ನಮ್ಮ ಸುಂದರ ಭಾರತ ದೇಶವು ಹಲವಾರು ಮನಮೋಹಕ ಕಡಲ ತೀರಗಳಿಗೆ ಮನೆಯಾಗಿದೆ. ಪೂರ್ವದ ಬಂಗಾಳ ಕೊಲ್ಲಿಯಿಂದ ಹಿಡಿದು ಪಶ್ಚಿಮದ ಅರೇಬಿಯನ್ ಸಮುದ್ರ ತೀರಗಳ ಗುಜರಾತ್ ರಾಜ್ಯದವರೆಗೆ ಭೂನೆಲೆಯ ಅಂಚುಗಳಗುಂಟ ಹಲವು ಮೋಹಕ ಕಡಲ ತೀರಗಳು ಚಾಚಿಕೊಂಡಿವೆ. ಸಾಮಾನ್ಯವಾಗಿ ನಾವು ಸಮುದ್ರ ತೀರಗಳಲ್ಲಿ ಮರಳಿನಲ್ಲಿ ವಿರಮಿಸುತ್ತಲೊ, ಸಮುದ್ರ ನೀರಿನಲ್ಲಿ ಜಲಕ್ರೀಡೆಗಳನ್ನು ನಡೆಸುತ್ತಲೊ ಅಥವಾ ಹಾಯಾಗಿ ಐಷಾರಾಮಿ ಕುರ್ಚಿಗಳ ಮೇಲೆ ಕುಳಿತು ತಂಪಾದ ಪಾನೀಯಗಳನ್ನು ಹೀರುತ್ತಲೊ ಇಲ್ಲವೆ ಪುಸ್ತಕಗಳನ್ನು ಓದುತ್ತಲೊ ಮೋಜು ಮಸ್ತಿಗಳನ್ನು ಮಾಡುತ್ತೇವೆ.
ಆದರೆ ಒಂದೊಮ್ಮೆ ಯೋಚಿಸಿ ನೋಡಿ...ಸಮುದ್ರ ಪಕ್ಕದಲ್ಲಿರುವ ರಸ್ತೆಯಲ್ಲಿ ಚಲಿಸುತ್ತ ಸಮುದ್ರದ ವಿಹಂಗಮ ನೋಟವನ್ನು ಸವಿಯುವುದೆಂದರೆ ಅದೆಷ್ಟು ಆನಂದಮಯ. ಹೌದು, ಇದು ಕೂಡ ಒಂದು ಮೈಮನಗಳನ್ನು ರೋಮಾಂಚನಗೊಳಿಸುವಂತಹ ಅನುಭವ. ಈ ಲೇಖನದ ಮೂಲಕ ಭಾರತದ ಕೆಲವು ಅದ್ಭುತ ಕಡಲ ತಡಿಯ ಸುಂದರ ದಾರಿಗಳ ಪರಿಚಯ ಮಾಡಿಕೊಳ್ಳೋಣವೆ? ಹಾಗಾದರೆ ಕೆಳಗಿನ ಒಂದೊಂದೆ ಸ್ಲೈಡುಗಳನ್ನು ತಿರುಗಿಸುತ್ತ ಚಿತ್ರ ಪ್ರವಾಸ ಮಾಡಿ.

ಬೀಚ್ ಲೈನ್, ವೈಜಾಗ್
ಆಂಧ್ರದ ವೈಜಾಗ್ ಅಥವಾ ವಿಶಾಖಪಟ್ಟಣಂ ನಲ್ಲಿರುವ ಸಮುದ್ರ ಬದಿಯ ಈ ರಸ್ತೆಯು 40 ಕಿ.ಮೀ ಉದ್ದವಿದ್ದು ಬಂಗಾಳ ಕೊಲ್ಲಿಯ ಅತಿ ಉದ್ದದ ಬೀಚ್ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ರಸ್ತೆಯು ಕೈಲಾಸಗಿರಿಯನ್ನು ವೈಜಾಗ್ ನೊಂದಿಗೆ ಸಂಪರ್ಕಿಸುತ್ತದೆ.

ರಾಷ್ಟ್ರೀಯ ಹೆದ್ದಾರಿ 17, ಮರವಂತೆ
ಈ ಹೆದ್ದಾರಿಯನ್ನು ಭಾರತದ ಅತಿ ಸುಂದರ ರಾಷ್ಟ್ರೀಯ ಹೆದ್ದಾರಿಗಳಲ್ಲೊಂದಾಗಿ ಪರಿಗಣಿಸಲಾಗಿದೆ. ಭಾರತದ ಪಶ್ಚಿಮ ಕರಾವಳಿಗುಂಟ ಸಾಗುವ ರಸ್ತೆಯು ಸುಂದರ ಪಶ್ಚಿಮಘಟ್ಟಗಳಿ ಸಮಾನಾಂತರವಾಗಿ ನೆಲೆ ನಿಂತಿದೆ. ಕರ್ನಾಟಕದ ಮರವಂತೆ ಬಳಿ ಈ ರಸ್ತೆಯು ತನ್ನ ಒಂದು ಬದಿ ನದಿ ಹಾಗು ಇನ್ನೊಂದು ಬದಿಗೆ ಸಮುದ್ರದಗುಂಟ ಸಾಗುತ್ತದೆ. ಈ ವಿಶೀಷ್ಟ ರೀತಿಯ ರಸ್ತೆ ಭಾರತದಲ್ಲಿ ಇದೊಂದೆ ಎಂದು ಹೇಳಲಾಗಿದೆ.

ಈಸ್ಟ್ ಕೋಸ್ಟ್ ರೋಡ್
ಈಸ್ಟ್ ಕೋಸ್ಟ್ ರೋಡ್ ಅಥವಾ ಪೂರ್ವ ಕರಾವಳಿ ರಸ್ತೆಯು ರಾಜ್ಯ ಹೆದ್ದಾರಿಯಾಗಿದ್ದು, ಪಾಂಡಿಚೆರಿಯ ಮೂಲಕ ಚೆನ್ನೈ ಅನ್ನು ಕಡಲೂರಿನೊಂದಿಗೆ ಸಂಪರ್ಕಿಸಲು ಬಂಗಾಳ ಕೊಲ್ಲಿಯಲ್ಲಿ ನಿರ್ಮಿಸಲಾದ ಅತಿ ಸುಂದರವಾದ ಕರಾವಳಿ ರಸ್ತೆಯಾಗಿದೆ.

ಮರೀನ್ ಡ್ರೈವ್, ಮುಂಬೈ
ಮುಂಬೈನಲ್ಲಿರುವ ಮರೀನ್ ಡ್ರೈವ್ ಅರೇಬಿಯನ್ ಸಮುದ್ರದ ಜೊತೆ ಜೊತೆಯಲಿ ಸುಮಾರು 3 ಕಿ.ಮೀ ಉದ್ದವಾಗಿ ಚಾಚಿದೆ. "C" ಆಕಾರದಲ್ಲಿರುವ ಆರು ಪಥಗಳ ಈ ರಸ್ತೆಯು ಮುಂಬೈನ ನಾರಿಮನ್ ಪಾಯಿಂಟ್ ಅನ್ನು ಬಬುಲನಾಥ್ ದೊಂದಿಗೆ ಸಂಪೊಅರ್ಕಿಸುತ್ತದೆ.

ಮರೀನ್ ಡ್ರೈವ್, ಕೊಚ್ಚಿ
ಕೊಚ್ಚಿಯ ಹಿನ್ನೀರಿನಗುಂಟ ಚಾಚಿರುವ ಕೊಚ್ಚಿ ಮರೀನ್ ಡ್ರೈವ್ ಒಂದು ಅದ್ಭುತವಾದ ಪಾದಚಾರಿ ಮಾರ್ಗವಾಗಿರುವುದೂ ಅಲ್ಲದೆ ಪ್ರವಾಸಿ ಆಕರ್ಷಣೆಯೂ ಹೌದು. 1.75 ಕಿ.ಮೀ ಉದ್ದವಿರುವ ಈ ಮಾರ್ಗವು ಜನಕರ್ ಜೆಟ್ಟಿಯನ್ನು ಎರ್ನಾಕುಲಂ ಬೋಟ್ ನೊಂದಿಗೆ ಸಂಪರ್ಕಿಸುತ್ತದೆ.

ಲೇಕ್ ವೀವ್ ರೋಡ್, ಭೋಪಾಲ್
ಅಪ್ಪರ್ ತಾಲಾಬ್ ಎಂಬ ಕೆರೆಯ ಪಕ್ಕದಲ್ಲಿರುವ ಈ ರಸ್ತೆಯನ್ನು ಭೋಪಾಲಿನ ಮರೀನ್ ಡ್ರೈವ್ ಎಂದೂ ಕೂಡ ಕರೆಯಲಾಗುತ್ತದೆ. 2 ರಿಂದ 3 ಕಿ.ಮೀ ಉದ್ದವಿರುವ ಈ ರಸ್ತೆಯು ಭೋಪಾಲಿನ ಹೊಸ ಮಾರುಕಟ್ಟೆ ಪ್ರದೇಶವನ್ನು ಲಾಲ್‍ಘಾಟಿಯೊಂದಿಗೆ ಸಂಪರ್ಕಿಸುತ್ತದೆ.

ರಿವರ್ ಸೈಡ್ ಡ್ರೈವ್, ಲಖನೌ
ಲಖನೌನಲ್ಲಿ ಹರಿದಿರುವ ಗೋಮತಿ (ಗಂಗಾ ನದಿಯ ಉಪನದಿ) ನದಿಯ ಮೇಲಿರುವ ಈ ರಸ್ತೆಯನ್ನು ಲಖನೌನ ಮರೀನ್ ಡ್ರೈವ್ ಎಂತಲೂ ಕರೆಯಲಾಗುತ್ತದೆ. ನದಿಯ ಪಕ್ಕದ ಗೋಮತಿ ನಗರದ ಅಂಬೇಡ್ಕರ್ ಪಾರ್ಕ್ ಒಂದು ಪ್ರವಾಸಿ ಆಕರ್ಷಣೆಯೂ ಹೌದು.

ಬೀಚ್ ರಸ್ತೆ, ಚೆನ್ನೈ
ಚೆನ್ನೈನ ಪ್ರಖ್ಯಾತ ಮರೀನಾ ಬೀಚ್ ಬಳಿಯಿರುವ ಈ ರಸ್ತೆಯನ್ನು ಕಾಮರಾಜರ್ ಸಲೈ ಎಂದು ಕರೆಯಲಾಗುತ್ತದೆ. ಆರು ಪಥಗಳ ಈ ರಸ್ತೆಯು ಸಮುದ್ರಕ್ಕೆ ಸಮಾನಾಂತರವಾಗಿ ಸ್ಯಾಂತೋಮ್ ವರೆಗೂ ಚಾಚಿದೆ.

ಬೀಚ್ ರಸ್ತೆ, ಪಾಂಡಿಚೆರಿ
ಪಾಂಡಿಚೆರಿಯಲ್ಲಿರುವ ಪ್ರೊಮೆನೇಡ್ ಕಡಲ ತೀರಕ್ಕೆ ಸಮಾನಾಂತರವಾಗಿ ಸುಮಾರು 1.5 ಕಿ.ಮೀ ವರೆಗೂ ಚಾಚಿದೆ ಈ ರಸ್ತೆ.

ಮರೀನ್ ಡ್ರೈವ್, ಪುರಿ
ಪುರಿ ಹಾಗು ಕೋನಾರ್ಕ್ ಗಳನ್ನು ಸಂಪರ್ಕಿಸುವ ಈ ರಸ್ತೆಯು ಬಂಗಾಳ ಕೊಲ್ಲಿಯ ಮೂಲಕ ಸಾಗುತ್ತ ಕೋನಾರ್ಕ್ ಮರೀನ್ ಡ್ರೈವ್ ಎಂಬ ಹೆಸರಿನಿಂದ ಹೆಸರುವಾಸಿಯಾಗಿದೆ.


Click it and Unblock the Notifications



















