬಾ ಸುಂದರವಾದ ಸ್ಥಳ ಹಂಪಿ.

ಹಂಪಿ
ಇದು ತುಂಗಭದ್ರಾ ನದಿಯ ದಡದಲ್ಲಿರುವ ಅತ್ಯಂತ ದೊಡ್ಡ ದೇವಾಲಯಗಳು, ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಪ್ರತಿ ವರ್ಷ ದೇಶ ಮಾತ್ರವಲ್ಲದೆ ವಿದೇಶದಿಂದಲೂ ಜನರು ಇಲ್ಲಿಗೆ ಬರುತ್ತಾರೆ. ಹಂಪಿಯನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಹಂಪಿ ಕಲ್ಲಿನ ರಥ ದೇವಾಲಯವು ಭಾರತದ ಮೂರು ಪ್ರಸಿದ್ಧ ರಥಗಳಲ್ಲಿ ಒಂದಾಗಿದೆ. ಕ್ರಿ.ಶ 1500 ರ ಸಮಯದಲ್ಲಿ, ಹಂಪಿ ನಗರವು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಅಂದು ಇದು ವಿಶ್ವದ ಎರಡನೇ ಅತಿದೊಡ್ಡ ನಗರವಾಗಿತ್ತು. ಹಂಪಿಯಲ್ಲಿ ಅನೇಕ ದೇವಾಲಯಗಳ ಅವಶೇಷಗಳನ್ನು ಇಂದಿಗೂ ಕಾಣಬಹುದು. ಹಂಪಿ ಸುತ್ತಮುತ್ತಲಿನ ಪ್ರದೇಶವು ನಿಗೂಢ ಅವಶೇಷಗಳಿಂದ ತುಂಬಿದೆ. ಇಡೀ ಹಂಪಿ ನಗರವು ವಿವಿಧ ರೀತಿಯ ಮತ್ತು ಗಾತ್ರದ ಬಂಡೆಗಳಿಂದ ಆವೃತವಾಗಿದೆ. ಇದು ಈ ಸ್ಥಳವನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ಬಾದಾಮಿ
ಕರ್ನಾಟಕದ ಉತ್ತರ ಭಾಗದಲ್ಲಿರುವ ಬಾದಾಮಿಯು ಶ್ರೇಷ್ಠ ಇತಿಹಾಸ ಮತ್ತು ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಬಾದಾಮಿಯಲ್ಲಿ ನೋಡಲು ಪ್ರಾಚೀನ ದೇವಾಲಯಗಳು, ಕೋಟೆಗಳು ಮತ್ತು ಐತಿಹಾಸಿಕ ಸ್ಥಳಗಳಿವೆ. ಇದು ಕೆಂಪು ಮರಳುಗಲ್ಲಿನ ಬೆಟ್ಟಗಳಲ್ಲಿ ಕೆತ್ತಲಾದ ಗುಹೆ ದೇವಾಲಯಗಳಿಗೂ ಅಷ್ಟೇ ಪ್ರಸಿದ್ಧವಾಗಿದೆ. ಇಲ್ಲಿ ಪ್ರತಿ ವರ್ಷವೂ ಅನೇಕ ಜಾತ್ರೆಗಳು ಮತ್ತು ಹಬ್ಬಗಳನ್ನು ಆಚರಿಸಲಾಗುತ್ತದೆ. ಅವುಗಳಿಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು. ಈ ಮೊದಲೇ ಹೇಳಿದ ಹಾಗೆ ಗುಹೆಗಳ ಹೊರತಾಗಿ, ಇಲ್ಲಿ ಅನೇಕ ಐತಿಹಾಸಿಕ ಸ್ಥಳಗಳಿದ್ದು, ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುವ ಪ್ರವಾಸಿ ತಾಣಗಳಾಗಿ ಮಾರ್ಪಟ್ಟಿವೆ. ನಿಮಗೆ ಗಿರಿಧಾಮಗಳು, ಕೋಟೆಗಳು, ಅರಮನೆಗಳಿಗಿಂತ ವಿಭಿನ್ನವಾದದ್ದನ್ನು ನೋಡಲು ಬಯಸಿದರೆ ಬಾಗಲಕೋಟೆಗೆ ಬನ್ನಿ. ಇಲ್ಲಿ ನೀವು ಶತಮಾನಗಳಷ್ಟು ಹಳೆಯದಾದ ಕಟ್ಟಡಗಳು, ಗುಹೆಗಳು, ದೇವಾಲಯಗಳು ಮತ್ತು ಅರಮನೆಗಳ ಜೊತೆಗೆ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.
ಗೋಕರ್ಣ
ದಕ್ಷಿಣ ಭಾರತದ ಉತ್ತಮ ಪ್ರವಾಸಿ ಸ್ಥಳಗಳ ಪೈಕಿ ಗೋಕರ್ಣವು ಒಂದು. ಇದು ಕರ್ನಾಟಕದ ಒಂದು ಸಣ್ಣ ಪಟ್ಟಣ. ಗೋಕರ್ಣವು ಸುಂದರವಾದ ಕಡಲತೀರಗಳು, ಪ್ರಾಚೀನ ಧಾರ್ಮಿಕ ಸ್ಥಳಗಳು, ಹಸಿರಿನಿಂದಾಗಿ ಇಡೀ ದಕ್ಷಿಣ ಭಾರತದಲ್ಲಿ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಕಳೆದ ಕೆಲವು ವರ್ಷಗಳಿಂದ ಈ ಸ್ಥಳವು ವಿಶೇಷವಾಗಿ ಯುವಜನರಿಗೆ ಮತ್ತು ವಿದೇಶಿ ಪ್ರವಾಸಿಗರಿಗೆ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ನೀವೂ ಸಹ ವಾರಾಂತ್ಯದ ರಜೆಯನ್ನು ಸಂಪೂರ್ಣವಾಗಿ ಆನಂದಿಸಲು ಬಯಸಿದರೆ ಖಂಡಿತವಾಗಿಯೂ ಒಮ್ಮೆ ಗೋಕರ್ಣ ಹಾಗೂ ಸಮೀಪದಲ್ಲಿರುವ ಸುಂದರ ಸ್ಥಳಗಳಿಗೆ ಭೇಟಿ ನೀಡಲೇಬೇಕು.
ಮೈಸೂರು
ದೇಶದ ಸಾಂಸ್ಕೃತಿಕ ತಾಣಗಳಲ್ಲಿ ಒಂದಾಗಿರುವ ಮೈಸೂರಿನ ಕಟ್ಟಡಗಳ ವಾಸ್ತುಶೈಲಿ ನೋಡಲು ಅದ್ಭುತವಾಗಿವೆ. ಇತಿಹಾಸ ಪ್ರಿಯರಿಗೆ ಮೈಸೂರಿಗಿಂತ ಬೆಸ್ಟ್ ಪ್ಲೇಸ್ ಮತ್ತೊಂದಿಲ್ಲ. ಇದು ಅನೇಕ ಪ್ರೇಕ್ಷಣೀಯ ಸ್ಥಳಗಳ ಕೇಂದ್ರವಾಗಿದೆ. ಮೈಸೂರಿನಲ್ಲಿ ನೀವು ಪ್ರಸಿದ್ಧ ಕೋಟೆಗಳು, ಅರಮನೆಗಳು ಮತ್ತು ವರ್ಣರಂಜಿತ ಮಾರುಕಟ್ಟೆಗೆ ಭೇಟಿ ನೀಡಬಹುದು. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಭೇಟಿ ನೀಡಲು ಇಲ್ಲಿಗೆ ಬರುತ್ತಾರೆ. ಮೈಸೂರಿನ ಸುಂದರ ತಾಣಗಳು ಪ್ರವಾಸಿಗರನ್ನು ಆಕರ್ಷಿಸದೆ ಇರಲಾರದು. ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ಈ ನಗರವು ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಮೈಸೂರು ನಗರವನ್ನು ಅರಮನೆಗಳ ನಗರ ಎಂದು ಕರೆಯಲಾಗುತ್ತದೆ. ಇಲ್ಲಿನ ಪ್ರೇಕ್ಷಣೀಯ ಸ್ಥಳಗಳು ಮತ್ತು ಅದರ ಸಾಂಸ್ಕೃತಿಕ ಪರಂಪರೆ ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತದೆ.


Click it and Unblock the Notifications


















