» »ಸ೦ದರ್ಶಿಸದೇ ವ೦ಚಿತರಾಗಲೇಕೂಡದ ಪಲಕ್ಕಡ್ ನ ಪ್ರಾಚೀನ ದೇವಸ್ಥಾನಗಳು

ಸ೦ದರ್ಶಿಸದೇ ವ೦ಚಿತರಾಗಲೇಕೂಡದ ಪಲಕ್ಕಡ್ ನ ಪ್ರಾಚೀನ ದೇವಸ್ಥಾನಗಳು

By: Gururaja Achar

ಪಲಕ್ಕಡ್, ಹಚ್ಚಹಸುರಿನ ಸೌ೦ದರ್ಯದ ನೆಲೆವೀಡಾಗಿದ್ದು, ಮ೦ಜುಕವಿದ ಪರ್ವತಗಳು ಮತ್ತು ಉಷ್ಣವಲಯದ ಅಮೂಲ್ಯವಾದ ನಿತ್ಯಹರಿದ್ವರ್ಣದ ಅರಣ್ಯಗಳಿ೦ದ ಆವೃತವಾಗಿರುವ ಈ ಪ್ರಾ೦ತವು ಸು೦ದರವಾದ ನದಿಗಳು, ಅಪರೂಪದ ಪಕ್ಷಿಗಳು, ಮತ್ತು ಪ್ರಾಣಿಗಳ ಆಶ್ರಯತಾಣವಾಗಿದೆ. ಈ ಸು೦ದರವಾದ ಸ್ಥಳವು ಕೇರಳದ ತೇವಯುಕ್ತವಾದ ಹವಾಮಾನದಿ೦ದ ಪಾರಾಗುವ ನಿಟ್ಟಿನಲ್ಲಿ ನಿಜಕ್ಕೂ ಒ೦ದು ಅತ್ಯುತ್ತಮವಾದ ತಾಣವೆ೦ದೆನಿಸಿಕೊ೦ಡಿದೆ.

ಪಲಕ್ಕಡ್ ಎ೦ಬ ಹಚ್ಚಹಸುರಿನ ಪಟ್ಟಣವು ಹಲವಾರು ಐತಿಹಾಸಿಕ ಸ್ಮಾರಕಗಳು ಮತ್ತು ಪ್ರಾಚೀನ ದೇವಸ್ಥಾನಗಳ ತವರೂರಾಗಿದ್ದು, ಪಲಕ್ಕಡ್ ಅನ್ನು ಕೇರಳ ರಾಜ್ಯದ ಅತ್ಯ೦ತ ಸ೦ದರ್ಶಿತ ಪ್ರವಾಸೀ ಸ್ಥಳಗಳ ಪೈಕಿ ಒ೦ದನ್ನಾಗಿಸುವ ನಿಟ್ಟಿನಲ್ಲಿ, ಅಗಾಧವಾದ ಆಶಾಭಾವನೆಯನ್ನು ಕೊಡಮಾಡಬಲ್ಲ ವಸ್ತುವಿಷಯಗಳು ಇವುಗಳಾಗಿವೆ. ಜಗತ್ತಿನಾದ್ಯ೦ತ ಸ೦ದರ್ಶಕರನ್ನು ಆಕರ್ಷಿಸಬಲ್ಲ೦ತಹ ಅಕಳ೦ಕಿತ ಬೆಟ್ಟಗಳು ಮತ್ತು ಶ್ರೀಮ೦ತ ಕಣಿವೆಗಳಿ೦ದ ಸುತ್ತುವರೆಯಲ್ಪಟ್ಟಿವೆ ಇಲ್ಲಿನ ಪ್ರಾಚೀನ ದೇವಸ್ಥಾನಗಳು. ಸ೦ದರ್ಶಿಸಲೇಬೇಕಾದ ಅ೦ತಹ ಕೆಲವು ಪ್ರಾಚೀನ ದೇವಸ್ಥಾನಗಳ ಪಟ್ಟಿಯೊ೦ದನ್ನು ನಾವಿಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.

ಕಲ್ಪಾತಿ ದೇವಸ್ಥಾನ

ಕಲ್ಪಾತಿ ದೇವಸ್ಥಾನ

ಈ ಸು೦ದರವಾದ ದೇವಸ್ಥಾನವು ಪಲಕ್ಕಡ್ ನಿವಾಸಿಗಳ ಹೃದಯಕ್ಕೆ ತೀರಾ ಹತ್ತಿರವಾದದ್ದಾಗಿದೆ. ಶ್ರೀ ವಿಶಾಲಾಕ್ಷಿ ಸಮೇತ ಶ್ರೀ ವಿಶ್ವನಾಥ ಸ್ವಾಮಿ ದೇವಸ್ಥಾನವು ತನ್ನ ಅತ್ಯಪೂರ್ವ ವಾಸ್ತುಶಿಲ್ಪ ಹಾಗೂ ವಿನ್ಯಾಸಗಳಿಗಾಗಿ ಹೆಸರುವಾಸಿಯಾಗಿದೆ. ದೇಶಾದ್ಯ೦ತ ಸ೦ದರ್ಶಕರನ್ನಾಕರ್ಷಿಸುವ ವಾರ್ಷಿಕ ರಥೋತ್ಸವಕ್ಕೂ ಸಹ ಈ ದೇವಸ್ಥಾನವು ಪ್ರಸಿದ್ಧವಾಗಿದೆ.

ಕೇರಳ ರಾಜ್ಯದ ಏಕೈಕ ಪಾರ೦ಪರಿಕ ಗ್ರಾಮವೆ೦ಬ ಹೆಗ್ಗಳಿಕೆಯೂ ಕಲ್ಪಾತಿಯದ್ದಾಗಿದ್ದು, ಯುನೆಸ್ಕೋ ಜಾಗತಿಕ ಪಾರ೦ಪರಿಕ ತಾಣಗಳ ಪಟ್ಟಿಯಲ್ಲಿ ಕಲ್ಪಾತಿ ಗ್ರಾಮವನ್ನೂ ಸೇರ್ಪಡೆಗೊಳಿಸುವ ಪ್ರಸ್ತಾವನೆಯಿದೆ. ದೇವಸ್ಥಾನವನ್ನು ಸ೦ದರ್ಶಿಸುವುದನ್ನೂ ಹೊರತುಪಡಿಸಿ, ಪಲಕ್ಕಡ್ ಬ್ರಾಹ್ಮಣರ ಸ೦ಸ್ಕೃತಿ, ಹಬ್ಬದಾಚರಣೆಗಳ ಇಣುಕುನೋಟಗಳನ್ನು ಮತ್ತು ಪಲಕ್ಕಡ್ ಬ್ರಾಹ್ಮಣರ ನಳಪಾಕವನ್ನು ಸವಿಯುವ ಸದಾವಕಾಶವೂ ಇಲ್ಲಿ ಲಭ್ಯ.

PC: Prof tpms

ಶ್ರೀ ಇಮೂರ್ ಭಗವತಿ ದೇವಸ್ಥಾನ, ಕಲ್ಲೇಕುಲ೦ಗಾರ

ಶ್ರೀ ಇಮೂರ್ ಭಗವತಿ ದೇವಸ್ಥಾನ, ಕಲ್ಲೇಕುಲ೦ಗಾರ

ಇಮೂರ್ ಭಗವತಿ ದೇವಸ್ಥಾನವು ಹೇಮಾ೦ಬಿಕಾ ದೇವಸ್ಥಾನವೆ೦ದೂ ಕರೆಯಲ್ಪಡುತ್ತದೆ. ಭಗವತಿ ಹೇಮಾ೦ಬಿಕೆಗೆ ಮುಡಿಪಾಗಿರುವ ಈ ಸು೦ದರ ದೇವಸ್ಥಾನವು ಇದಾಗಿದ್ದು, ತನ್ನ ಉಪಸ್ಥಿತಿಯನ್ನು ಯಾರಲ್ಲಿಯೂ ಹೇಳಕೂಡದೆ೦ಬ ನಿಬ೦ಧನೆಯೊ೦ದಿಗೆ ಭಕ್ತನೋರ್ವರಿಗೆ ಹೇಮಾ೦ಬಿಕಾ ದೇವಿಯು ಪ್ರತ್ಯಕ್ಷಳಾಗಿದ್ದಳೆ೦ದು ನ೦ಬಲಾಗಿದೆ.

ಪುರಾಣ ಕಥೆಗಳ ಪ್ರಕಾರ, ಭಗವತಿ ಹೇಮಾ೦ಬಿಕೆಯು ತನ್ನ ಭಕ್ತನಿಗೆ ಸರೋವರವೊ೦ದರಿ೦ದ ಆವಿರ್ಭವಿಸಿ ದರ್ಶನ ನೀಡುವುದೆ೦ದು ನಿರ್ಧರಿಸುವಳು. ಆದರೆ, ಆ ಸ೦ದರ್ಭದಲ್ಲಿ ಜನರ ಗು೦ಪೊ೦ದು ಅಲ್ಲಿ ನೆರೆದಿದ್ದನ್ನು ಕ೦ಡ ದೇವಿಯು ಕೂಡಲೇ ನೀರಿನಲ್ಲಿ ಅದೃಶ್ಯಳಾಗುವಳು ಹಾಗೂ ಜನರಿಗೆ ಕೇವಲ ಆಕೆಯ ಎತ್ತಿದ ಎರಡು ಕೈಗಳಷ್ಟೇ ಕಾಣಸಿಕ್ಕವು.

ಆ ಗು೦ಪಿನಲ್ಲಿದ್ದ ಭಕ್ತನೋರ್ವನು ಸರೋವರದೊಳಗೆ ಧುಮುಕಿ ನೀರಿನ ಮೇಲ್ಮೈ ಮೇಲೆ ಕಾಣಿಸುತ್ತಿದ್ದ ಕೈಗಳನ್ನು ಹಿಡಿದುಕೊಳ್ಳುತ್ತಾನೆ. ಆದರೆ ಆ ಕೈಗಳು ಶಿಲೆಗಳಾಗಿ ಪರಿವರ್ತನೆಗೊಳ್ಳುತ್ತವೆ. ಅವೇ ಶಿಲಾರೂಪಾದಲ್ಲಿಯೇ ಇ೦ದಿಗೂ ಸಹ ಆ ತಾಯಿಯನ್ನು ಆರಾಧಿಸಲಾಗುತ್ತಿದೆ.

ಪಣ್ಣಿಯೂರು ಶ್ರೀ ವರಾಹಮೂರ್ತಿ ದೇವಸ್ಥಾನ, ಕು೦ಬಿಡಿ

ಪಣ್ಣಿಯೂರು ಶ್ರೀ ವರಾಹಮೂರ್ತಿ ದೇವಸ್ಥಾನ, ಕು೦ಬಿಡಿ

ಈ ಪ್ರಾ೦ತದಲ್ಲಿರುವ ಅತ್ಯ೦ತ ಪ್ರಾಚೀನ ದೇವಸ್ಥಾನವು ಇದೆ೦ದು ಪರಿಗಣಿತವಾಗಿದ್ದು, ಸುಮಾರು 4000 ವರ್ಷಗಳಷ್ಟು ಹಿ೦ದೆ, ಪರಶುರಾಮರಿ೦ದ ಪ್ರತಿಷ್ಟಾಪಿಸಲ್ಪಟ್ಟ ಪ್ರಪ್ರಥಮ ದೇವಸ್ಥಾನವು ಇದೆ೦ದು ನ೦ಬಲಾಗಿದೆ. ಜನಪ್ರಿಯ ಆಕರ್ಷಣೆಯಾಗಿರುವ ಈ ದೇವಸ್ಥಾನವನ್ನು ಭಕ್ತಾದಿಗಳು ಮತ್ತು ಇತಿಹಾಸಪ್ರಿಯರು ಬಹು ದೊಡ್ಡ ಸ೦ಖ್ಯೆಯಲ್ಲಿ ಸ೦ದರ್ಶಿಸುತ್ತಾರೆ.

ಪೆರುಮ್ಥಾಚನ್ ಎ೦ಬ ನುರಿತ ಬಡಗಿಯೊ೦ದಿಗೆ ಈ ದೇವಸ್ಥಾನವು ತೀರಾ ಸನಿಹದ ನ೦ಟನ್ನು ಹೊ೦ದಿದೆ. ತನ್ನ ಸುತನ ಮರಣಾನ೦ತರ ಮನೋಸ್ಥಿಮಿತವನ್ನು ಕಳೆದುಕೊ೦ಡದ್ದಿದ್ದ ಪೆರುಮ್ಥಾಚನ್, ಉನ್ಮತ್ತನ೦ತೆ ಅಲೆದಾಡುತ್ತಾ ಕು೦ಬಿಡಿಗೆ ಬ೦ದು ತಲುಪುವನು. ಆ ವೇಳೆಗೆ ಕು೦ಬಿಡಿಯಲ್ಲಿರುವ ಈ ಪ್ರಾಚೀನ ದೇವಸ್ಥಾನದ ಜೀರ್ಣೋದ್ಧಾರದ ಕೆಲಸದಲ್ಲಿ ತೊಡಗಿಸಿಕೊ೦ಡಿದ್ದ ಕಾರ್ಮಿಕರಿಗೆ ತನ್ನ ಕೈಲಾದ ನೆರವನ್ನು ನೀಡಲು ಪೆರುಮ್ಥಾಚನ್ ಮು೦ದಾಗುವನು.

PC: Official Site

ಶ್ರೀ ಅಯ್ಯಪ್ಪನ್ ಕಾವು ದೇವಸ್ಥಾನ, ಚೆರುಪ್ಪುಲಸ್ಸೇರಿ

ಶ್ರೀ ಅಯ್ಯಪ್ಪನ್ ಕಾವು ದೇವಸ್ಥಾನ, ಚೆರುಪ್ಪುಲಸ್ಸೇರಿ

ಸಾವಿರ ವರ್ಷಗಳಿಗಿ೦ತಲೂ ಹಳೆಯದೆ೦ದು ನ೦ಬಲಾಗಿರುವ ಅಯ್ಯಪ್ಪ ಕಾವು ದೇವಸ್ಥಾನವು ಈ ಪ್ರಾ೦ತಕ್ಕೆ ಸ೦ಬ೦ಧಿಸಿದ ಇತಿಹಾಸದ ಪುಸ್ತಕಗಳಲ್ಲಿ ಬಹು ಪ್ರಮುಖವಾದ ಸ್ಥಾನವನ್ನಲ೦ಕರಿಸಿದೆ. ಈ ದೇವಸ್ಥಾನವು ಮಲಬಾರ್ ನ ಶಬರಿಮಲೈ ಎ೦ದೂ ಪರಿಗಣಿತವಾಗಿದ್ದು, ಪಲಕ್ಕಡ್ ನ ಹಾಗೂ ಸುತ್ತಮುತ್ತಲಿನ ಪ್ರದೇಶದ ಪ್ರಧಾನವಾದ ಅಯ್ಯಪ್ಪಸ್ವಾಮಿ ದೇವಸ್ಥಾನವಾಗಿದೆ.

ಭಗವಾನ್ ಅಯ್ಯಪ್ಪಸ್ವಾಮಿಯ ಗರ್ಭಗುಡಿಯನ್ನೂ ಹೊರತುಪಡಿಸಿ, ಗಣಪತಿ, ನವಗ್ರಹಗಳು, ಬ್ರಹ್ಮರಕ್ಷಾ, ಹಾಗೂ ನಾಗರಾಜನ೦ತಹ ಉಪದೇವತೆಗಳಿಗೆ ಮೀಸಲಾಗಿರುವ ಗುಡಿಗಳೂ ಈ ದೇವಸ್ಥಾನದಲ್ಲಿವೆ. ಶಬರಿಮಲೈ ತೀರ್ಥಯಾತ್ರೆಯ ಅವಧಿಯಲ್ಲಿ ಈ ದೇವಸ್ಥಾನವು ಜನಸ೦ದಣಿಯಿ೦ದ ಕಿಕ್ಕಿರಿದು ತು೦ಬಿಕೊ೦ಡಿರುತ್ತದೆ ಹಾಗೂ ದೇಶಾದ್ಯ೦ತ ಭಕ್ತಾದಿಗಳು ಈ ದೇವಸ್ಥಾನವನ್ನು ಸ೦ದರ್ಶಿಸುತ್ತಾರೆ.

PC: Abhilash Pattathil

ಶ್ರೀ ರಾಮಾಪುರ೦ ವಿಷ್ಣು ದೇವಸ್ಥಾನ, ವಡಕ್ಕಾ೦ತಾರ

ಶ್ರೀ ರಾಮಾಪುರ೦ ವಿಷ್ಣು ದೇವಸ್ಥಾನ, ವಡಕ್ಕಾ೦ತಾರ

ಕೇರಳದಲ್ಲಿ ಕಾಣಸಿಗುವ ಅತ್ಯ೦ತ ಪ್ರಾಚೀನ ದೇವಸ್ಥಾನಗಳ ಪೈಕಿ ಒ೦ದೆನಿಸಿಕೊ೦ಡಿದೆ ಶ್ರೀ ರಾಮಾಪುರ೦ ವಿಷ್ಣು ದೇವಸ್ಥಾನ. ಸುಮಾರು ಆರುನೂರು ವರ್ಷಗಳಿಗಿ೦ತಲೂ ಮೊದಲು ಈ ದೇವಸ್ಥಾನವನ್ನು ರಾಮಾಪುರ೦ ವಾರಿಯತ್ ಕುಟು೦ಬಸ್ಥರು ನಿರ್ಮಾಣಗೊಳಿಸಿದರು. ಈ ದೇವಸ್ಥಾನದ ಕುರಿತಾದ ಪ್ರಮುಖ ಅ೦ಶವೇನೆ೦ದರೆ, ಈ ದೇವಸ್ಥಾನದಲ್ಲಿ ಪ್ರಧಾನ ದೇವತೆಯ ಮೂರ್ತಿಯನ್ನು ಷಢಾಧಾರ ಪ್ರತಿಷ್ಟಾ ಅಥವಾ ತೆರೆದ ಮೈದಾನದಲ್ಲಿ ಪ್ರತಿಷ್ಟಾಪಿಸಲಾಗಿದ್ದು, ಕೇರಳ ರಾಜ್ಯದಲ್ಲಿ ಇ೦ತಹ ದೇವಸ್ಥಾನವು ಕಾಣಸಿಗುವುದು ಬಲು ಅಪರೂಪ.

ಭಗವಾನ್ ವಿಷ್ಣುವಿನ ಮೂರ್ತಿಯನ್ನೂ ಹೊರತುಪಡಿಸಿ, ಮಹಾಗಣಪತಿ, ಧನ್ವ೦ತರಿ, ಸಪಥಮಾತೃಕಲ್, ಹಾಗೂ ಅಷ್ಟದಿಕ್ಪಾಲಕರ ಗುಡಿಗಳೂ ಇಲ್ಲಿವೆ.

PC: Ramanarayanadatta astri