Search
  • Follow NativePlanet
Share
» »ಮಲೆನಾಡ ಮೈಸಿರಿಯಲ್ಲೊಂದು ಸುಂದರ ಪ್ರವಾಸ

ಮಲೆನಾಡ ಮೈಸಿರಿಯಲ್ಲೊಂದು ಸುಂದರ ಪ್ರವಾಸ

By Vijay

ಮಳೆಗಾಲದಿ ಗಿಡ ಮರಗಳ ಎಲೆಗಳ ಮೇಲೆ ಮುತ್ತಿನ ಹನಿಗಳ ಹೊಳಪು ನೋಡುವುದೆ ಒಂದು ಸುಂದರ ಅನುಭವ. ಅದರಲ್ಲೂ ದಟ್ಟನೆಯ ಗಿಡ ಮರಗಳಿಂದ ಕೂಡಿದ ಪ್ರಕೃತಿಯ ಸಹಜ ಸೌಂದರ್ಯವು ಥಳ ಥಳಿಸುವ ಪ್ರದೇಶಗಳಿಗೆ ತೆರಳಿದರೆ ಹೇಗೆ?

ಪೇಟಿಎಂ ಸೀಮಿತ ಅವಧಿಯ ಕೊಡುಗೆ : ರಿಚಾರ್ಜ್ ಮಾಡಿ, ಬಿಲ್ ಪಾವತಿಸಿ ಹಾಗೂ ಉಚಿತ ಉಬರ್ ಸವಾರಿ ಪಡೆಯಿರಿ

ಸಾಮಾನ್ಯವಾಗಿ ಪ್ರವಾಸಿಪ್ರಿಯರಿಗೆ ಸ್ಥಳಗಳ ಕುರಿತು ಮಾಹಿತಿ ತಿಳಿದೆ ಇರುತ್ತದೆ. ಆದರೂ ಕೆಲವೊಮ್ಮೆ ನಮಗೆ ಗೊತ್ತಿರುವ ಸ್ಥಳಗಳಿಂದ ಮತ್ತಿನೆಲ್ಲಿಗೊ ಒಂದು ಸುಂದರ ಮಾರ್ಗ ಗೊತ್ತಾದರೆ ಆಗುವ ಅನಂದ ಅಷ್ಟಿಷ್ಟಲ್ಲ. ಇಲ್ಲಿ ಹೇಳಲಾಗಿರುವ ಒಂದು ಮಾರ್ಗವು ಒಂದು ರೋಮಾಂಚಕ ಪ್ರವಾಸಿ ಅನುಭವ ನೀಡುವುದರಲ್ಲಿ ಸಂಶಯವೆ ಇಲ್ಲ.

ವಿಶೇಷ ಲೇಖನ : ತೀರ್ಥಹಳ್ಳಿಯ ಸಾರ್ಥಕ ಪ್ರವಾಸ

ಇಲ್ಲಿ ಹೇಳಲಾಗಿರುವ ಪ್ರವಾಸ ಮಾರ್ಗವು ಬಹುತೇಕರಿಗೆ ಗೊತ್ತಿರಲೂಬಹುದಾದರೂ ಹಲವರಿಗೆ ಖಂಡಿತವಾಗಿಯೂ ತಿಳಿದಿರಿಲಿಕ್ಕಿಲ್ಲ. ನಿಮಗೇನಾದರೂ ಮಲೆನಾಡಿನ ಅದ್ಭುತ ಮೈಸಿರಿಯನ್ನು ಅದರಲ್ಲೂ ವಿಶೇಷವಾಗಿ ಪಶ್ಚಿಮ ಘಟ್ಟಗಳ ವನಸಿರಿಯನ್ನು ಮಳೆಗಾಲದ ವೈಭವವನ್ನು ಸವಿಯಬೇಕೆಂದಿದ್ದರೆ ಈ ಪ್ರವಾಸವನ್ನೊಮ್ಮೆ ಮಾಡಿ.

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನ ಸುಂದರ ಪರಿಸರದಲಿ ನೆಲೆಸಿರುವ ಶಿವಮೊಗ್ಗವು ಸಾಕಷ್ಟು ವ್ವಿಸ್ಮಯಕರ ತಾಣಗಳ ತವರಾಗಿದೆ. ಈ ಪ್ರವಾಸದ ಮೊದಲ ಹಂತವಾಗಿ ಶಿವಮೂಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ತಲುಪಬೇಕು. ತೀರ್ಥಹಳ್ಳಿಯಿಂದ ಆಗುಂಬೆ, ಕವಳೆದುರ್ಗ ಹಾಗೂ ಕುಂದಾದ್ರಿಯ ಚಾರಣಯುಕ್ತ ಅದ್ಭುತ ಪ್ರವಾಸವನ್ನು ಮಾಡಬಹುದು. ಆಗುಂಬೆಯಲ್ಲಿರುವ ಮಳೆಗಾಡು ಸಂಶೋಧನಾ ಕೇಂದ್ರ.

ಚಿತ್ರಕೃಪೆ: Jeff Peterson

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಹೆಸರಿಗೆ ತಕ್ಕ ಹಾಗೆ ತೀರ್ಥ ರೂಪದ ತುಂಗಾ ನದಿಯ ತಟದಲ್ಲಿ ನೆಲೆಸಿರುವ ಸುಂದರ ಪಟ್ಟಣ. ಬೆಂಗಳೂರು, ಮಂಗಳೂರು ಸೇರಿದಂತೆ ದಕ್ಷಿಣದ ಕೆಲವು ಪ್ರಮುಖ ನಗರಗಳಿಂದ ತೀರ್ಥಹಳ್ಳಿಗೆ ತೆರಳಲು ಬಸ್ಸುಗಳು ಲಭ್ಯ. ಇನ್ನೂ ಉತ್ತರ ಭಾಗದಿಂದ ಬರುವ ಜನರು ಮೊದಲಿಗೆ ಶಿವಮೊಗ್ಗಕ್ಕೆ ಬಂದು ಅಲ್ಲಿಂದ 62 ಕಿ.ಮೀ ದೂರವಿರುವ ತೀರ್ಥಹಳ್ಳಿಗೆ ತಲುಪಬಹುದು. ತೀರ್ಥಹಳ್ಳಿಯು ಒಂದು ಸುಂದರ ಹಾಗೂ ಆಕರ್ಷಕ ಪ್ರವಾಸಿ ಸ್ಥಳವಾಗಿದೆ. ತುಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ತುಂಗಾ ಸೇತುವೆ ಪಟ್ಟಣದ ಪ್ರಮುಖ ಗುರುತಾಗಿದೆ.

ಚಿತ್ರಕೃಪೆ: Hari Prasad Nadig

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ತೀರ್ಥಹಳ್ಳಿಯ ಪ್ರಮುಖ ಗುರುತರವಾದ ದೇವಾಲಯ ರಾಮೇಶ್ವರ ದೇವಾಲಯ. ಇನ್ನೊಂದು ದಂತಕಥೆಯ ಪ್ರಕಾರ, ಒಮ್ಮೆ ರಾವಣನ ಸಂಬಂಧಿ ಮಾರೀಚ ಎಂಬ ಅಸುರ ರಾವಣನ ಆದೇಶದಂತೆ ಸೀತೆಯನ್ನು ಸಮ್ಮೋಹನಗೊಳಿಸಲು ಸುಂದರವಾದ ಜಿಂಕೆಯರೂಪದಲ್ಲಿ ಬರಲಾಗಿ ಅದನ್ನು ಕಂಡು ಸೀತೆಯು ಆ ಜಿಂಕೆಯು ತನಗೆ ಬೇಕೆಂಬ ಆಸೆಯನ್ನು ಪತಿ ಶ್ರೀರಾಮನಿಗೆ ವ್ಯಕ್ತಪಡಿಸಿದಳು. ಈ ರೀತಿಯಾಗಿ ಆ ಮಾಯಾ ಜಿಂಕೆಯ ಬೆನ್ನಟ್ಟಿದ ರಾಮನು ಕೊನೆಯದಾಗಿ ತನ್ನ ಬಾಣದಿಂದ ಅದನ್ನು ಸಂಹರಿಸಿದನು. ಒಟ್ಟಾರೆಯಾಗಿ ಈ ಪ್ರಸಂಗ ಜರುಗಿದ್ದು ಈ ಸ್ಥಳದಲ್ಲಿಯೆ ಎಂದು ಕೂಡ ಹೇಳಲಾಗುತ್ತದೆ. ಇದಕ್ಕೆ ಅನುರೂಪವೆಂಬಂತೆ ಮೃಗವಧೆ ಎಂಬ ತಾಣವನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Manjeshpv

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಹಿಂದೆ ಪರಶುರಾಮರು ತಮ್ಮ ಕೊಡಲಿಗೆ ಅಂಟಿದ್ದ ಒಂದು ಹನಿ ರಕ್ತದ ಕಲೆಯನ್ನು ಇಲ್ಲಿ ಹರಿದಿರುವ ತುಂಗಾ ನದಿಯಲ್ಲಿ ತೊಳೆದಾಗ ಮಾಯವಾದುದನ್ನು ಕಂಡು ಬೆರಗಾಗಿ ತೀರ್ಥ ಸ್ವರೂಪವೆಂದೆ ಈ ನದಿಯನ್ನು ಹರಸಿ ಇಲ್ಲಿ ಪೂಜೆ ಗೈದಿದ್ದರಿಂದ ಇದು ಧಾರ್ಮಿಕವಾಗಿಯೂ ಸಾಕಷ್ಟು ಪ್ರಖ್ಯಾತಿಗಳಿಸಿದೆ. ಹೀಗಾಗಿ ಗಂಗಾ ಸ್ನಾನಂ ತುಂಗಾ ಪಾನಂ ಎನ್ನುವಂತೆ ಈ ತೀರ್ಥಮಯ ನೀರನ್ನು ಒಮ್ಮೆ ಪ್ರೋಕ್ಷಿಸಿಕೊಂಡು ಸಿಹಿಯಾದ ಆ ನೀರನ್ನು ಸವೆಸಿ ನಿಮ್ಮ ಅದ್ಭುತ ಪ್ರವಾಸಕ್ಕೆ ಚಾಲನೆ ನೀಡಬಹುದು. ಚಿತ್ರದಲ್ಲಿ ಕಾಣುತ್ತಿರುವುದು ಪರಶುರಾಮರ ತಪಸ್ಸನ್ನಾಚರಿಸಿದ್ದರೆನ್ನಲಾದ ರಾಮ ಮಂಟಪ ಬಳಿಯಿರುವ ಶಿವಲಿಂಗ ಹಾಗೂ ನಂದಿ ವಿಗ್ರಹಗಳು.

ಚಿತ್ರಕೃಪೆ: Manjeshpv

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಕುವೆಂಪು ಎಂಬುದು ಯಾವ ಕನ್ನಡಿಗನೂ ಎಂದಿಗೂ ಮರೆಯಲಾರದ ಒಂದು ಅದ್ವಿತೀಯ ಹೆಸರು. ಕನ್ನಡಕ್ಕೆ ಪ್ರಪ್ರಥಮವಾಗಿ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ, ಕವಿ, ಬರಹಗಾರ, ಚಿಂತಕ, ನಾಟಕಕಾರರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರ ಕಾವ್ಯನಾಮವೆ ಕುವೆಂಪು. ಕುಪ್ಪಳಿ ಎಂಬ ಗ್ರಾಮದಲ್ಲಿ ಜನಿಸಿ ರಾಷ್ಟ್ರಕವಿಯಾಗಿ ಕನ್ನಡಕ್ಕೆ ಅದ್ಭುತವಾದ ಕೊಡುಗೆ ನೀಡಿ ಅದೆ ಗ್ರಾಮದಲ್ಲಿ ತಮ್ಮ ಕೊನೆಯುಸಿರೆಳೆದೆ ಕುವೆಂಪುರವರ ಗ್ರಾಮವಾದ ಕುಪ್ಪಳಿಯು ತೀರ್ಥಹಳ್ಳಿಯಿಂದ ಕೇವಲ 18 ಕಿ.ಮೀ ಗಳಷ್ಟು ಮಾತ್ರವೆ ದೂರದಲ್ಲಿದ್ದು ಕನ್ನಡ ಭಾಷಾಪ್ರೀಯರ, ಕುವೆಂಪು ಅವರ ನೆಚ್ಚಿನ ಅಭಿಮಾನಿಗಳಿಗೆ ಇದು ಆಕರ್ಷಕ ತಾಣವಾಗಿ ಹೊರಹೊಮ್ಮಿದೆ. ಕುವೆಂಪು ಅವರು ಜನಸಿದ್ದ ಪೂರ್ವಜರ ಮನೆ. ಇಂದು ಇದು ಕುವೆಂಪು ಪ್ರತಿಷ್ಠಾನದಿಂದ ಅದ್ಭುತ ಸಂಗ್ರಹಾಲಯವಾಗಿ ಮಾರ್ಪಟ್ಟಿದೆ. ಕುವೆಂಪು ಕುರಿತು ಅನೇಕ ವಿಷಯಗಳನ್ನು ಇಲ್ಲಿಗೆ ಭೇಟಿ ನೀಡಿದಾಗ ಪಡೆದುಕೊಳ್ಳಬಹುದು. ಇದನ್ನು ಕವಿಮನೆ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಚಿತ್ರಕೃಪೆ: Wikipedia

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಇಲ್ಲಿ ನೋಡಬಹುದಾದ ಮತ್ತೊಂದು ಆಸಕ್ತಿಕರ ಸ್ಥಳವೆಂದರೆ ಭಾರತದ "ಸ್ಟೋನ್ ಹೆಂಜ್". ಹೌದು, ಇಂಗ್ಲೆಂಡಿನಲ್ಲಿರುವ ಪ್ರಖ್ಯಾತ ಸ್ಟೋನ್ ಹೆಂಜ್ ನಂತೆಯೆ ಕುಪ್ಪಳಿಯಲ್ಲೂ ಸಹ ಒಂದು ರಚನೆಯಿದೆ. ಇಲ್ಲಿನ ಸುಂದರ ಬೆಟ್ಟವೊಂದರ ಮೇಲೆ ವರ್ತುಲದ ಆಕಾರದಲ್ಲಿ ಬಂಡೆಯ ಚಪ್ಪಡಿಗಳನ್ನು ಜೋಡಿಸಿಡಲಾಗಿದೆ. ಇದರ ಮಧ್ಯದಲ್ಲಿ ಕುವೆಂಪು ಅವರ ಸ್ಮಾರಕ ಸಮಾಧಿಯನ್ನು ಕಾಣಬಹುದು. ಅಷ್ಟೆ ಅಲ್ಲ ಅದರ ಪಕ್ಕದಲ್ಲಿಯೆ ಒಂದು ಕಲ್ಲಿನ ಬಂಡೆಯಿದ್ದು ಅದರ ಮೇಲೆಯೆ ಕುವೆಂಪುರವರು ತಮ್ಮ ಸಾಹಿತ್ಯ ಸ್ನೇಹಿತರೊಂದಿಗೆ ಕಲೆತು ಬೆರೆತು ಮಾತನಾಡುತ್ತಿದ್ದರು. ಈ ಸ್ಥಳವನ್ನು ಕವಿಶೈಲ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಚಿತ್ರಕೃಪೆ: HPNadig

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಕುಪ್ಪಳಿಯ ಪಶ್ಚಿಮಕ್ಕೆ ಸುಮಾರು 45 ಕಿ.ಮೀ ಗಳಷ್ಟು ದೂರವನ್ನು ಕೊಪ್ಪ ಹಾಗೂ ಹರಿಹರಪುರ, ನಂಟೂರು ಮೂಲಕ ಸಾಗಿ ಕುಂದಾದ್ರಿಯನ್ನು ತಲುಪಬಹುದು. ಕುಂದಾದ್ರಿಗೆ ಹೋಗಲು ಮಾರ್ಗ ಸೂಚಿಸುವ ಫಲಕ.

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಪುರಾತನ ಜೈನ ಬಸದಿಯಿರುವ ಕುಂದಾದ್ರಿಯು ಒಂದು ಅದ್ಭುತ ಬೆಟ್ಟ ಪ್ರದೇಶವಾಗಿದೆ. ಇಲ್ಲಿರುವ ಬೆಟ್ಟದಿಂದ ನಿಸರ್ಗದಲ್ಲಿ ಅಡಗಿ ಕುಳಿತಿರುವ ಅಪರಿಮಿತವಾದ ಸೌಂದರ್ಯವನ್ನು ಕಣ್ಣಾರೆ ನೋಡಿ ಆನಂದಿಸಬಹುದು.

ಚಿತ್ರಕೃಪೆ: Manjeshpv

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಕುಂದಾದ್ರಿಯಿಂದ ನಂಟೂರು ಮಾರ್ಗವಾಗಿ ಮತ್ತೆ ಹಿಂತಿರುಗಿ ಬಾಲೆಹಳ್ಳಿ (ಬಳೆಹಳ್ಳಿ) ಎಂಬಲ್ಲಿ ಬಲ ತಿರುವು ಪಡೆದು ಸುಮಾರು 19 ಕಿ.ಮೀ ಕ್ರಮಿಸಿ ಆಗುಂಬೆಗೆ ಪ್ರವೇಶಿಸಬೇಕು. ದ. ಭಾರತದ ಏಕೈಕ ಮಳೆಗಾಡು ಸಂಶೋಧನಾ ಕೇಂದ್ರ ಹೊಂದಿರುವ ಆಗುಂಬೆಯು ದಕ್ಷಿಣ ಭಾರತದಲ್ಲೆ ಅತಿ ಹೆಚ್ಚು ಮಳೆ ಪಡೆವ ಪ್ರದೇಶವಾಗಿದೆ. ಅಂತೆಯೆ ಇದು ವೈವಿಧ್ಯಮಯ ಕ್ರಿಮಿ ಕೀಟಗಳು ಹಾಗೂ ಕಿಂಗ್ ಕೋಬ್ರಾದಂತಹ ದೈತ್ಯ ವಿಷಕಾರಿ ಸರ್ಪಗಳ ಆವಾಸ ತಾಣವಾಗಿದೆ.

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಆಗುಂಬೆ ಪಟ್ಟಣದಿಂದ ಶೃಂಗೇರಿ ರಸ್ತೆಯ ಮೇಲೆ ಸಾಗುತ್ತ ಪ್ರದೇಶದಲ್ಲಿರುವ ಜೋಗಿ ಗುಂಡಿ ಜಲಪಾತ ಕೇಂದ್ರಕ್ಕೆ ಭೇಟಿ ನೀಡಿ. ಈ ಜಲಪಾತ ಕೇಂದ್ರವನ್ನು ರಸ್ತೆಯ ಮೂಲಕ ಸಾಗುವಾಗ ಅಲ್ಲಲ್ಲಿ ಕಂಡುಬರುವ ಮಾಹಿತಿ ಫಲಕ ಇಲ್ಲವೆ ಸ್ಥಳೀಯರೊಂದಿಗೆ ಚರ್ಚಿಸಿ ಮಾರ್ಗ ಕಂಡುಕೊಳ್ಳಬಹುದು. ಮಳೆಗಾಲದ ಸಂದರ್ಭದಲ್ಲಿ ಜುಳು ಜುಳು ನೀರಿನಿಂದ ಥಳ ಥಳ ಎಂದು ಸದ್ದು ಮಾಡುತ್ತ ಅಷ್ಟೇನೂ ಎತ್ತರವಾಗಿರದ ಈ ಜಲಪಾತ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಸುತ್ತಲು ದಟ್ಟನೆಯ ಗಿಡ ಮರಗಳು, ಕಲ್ಮಶರಹಿತ ವಾತಾವರಣ, ಕಾಅಡಿನಲ್ಲಿ ಬರುವ ವಿಶಿಷ್ಟವಾದ ಸದ್ದು ಮನಸ್ಸಿಗೆ ಮುದ ನೀಡುತ್ತದೆ.

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಈ ಜಲಪಾತವನ್ನು ವೀಕ್ಷಿಸಿದ ಬಳಿಕ ಆಗುಂಬೆಯ ಮಳೆಗಾಡಿನಲ್ಲಿ ಒಂದು ಅದ್ಭುತವಾದ ಟ್ರೆಕ್ ಮಾಡಬಹುದು. ನೀವು ಆಗುಂಬೆಯಲ್ಲಿ ಲಭ್ಯವಿರುವ ಯಾವುದಾದರೂ ಹೋಟೆಲ್ ಅಥವಾ ವಸತಿ ಗೃಹ ಇಲ್ಲವೆ ರಿಸಾರ್ಟ್ ನಲ್ಲಿ ತಂಗಬಹುದು. ಚಾರಣಕ್ಕೆ ಹೊರಡುವಾಗ ಆಗುಂಬೆಯ ಮಳೆಗಾಡಿನ ಪ್ರಾರಂಭಿಕ ತಾಣದಲ್ಲಿರುವ ಚೆಕ್ ಪೋಸ್ಟ್ ನಲ್ಲಿ ಮುಂಚಿತವಾಗಿ ಪರವಾನಿಗೆಯನ್ನು ಪಡೆದು ನಂತರ ಟ್ರೆಕ್ಕಿಂಗ್ ಗೆ ತೆರಳಬಹುದು. ಮಲೆನಾಡಿನ ಮಳೆಗಾಡು ಪ್ರದೇಶ ಇದಾಗಿರುವುದರಿಂದ ಇಲ್ಲಿ ಜಿಗಣೆಗಳು, ಕೀಟಗಳು, ಸರ್ಪಗಳು ಇತರೆ ಹುಳು ಹುಪ್ಪಡಿಗಳು ಸಾಮಾನ್ಯ. ಆದ್ದರಿಂದ ಜಾಗರೂಕತೆಯಿಂದ, ಪ್ರಥಮೋಪಾಯದ ಪರಿಕರಗಳನ್ನು, ಔಷಧಗಳನ್ನಿಟ್ಟುಕೊಂಡು ಟ್ರೆಕ್ ಮಾಡಿದರೆ ಉತ್ತಮ.

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಜಿಗಣೆಗಳು ಈ ಭಾಗದಲ್ಲಿ ಸಾಮಾನ್ಯ. ನೀವು ನಿಮ್ಮ ಕೈಕಾಲುಗಳನ್ನು ಸರಿಯಾಗಿ ರಕ್ಷಿಸಿಕೊಳ್ಳದೆ ವಾತಾವರಣಕ್ಕೆ ನೇರವಾಗಿ ಒಡ್ಡಿ ಗಿಡ ಬಳ್ಳಿಗಳ ಮೂಲಕ ಸಾಗಬೇಕಾದರೆ ಯಾವಾಗ ಇವು ನಿಮ್ಮ ಅಂಗಗಳಿಗೆ ತಾಕಿ ಕೊಳ್ಳುತ್ತದೊ ಗೊತ್ತೆ ಆಗುವುದಿಲ್ಲ. ಇದು ರಕ್ತ ಕುಡಿಯುವಾಗಲೂ ನಿಮ್ಮ ಗಮನಕ್ಕೆ ಬರುವುದೆ ಇಲ್ಲ. ಹೀಗಾಗಿ ಇವುಗಳಿಂದ ಜಾಗರೂಕರಾಗಿರಿ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: wikipedia

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಕೇನ್ ಆಮೆಗಳು ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಅಪರೂಪದ ಆಮೆಗಳಾಗಿವೆ. ಇವುಗಳನ್ನು ಆಗುಂಬೆಯ ಮಳೆಗಾಡಿನಲ್ಲಿ ಅಲ್ಲಲ್ಲಿ ಹರಿದಿರುವ ನೀರಿನ ತೊರೆಗಳಲ್ಲಿ, ಕೆರೆಗಳಲ್ಲಿ ಕಾಣಬಹುದು. ಕೇನ್ ಆಮೆಯ ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Vancemiller

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಆಗುಂಬೆಯಲ್ಲಿ ಕಂಡುಬರುವ ಅಪರೂಪದ ಓತಿಕ್ಯಾತಗಳೂ ಸಹ ಇರುವುದು ವಿಶೇಷವಾಗಿದೆ. ಇವುಗಳ ಮುಂಗಾಲು ಹಾಗೂ ಹಿಂಗಾಲುಗಳು ಒಂದು ರೆಕ್ಕೆಯ ಆಕಾರದ ಪರದೆಯ ಮೂಲಕ ಜೋಡಿಯಾಗಿದ್ದು ಇದು ಒಂದು ಗಿಡದಿಂದ ಇನ್ನೊಂದು ಗಿಡದ್ ಮೇಲೆ ರೆಕ್ಕೆಯಂತಿರುವ ಪದರನ್ನು ಚಾಚಿ ಹಾರುತ್ತ ಸಾಗುತ್ತದೆ.

ಚಿತ್ರಕೃಪೆ: Psumuseum

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಆಗುಂಬೆ ಮಳೆಗಾಡು ದೈತ್ಯ ವಿಷಕಾರಿ ಹಾಗೂ ಇತರೆ ಸರ್ಪಗಳನ್ನು ತಿಂದು ಬದುಕುವ ಕಿಂಗ್ ಕೋಬ್ರಾ ಹಾವುಗಳಿಗೂ ಸಹ ಆವಾಸ ಸ್ಥಾನವಾಗಿದೆ. ಸುಮಾರು 15 ರಿಂದ 18 ಅಡಿಗಳಷ್ಟು ಉದ್ದ ಬೆಳೆಯುವ ಈ ಭಯಂಕರ ಸರ್ಪವು ಆಗುಂಬೆಯ ಕೀಟ ಜಗತ್ತಿನ ಸೋಲದ ಸರದಾರ ಎಂದು ಕರೆದರೂ ತಪ್ಪಾಗಲಾರದು.

ಚಿತ್ರಕೃಪೆ: Kersti Nebelsiek

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಪಕ್ಷಿಪ್ರಿಯ ಪ್ರವಾಸಿಗರಿಗೂ ಆಗುಂಬೆ ನಿರಾಸೆಗೊಳಿಸುವುದಿಲ್ಲ. ದಟ್ಟ ಹಸಿರಿನ ನಡುವೆ ಚಿಲಿಪಿಲಿಗುಡುವ ಹಲವು ಸುಂದರ ಪಕ್ಷಿಗಳನ್ನು ಕಾಣಬಹುದು. ಹಳದಿ ಪಟ್ಟಿಯ ಬುಲ್ ಬುಲ್, ಮಲಬಾರ್ ಟ್ರೊಗೊನ್, ಸ್ರೀಲಂಕನ್ ಫ್ರಾಗ್ ಮೌತ್, ಹಾರ್ನ್ ಬಿಲ್ ಹೀಗೆ ಹಲವು ಪಕ್ಷಿಗಳನ್ನು ಇಲ್ಲಿ ವೀಕ್ಷಿಸಬಹುದಾಗಿದೆ. ಇಂಡಿಯನ್ ಹಾರ್ನ್ ಬಿಲ್.

ಚಿತ್ರಕೃಪೆ: Kalyanvarma

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಚಾರಣ ಮಾಡುವಾಗ ನಿಮಗೆ ಸಾಕಷ್ಟು ವೈವಿಧ್ಯಮಯ ಕೀಟಗಳು, ಹಾವುಗಳು ಆಗುಂಬೆಯ ಪರಿಸರದಲ್ಲಿ ಎದುರಾಗಬಹುದು. ಜಾಗರೂಕತೆಯಿಂದ ಸಾಗುತ್ತ ಈ ಜೀವಿಗಳನ್ನು ಅವುಗಳ ಸಹಜ ಪರಿಸ್ಥಿತಿಯಲ್ಲಿ ನೋಡುವುದೆ ಒಂದು ಸುಂದರ ಅನುಭವವಾಗಬಹುದು. ಗ್ರೀನ್ ವೈನ್ ಸ್ನೇಕ್.

ಚಿತ್ರಕೃಪೆ: Shaunak Modi

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ವಿಶಿಷ್ಟವಾದ ಹಾಗೂ ಸ್ನೇಹಮಯಿಯಾದ ಬಂಗಾರ ವರ್ಣದ ಕಪ್ಪೆ. (ಗೋಲ್ಡನ್ ಫ್ರಾಗ್).

ಚಿತ್ರಕೃಪೆ: Sandeep Somasekharan

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ರೋಮಗಳನ್ನು ಹೊಂದಿರುವ ಟ್ಯಾರಂಟುಲಾ ಎಂಬ ಹೆಸರಿನ ವಿಷಕಾರಿ ಜೇಡರ. ಇದು ಚಿಕ್ಕ ಪುಟ್ಟ ಪಕ್ಷಿ ಹಾಗೂ ಇಲಿಗಳಂತಹ ಸಸ್ತನಿಗಳನ್ನೂ ಸಹ ಹಿಡಿದು ತಿನ್ನುತ್ತದೆ.

ಚಿತ್ರಕೃಪೆ: Shaunak Modi

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಜಿಯಂಟ್ ವುಡ್ ಎಂಬ ಹೆಸರಿನ ಜೇಡದ ಮಾತೊಂದು ಪ್ರಬೇಧ. ಬಲೆಯನ್ನು ಚಾಚಿ ಹುಳು ಹುಪ್ಪಡಿಗಳನ್ನು ತಿಂದು ಬದುಕುವ ಜೀವಿ.

ಚಿತ್ರಕೃಪೆ: Shaunak Modi

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಚಾಣಾಕ್ಷ ಬೇಟೆಗಾರ ಎಂಬ ಹೆಸರು ಪಡೆದಿರುವ ವೊಲ್ಫ್ ಜೇಡ. ಒಟ್ಟಾರೆಯಾಗಿ ಎಂಟು ಕಣ್ಣುಗಳನ್ನು ಹೊಂದಿರುವ ಈ ಬೇಟೆಗಾರ ಜೇಡವು ತನ್ನ ಬೇಟೆಯನ್ನು ಬಲು ಕೌಶಲ್ಯದಿಂದ ಹಿಡಿಯುತ್ತದೆ.

ಚಿತ್ರಕೃಪೆ: Shaunak Modi

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಆಗುಂಬೆಯ ಮಳೆಗಾಡಿನಲ್ಲಿ ಕಂಡುಬರುವ ಮತ್ತೊಂದು ಪ್ರಬೇಧದ ಹಾವು.

ಚಿತ್ರಕೃಪೆ: francis crawley

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಆಗುಂಬೆಯ ಮಳೆಗಾಡಿನಲ್ಲಿ ಅದರಲ್ಲೂ ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ ಟ್ರೆಕ್ ಮಾಡುವಾಗ ಅಲ್ಲಲ್ಲಿ ನಿಮಗೆ ಋತುಕಾಲಿಕ (seasonal) ಜಲಧಾರೆಗಳು ಎದುರಾಗುತ್ತವೆ. ಇವುಗಳನ್ನು ನೋಡುವುದೆ ಒಂದು ಚೆಂದದ ಅನುಭವ.

ಚಿತ್ರಕೃಪೆ: Harsha K R

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಜಲಪಾತಗಳಿಗೆ ಸಂಬಂಧಿಸಿದಂತೆ ಆಗುಂಬೆಯಲ್ಲಿ ಕೆಲವು ಜಲಪಾತಗಳನ್ನು ಕಾಣಬಹುದು. ಕೂಡ್ಲು ತೀರ್ಥ ಅಥವಾ ಸೀತಾ ಜಲಪಾತ. ಇದು ಸೀತಾ ನದಿಯಿಂದ ರೂಪಗೊಳ್ಳುವ ಜಲಪಾತವಾಗಿದ್ದುಆಗುಂಬೆಯಿಂದ ಸುಮಾರು 20 ಕಿ.ಮೀ ಗಳಷ್ಟು ದೂರದಲ್ಲಿದೆ.

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಒನಕೆ ಅಬ್ಬಿ ಜಲಪಾತ : ಒನಕೆಯಿಂದ ಬರುವ ಸದ್ದಿನ ಹಾಗೆ ನೀರು ಧುಮುಕುವುದರಿಂದ ಇದಕ್ಕೆ ಒನಕೆ ಅಬ್ಬಿ ಜಲಪಾತ ಎಂದು ಕರೆಯಲಾಗಿದ್ದು ಸುಮಾರು 400 ಅಡಿಗಳಷ್ಟು ಎತ್ತರವನ್ನು ಇದು ಹೊಂದಿದೆ. ಆಗುಂಬೆಯ ಮಳೆಗಾಡಿನಲ್ಲಿ ಐದು ಕಿ.ಮೀ ಟ್ರೆಕ್ ಮಾಡುತ್ತ ಈ ಜಲಪಾತ ಕೇಂದ್ರಕ್ಕೆ ಭೇಟಿ ನೀಡಬಹುದು.

ಚಿತ್ರಕೃಪೆ: Mylittlefinger

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಆಗುಂಬೆಯಾ...ಪ್ರೇಮ ಸಂಜೆಯ....ಎಂಬ ಡಾ.ರಾಜ್ ಅವರು ಹಾಡಿದ ಗೀತೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಹೌದು ಆ ಹಾಡಿನ ರಚನೆಗೆ ಸ್ಫೂರ್ತಿಯಾದದ್ದು ಆಗುಂಬೆಯು ಮನ ಮೋಹಕವಾಗಿ ಕಂಗೊಳಿಸುವ ಸೂರ್ಯಾಸ್ತ. ಸಾಮಾನ್ಯವಾಗಿ ಮಳೆಗಾಲದಲ್ಲಿ ಮೋಡಕವಿದ ವಾತಾವರಣವಿರುವುದರಿಂದ ಬೇಸಿಗೆ ಅಥವಾ ಚಳಿಗಾಲದ ಸಂದರ್ಭದಲ್ಲಿ ಆಗುಂಬೆಯ ಸೂರ್ಯಾಸ್ತವನ್ನು ಆಸ್ವಾದಿಸಬಹುದು.

ಚಿತ್ರಕೃಪೆ: Harsha K R

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಆಗುಂಬೆಯಲ್ಲಿನ ಮನಮೋಹಕ ಸೂರ್ಯಾಸ್ತದ ಸುಂದರ ನೋಟ.

ಚಿತ್ರಕೃಪೆ: Magiceye

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಸೂರ್ಯಾಸ್ತದ ಮತ್ತೊಂದು ದೂರದ ನೋಟ.

ಚಿತ್ರಕೃಪೆ: Magiceye

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಮಳೆಗಾಲದ ಸಂದರ್ಭದಲ್ಲೂ ಸಹ ಸೂರ್ಯಾಸ್ತ ತಾಣಕ್ಕೆ ಭೇಟಿ ನೀಡಬಹುದು. ಆದರೆ ಈ ಸಂದರ್ಭದಲ್ಲಿ ಆಳವಾದ ಪ್ರಪಾತವು ಮಂಜಿನಿಂದ ಹೊದಿಕೆಯನ್ನು ಹೊದಿಸಿಕೊಂಡು ಅದ್ಭುತವಾಗಿ ಗೋಚರಿಸುತ್ತದೆ.

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ನಗರದ ಸದ್ದು ಗದ್ದಲದ ಜೀವನಶೈಲಿಯಿಂದ ಸಾಕಷ್ಟು ದೂರದಲ್ಲಿ ನೆಲೆಸಿ, ಪ್ರಕೃತಿಯ ವೈಭವವನ್ನು, ಗಾಂಭೀರ್ಯವನ್ನು ಅನಾವರಣಗೊಳಿಸುವ ಆಗುಂಬೆಯ ಅದ್ಭುತ ಪರಿಸರವು ಒಮ್ಮೆ ಭೇಟಿ ನೀಡಿದರೆ ಸಾಕು...ಭೇಟಿ ನೀಡುವವರ ಮನದಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತದೆ ಹಾಗೂ ಮತ್ತೆ ಮತ್ತೆ ಹೋಗಬೇಕೆಂಬ ಆಸೆಯ ಚಿಗುರನ್ನು ಹೃದಯದಲ್ಲಿ ನೆಡುತ್ತದೆ. ಇಲ್ಲಿಗೆ ಬೃಹತ್ ಮಲೆನಾಡಿನ ಒಂದು ಚಿಕ್ಕ ಪ್ರವಾಸವು ಸಂಪನ್ನಗೊಳ್ಳುತ್ತದೆ.

ಚಿತ್ರಕೃಪೆ: Karunakar Rayker

ಮಲೆನಾಡಿನಲ್ಲೊಂದು ಪ್ರವಾಸ

ಮಲೆನಾಡಿನಲ್ಲೊಂದು ಪ್ರವಾಸ

ಇನ್ನೂ ನಿಮ್ಮ ವಾಹನ ಹತ್ತಿ ನೇರವಾಗಿ ಮತ್ತೆ ತೀರ್ಥಹಳ್ಳಿಗೆ ಹಾಗೂ ನಂತರ ಶಿವಮೊಗ್ಗಕ್ಕೆ ತೆರಳಿ ನಿಮ್ಮ ನಿಮ್ಮ ಗೂಡುಗಳನ್ನು ಸೇರಿ ಅಲ್ಪ ಕಾಲ ಮಳೆಗಾಡಿನ ಗುಂಗಿನಲ್ಲಿ ಮೈಮರೆತು, ನಿಮ್ಮ ಕೆಲಸ ಕಾರ್ಯಗಳಲ್ಲಿ ಮತ್ತೆ ಉತ್ಸಾಹದಿಂದ ನಿಮ್ಮನ್ನು ತೊಡಗಿಸಿಕೊಳ್ಳಿ.

ಚಿತ್ರಕೃಪೆ: Harsha K R

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X