• Follow NativePlanet
Share
Menu
» »ಮಕ್ಕಳಿಗೆ ಉಲ್ಲಾಸ ನೀಡುವ ಉತ್ಸವ ಉದ್ಯಾನ

ಮಕ್ಕಳಿಗೆ ಉಲ್ಲಾಸ ನೀಡುವ ಉತ್ಸವ ಉದ್ಯಾನ

Posted By: Divya

ನೂತನ ತಂತ್ರಜ್ಞಾನ ಹಾಗೂ ಆಧುನೀಕರಣದಿಂದ ನಮ್ಮ ಜೀವನ ಶೈಲಿ ದಿನದಿಂದ ದಿನಕ್ಕೆ ಬದಲಾಗುತ್ತಲೇ ಹೋಗುತ್ತದೆ. ಇಂತಹ ಬದಲಾವಣೆಗಳು ಕೇವಲ ನಗರಗಳಿಗಷ್ಟೇ ಸೀಮಿತವಾಗಿಲ್ಲ. ಹಳ್ಳಿಗಳಲ್ಲೂ ಬದಲಾವಣೆ ಎನ್ನುವುದು ಗಣನೀಯವಾಗಿ ಸಾಗುತ್ತಿದೆ. ಹಿಂದಿನ ಕಾಲದ ಹಳ್ಳಿಯ ಜನ ಜೀವನ ಹೇಗಿತ್ತು ಎನ್ನುವುದು ನಮ್ಮ ಕಲ್ಪನೆಗೂ ನಿಲುಕದ್ದು.

ಜನಪದ ಜೀವನ, ಅವರ ಉಡುಗೆ ತೊಡುಗೆ ಹಾಗೂ ಸುತ್ತಲ ಪರಿಸರ ಹೀಗೆ ಅನೇಕ ಸೂಕ್ಷ್ಮ ವಿಚಾರಗಳೆಲ್ಲವೂ ಉತ್ಸವ ರಾಕ್ ಗಾರ್ಡನ್‍ಅಲ್ಲಿ ಜೀವಂತವಾಗಿ ನಿಂತಿವೆ. ಹಳ್ಳಿಯ ಜೀವನ, ಜನಪದ ಶೈಲಿ, ಸಂಸ್ಕೃತಿ, ಶಿಕ್ಷಣ ಹಾಗೂ ಮನರಂಜನೆಯ ಉದ್ದೇಶಕ್ಕಾಗಿಯೇ ಈ ಉದ್ಯಾನವನ್ನು ನಿರ್ಮಿಸಲಾಗಿದೆ. ಇದು ಪ್ರಪಂಚದ 8ನೇ ಅದ್ಭುತದ ಪಟ್ಟಿಗೆ ಪ್ರವೇಶಿಸಿರುವುದು ವಿಶೇಷ.

ಹಾವೇರಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸನ್ನಿವೇಶಗಳನ್ನು ಚಿತ್ರಿಸುವ ಮೂರ್ತಿಗಳು ಜೀವಂತ ವ್ಯಕ್ತಿಯಂತೆ ಭಾಸವಾಗುತ್ತವೆ. ಇಲ್ಲಿ ಸರಿ ಸುಮಾರು 2000 ಶಿಲ್ಪಾಕೃತಿಗಳಿವೆ. ಉದ್ಯಾನದಲ್ಲಿ ಬೋಟಿಂಗ್ ಆಟವನ್ನು ಆಡಬಹುದು. 1920ರ ಕಾಲವನ್ನು ಬಣ್ಣಿಸುವ ಈ ಉದ್ಯಾನ ಮಕ್ಕಳಿಗೆ ವಿಶೇಷ ಜ್ಞಾನ ಹಾಗೂ ಖುಷಿಯನ್ನು ನೀಡಬಲ್ಲದು. ವಿಶಾಲವಾದ ಜಾಗದಲ್ಲಿ ಹರಡಿಕೊಂಡ ಈ ಉದ್ಯಾನವನ್ನು ಸಂಪೂರ್ಣವಾಗಿ ನೋಡಲು ಒಂದು ದಿನವೇ ಬೇಕು.

ನಗರದಲ್ಲಿ ಕೇವಲ ಮನೆ-ಶಾಲೆ ಎನ್ನುವ ಗುಂಗಲ್ಲಿ ಇರುವ ಮಕ್ಕಳಿಗೆ ಬೇಸಿಗೆ ರಜೆಯಲ್ಲಿ ಇಲ್ಲಿಗೆ ಕರೆದುಕೊಂಡು ಬರಬಹುದು. ಹಾವೇರಿ ಜಿಲ್ಲೆಯಲ್ಲಿರುವ ಈ ಉದ್ಯಾನ ಗೊಟಗೋಡಿ ಎಂಬ ಹಳ್ಳಿಯಲ್ಲಿದೆ. ಹಾವೇರಿ ನಗರದಿಂದ 39.3 ಕಿ.ಮೀ. ದೂರದಲ್ಲಿರುವ ಈತಾಣಕ್ಕೆ ಅನೇಕ ಬಸ್ ವ್ಯವಸ್ಥೆಗಳಿವೆ. ಬೆಂಗಳೂರಿನಿಂದ 373.9 ಕಿ. ಮೀ. ವ್ಯಾಪ್ತಿಯಲ್ಲಿದೆ. ಹಾವೇರಿ ಪಟ್ಟಣ ಪ್ರದೇಶದಲ್ಲಿ ಅನೇಕ ಹೋಟೆಲ್‍ಗಳಿರುವುದರಿಂದ ವಸತಿ ವ್ಯವಸ್ಥೆಗೆ ತೊಂದರೆ ಉಂಟಾಗದು.

ವಾರದ ರಜೆಯಲ್ಲಿ ಒಮ್ಮೆ ಭೇಟಿ ನೀಡಬಹುದಾದ ಈ ತಾಣದ ಶಿಲ್ಪಾಕೃತಿಯ ಫೋಟೋ ಪ್ರವಾಸ ಮಾಡೋಣ ಬನ್ನಿ...

ಪ್ರವೇಶ ದ್ವಾರ

ಪ್ರವೇಶ ದ್ವಾರ

ಸುತ್ತಲು ಹಸಿರು ಸಿರಿಯಿಂದ ಆವೃತ್ತವಾದ ಈ ಉದ್ಯಾನದ ಪ್ರವೇಶ ದ್ವಾರವು ಮಣ್ಣಿನ ಗುಹೆಯಂತಿದೆ. ಎರಡು ಚಕ್ರಗಳನ್ನು ಗೇಟ್‍ಗಳನ್ನಾಗಿ ಬಳಸಲಾಗಿದೆ.

PC: wikipedia.org

ಗದ್ದೆ ಹೂಡುವುದು

ಗದ್ದೆ ಹೂಡುವುದು

ಒಂದು ನೀರಿನ ಕಾಲುವೆ, ಅದರ ಮೇಲಿನ ದಿಬ್ಬದ ಮೇಲೆ ರೈತರು ತಮ್ಮ ಎತ್ತಿನ ಜೋಡಿಯಿಂದ ಗದ್ದೆ ಹೂಡುತ್ತಿರುವ ದೃಶ್ಯ. ಇದರಲ್ಲಿ ಎತ್ತಿನ ಜೋಡಿ ಹಾಗೂ ರೈತರ ಉಡುಗೆ ತೊಡುಗೆಗಳೆಲ್ಲವೂ ನಿಜವೆಂದೇ ಭಾಸವಾಗುತ್ತದೆ.
PC: wikipedia.org

ಕಿರಾಣಿ ಅಂಗಡಿ

ಕಿರಾಣಿ ಅಂಗಡಿ

ಹಳ್ಳಿಗಳಲ್ಲಿ ದಿನನಿತ್ಯದ ಬಳಕೆಗೆ ಬೇಕಾಗುವ ವಸ್ತುಗಳು ಒಂದು ಪುಟ್ಟ ಅಂಗಡಿಯಲ್ಲಿ ಸಿಗುತ್ತವೆ. ಆ ಅಂಗಡಿಯಲ್ಲಿ ಮಹಿಳೆಯೊಬ್ಬಳು ವಸ್ತುಗಳನ್ನು ಕೊಂಡುಕೊಳ್ಳುತ್ತಿರುವ ಚಿತ್ರಣ.

ಮನೆಯ ವಾತಾವರಣ

ಮನೆಯ ವಾತಾವರಣ

ಹಳ್ಳಿಯಲ್ಲಿರುವ ಶ್ರೀಮಂತರ ಮನೆಯ ದೃಶ್ಯ. ಅಕ್ಕ ತಮ್ಮ ಸೇರಿ ಜೋಕಾಲಿ ಆಡುವುದು, ಮನೆಯ ಯಜಮಾನ ರೈತನೊಂದಿಗೆ ಮಾತನಾಡುವುದು, ಮನೆಯ ಬಾಗಿಲಲ್ಲೇ ಹಸುವೊಂದನ್ನು ಕಟ್ಟಿರುವುದು, ಮನೆಗೆ ಸುಂದರವಾದ ಕೆತ್ತನೆಯ ಪೀಠೋಪಕರಣಗಳ ಜೋಡಣೆ ಮಾಡಿರುವುದನ್ನು ಕಾಣಬಹುದು.
PC: wikipedia.org

ಹಸುವಿನ ಮನೆ

ಹಸುವಿನ ಮನೆ

ಹಳ್ಳಿಯಲ್ಲಿ ಸಾಕು ಪ್ರಾಣಿಗಳನ್ನು ಸಾಕುವುದೇ ಒಂದು ಜೀವನೋಪಾಯಕ್ಕಾಗಿ. ಈ ಹಿನ್ನೆಲೆಯಲ್ಲಿಯೇ ಹಲವಾರು ಹಸುಗಳನ್ನು ಒಂದೆಡೆ ಕಟ್ಟಿರುವ ದೃಶ್ಯ. ಇವು ನಿಜವಾದ ಹಸುಗಳಂತೆ ಕಾಣುತ್ತವೆ.

ಉದ್ಯಾನದ ಪರಿಸರ

ಉದ್ಯಾನದ ಪರಿಸರ

ಈ ಉದ್ಯಾನದಲ್ಲಿ ಓಡಾಡಿ ಆಯಾಸವಾದರೆ ಕುಳಿತು ದಣಿವಾರಿಸಿಕೊಳ್ಳಲು ಮಾಡಿರುವ ವ್ಯವಸ್ಥೆ ಇದು. ಇದರಲ್ಲೂ ಅನೇಕ ವಿನ್ಯಾಸಗಳನ್ನು ಮಾಡಿ, ಪ್ರವಾಸಿಗರಿಗೆ ಆಕರ್ಷಕವಾಗಿ ಕಾಣುವಂತೆ ಮಾಡಿರುವುದು ವಿಶೇಷ.

ವನ್ಯ ಪ್ರಾಣಿ

ವನ್ಯ ಪ್ರಾಣಿ

ಕಾಡಿನಲ್ಲಿರುವ ವನ್ಯ ಮೃಗಗಳ ಮೂರ್ತಿಗಳು ಇಲ್ಲಿ ಸಾಕಷ್ಟು ಇವೆ. ಈ ಚಿತ್ರದಲ್ಲಿ ಚಿರತೆಯ ಹಿಂಡೊಂದು ಒಂದೆಡೆ ಇರುವುದನ್ನು ನೋಡಬಹುದು.

ಮಕ್ಕಳ ಕಾಳಜಿ

ಮಕ್ಕಳ ಕಾಳಜಿ

ಹಳ್ಳಿಯ ತುಂಬು ಕುಟುಂಬದ ಜೀವನ. ಓರ್ವ ಮಹಿಳೆ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ಜೋಗುಳ ಹಾಡುತ್ತಿರುವುದು, ಇನ್ನೊಬ್ಬ ಮಹಿಳೆ ಅಡುಗೆ ಮಾಡುತ್ತಿರುವುದು, ಅಜ್ಜಿ ಮೊಮ್ಮಕ್ಕಳಿಗೆ ತಿಂಡಿ ತಿನ್ನಿಸುತ್ತಿರುವ ದೃಶ್ಯ ಪ್ರೀತಿ ಹಾಗೂ ಹೊಂದಾಣಿಕೆಯ ಭಾವನೆಯನ್ನು ತೋರಿಸಿಕೊಡುತ್ತದೆ.

ಬಿಡುವಿನ ಸಮಯ

ಬಿಡುವಿನ ಸಮಯ

ರೈತರು ಬಿಡುವಿನ ಸಮಯದಲ್ಲಿ ಅರಳಿ ಕಟ್ಟೆಯ ಮೇಲೆ ಕುಳಿತು ಆಡುತ್ತಿರುವ ದೃಶ್ಯ. ಇಲ್ಲಿ ಜಾತಿ ಭೇದವೆಲ್ಲವನ್ನು ಮರೆತು ಸಂತೋಷವಾಗಿ, ಕೂಡಿ ಆಡುತ್ತಿರುವ ದೃಶ್ಯ ಸುಂದರವಾಗಿದೆ.

ಕೆಲಸದ ಪರಿ

ಕೆಲಸದ ಪರಿ

ಹಳ್ಳಿಯ ಮಹಿಳೆಯರಿಬ್ಬರು ಕಾಳು-ಕಡಿಗಳನ್ನು ಬೀಸುತ್ತಾ ಮಾತನಾಡಿಕೊಳ್ಳುತ್ತಿರುವ ಈ ದೃಶ್ಯ ಹಳ್ಳಿಯ ಜೀವನಕ್ಕೆ ಕನ್ನಡಿ ಹಿಡಿಯುತ್ತದೆ.

Read more about: haveri

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ