» »ಭದ್ರಾವತಿ : ಕರ್ನಾಟಕದ ಉಕ್ಕಿನ ನಗರ!

ಭದ್ರಾವತಿ : ಕರ್ನಾಟಕದ ಉಕ್ಕಿನ ನಗರ!

Written By:

ಕರ್ನಾಟಕದ ಉಕ್ಕಿನ ನಗರ ಎಂದೆ ಖ್ಯಾತಿಗಳಿಸಿರುವ ಭದ್ರಾವತಿ ಪಟ್ಟಣವು ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ತಾಲೂಕು ಕೇಂದ್ರ. ಭದ್ರಾ ನದಿಯ ತಟದ ಮೇಲೆ ನೆಲೆಸಿರುವ ಭದ್ರಾವತಿಯು ಒಂದು ಅದ್ಭುತ ಕೈಗಾರಿಕಾ ಪ್ರದೇಶವಾಗಿದೆ. ಇದು ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು 255 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ.

ಚರಿತ್ರೆಯನ್ನು ಗಮನಿಸುವುದಾದರೆ 1918 ರಲ್ಲಿ ಇಲ್ಲಿ ಸ್ಥಾಪಿಸಲಾದ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಿಂದ ಭದ್ರಾವತಿಯು ಎಲ್ಲೆಡೆ ಹೆಸರುವಾಸಿಯಾಯಿತು. ಅನಂತರ ಇದು ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಎಂದು ನಾಮಕರಣಗೊಂಡು ಇನ್ನಷ್ಟು ಪ್ರಸಿದ್ಧಿಗಳಿಸಿತು. ಪ್ರಸ್ತುತ ಭಾರತದ ಅತಿ ದೊಡ್ಡ ಉಕ್ಕಿನ ಕಾರ್ಖಾನೆಗಳಲ್ಲಿ ಇದೂ ಸಹ ಒಂದಾಗಿದೆ.

ಭದ್ರಾವತಿ : ಕರ್ನಾಟಕದ ಉಕ್ಕಿನ ನಗರ!

ಚಿತ್ರಕೃಪೆ: Manjeshpv

ಇದು ಇಲ್ಲಿಗೆ ನಿಲ್ಲಲಿಲ್ಲ. ಸಮಯ ಕಳೆದಂತೆ ಇಲ್ಲಿ ಇನ್ನೂ ಅನೇಕ ಚಿಕ್ಕ ಪುಟ್ಟ ಉದ್ಯಮಗಳು ಪ್ರಾರಂಭಾದವು. ಇಲ್ಲಿರುವ ಮೈಸೂರು ಕಾಗದ ಕಾರ್ಖಾನೆ ಹಾಗೂ ಇತರೆ ಅನೇಕ ಕಾರ್ಖಾನೆಗಳಿಂದ ಭದ್ರಾವತಿಗೆ ಕೈಗಾರಿಕೆಗಳ ಪಟ್ಟಣ ಎಂಬ ಹೆಗ್ಗಳಿಕೆ ದೊರೆಯಿತು. ಭದ್ರಾವತಿಯ ಹೆಸರು ಅದರ ಮೂಲಕ ಹರಿಯುವ ಭದ್ರಾ ನದಿಯಿಂದ ಉತ್ಪನ್ನವಾಗಿದೆ.

ಹಿಂದೆ ಬೆಂಕಿಪುರ (ಅಥವಾ ವಂಕಿಪುರ/ವೆಂಕಿಪುರ) ಎಂದು ಕರೆಯಲ್ಪಡುತಿದ್ದ ಈ ಪಟ್ಟಣ ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ಇಲ್ಲಿ ಕಬ್ಬಿಣದ ಕಾರ್ಖಾನೆಯನ್ನು ಸ್ಥಾಪಿಸಿದ ಮೇಲೆ ಭದ್ರಾವತಿ ಎಂಬ ಈ ಹೊಸ ಹೆಸರು ಈ ಊರಿಗೆ ಬಂದಿತೆಂದು ಹೇಳಲಾಗುತ್ತದೆ. ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗೂ ಈ ಊರಿಗೆ ಬೆಂಕಿಪುರವೆಂದೆ ಕರೆಯುತ್ತಿದ್ದರು.

ಭದ್ರಾವತಿ : ಕರ್ನಾಟಕದ ಉಕ್ಕಿನ ನಗರ!

ಭದ್ರಾ ನದಿ, ಚಿತ್ರಕೃಪೆ: Vikas.rumale

ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದ ಬಳಿ ಸಹ್ಯಾದ್ರಿಯ ಒಡಲಲ್ಲಿ ತನ್ನ ಉಗಮಸ್ಥಾನ ಹೊಂದಿರುವ ಭದ್ರಾನದಿಯು ಉತ್ತರಾಭಿಮುಖವಾಗಿ ಹರಿದು ಭದ್ರಾವತಿ ನಗರವನ್ನು ದಕ್ಷಿಣ ದಿಕ್ಕಿನಿಂದ ಪ್ರವೇಶಿಸುತ್ತದೆ. ಹೀಗೆ ಪ್ರವೇಶಿಸುವಾಗ, ಉತ್ತರ ದಿಕ್ಕಿನಿಂದ ಪಶ್ಚಿಮ ದಿಕ್ಕಿಗೆ ಎಡಕ್ಕೆ ತಿರುಗಿ ಪಶ್ಚಿಮ ವಾಹಿನಿಯಾಗುತದೆ. ಉತ್ತರ ದಿಕ್ಕಿನಿಂದ ಪಶ್ಛಿಮ ದಿಕ್ಕಿಗೆ ತಿರುಗುವ ಈ ತಿರುವಿಗೆ ಚಕ್ರತೀರ್ಥ ಎನ್ನುತ್ತಾರೆ.

ಈ ಚಕ್ರತೀರ್ಥದ ಬಳಿ ಪುರಾಣ ಪ್ರಸಿದ್ಧ ವಂಕೀ ಮಹರ್ಷಿಗಳ ಆಶ್ರಮವಿತ್ತಂತೆ. ಈ ವಂಕೀ ಮಹರ್ಷಿಗಳು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಕುರಿತು ತಪಸ್ಸನ್ನಾಚರಿಸುತ್ತಿದ್ದರು. ಸ್ವಾಮಿಯು ಈ ಋಷಿಗಳಿಗೆ ದರ್ಶನವಿತ್ತು, "ಪಶ್ಚಿಮವಾಹಿನಿಯಾದ ಭದ್ರೆಯ ಯಾವ ಪವಿತ್ರ ಕ್ಷೇತ್ರದಲ್ಲಿ ನೀನು ತಪವನ್ನಾಚರಿಸಿದೆಯೋ ಆ ಕ್ಷೇತ್ರದಲ್ಲಿ ನಾನು ಸ್ಥಿರವಾಗಿ ನೆಲೆಸಿ ಭಕ್ತರ ಕಾಮನೆಗಳನ್ನು ಈಡೇರಿಸುವೇನು" ಎಂದು ಹೇಳಿದನೆಂದು ಪ್ರತೀತಿಯಿದೆ.

ಭದ್ರಾವತಿ : ಕರ್ನಾಟಕದ ಉಕ್ಕಿನ ನಗರ!

ಲಕ್ಷ್ಮಿನರಸಿಂಹ ದೇವಾಲಯ, ಚಿತ್ರಕೃಪೆ: Dineshkannambadi

ಮುಂದೆ ಹದಿಮೂರನೇ ಶತಮಾನದಲ್ಲಿ ಹೊಯ್ಸಳರ ವೀರನಸಿಂಹನು (ವಿಷ್ಣುವರ್ಧನನ ಮೊಮ್ಮಗ ಮತ್ತು ಎರಡನೇ ಬಲ್ಲಾಳನ ಮಗ) ವಂಕೀ ಮಹರ್ಷಿ ಮತ್ತು ಲಕ್ಷ್ಮೀನರಸಿಂಹ ಸ್ಥಳ ಪುರಾಣವಿದ್ದ ಈ ಪ್ರದೇಶದಲ್ಲಿ ಭವ್ಯವಾದ ಲಕ್ಷ್ಮೀನರಸಿಂಹ ದೇವಾಲಯವನ್ನು ಹೊಯ್ಸಳ ಶಿಲ್ಪಕಲಾ ಮಾದರಿಯಲ್ಲಿ ಕಟ್ಟಿಸಿ ಕ್ರಿ.ಶ. 1224 ರಲ್ಲಿ ವ್ಯಯನಾಮ ಸಂವತ್ಸರದ ದ್ವಿತೀಯ ಶುದ್ಧ ತ್ರಯೋದಶಿಯಂದು ಲೋಕಾರ್ಪಣೆ ಮಾಡಿದನು.

ನೋಡಲೇಬೇಕೊಮ್ಮೆ ಭದ್ರಾ ಜಲಾಶಯ ಕಾಡು

ಇಂದಿಗೂ ಈ ದೇವಾಲಯ ಭದ್ರಾವತಿಯ ಹಳೇನಗರದಲ್ಲಿದ್ದು ಭಾರತೀಯ ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿ ಐತಿಹಾಸಿಕ ಸ್ಮಾರಕವೆಂದು ಘೋಷಿಸಲ್ಪಟ್ಟಿದೆ. ಈ ಊರಿಗೆ ವಂಕೀಪುರ ಎಂಬ ಹೆಸರು ಇತ್ತೆಂಬುದಕ್ಕೆ ಇಂಬು ಕೊಡುವಂತೆ, ಶ್ರೀಲಕ್ಷ್ಮೀನರಸಿಂಹನ ಬಗ್ಗೆ ಒಂದು ಶ್ಲೋಕವಿದೆ. ಅದೆಂದರೆ "ಮಂಗಲಂ ಸ್ತಂಭ ಡಿಂಭಾಯ, ಮಂಗಲಂ ಮೃತ್ಯು ಮೃತ್ಯವೇ, ವಂಕೀಪುರ ನಿವಾಸಾಯ, ನರಸಿಂಹಾಯ ಮಂಗಲಂ" ಎಂದು.

Please Wait while comments are loading...