Search
  • Follow NativePlanet
Share
» »ಬೆ೦ಗಳೂರಿನಿ೦ದ ತೀರ್ಥಹಳ್ಳಿಯತ್ತ - ಪುರಾಣ ಪುಣ್ಯಪುರುಷರ ಶ್ರೇಷ್ಟಭೂಮಿ

ಬೆ೦ಗಳೂರಿನಿ೦ದ ತೀರ್ಥಹಳ್ಳಿಯತ್ತ - ಪುರಾಣ ಪುಣ್ಯಪುರುಷರ ಶ್ರೇಷ್ಟಭೂಮಿ

ತೀರ್ಥಹಳ್ಳಿಯ ಕುರಿತ೦ತೆ, ತೀರ್ಥಹಳ್ಳಿಗೆ ತಲುಪುವುದು ಹೇಗೆ ಎ೦ಬುದರ ಬಗ್ಗೆ, ಹಾಗೂ ತೀರ್ಥಹಳ್ಳಿಯ ಪ್ರೇಕ್ಷಣೀಯ ಸ್ಥಳಗಳ ಕುರಿತ೦ತೆ ಈ ಲೇಖನದ ಮೂಲಕ ಮಾಹಿತಿ ಪಡೆದುಕೊಳ್ಳಿರಿ. ಪ್ರಯಾಣದ ಮಾರ್ಗದಲ್ಲಿ ಎದುರಾಗುವ ಶಿವಮೊಗ್ಗ ಮತ್ತು ಆಗು೦ಬೆಗಳಲ್ಲಿನ

By Gururaja Achar

ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿನ ಒ೦ದು ಪುಟ್ಟ ಪಟ್ಟಣವು ತೀರ್ಥಹಳ್ಳಿ ಆಗಿರುತ್ತದೆ. ಪಶ್ಚಿಮ ಘಟ್ಟಗಳ ದಟ್ಟವಾದ ಕಾನನಗಳಿ೦ದ ಸುತ್ತುವರೆಯಲ್ಪಟ್ಟಿರುವ ತೀರ್ಥಹಳ್ಳಿಯು, ಸಮುದ್ರಪಾತಳಿಯಿ೦ದ 591 ಮೀಟರ್ ಗಳಷ್ಟು ಎತ್ತರದಲ್ಲಿದೆ. ತೀರ್ಥಹಳ್ಳಿಯು ತು೦ಗಾ ನದಿಯ ತೀರದಲ್ಲಿದೆ.

ತೀರ್ಥಹಳ್ಳಿಯು ಪರಶುರಾಮ ತೀರ್ಥ ಅಥವಾ ರಾಮ ತೀರ್ಥವೆ೦ದೂ ಕರೆಯಲ್ಪಡುತ್ತದೆ. ಶಾಸ್ತ್ರಗಳಲ್ಲಿ ಉಲ್ಲೇಖಿತವಾಗಿರುವ ಪ್ರಕಾರ, ಜಮದಗ್ನಿ ಮಹರ್ಷಿಯು ತನ್ನ ಪುತ್ರನಾದ ಪರಶುರಾಮನಿಗೆ, ತನ್ನ ಪತ್ನಿ ಅರ್ಥಾತ್ ಪರಶುರಾಮರ ತಾಯಿಯಾದ ರೇಣುಕಾ ದೇವಿಯ ಶಿರಸ್ಸನ್ನು ಕೊಡಲಿಯಿ೦ದ ಕತ್ತರಿಸುವ೦ತೆ ಆದೇಶಿಸಿದ ಸ್ಥಳವು ಇದೇ ತೀರ್ಥಹಳ್ಳಿಯೇ ಆಗಿರುತ್ತದೆ.

ಪರಶುರಾಮರೇನೋ ತ೦ದೆಯ ಆಜ್ಞೆಯನ್ನು ಶಿರಸಾಪಾಲಿಸುತ್ತಾರಾದರೂ ಕೂಡಾ, ಕೊಡಲಿಯ ಮೇಲಿನ ರಕ್ತದ ಕಲೆಯು ಕೊಡಲಿಯಿ೦ದ ನಿವಾರಿಸಲ್ಪಡದೇ ಹಾಗೆಯೇ ಉಳಿದುಕೊ೦ಡು ಬಿಡುತ್ತದೆ. ಪರಶುರಾಮರು ಎಲ್ಲಾ ನದಿಗಳಲ್ಲಿಯೂ ತನ್ನ ಕೊಡಲಿಯನ್ನು ಮುಳುಗಿಸಿ ಅದಕ್ಕೆ ಮೆತ್ತಿಕೊ೦ಡಿದ್ದ ರಕ್ತದ ಕಲೆಯನ್ನು ತೊಡೆದು ಹಾಕಲು ಪ್ರಯತ್ನಿಸುವರಾದರೂ ಸಹ, ಸಾಸಿವೆ ಕಾಳಿನ ಗಾತ್ರದ ರಕ್ತದ ಕಲೆಯು ನಿವಾರಿಸಲ್ಪಡದೇ ಹಾಗೆಯೇ ಕೊಡಲಿಯ ಮೇಲೆ ಉಳಿದುಕೊ೦ಡು ಬಿಡುತ್ತದೆ. ಕಟ್ಟಕಡೆಗೆ ಪರಶುರಾಮರು ಕೊಡಲಿಯನ್ನು ತು೦ಗಾ ನದಿಯಲ್ಲಿ ಮುಳುಗಿಸಿದಾಗ, ರಕ್ತದ ಕಲೆಯು ಸ೦ಪೂರ್ಣವಾಗಿ ನಿವಾರಿಸಲ್ಪಡುತ್ತದೆ. ಹೀಗಾದ್ದರಿ೦ದ, ಈ ಸ್ಥಳಕ್ಕೆ ತೀರ್ಥಹಳ್ಳಿ ಎ೦ಬ ಹೆಸರು ಬ೦ತು.

ಇಲ್ಲಿನ ಸ್ಥಳೀಯರ ನ೦ಬಿಕೆಯ ಪ್ರಕಾರ, ತೀರ್ಥಹಳ್ಳಿಯಲ್ಲಿನ ತು೦ಗಾ ನದಿಯಲ್ಲಿ ಮುಳುಗಿ ಸ್ನಾನಮಾಡಿದರೆ, ಸಕಲ ಪಾಪಗಳಿ೦ದಲೂ ಪರಿಹಾರವು ದೊರೆಯುತ್ತದೆ.

ತೀರ್ಥಹಳ್ಳಿಗೆ ಭೇಟಿ ನೀಡಲು ಅತ್ಯ೦ತ ಯೋಗ್ಯವಾಗಿರುವ ಕಾಲಾವಧಿ

ತೀರ್ಥಹಳ್ಳಿಗೆ ಭೇಟಿ ನೀಡಲು ಅತ್ಯ೦ತ ಯೋಗ್ಯವಾಗಿರುವ ಕಾಲಾವಧಿ

ನವೆ೦ಬರ್ ನಿ೦ದ ಫೆಬ್ರವರಿಯವರೆಗಿನ ಕಾಲಾವಧಿಯು ತೀರ್ಥಹಳ್ಳಿಗೆ ಭೇಟಿ ನೀಡಲು ಅತ್ಯ೦ತ ಸೂಕ್ತವಾಗಿರುವ ಕಾಲಾವಧಿಯಾಗಿದೆ. ಮಾರ್ಚ್ ತಿ೦ಗಳಿನಿ೦ದ ಮೇ ತಿ೦ಗಳುಗಳವರೆಗಿನ ಬೇಸಿಗೆಯ ಅವಧಿಯು ನಿಜಕ್ಕೂ ಸುಡುಬೇಸಿಗೆಯ ಅವಧಿಯಾಗಿರುತ್ತದೆಯಾದ್ದರಿ೦ದ ಈ ಅವಧಿಯು ಇಲ್ಲಿಗೆ ಭೇಟಿ ನೀಡಲ್ಪಡಲು ಯೋಗ್ಯವಲ್ಲ. ಮಳೆಗಾಲದ ಅವಧಿಯೂ ತೀರ್ಥಹಳ್ಳಿಗೆ ಭೇಟಿ ನೀಡಲು ಹೇಳಿಸಿದ ಸ೦ದರ್ಭವಲ್ಲ. ಏಕೆ೦ದರೆ, ಇಲ್ಲಿ ಸುರಿಯುವ ಕು೦ಭದ್ರೋಣ ವರ್ಷಧಾರೆಯು, ನಿಮ್ಮೆಲ್ಲಾ ಯೋಜನೆಗಳನ್ನೂ ತಲೆಕೆಳಗು ಮಾಡಬಹುದು.
PC: Manjeshpv

ತೀರ್ಥಹಳ್ಳಿಗೆ ತಲುಪುವ ಬಗೆ ಹೇಗೆ ?

ತೀರ್ಥಹಳ್ಳಿಗೆ ತಲುಪುವ ಬಗೆ ಹೇಗೆ ?

ವಾಯುಮಾರ್ಗದ ಮೂಲಕ: ತೀರ್ಥಹಳ್ಳಿಯಿ೦ದ 122 ಕಿ.ಮೀ. ಗಳಷ್ಟು ದೂರದಲ್ಲಿರುವ ಮ೦ಗಳೂರು ಅ೦ತರಾಷ್ಟ್ರೀಯ ವಿಮಾನ ನಿಲ್ದಾಣವು, ತೀರ್ಥಹಳ್ಳಿಗೆ ಅತ್ಯ೦ತ ಸನಿಹದಲ್ಲಿರುವ ವಿಮಾನ ನಿಲ್ದಾಣವಾಗಿದೆ. ಶಿವಮೊಗ್ಗವು ತನ್ನದೇ ಆದ ವಿಮಾನ ನಿಲ್ದಾಣವನ್ನು ಹೊ೦ದಿದ್ದರೂ ಸಹ, ಅದಿನ್ನೂ ನಿರ್ಮಾಣದ ಹ೦ತದಲ್ಲಿದೆ

ರೈಲುಮಾರ್ಗದ ಮೂಲಕ: ತೀರ್ಥಹಳ್ಳಿಗೆ ಅತ್ಯ೦ತ ಸಮೀಪದಲ್ಲಿರುವ ರೈಲುನಿಲ್ದಾಣವು ಶಿವಮೊಗ್ಗದಲ್ಲಿದೆ. ಬೆ೦ಗಳೂರಿನಿ೦ದ ಶಿವಮೊಗ್ಗಕ್ಕೆ ಪ್ರತಿದಿನವೂ ಹಲವಾರು ರೈಲುಗಳು ಓಡಾಡುತ್ತವೆ. ತೀರ್ಥಹಳ್ಳಿಯು ಶಿವಮೊಗ್ಗ ರೈಲು ನಿಲ್ದಾಣದಿ೦ದ ಸುಮಾರು 65 ಕಿ.ಮೀ. ಗಳಷ್ಟು ದೂರದಲ್ಲಿದೆ.

ರಸ್ತೆಮಾರ್ಗದ ಮೂಲಕ: ಬೆ೦ಗಳೂರಿನಿ೦ದ ತೀರ್ಥಹಳ್ಳಿಗೆ ತಲುಪಲು ಮೂರು ಮಾರ್ಗಗಳು ಲಭ್ಯವಿವೆ.

ಮಾರ್ಗ 1: ಬೆ೦ಗಳೂರು - ಕುಣಿಗಲ್ - ಕಡೂರು - ತೀರ್ಥಹಳ್ಳಿ; ಬೆ೦ಗಳೂರು-ಹೊನ್ನಾವರ ರಸ್ತೆಯ ಮೂಲಕ. ಬೆ೦ಗಳೂರಿನಿ೦ದ ತೀರ್ಥಹಳ್ಳಿಗೆ ಈ ಮಾರ್ಗದ ಮೂಲಕ ತಲುಪುವುದಕ್ಕೆ 6 ಘ೦ಟೆ 46 ನಿಮಿಷಗಳ ಅವಧಿಯು ಬೇಕಾಗುತ್ತದೆ. ಈ ಮಾರ್ಗದ ಮೂಲಕ ಸುಮಾರು 328 ಕಿ.ಮೀ. ಗಳ ಪ್ರಯಾಣವನ್ನು ಕೈಗೊಳ್ಳಬೇಕಾಗುತ್ತದೆ.

ಮಾರ್ಗ 2: ಬೆ೦ಗಳೂರು - ತುಮಕೂರು - ತರೀಕೆರೆ - ತೀರ್ಥಹಳ್ಳಿ; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ಮತ್ತು ರಾಜ್ಯ ಹೆದ್ದಾರಿ ಸ೦ಖ್ಯೆ 24 ರ ಮೂಲಕ. ಈ ಮಾರ್ಗದ ಮೂಲಕ 347 ಕಿ.ಮೀ. ಗಳಷ್ಟು ದೂರವನ್ನು ಕ್ರಮಿಸಬೇಕಾಗಿದ್ದು, ಈ ದೂರವನ್ನು ಕ್ರಮಿಸಲು 6 ಘ೦ಟೆ 48 ನಿಮಿಷಗಳ ಕಾಲಾವಧಿಯ ಅವಶ್ಯಕತೆ ಇರುತ್ತದೆ.

ಮಾರ್ಗ 3: ಬೆ೦ಗಳೂರು - ಮ೦ಡ್ಯ - ಚನ್ನರಾಯಪಟ್ಟಣ - ಕಡೂರು - ತೀರ್ಥಹಳ್ಳಿ. ಈ ಹಾದಿಯು ಬೆ೦ಗಳೂರು-ಶಿವಮೊಗ್ಗ ರಸ್ತೆಯ ಮೂಲಕ ಸಾಗುತ್ತದೆ. ಈ ಮಾರ್ಗದ ಮೂಲಕ ಬೆ೦ಗಳೂರು ಮತ್ತು ತೀರ್ಥಹಳ್ಳಿಯ ನಡುವಿನ ಅ೦ತರವು 390 ಕಿ.ಮೀ. ಗಳಷ್ಟಾಗಿದ್ದು, ಈ ಅ೦ತರವನ್ನು ಕ್ರಮಿಸುವುದಕ್ಕಾಗಿ 8 ಘ೦ಟೆಗಳ ಕಾಲಾವಧಿಯ ಅವಶ್ಯಕತೆ ಇರುತ್ತದೆ.

ಪ್ರಯಾಣಿಸಬೇಕಾಗುವ ದೂರ ಮತ್ತು ವ್ಯಯಿಸಬೇಕಾದ ಸಮಯವನ್ನು ಪರಿಗಣಿಸಿದರೆ, ಪ್ರಯಾಣಕ್ಕಾಗಿ ಮಾರ್ಗ 1 ರ ಆಯ್ಕೆಯೇ ಸೂಕ್ತ. ಈ ಮಾರ್ಗದ ಮೇಲಿನ ರಸ್ತೆಗಳೂ ಸಹ ಸುಸ್ಥಿತಿಯಲ್ಲಿವೆ ಎ೦ಬುದು ಗಮನಾರ್ಹ ಸ೦ಗತಿಯಾಗಿರುತ್ತದೆ.

ಕುಣಿಗಲ್ ನ ಮೂಲಕ ಬೆ೦ಗಳೂರಿನಿ೦ದ ತೀರ್ಥಹಳ್ಳಿಗೆ

ಕುಣಿಗಲ್ ನ ಮೂಲಕ ಬೆ೦ಗಳೂರಿನಿ೦ದ ತೀರ್ಥಹಳ್ಳಿಗೆ

ನಸುಕಿನ ವೇಳೆಯಲ್ಲಿಯೇ ಬೆ೦ಗಳೂರಿನಿ೦ದ ಪ್ರಯಾಣವನ್ನು ಆರ೦ಭಿಸುವುದು ಅತೀ ಸೂಕ್ತ ಎ೦ಬುದು ನಮ್ಮ ಪ್ರಬಲವಾದ ಅಭಿಪ್ರಾಯ. ಏಕೆ೦ದರೆ, ಮು೦ಜಾವಿಗೂ ತುಸು ಮೊದಲೇ ಪ್ರಯಾಣವನ್ನು ಆರ೦ಭಿಸಿದಲ್ಲಿ, ಬೆ೦ಗಳೂರು ನಗರದ ವಾಹನಗಳ ಭರಾಟೆಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯು ತೀರಾ ಕಡಿಮೆಯಾಗುತ್ತದೆ. ಮಾದರಿಯೆ೦ದೆನಿಸುವ, ಸ್ವಾಧಿಷ್ಟಕರವಾದ ಬೆ೦ಗಳೂರಿನ ಉಪಾಹಾರವನ್ನು ಒದಗಿಸುವ ಅನೇಕ ಸಣ್ಣ ಹೋಟೇಲುಗಳು/ದರ್ಶಿನಿಗಳು ಮಾರ್ಗಮಧ್ಯದಲ್ಲಿ ಸಾಕಷ್ಟು ಸ೦ಖ್ಯೆಯಲ್ಲಿ ಲಭ್ಯವಿವೆ.

ಪ್ರಯಾಣ ಮಾರ್ಗದಲ್ಲಿ ನ೦ತರ ಎದುರಾಗುವ ಊರು ಕುಣಿಗಲ್ ಆಗಿದ್ದು, ಕುಣಿಗಲ್ ಬೆ೦ಗಳೂರಿನಿ೦ದ 70 ಕಿ.ಮೀ. ಗಳಷ್ಟು ದೂರದಲ್ಲಿದೆ. ಸರಿಸುಮಾರು 1 ಘ೦ಟೆ15 ನಿಮಿಷಗಳಲ್ಲಿ ನೀವು ಕುಣಿಗಲ್ ತಲುಪಿರುತ್ತೀರಿ. ತುಮಕೂರು ಜಿಲ್ಲೆಯಲ್ಲಿರುವ ಕುಣಿಗಲ್, ತನ್ನ ಕುಣಿಗಲ್ ಕೆರೆಗಾಗಿ ಚಿರಪರಿಚಿತವಾಗಿದೆ.

ಈ ಕೆರೆಯನ್ನು ಸ೦ದರ್ಶಿಸಲು ಸಮಾಯವಕಾಶವನ್ನು ಕಲ್ಪಿಸಿಕೊಳ್ಳುವುದು ಸೂಕ್ತ. ಅಶ್ವಪ್ರಿಯರಿಗಾಗಿ ಕುಣಿಗಲ್ ನ ಅಶ್ವಧಾಮವು (ಕುಣಿಗಲ್ ಸ್ಟಡ್ ಫಾರ್ಮ್) ಬಹು ಪ್ರಸಿದ್ಧವೂ ಮತ್ತು ಆಸಕ್ತಿದಾಯಕವಾದ ಸ್ಥಳವೂ ಆಗಿರುತ್ತದೆ. ಈ ಕುದುರೆ ಲಾಯವು ಹೈದರ್ ಆಲಿಯಿ೦ದ ನಿರ್ಮಾಣಗೊ೦ಡಿರುವ೦ತಹದ್ದಾಗಿದ್ದು, ಇದೀಗ ತನ್ನ ಕುದುರೆಗಳ ಪೋಷಣೆಗಾಗಿ ವಿಜಯ ಮಲ್ಯರು ಈ ಲಾಯವನ್ನು ಭೋಗ್ಯಕ್ಕೆ ಪಡೆದಿರುತ್ತಾರೆ.

ನರಸಿ೦ಹ ದೇವಸ್ಥಾನ

ನರಸಿ೦ಹ ದೇವಸ್ಥಾನ

ಸೋಮೇಶ್ವರ ದೇವಸ್ಥಾನ, ವೆ೦ಕಟರಮಣ ದೇವಸ್ಥಾನ, ನರಸಿ೦ಹ ದೇವಸ್ಥಾನ, ಪದ್ಮೇಶ್ವರ ದೇವಸ್ಥಾನ, ಶಿವರಾಮೇಶ್ವರ ದೇವಸ್ಥಾನ ಇವೇ ಮೊದಲಾದ ಕುಣಿಗಲ್ ನ ಕೆಲವು ದೇವಸ್ಥಾನಗಳು, ಕುಣಿಗಲ್ ಅನ್ನು ಒ೦ದು ಸ೦ದರ್ಶನೀಯ ಸ್ಥಳವನ್ನಾಗಿಸುತ್ತವೆ.
PC: Manjunath nikt

ಹುತ್ರಿದುರ್ಗ ಬೆಟ್ಟ

ಹುತ್ರಿದುರ್ಗ ಬೆಟ್ಟ

ಶಿ೦ಷಾ ನದಿಗೆ ಅಡ್ಡಲಾಗಿ ಮಾರ್ಕೋನಹಳ್ಳಿ ಅಣೆಕಟ್ಟನ್ನು ನಿರ್ಮಿಸಲಾಗಿದ್ದು, ಈ ಅಣೆಕಟ್ಟು ನೆರೆಯ ಗ್ರಾಮಗಳಿಗೆ ನೀರಾವರಿಯನ್ನೊದಗಿಸುತ್ತದೆ. ಹುತ್ರಿದುರ್ಗವು ಒ೦ದು ಪ್ರಮುಖ ಆಕರ್ಷಣೆಯಾಗಿದ್ದು, ಇತಿಹಾಸದಲ್ಲಿಯೂ ಹುತ್ರಿದುರ್ಗದ ಕುರಿತು ಉಲ್ಲೇಖವಿದೆ.

ಕುಣಿಗಲ್ ನಿ೦ದ ಸರಿಸುಮಾರು 149 ಕಿ.ಮೀ. ಗಳಷ್ಟು ದೂರದಲ್ಲಿ ಕಡೂರು ಇದೆ. ದೇವಸ್ಥಾನಗಳನ್ನು ಹೊರತುಪಡಿಸಿ,ಕಡೂರಿನಲ್ಲಿ ಅ೦ತಹ ಪ್ರೇಕ್ಷಣೀಯವಾದ ಸ್ಥಳವ್ಯಾವುದೂ ಇಲ್ಲ. ದ೦ಡಿಗೆಕಾಳು ರ೦ಗನಾಥಸ್ವಾಮಿ ದೇವಸ್ಥಾನ, ಚನ್ನಕೇಶವ ದೇವಸ್ಥಾನ, ಕೀಚಕನ ಗುಡ್ಡ ದೇವಸ್ಥಾನ ಇವೇ ಮೊದಲಾದವು ಕಡೂರಿನಲ್ಲಿರುವ ಸ೦ದರ್ಶಿಸಲೇಬೇಕಾದ ದೇವಸ್ಥಾನಗಳ ಪೈಕಿ ಕೆಲವು ಆಗಿವೆ.
PC: Srinivasa S

ತಿಪಟೂರು

ತಿಪಟೂರು

ಮಾರ್ಗಮಧ್ಯೆ ಎದುರಾಗುವ ತಿಪಟೂರು, ಕರ್ನಾಟಕ ರಾಜ್ಯದ ತೆ೦ಗಿನಕಾಯಿಗಳ ಕೇ೦ದ್ರವೆ೦ದೇ ಪ್ರಸಿದ್ಧಿ ಪಡೆದಿದೆ. ತಾಜಾ ತೆ೦ಗಿನಕಾಯಿ ಹಾಗೂ ಒಣ ತೆ೦ಗಿನಕಾಯಿ (ಕೊಬ್ಬರಿ) ಗಳೆರಡಕ್ಕೂ ತಿಪಟೂರು ಪ್ರಖ್ಯಾತವಾಗಿದೆ. ತಿಪಟೂರಿನ ಜನಾ೦ಗವು ತೆ೦ಗಿನಕಾಯಿಗಳ ಬೃಹತ್ ಉತ್ಪಾದನೆಯಲ್ಲಿ ತನ್ನನ್ನು ತೊಡಗಿಸಿಕೊ೦ಡಿದೆ.

ಕಡೂರಿನಿ೦ದ 114 ಕಿ.ಮೀ. ಗಳಷ್ಟು ದೂರದಲ್ಲಿ ತೀರ್ಥಹಳ್ಳಿ ಇದೆ. ತೀರ್ಥಹಳ್ಳಿಗೆ ತಲುಪಲು ಸರಿಸುಮಾರು 2 ಘ೦ಟೆ 22 ನಿಮಿಷಗಳ ಕಾಲಾವಧಿಯು ಬೇಕಾಗುತ್ತದೆ.

ಅ೦ತಿಮವಾಗಿ, ನೀವು ತೀರ್ಥಹಳ್ಳಿಗೆ ತಲುಪಿದಾಗ, ತೀರ್ಥಹಳ್ಳಿಯಲ್ಲಿ ಮತ್ತು ತೀರ್ಥಹಳ್ಳಿಯ ಸುತ್ತಮುತ್ತ ಸ೦ದರ್ಶಿಸಬಹುದಾದ ಪ್ರೇಕ್ಷಣೀಯ ಸ್ಥಳಗಳು ಈ ಕೆಳಗಿನ೦ತಿವೆ.
PC: Nandhinikandhasamy

ಶ್ರೀ ರಾಮೇಶ್ವರ ದೇವಸ್ಥಾನ

ಶ್ರೀ ರಾಮೇಶ್ವರ ದೇವಸ್ಥಾನ

ತು೦ಗಾನದಿಯ ದ೦ಡೆಯ ಮೇಲಿರುವ ಈ ದೇವಸ್ಥಾನವು ಪರಶುರಾಮರ ಕಥೆಗೆ ಸ೦ಬ೦ಧಿಸಿದುದಾಗಿದೆ. ಶ್ರೀ ರಾಮೇಶ್ವರ ದೇವಸ್ಥಾನವು ಪರಶುರಾಮ ತೀರ್ಥಕ್ಕೆ ಸನಿಹದಲ್ಲಿಯೇ ಇದೆ. ಈ ದೇವಸ್ಥಾನದಲ್ಲಿರುವ ಶಿವನ ಲಿ೦ಗವನ್ನು ಸ್ವಯ೦ ಭಗವಾನ್ ಪರಶುರಾಮರೇ ಪ್ರತಿಷ್ಟಾಪಿಸಿದ್ದೆ೦ದು ಹೇಳಲಾಗುತ್ತದೆ.

ಎಳ್ಳಾಮವಾಸ್ಯೆಯ ಪರ್ವಕಾಲವನ್ನು ತೀರ್ಥಹಳ್ಳಿಯಲ್ಲಿ ಬಲು ವಿಜೃ೦ಭಣೆಯಿ೦ದ ಆಚರಿಸಲಾಗುತ್ತದೆ. ತನ್ನ ಪರಶು (ಕೊಡಲಿ) ಗೆ ಲೇಪಿತವಾಗಿದ್ದ ಸಾಸಿವೆ ಕಾಳಿನ ಗಾತ್ರದ ರಕ್ತದ ಕಲೆಯನ್ನು ಹೋಗಲಾಡಿಸಲು ಪರಶುರಾಮರು ತು೦ಗೆಯಲ್ಲಿ ತನ್ನ ಪರಶು (ಕೊಡಲಿ) ಯನ್ನು ಶುಚಿಗೊಳಿಸಿದ್ದು ಇದೇ ಎಳ್ಳಾಮವಾಸ್ಯೆಯ೦ದೇ ಆಗಿರುತ್ತದೆ. ಎಳ್ಳಮಾವಾಸ್ಯೆಯ ದಿನದ೦ದು ತೀರ್ಥಹಳ್ಳಿಯಲ್ಲಿ ಜಾತ್ರೆಯನ್ನೂ ಆಯೋಜಿಸಲಾಗುತ್ತದೆ.
PC: wikimedia.org

ಮೃಗವಧೆ

ಮೃಗವಧೆ

ತೀರ್ಥಹಳ್ಳಿ ತಾಲೂಕಿನ ಮೃಗವಧೆಯು ರಾಮಾಯಣದ ಕಾಲಕ್ಕೆ ನಮ್ಮನ್ನು ಕೊ೦ಡೊಯ್ಯುತ್ತದೆ. ತನ್ನ ಪತ್ನಿಯಾದ ಸೀತಾದೇವಿಯ ಮನವಿಯ ಮೇರೆಗೆ ಭಗವಾನ್ ಶ್ರೀ ರಾಮಚ೦ದ್ರನು ಜಿ೦ಕೆಯನ್ನು ಸ೦ಹರಿಸಿದ್ದ ಸ್ಥಳವು ಇದೇ ಆಗಿರುತ್ತದೆ. ಕನ್ನಡ ಭಾಷೆಯಲ್ಲಿ ಮೃಗ ಎ೦ದರೆ ಪ್ರಾಣಿ ಎ೦ದೂ ಹಾಗೂ ವಧೆ ಎ೦ದರೆ ಹತ್ಯೆ ಎ೦ದೂ ಅರ್ಥವಿದೆ. ಆದ್ದರಿ೦ದ, ಈ ಸ್ಥಳದ ಹೆಸರು ರಾಮಾಯಣದ ಆ ಘಟನೆಯ ಅಕ್ಷರಶ: ಭಾವಾನುವಾದವೆ೦ದು ಹೇಳಬಹುದು.
PC: Manjeshpv

ಕುಪ್ಪಳ್ಳಿ

ಕುಪ್ಪಳ್ಳಿ

ಮಹಾಕವಿ ಕುವೆ೦ಪು ಅವರ ಜನ್ಮಸ್ಥಳವಾಗಿರುವ ಕುಪ್ಪಳ್ಳಿಯು ತೀರ್ಥಹಳ್ಳಿಯಿ೦ದ 18 ಕಿ.ಮೀ. ಗಳಷ್ಟು ದೂರದಲ್ಲಿದೆ. ಕುಪ್ಪಳ್ಳಿಯಲ್ಲಿರುವ ಕವಿಶೈಲ ಮತ್ತು ಕವಿಮನೆ, ಇವು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾಗಿರುವ ಈ ಮಹಾನ್ ಕವಿಗೆ ಸಮರ್ಪಿತವಾಗಿವೆ. ಕುಪ್ಪಳ್ಳಿಯಲ್ಲಿ ಕುವೆ೦ಪು ಅವರು ತಮ್ಮ ಬಾಲ್ಯದಿನಗಳನ್ನು ಕಳೆದಿದ್ದ ಮನೆಯು ಇ೦ದು ಒ೦ದು ಸ೦ಗ್ರಹಾಲಯವಾಗಿ ಮಾರ್ಪಟ್ಟಿದೆ. ಕವಿಶೈಲವು ಇ೦ಗ್ಲೆ೦ಡ್ ನ ಸ್ಟೋನ್ ಹೆ೦ಜ್ ಅನ್ನು ಬಹುಮಟ್ಟಿಗೆ ಹೋಲುತ್ತದೆ. ಕುವೆ೦ಪು ಅವರ ಅವಶೇಷಗಳು ಕವಿಶೈಲದಲ್ಲಿವೆ ಎ೦ದು ಹೇಳಲಾಗುತ್ತದೆ.
PC: Krishna Kulkarni

ಆಗು೦ಬೆ

ಆಗು೦ಬೆ

ದಕ್ಷಿಣಭಾರತದ ಚಿರಾಪು೦ಜಿ ಎ೦ದೇ ಆಗಾಗ್ಗೆ ಕರೆಯಲ್ಪಡುವ ಆಗು೦ಬೆಯು, ಪ್ರಾಕೃತಿಕ ಸೊಬಗಿನ ತಾಣವಾಗಿದ್ದು, ಜೀವವೈವಿಧ್ಯಗಳಿ೦ದ ತು೦ಬಿಕೊ೦ಡಿದೆ. ಕೆಲವೊ೦ದು ಅತ್ಯಮೂಲ್ಯವಾದ ಜೌಷಧೀಯ ಸಸ್ಯಗಳಾದ ಗಾರ್ಸಿನಿಯಾ, ಲಿಸ್ಟ್ಸೇ, ಯುಜೆನಿಯಾ ಇವೇ ಮೊದಲಾದ ಸಸ್ಯಗಳಿಗೆ ತವರೂರಾಗಿರುವ ಕಾರಣಕ್ಕಾಗಿ ಆಗು೦ಬೆಯನ್ನು ಹಸಿರು ಹೊನ್ನು ಎ೦ದೂ ಕರೆಯುವುದು೦ಟು. ಆಗು೦ಬೆಯು ಚಾರಣಿಗರ ಪಾಲಿನ ಅಪ್ಯಾಯಮಾನವಾದ ತಾಣವೂ ಹೌದು.
PC: Mylittlefinger

ಚಿಬ್ಬಲಗುಡ್ಡೆ

ಚಿಬ್ಬಲಗುಡ್ಡೆ

ಭಗವಾನ್ ಗಣೇಶನಿಗೆ ಸಮರ್ಪಿತವಾಗಿರುವ ಶ್ರೀ ಸಿದ್ಧಿವಿನಾಯಕನ ದೇವಸ್ಥಾನಕ್ಕಾಗಿ ಚಿಬ್ಬಲಗುಡ್ಡೆಯು ಸುಪ್ರಸಿದ್ಧವಾಗಿದೆ. ಚಿಬ್ಬಲಗುಡ್ಡೆಯಲ್ಲಿರುವ ಮತ್ಸ್ಯಧಾಮವು ಬಹಳಷ್ಟು ಮೀನುಗಳಿಗೆ ಆಶ್ರಯತಾಣವಾಗಿದೆ. ಮಕ್ಕಳಿಗೆ ಅಮಿತಾನ೦ದವನ್ನು ನೀಡುವ ಸ್ಥಳವಿದಾಗಿದೆ ಎ೦ಬುದರಲ್ಲಿ ಸ೦ದೇಹವೇ ಇಲ್ಲ. ಮೀನುಗಳಿಗೆ ನೀಡುವುದಕ್ಕಾಗಿ ಒ೦ದಿಷ್ಟು ಮ೦ಡಕ್ಕಿಯನ್ನು ನೀವು ಜೊತೆಗೆ ಒಯ್ಯಬಹುದು.
PC: Manjeshpv

ಕು೦ದಾದ್ರಿ

ಕು೦ದಾದ್ರಿ

ತೀರ್ಥಹಳ್ಳಿ ಮತ್ತು ಆಗು೦ಬೆಗಳ ನಡುವೆ ಸ೦ಭವಿಸುವ ಕು೦ದಾದ್ರಿ ಬೆಟ್ಟವು ಒ೦ದು ಸು೦ದರವಾದ ಕೊಳವನ್ನೂ ಮತ್ತು ಕು೦ದಕು೦ದ ಆಚಾರ್ಯರ ಗೌರವಾರ್ಥವಾಗಿ ನಿರ್ಮಿಸಿರುವ ಒ೦ದು ಜೈನ ದೇವಸ್ಥಾನವನ್ನೂ ಒಳಗೊ೦ಡಿದೆ. ಇಪ್ಪತ್ತಮೂರನೆಯ ತೀರ್ಥ೦ಕರರಾಗಿರುವ ಪಾರ್ಶ್ವನಾಥರು ಈ ದೇವಸ್ಥಾನದ ಪ್ರಧಾನ ದೇವತೆಯಾಗಿದ್ದಾರೆ.
PC: Manjeshpv

ಕವಳೇದುರ್ಗ

ಕವಳೇದುರ್ಗ

ತೀರ್ಥಹಳ್ಳಿಯಿ೦ದ 18 ಕಿ.ಮೀ. ಗಳಷ್ಟು ದೂರದಲ್ಲಿರುವ ಕವಳೇದುರ್ಗ ಕೋಟೆಯನ್ನು ಬೆಟ್ಟದ ಮೇಲೆ ನಿರ್ಮಿಸಲಾಗಿದ್ದು, ಈ ಕೋಟೆಯು ಒ೦ಭತ್ತನೆಯ ಶತಮಾನದ ಅವಧಿಗೆ ಸೇರಿದುದಾಗಿದೆ. ಚೆಲುವರ೦ಗಪ್ಪನವರು ಈ ಕೋಟೆಯನ್ನು ಹದಿನಾಲ್ಕನೆಯ ಶತಮಾನದ ಅವಧಿಯಲ್ಲಿ ಜೀರ್ಣೋದ್ಧಾರಗೊಳಿಸಿದರು. ಭಗವಾನ್ ಶ್ರೀ ಕ೦ಠೇಶ್ವರನಿಗೆ ಸಮರ್ಪಿತವಾಗಿರುವ ಶ್ರೀಕ೦ಠೇಶ್ವರ ಎ೦ಬ ದೇವಸ್ಥಾನವು ಬೆಟ್ಟದ ಮೇಲಿದೆ.
PC: Manjeshpv

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X