Search
  • Follow NativePlanet
Share
» »ಚಿಕ್ಕಬಳ್ಳಾಪುರದ ವಿಶೇಷತೆಗಳು

ಚಿಕ್ಕಬಳ್ಳಾಪುರದ ವಿಶೇಷತೆಗಳು

By Vijay

ಕರ್ನಾಟಕದಲ್ಲಿರುವ 30 ಜಿಲ್ಲೆಗಳ ಪೈಕಿ ಚಿಕ್ಕಬಳ್ಳಾಪುರವೂ ಸಹ ಒಂದು. ಮುಂಚೆ ಕೋಲಾರ ಜಿಲ್ಲೆಯಲ್ಲಿ ಸೇರಿದ್ದ ಇದೊಂದು ತಾಲೂಕು ಪ್ರದೇಶವಾಗಿತ್ತು. ತದನಂತರ 2008 ರಲ್ಲಿ ಹೊಸ ಜಿಲ್ಲೆಯನ್ನಾಗಿ ಘೋಷಿಸಲಾಯಿತು. ಈ ಜಿಲ್ಲೆಗೆ ಸರ್. ಎಮ್. ವಿಶ್ವೇಶ್ವರಯ್ಯ ಜಿಲ್ಲೆ ಎಂದು ನಾಮಕರಣ ಮಾಡಬೇಕೆನ್ನುವ ಆಸೆ ಜನರಲ್ಲಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ.

ಏಕೆಂದರೆ ವಿಶ್ವಪ್ರಸಿದ್ಧ ವಾಸ್ತುಶಿಲ್ಪಿ, ಮುಖ್ಯ ಇಂಜಿನೀಯರ್ ಆದ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮಸ್ಥಳ ಚಿಕ್ಕಬಳ್ಳಾಪುರವೆ ಆಗಿದೆ. ವಿಶ್ವೇಶ್ವರಯ್ಯನವರ ಜನ್ಮಸ್ಥಳವಾಗಿರುವುದರಿಂದ ಇಂದು ಪ್ರಮುಖ ವಿದ್ಯಾಕೇಂದ್ರವಾಗಿಯೂ ಚಿಕ್ಕಬಳ್ಳಾಪುರ ಬೆಳೆದಿದೆ. ಸ್ಥಳೀಯ ಮುದ್ದೇನಹಳ್ಳಿಯಲ್ಲಿ ಐಐಟಿ ಕೇಂದ್ರ, ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ, ಸತ್ಯಸಾಯಿ ಬಾಬಾ ವಿಶ್ವವಿದ್ಯಾಲಯ ಕೂಡ ಇಲ್ಲಿವೆ.

ಚಿಕ್ಕಬಳ್ಳಾಪುರದ ವಿಶೇಷತೆಗಳು

ಚಿತ್ರಕೃಪೆ: Jayaprakash Narayan MK

ಬೆಂಗಳೂರಿನಿಂದ 50 ಕಿ.ಮೀ. ದೂರದಲ್ಲಿರುವ ಚಿಕ್ಕಬಳ್ಳಾಪುರವು ಹಲವಾರು ಪ್ರೇಕ್ಷಣೀಯ ಮತ್ತು ಐತಿಹಾಸಿಕ ಹಿನ್ನೆಲೆಯುಳ್ಳ ಪ್ರವಾಸಿ ಕೇಂದ್ರಗಳನ್ನು ಒಳಗೊಂಡಿದೆ. ನಂದಿ ಬೆಟ್ಟ ಇಲ್ಲಿಯ ಪ್ರಮುಖ ಗಿರಿಧಾಮ. ಚಿಕ್ಕಬಳ್ಳಾಪುರ ಮೆಣಸಿನಕಾಯಿ ತುಂಬ ಪ್ರಸಿದ್ಧಿ. ಇಲ್ಲಿನ ರೈತ ಸಮುದಾಯ ಬಹಳ ಪ್ರಗತಿ ಪರ ರೈತರನ್ನು ಹೊಂದಿದೆ.

ಚಿಕ್ಕಬಳ್ಳಾಪುರ ಪಟ್ಟಣದ ಸುತ್ತಮುತ್ತಲೂ ಹಲವಾರು ಪ್ರಾಕೃತಿಕ, ಐತಿಹಾಸಿಕ ಮತ್ತು ಮಾನವ ನಿರ್ಮಿತ ಅನೇಕ ಪ್ರೇಕ್ಷಣೀಯ ಸ್ಥಳಗಳು ಇವೆ. ಚಿಕ್ಕಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ ಬರುವ ಪ್ರಸಿದ್ಧ ನಂದಿ ಬೆಟ್ಟದಲ್ಲಿರುವ ಭೋಗ ನಂದೀಶ್ವರ ದೇವಸ್ಥಾನಕ್ಕೆ ಹಲವಾರು ಭಕ್ತರು ಮತ್ತು ಪ್ರವಾಸಿಗರು ಬರುತ್ತಾರೆ. ಅಲ್ಲದೇ ಇಲ್ಲಿರುವ ಯೋಗ ನಂದೀಶ್ವರ ದೇವಸ್ಥಾನಕ್ಕೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.

ಚಿಕ್ಕಬಳ್ಳಾಪುರದ ವಿಶೇಷತೆಗಳು

ನಂದಿಬೆಟ್ಟ, ಚಿತ್ರಕೃಪೆ: Koshy Koshy

ಚಿಕ್ಕಬಳ್ಳಾಪುರ ಪಟ್ಟಣದಿಂದ ಕೇವಲ 12 ಕಿ.ಮೀ. ದೂರದಲ್ಲಿರುವ ವಿವೇಕಾನಂದ ಜಲಪಾತ ಒಂದು ಸುಂದರ ತಾಣವಾಗಿದೆ. ವಿಶೇಷವಾಗಿ ಮಳೆಗಾಲದಲ್ಲಿ ಮೈದುಂಬಿಕೊಂಡು ಭೂಮಿಗೆ ಧುಮುಕುವ ಈ ಜಲಪಾತವನ್ನು ನೋಡಿದಾಗ ಮೈಯೆಲ್ಲ ರೋಮಾಂಚನವಾಗದೆ ಇರಲಾರದು. ಈ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಇದು ಆಕರ್ಷಿಸುತ್ತದೆ.

ವಿಜಯನಗರ ಕಾಲದ ವಾಸ್ತುಶೈಲಿಯಲ್ಲಿ ನಿರ್ಮಾಣಗೊಮಡ ರಂಗಸ್ಥಳದಲ್ಲಿರುವ ಭಗವಾನ್ ವಿಷ್ಣು ದೇವಸ್ಥಾನವಿದೆ. ಕಪ್ಪು ಕಲ್ಲಿನಲ್ಲಿ ವಿಶೇಷ ಚಿತ್ರಗಳೊಂದಿಗೆ ಕೆತ್ತಲ್ಪಟ್ಟ ಈ ದೇವಸ್ಥಾನವು ವಿಶೇಷವಾಗಿದೆ. ಚಿಕ್ಕಬಳ್ಳಾಪುರಕ್ಕೆ ಹತ್ತಿರದಲ್ಲಿರುವ ಮುದ್ದೇನಹಳ್ಳಿ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮಸ್ಥಳ. ವಿಶ್ವೇಶ್ವರಯ್ಯನವರು ವಾಸಿಸುತ್ತಿದ್ದ ಮನೆಯನ್ನು ಇಂದು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದೆ.

ಬನ್ನಿ ಒಮ್ಮೆ ನಂದಿ ಬೆಟ್ಟ ಸುತ್ತೋಣ

ಚಿತ್ರಾವತಿಯಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನ, ಎಲ್ಲೋಡೆ ಶ್ರೀ ಲಕ್ಷ್ಮೀ ಆದಿನಾರಾಯಣ ದೇವಸ್ಥಾನ ಮತ್ತು ಕಂದಾವರ ಕೆರೆ ಇಲ್ಲಿರುವ ಇನ್ನಿತರ ಸುಂದರ ತಾಣಗಳು. ಇಲ್ಲಿರುವ ಬೆಟ್ಟಗಳಲ್ಲಿ ಸಾಹಸಿಗಳು ರಾಕ್ ಕ್ಲೈಂಬಿಂಗ್ ಮೌಂಟೇನಿಯರಿಂಗ್ ಮುಂತಾದ ಸಾಹಸಕ್ರೀಡೆಗಳಲ್ಲಿ ತೊಡಗಿಕೊಳ್ಳಬಹುದು. ಕರ್ನಾಟಕದ ರಾಜಧಾನಿ ಬೆಂಗಳೂರು ಚಿಕ್ಕಬಳ್ಳಾಪುರಕ್ಕೆ ಹತ್ತಿರದಲ್ಲಿರುವುದರಿಂದ ರೈಲು ಮತ್ತು ರಸ್ತೆ ಮೂಲಕ ಬರುವ ಪ್ರವಾಸಿಗರಿಗೆ ತುಂಬಾ ಅನುಕೂಲಕರವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X