• Follow NativePlanet
Share
Menu
» »ಈ ಚಳಿಗಾಲದಲ್ಲಿ ಕಾಶ್ಮೀರದ ದ ವ್ಯಾಲಿ ವೀಕೆ೦ಡ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿರಿ

ಈ ಚಳಿಗಾಲದಲ್ಲಿ ಕಾಶ್ಮೀರದ ದ ವ್ಯಾಲಿ ವೀಕೆ೦ಡ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿರಿ

Posted By: Gururaja Achar

ಎಲ್ಲಾ ಚಳಿಗಾಲ ಪ್ರಿಯರಿಗಾಗಿ ಇದೋ ಇಲ್ಲಿವೆ ಒ೦ದಷ್ಟು ರೋಚಕ ಸ೦ಗತಿಗಳು! ವಿಶೇಷವಾಗಿ ಚಳಿಗಾಲದ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮವನ್ನು ಉತ್ತೇಜಿಸುವುದಕ್ಕಾಗಿ, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪ್ರವಾಸೋದ್ಯಮ ಇಲಾಖೆಯು ವ್ಯಾಲಿ ವೀಕೆ೦ಡ್ ಎ೦ದು ಕರೆಯಲ್ಪಡುವ ಒ೦ದು ವಿನೂತನ ಅಭಿಯಾನವನ್ನು ಆಯೋಜಿಸುತ್ತಿದೆ.

ಚಳಿಗಾಲವಿಡೀ ಜರುಗುವ ಕ್ರೀಡೆಗಳು ಮತ್ತು ಮನೋರ೦ಜನಾ ಚಟುವಟಿಕೆಗಳನ್ನು ವ್ಯಾಲಿ ವೀಕೆ೦ಡ್ ಒಳಗೊ೦ಡಿರುತ್ತದೆ; ಮೀನುಗಾರಿಕೆ, ಸೈಕ್ಲಿ೦ಗ್, ಮ್ಯಾರಥಾನ್ ಗಳು, ಸ್ನೋಶೂ ರನ್ನಿ೦ಗ್ ನ೦ತಹ ಕ್ರೀಡಾಸ್ಪರ್ಧೆಗಳನ್ನು ಒಳಗೊ೦ಡಿರುತ್ತದೆ, ಹಾಗೂ ಜೊತೆಗೆ ಜಮ್ಮು ಮತ್ತು ಕಾಶ್ಮೀರದ ಜಾನಪದ ಸ೦ಗೀತ, ರ೦ಗ ಚಟುವಟಿಕೆಗಳು, ರಾಕ್ ಸ೦ಗೀತ ಕಛೇರಿಗಳ೦ತಹ ಇನ್ನಿತರ ಚಟುವಟಿಕೆಗಳೂ ಇದೇ ವೇಳೆಗೆ ಆಯೋಜನೆಗೊಳ್ಳುತ್ತವೆ.

ಈ ಮೇಲಿನ ಚಟುವಟಿಕೆಗಳಿಗೆ ಮತ್ತೊ೦ದು ಸೇರ್ಪಡೆಯೆ೦ದರೆ ಅದು ಜಮ್ಮು ಮತ್ತು ಕಾಶ್ಮೀರದ ಪಾರ೦ಪರಿಕ ಫ಼ುಡ್ ಟ್ರಕ್ಸ್ ಮತ್ತು ಕಾರ್ಟ್ ಗಳಾಗಿವೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೈಗೊಳ್ಳಲಾಗಿರುವ ಈ ಪ್ರಯತ್ನವು ಜಗತ್ತಿನಾದ್ಯ೦ತ ಬಹಳಷ್ಟು ಧನಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೊ೦ಡಿದೆ. ದ ವ್ಯಾಲಿ ವೀಕೆ೦ಡ್ ಅಭಿಯಾನವು ಈ ವಾರಾ೦ತ್ಯದಲ್ಲಿ ಆರ೦ಭಗೊಳ್ಳುವ ನಿರೀಕ್ಷೆಯಿದ್ದು, ಚಳಿಗಾಲದ ಅ೦ತ್ಯದವರೆಗೂ ಇದು ಮು೦ದುವರೆಯುತ್ತದೆ.

                                             PC: Unknown

ಪಹಲ್ಘಾಮ್, ಪ್ರವಾಸಿಗರ ಪಾಲಿಗೆ ಬಹುತೇಕ ಬೇಸಿಗೆಯ ಪ್ರವಾಸೀ ತಾಣವಷ್ಟೇ ಆಗಿರುವುದರಿ೦ದ, ಕೇವಲ ಹಿಮರಾಶಿಯಲ್ಲಿ ಸ್ಕೈಯಿ೦ಗ್ ಗಾಗಿ ಮಾತ್ರವಲ್ಲದೇ ಅದಕ್ಕೂ ಮೀರಿ ಪಹಲ್ಘಾಮ್ ಅನ್ನು ಚಳಿಗಾಲದ ಪ್ರವಾಸೀ ತಾಣವನ್ನಾಗಿಯೂ ಪರಿವರ್ತಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯು ಪಣತೊಟ್ಟಿದೆ (ಕಾಶ್ಮೀರ ಆಧಾರಿತ ವಾರ್ತಾ ಲೇಖನವೊ೦ದರ ಪ್ರಕಾರ).

ಹೃನ್ಮನಗಳನ್ನು ಸೆಳೆಯುವ ಭಾರತದ ಈ ರಾಜ್ಯವನ್ನು ಸ೦ದರ್ಶಿಸುವುದಷ್ಟೇ ಅಲ್ಲದೇ ಬೇರಿನ್ನೇನು ಮಾಡಬಹುದೆ೦ದು ನೀವು ತಲೆ ತುರಿಸಿಕೊಳ್ಳುತ್ತಿದ್ದಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ನೀವು ತೊಡಗಿಸಿಕೊಳ್ಳಬಹುದಾದ ಕೆಲವು ವಿನೋದಾತ್ಮಕ ಚಟುವಟಿಕೆಗಳ ಪರಿಚಯವನ್ನು ನಾವಿಲ್ಲಿ ನಿಮಗಾಗಿ ಮಾಡಿಕೊಡುತ್ತಿದ್ದೇವೆ.ದಾಲ್ ಸರೋವರದಲ್ಲಿ ಶಿಖಾರಾದಲ್ಲೊ೦ದು ಸವಾರಿಯನ್ನು ಕೈಗೊಳ್ಳಿರಿ

ಹೊಳೆಹೊಳೆಯುವ ಶ್ರೀನಗರದ ದಾಲ್ ಸರೋವರದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ? ದಾಲ್ ಸರೋವರವು ಅತ್ಯ೦ತ ಪ್ರಸಿದ್ಧವಾದ ಪ್ರವಾಸೀ ತಾಣವಾಗಿದ್ದು, ಶಿಖಾರಾ ಎ೦ದು ಕರೆಯಲ್ಪಡುವ ವಿಶೇಷ ತೆರನಾದ ನೀರ ಮೇಲಿನ ಸವಾರಿಯನ್ನು ಕೈಗೊಳ್ಳುವುದು ದಾಲ್ ಸರೋವರದಲ್ಲೇ. ಮೈಮನಗಳನ್ನು ರೋಮಾ೦ಚನಗೊಳಿಸುವ ದಾಲ್ ಸರೋವರದ ಮೇಲೆ ಶಿಖಾರಾದಲ್ಲೊ೦ದು ಸವಾರಿಯನ್ನು ಕೈಗೊಳ್ಳಿರಿ ಹಾಗೂ ತನ್ಮೂಲಕ ನಗರವನ್ನು ಸುತ್ತುವರೆದಿರುವ ಘನವೆತ್ತ ಹಿಮಾಚ್ಛಾಧಿತ ಪರ್ವತಗಳ ಸೊಬಗನ್ನು ಕಣ್ತು೦ಬಿಕೊಳ್ಳುತ್ತಾ ಇಹಲೋಕವನ್ನೇ ಮರೆತುಬಿಡಿರಿ.

                                                        PC: Basharat Shah

ಮು೦ಜಾನೆ ಸರಿಸುಮಾರು 4.30 ಹಾಗೂ 5.30 ರ ನಡುವೆ ಜೀವ೦ತಿಕೆಯನ್ನು ಪಡೆಯುವ, ಹೂವುಗಳು ಮತ್ತು ತರಕಾರಿಗಳ ತೇಲು ಮಾರುಕಟ್ಟೆಯನ್ನೂ ಸಹ ನೀವು ದಾಲ್ ಸರೋವರದಲ್ಲಿ ಕಣ್ತು೦ಬಿಕೊಳ್ಳಬಹುದು. ಶಿಖಾರಾದಲ್ಲೊ೦ದು ಸವಾರಿಯನ್ನು ಕೈಗೊಳ್ಳುವ ಹೊರತಾಗಿಯೂ, ನೀವು ದೋಣಿಮನೆಯೊ೦ದನ್ನು ಬಾಡಿಗೆಗೆ ಪಡೆದು ಸು೦ದರವಾದ ದಾಲ್ ಸರೋವರದಲ್ಲಿಯೇ ಕೆಲವು ದಿನಗಳ ಕಾಲ ಐಷಾರಾಮೀ ವಾಸ್ತವ್ಯವನ್ನೂ ಹೂಡಬಹುದು.

ಅ೦ತ್ಯವೇ ಇಲ್ಲದಷ್ಟು ಸಾಹಸ ಚಟುವಟಿಕೆಗಳು!

ಜಮ್ಮು ಮತ್ತು ಕಾಶ್ಮೀರದಲ್ಲಿ ಅತ್ಯ೦ತ ಶೋಭಾಯಮಾನವಾದ ಭೂಪ್ರದೇಶಗಳಿದ್ದು, ಇವು ಎಲ್ಲಾ ಬಗೆಯ ಸಾಹಸೋತ್ಸಾಹಿಗಳಿಗೂ ಹೇಳಿಮಾಡಿಸಿದ೦ತಹ ಅಗಣಿತ ಸಾಹಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಭೂಮಿಕೆಯನ್ನು ಒದಗಿಸುತ್ತವೆ.

ಪಹಲ್ಘಾಮ್ ನ ಲಿಡ್ಡೆರ್ ನದಿಯು ವೈಟ್-ವಾಟರ್ ರಿವರ್ ರಾಫ಼್ಟಿ೦ಗ್ ಗೆ ಹೇಳಿಮಾಡಿಸಿದ್ದಾಗಿದೆ. ಅದೇ ವೇಳೆಗೆ, ಹಿಮಾಚ್ಛಾಧಿತ ಇಳಿಜಾರುಗಳುಳ್ಳ ಗುಲ್ಮಾರ್ಗ್ ನ ಬೆಟ್ಟಗಳು ಸ್ಕೈಯಿ೦ಗ್ ಚಟುವಟಿಕೆಯನ್ನು ಕೈಗೊಳ್ಳುವುದಕ್ಕೆ ಆದರ್ಶಪ್ರಾಯವಾಗಿವೆ. ಪರ್ವತಗಳಲ್ಲಿನ ಬೈಕ್ ಸವಾರಿ, ಚಾರಣ, ಪರ್ವತಾರೋಹಣದ೦ತಹ ನೀವು ಹೆಸರಿಸಬಹುದಾದ ಯಾವುದೇ ಸಾಹಸಭರಿತ ಚಟುವಟಿಕೆಯನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಲಡಾಖ್ ಒ೦ದು ಸುಪ್ರಸಿದ್ಧವಾದ ಸಾಹಸ ಚಟುವಟಿಕೆಗಳ ಆಕರ ಸ್ಥಳವಾಗಿದೆ!

                                                    PC: Kamaljith K V

ಸಾಟಿಯಿಲ್ಲದ ಕಾಶ್ಮೀರೀ ತಿನಿಸುಗಳನ್ನು ಮನಸೋಯಿಚ್ಚೆ ಸವಿಯಿರಿ

ಪ್ರತಿಯೊ೦ದು ರಾಜ್ಯವೂ ಕೂಡಾ ತನ್ನದೇ ಆದ ವಿಶಿಷ್ಟವಾಗಿರುವ ಹಾಗೂ ಸಾಟಿಯಿಲ್ಲದ ಪಾಕವೈವಿಧ್ಯವನ್ನು ಹೊ೦ದಿದ್ದು, ವಿಶೇಷವಾಗಿ ನೀವು ತಿ೦ಡಿಪೋತರಾಗಿದ್ದರ೦ತೂ, ಖ೦ಡಿತವಾಗಿಯೂ ಇವುಗಳನ್ನು ತಪ್ಪದೇ ಸವಿಯಲೇಬೇಕು. ಕಾಶ್ಮೀರೀ ನಳಪಾಕದಲ್ಲಿ ನೀವು ಸವಿಯಲೇಬೇಕಾದ ಕೆಲವು ಅತ್ಯ೦ತ ಜನಪ್ರಿಯವಾದ ತಿನಿಸುಗಳು ಯಾವುವೆ೦ದರೆ ಅವು; ಪನೀರ್ ಚಮನ್, ಕಾಶ್ಮೀರೀ ಮಟನ್ ಯಾಕ್ನಿ, ,ಮತ್ತು ಮಟ್ಶ್ಹ೦ಧ್ ಗಳಾಗಿದ್ದು ಜೊತೆಗೆ ಕಾಶ್ಮೀರೀ ಕಾಹ್ವಾ (ಚಹಾ) ವನ್ನೂ ಸವಿಯಲೇಬೇಕು.

ಸು೦ದರವಾದ ಬೌದ್ಧ ಸನ್ಯಾಸಾಶ್ರಮಗಳನ್ನು ಸ೦ದರ್ಶಿಸಿರಿ

ಜಮ್ಮು ಮತ್ತು ಕಾಶ್ಮೀರವು ಭಾರತ ದೇಶದ ಅತ್ಯ೦ತ ಪ್ರಮುಖವಾದ ಹಾಗೂ ಅತೀ ಸು೦ದರವಾಗಿರುವ ಕೆಲವು ಬೌದ್ಧ ಸನ್ಯಾಸಾಶ್ರಮಗಳ ತವರೂರಾಗಿದೆ. ಈ ಸನ್ಯಾಸಾಶ್ರಮಗಳಲ್ಲಿ ಭಗವಾನ್ ಬುದ್ಧನ ಜೀವನಕ್ಕೆ ಸ೦ಬ೦ಧಿಸಿದ ಅತೀ ಸೊಗಸಾದ ಕೆತ್ತನೆಯ ಕೆಲಸಗಳು ಸವಿಸ್ತಾರವಾಗಿ ಕ೦ಡುಬರುತ್ತವೆ. ಅ೦ತಹ ಕೆತ್ತನೆಯ ಕೆಲಸಗಳು ಈ ಆಶ್ರಮಗಳ ಗೋಡೆಗಳ ಮೇಲೆ ಅಥವಾ ಥ೦ಕಾಗಳ ರೂಪದಲ್ಲಿ, ಇಲ್ಲವೇ ರೇಷ್ಮೆ, ಹತ್ತಿ, ಅಥವಾ ಅ೦ತಹದ್ದೇ ಇತರ ಬಟ್ಟೆಗಳ ಮೇಲೆ ಬುದ್ಧನ ಚಿತ್ರಕಲೆಗಳ ರೂಪದಲ್ಲಿರುತ್ತವೆ.

ಕಾಶ್ಮೀರದಲ್ಲಿ ನೀವು ಸ೦ದರ್ಶಿಸಬಹುದಾದ ಅ೦ತಹ ಕೆಲವು ಸು೦ದರ ಸನ್ಯಾಸಾಶ್ರಮಗಳು ಬಾಸ್ಗೋ ಸನ್ಯಾಸಾಶ್ರಮ, ಡಿಸ್ಕಿಟ್ ಸನ್ಯಾಸಾಶ್ರಮ, ಹೆಮಿಸ್ ಸನ್ಯಾಸಾಶ್ರಮ, ಅಲ್ಚಿ ಸನ್ಯಾಸಾಶ್ರಮಗಳಾಗಿವೆ.

                                                PC: Madhav Pai

ತಾಣವೀಕ್ಷಣೆ

ನಮಗೆಲ್ಲಾ ತಿಳಿದಿರುವ೦ತೆ ಜಮ್ಮು ಮತ್ತು ಕಾಶ್ಮೀರವು ಒ೦ದು ಅದ್ವಿತೀಯ ರಾಜ್ಯವೇ ಆಗಿದ್ದು, ಈ ರಾಜ್ಯದಲ್ಲಿ ಪರಿಶೋಧಿಸಲ್ಪಡುವ೦ತಹವು ಬಹಳಷ್ಟಿವೆ. ಕಾಶ್ಮೀರಕ್ಕೊ೦ದು ಎರಡರಿ೦ದ ಮೂರು ವಾರಗಳ ಅವಧಿಯ ಪ್ರವಾಸವನ್ನು ಆಯೋಜಿಸಿರಿ ಹಾಗೂ ಶ್ರೀನಗರ, ಲಡಾಖ್, ಗುಲ್ಮಾರ್ಗ್, ಉಧಮ್ಪುರ್, ಸೋನ್ಮಾರ್ಗ್ ಗಳ೦ತಹ ಸ್ಥಳಗಳನ್ನು ಸ೦ದರ್ಶಿಸಿರಿ. ಇಲ್ಲೊ೦ದು ಹಿಮಕದನವನ್ನು ಕೈಗೊಳ್ಳಿರಿ, ಕಾಶ್ಮೀರದ ಕಣಿವೆಗಳ ಮೂಲಕ ಮೋಜಿನ ಕುದುರೆ ಸವಾರಿಯನ್ನು ಕೈಗೊಳ್ಳಿರಿ, ಹಾಗೂ ಜೊತೆಗೆ ರಾಜ್ಯದ ಪ್ರಶಾ೦ತ ಸೌ೦ದರ್ಯದಲ್ಲಿ ಮನಸೋಯಿಚ್ಚೆ ತೇಲಾಡಿರಿ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ