Search
  • Follow NativePlanet
Share
» »ಕೊಡಗು : ಮೋಡಿ ಮಾಡುವ ನಾಡು

ಕೊಡಗು : ಮೋಡಿ ಮಾಡುವ ನಾಡು

ಕರ್ನಾಟಕದಲ್ಲಿರುವ ಪ್ರಖ್ಯಾತ ಪ್ರವಾಸಿ ತಾಣಗಳನ್ನು ಹೆಸರಿಸುವುದಾದರೆ ಅದರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದು ಕೂರ್ಗ್ ಎಂತಲೂ ಕರೆಯಲ್ಪಡುವ ಕೊಡಗು ಜಿಲ್ಲೆ. ಬೆಂಗಳೂರಿನ ನೈರುತ್ಯ ದಿಕ್ಕಿಗೆ ಸುಮಾರು 240 ಕಿ.ಮೀ ದೂರದಲ್ಲಿ ನೆಲೆಸಿರುವ ಈ ಸ್ಥಳವನ್ನು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಸುಲಭವಾಗಿ ತಲುಪಬಹುದು. ರೈಲಿನಲ್ಲಿ ಪ್ರಯಾಣಿಸಬಯಸಿದರೆ ಹತ್ತಿರದ ಮೈಸೂರು ಅಥವಾ ಮಂಗಳೂರಿಗೆ ತೆರಳಿ ಅಲ್ಲಿಂದ ತಲುಪಬಹುದು. ರೈಲುಗಳ ವೇಳಾಪಟ್ಟಿಯನ್ನು ತಿಳಿಯಲು ಈ ಕೊಂಡಿಯನ್ನು ಉಪಯೋಗಿಸಿ.

ಪಶ್ಚಿಮ ಘಟ್ಟಗಳ ಸುಂದರ ಹಸಿರಿನ ಮಡಿಲಿನಲ್ಲಿ ನೆಲೆಸಿರುವ ಕೊಡಗು ಜಿಲ್ಲೆಯು 4,102 ಚ.ಕಿ.ಮೀ ಗಳಷ್ಟು ವಿಶಾಲವಾಗಿ ಹರಡಿದ್ದು ಹಲವು ಪ್ರಾಕೃತಿಕವಾಗಿ ಸಂಪದ್ಭರಿತ ಪ್ರವಾಸಿ ಆಕರ್ಷಣೆಗಳನ್ನು ತನ್ನ ಒಡಲಿನಲ್ಲಿ ಹುದುಗಿಸಿಟ್ಟುಕೊಂಡಿದೆ. ವಾಯವ್ಯಕ್ಕೆ ದಕ್ಷಿಣ ಕನ್ನಡ, ಉತ್ತರಕ್ಕೆ ಹಾಸನ, ಪೂರ್ವಕ್ಕೆ ಮೈಸೂರು ನೈರುತ್ಯಕ್ಕೆ ಕೇರಳದ ಕಣ್ಣೂರು ಹಾಗು ದಕ್ಷಿಣಕ್ಕೆ ಕೇರಳದ ವಯನಾಡ್ ಪ್ರಾಂತ್ಯಗಳನ್ನು ತನ್ನ ಗಡಿಗಳನ್ನಾಗಿ ಹೊಂದಿರುವ ಕೊಡಗು ಜಿಲ್ಲೆಯು ತನ್ನ ವಿಶೀಷ್ಟವಾದ ಸಂಪ್ರದಾಯ, ಸುಗಂಧಭರಿತ ಕಾಫಿ ಹಾಗು ತನ್ನಲ್ಲಿಯ ವೀರ ಯೋಧರಿಂದಾಗಿ ಜಗತ್ತಿನಲ್ಲೆ ಹೆಸರುವಾಸಿಯಾಗಿದೆ. ಮಡಿಕೇರಿಯು ಕೊಡಗು ಜಿಲ್ಲೆಯ ಕೇಂದ್ರ ಆಡಳಿತ ಪ್ರದೇಶವಾಗಿದೆ.

ಕರ್ನಾಟಕದ ಈ ಗಿರಿಧಾಮ ಪ್ರದೇಶದಲ್ಲಿ, ನೋಡಿ ಆನಂದಿಸಲು ಹಲವು ಸುಂದರ ತಾಣಗಳಿರುವುದು ಅಲ್ಲದೆ ರೋಮಾಂಚನ ಹೊಂದುವಂತಹ ಹಲವು ಚಟುವಟಿಕೆಗಳನ್ನು ಒದಗಿಸುವ ರಿಸಾರ್ಟುಗಳು ಹೇರಳವಾಗಿ ಇಲ್ಲಿ ಕಂಡುಬರುತ್ತವೆ. ಪ್ರಸ್ತುತ ಇದು ನವದಂಪತಿಗಳ ಮಧುಚಂದ್ರದ ತಾಣವಾಗಿಯೂ ಹೆಸರುವಾಸಿಯಾಗಿದ್ದರೂ ಅದಕ್ಕೆ ಮಾತ್ರ ಸೀಮಿತವಾಗಿಲ್ಲ. ಕುಟುಂಬ ಸಮೇತವಾಗಿಯೊ ಅಥವಾ ಸ್ನೇಹಿತರೊಂದಿಗೊ ರಜಾ ಸಮಯದಲ್ಲಿ ಇಲ್ಲಿಗೆ ತೆರಳಿ ಮನವನ್ನು ಹಗುರಮಾಡಿಕೊಳ್ಳಬಹುದು. ಹೀಗೊಂದು ಪ್ರವಾಸ ಯೋಜನೆಯನ್ನು ನೀವು ಹಾಕಿದರೆ ಆ ಸ್ಥಳದಲ್ಲಿ ಏನೇಲ್ಲ ನೋಡಬಹುದೆಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಿ. ಒಂದೊಂದಾಗಿ ಸ್ಲೈಡುಗಳನ್ನು ಕ್ಲಿಕ್ ಮಾಡುತ್ತ ಇಲ್ಲಿನ ಆಕರ್ಷಣೆಗಳ ಕುರಿತು ತಿಳಿಯಿರಿ.

ರಾಜಾ ಸೀಟ್:

ರಾಜಾ ಸೀಟ್:

ಇದೊಂದು ಅಕ್ಷರಶಃ ಮನಮೋಹಕವಾದ ಉದ್ಯಾನವಾಗಿದ್ದು, ದಂತಕಥೆಗಳ ಪ್ರಕಾರ, ಒಂದೊಮ್ಮೆ ಕೊಡಗಿನ ಅರಸರು ತಮ್ಮ ಪತ್ನಿ ಸಮೇತರಾಗಿ ಸಮಯವನ್ನು ಸುಮಧುರವಾಗಿ ಕಳೆಯಲು ಇಲ್ಲಿಗೆ ಬರುತ್ತಿದ್ದರು. ಸುಂದರ ಪ್ರಾಕೃತಿಕ ನೋಟ, ಮೋಡಗಳ ಮರೆಯಲ್ಲಿ ಆಟವಾಡುತ್ತಿರುವ ಬೆಟ್ಟ ಗುಡ್ಡಗಳು, ತಾಜಾತನದ ಅನುಭವ ಒದಗಿಸುವ ಸುತ್ತಲಿನ ಪರಿಸರ ಎಂಥವರಿಗಾದರು ಸರಿ.. ನೆಮ್ಮದಿ ಶಾಂತಿಯನ್ನು ಕರುಣಿಸುತ್ತವೆ. ಅಲ್ಲದೆ ಮಕ್ಕಳ ಮನರಂಜನೆಗಾಗಿರುವ ಟಾಯ್ ಟ್ರೈನ್ ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆ. ಅಷ್ಟೆ ಅಲ್ಲ...ಬಾಯಲ್ಲಿ ನೀರುರಿಸುವಂತಹ ಸ್ಥಳೀಯ ಚುರ್ಮುರಿ, ಪಾನಿ ಪುರಿ ಹಾಗು ಗೋಬಿ ಮಂಚೂರಿಗಳು ಇಲ್ಲಿ ಲಭ್ಯ.

ಸ್ಥಳ: ಮಡಿಕೇರಿ ನಗರ
ಪ್ರಯಾಣ: ರಿಕ್ಷಾಗಳು ಲಭ್ಯ
ಶುಲ್ಕ: ಒಬ್ಬರಿಗೆ 5 ರೂ.

ಮಡಿಕೇರಿ ಕೋಟೆ:

ಮಡಿಕೇರಿ ಕೋಟೆ:

ಗತ ವೈಭವವನ್ನು ಸಾರುವ ಈ ಕೋಟೆಯು ಕೊಡಗಿನ ಅರಸರ ವೀರಗಾಥೆಯನ್ನು ಹೇಳುತ್ತದೆ. ಮೂಲತಃ ಮಣಿನಿಂದ ನಿರ್ಮಿತವಾದ ಈ ಕೋಟೆಯನ್ನು ಮೈಸೂರಿನ ಖಡ್ಗವೆಂದೆ ಪ್ರಸಿದ್ಧನಾದ ಟಿಪ್ಪು ಸುಲ್ತಾನನು ಮರು ನವಿಕರಿಸಿದನು. ಮೊರ್ಟಾರ್ ಗಳಿಂದ ನಿರ್ಮಿಸಲಾದ ಎರಡು ಆನೆಗಳು ಈ ಕೋಟೆಗೆ ಭೇಟಿ ನೀಡುವ ಪ್ರವಾಸಿಗರನ್ನು ಸ್ವಾಗತಿಸುತ್ತವೆ.

ಸ್ಥಳ: ಮಡಿಕೇರಿ ನಗರ
ಪ್ರಯಾಣ: ರಿಕ್ಷಾಗಳು ಲಭ್ಯ

ಮಡಿಕೇರಿ ಅರಮನೆ:

ಮಡಿಕೇರಿ ಅರಮನೆ:

1814 ರಲ್ಲಿ ಎರಡನೆಯ ಲಿಂಗರಾಜೇಂದ್ರ ಒಡೆಯರ್ ರಿಂದ ನಿರ್ಮಿಸಲಾದ ಈ ಅರಮನೆಯು ಇಂದು ಜಿಲ್ಲಾಧಿಕಾರಿ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮಡಿಕೇರಿ ಕೋಟೆಯ ಆವರಣದಲ್ಲೆ ಇರುವ ಈ ಅರಮನೆಯ ಪಕ್ಕದಲ್ಲಿ ಮಹಾತ್ಮಾ ಗಾಂಧಿ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಬಹುದು.

ಸ್ಥಳ: ಮಡಿಕೇರಿ ನಗರ
ಪ್ರಯಾಣ: ರಿಕ್ಷಾಗಳು ಲಭ್ಯ

ಗದ್ದಿಗೆ/ಗದ್ದುಗೆ:

ಗದ್ದಿಗೆ/ಗದ್ದುಗೆ:

ಗದ್ದಿಗೆ ಅಥವಾ ಗದ್ದುಗೆಯು 18 ನೆಯ ಶತಮಾನದಲ್ಲಿ ನಿರ್ಮಿತವಾದ ಲಿಂಗರಾಜೇಂದ್ರ ಒಡೆಯರ್, ವೀರರಾಜೇಂದ್ರ ಹಾಗು ಆಸ್ಥಾನದ ಪುರೋಹಿತರೊಬ್ಬರ ಸಮಾಧಿ ಸ್ಮಾರಕಗಳಾಗಿವೆ. ತನ್ನ ಸುತ್ತಲು ಸುಂದರ ಪರಿಸರವನ್ನು ಹೊಂದಿರುವ ಈ ಸ್ಮಾರಕದ ಕಿಟಕಿಗಳು ಅದ್ಭುತವಾದ ಕೆತ್ತನೆಗಳಿಂದ ಕೂಡಿದೆ.

ಸ್ಥಳ: ಮಡಿಕೇರಿ ನಗರ
ಪ್ರಯಾಣ: ರಿಕ್ಷಾಗಳು ಲಭ್ಯ

ಓಂಕಾರೇಶ್ವರ ದೇವಸ್ಥಾನ:

ಓಂಕಾರೇಶ್ವರ ದೇವಸ್ಥಾನ:

1820 ರಲ್ಲಿ ಲಿಂಗರಾಜೇಂದ್ರರಿಂದ ನಿರ್ಮಿತವಾದ ಈ ದೇವಸ್ಥಾನದ ವಾಸ್ತುಶಿಲ್ಪವು ಗೋಥಿಕ್ ಹಾಗು ಇಸ್ಲಾಮಿಕ್ ಶೈಲಿಗಳಿಂದ ಪ್ರಭಾವಿತವಾಗಿದೆ. ಶಿವನಿಗೆ ಸಮರ್ಪಿತವಾದ ಈ ದೇವಸ್ಥಾನದ ಆವರಣದಲ್ಲಿ ತಾಜಾ ನೀರಿನ ಮೀನುಗಳಿಂದ ತುಂಬಿದ ಒಂದು ಸುಂದರ ಕಲ್ಯಾಣಿ ಅಥವಾ ಕೊಳವನ್ನು ಕಾಣಬಹುದಾಗಿದೆ.

ಸ್ಥಳ: ಮಡಿಕೇರಿ ನಗರ
ಪ್ರಯಾಣ: ರಿಕ್ಷಾಗಳು ಲಭ್ಯ

ನಲ್ಕ್ನಾಡ್ ಅರಮನೆ:

ನಲ್ಕ್ನಾಡ್ ಅರಮನೆ:

ಹಾಲೇರಿ ವಂಶದ ಅರಸನಾದ ದೊಡ್ಡವೀರರಾಜೇಂದ್ರರಿಂದ ಈ ಅರಮನೆಯು ನಿರ್ಮಿಸಲ್ಪಟ್ಟಿದೆ. ಕೊಡಗಿನ ಅತ್ಯಂತ ಎತ್ತರದ ಶಿಖರವಾದ ತಡಿಯಾಂಡಮೋಲ್ ಬಳಿಯಿರುವ ಯಾವಕಾಪಾಡಿ ಎಂಬಲ್ಲಿ ನೆಲೆಸಿರುವ ಈ ಅರಮನೆಯು ಸುಂದರವಾದ ವರ್ಣ ವಿನ್ಯಾಸವನ್ನು ಹೊಂದಿದೆ.

ಸ್ಥಳ: ಕಕ್ಕಾಬೆ ಪಟ್ಟಣ
ಪ್ರಯಾಣ: ಮಡಿಕೇರಿ ನಗರದಿಂದ 45 ಕಿ.ಮೀ
ತಲುಪುವ ಬಗೆ: ಬಾಡಿಗೆ ಅಥವಾ ಪ್ರವಾಸಿ ಟ್ಯಾಕ್ಸಿ

ಪಡಿ ಇಗ್ಗುತಪ್ಪಾ ದೇವಸ್ಥಾನ:

ಪಡಿ ಇಗ್ಗುತಪ್ಪಾ ದೇವಸ್ಥಾನ:

ಸುಬ್ರಮಣ್ಯ ಅಥವಾ ಅಯ್ಯಪ್ಪ ಸ್ವಾಮಿಯ ದೇವಸ್ಥಾನವಾಗಿರುವ ಇದು ಕೇರಳದಲ್ಲಿ ಕಂಡುಬರುವ ಪುರಾತನ ದೇವಾಲಯಗಳ ಶೈಲಿಯನ್ನು ಹೋಲುತ್ತದೆ. ಪುತಾರಿ ಹಬ್ಬದ (ಬಿತ್ತನೆಯ ಹಬ್ಬ) ಪ್ರಮುಖ ದೇವತೆಯಾಗಿ ಈ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಪ್ರತಿ ವರ್ಷ ಮಾರ್ಚ್ ತಿಂಗಳಿನಲ್ಲಿ ಜಾತ್ರೆಯನ್ನು ಆಚರಿಸಲಾಗುತ್ತದೆ ಹಾಗು ತುಲಾಭಾರದಂತಹ ಹಲವು ಸೇವೆಗಳಿ ಇಲ್ಲಿ ಲಭ್ಯ. ಕೊಡವ ಸಂಸ್ಕೃತಿ ಹಾಗು ಸಂಪ್ರದಾಯದ ಭಾಗವಾಗಿರುವ ಈ ದೇವಸ್ಥಾನವು ಪ್ರತಿ ದಿನ ಬೆಳಿಗ್ಗೆ 5.30 ಘಂಟೆಯಿಂದ ಮಧ್ಯಾಹ್ನ 2 ಘಂಟೆಯವರೆಗೆ ಹಾಗು ಸಾಯಂಕಾಲ 6 ಘಂಟೆಯಿಂದ 7 ಘಂಟೆಯವರೆಗೆ ತೆರೆದಿರುತ್ತದೆ.

ಸ್ಥಳ: ಕಕ್ಕಾಬೆ ಪಟ್ಟಣ
ಪ್ರಯಾಣ: ಮಡಿಕೇರಿ ನಗರದಿಂದ ವಿರಾಜಪೇಟೆಗೆ ಹೋಗುವ ರಸ್ತೆಯಲ್ಲಿ 45 ಕಿ.ಮೀ ದೂರ
ತಲುಪುವ ಬಗೆ: ಮಡಿಕೇರಿ, ವಿರಾಜಪೇಟೆ ಹಾಗು ನಾಪೊಕ್ಲುಗಳಿಂದ ಖಾಸಗಿ ಬಸ್ಸುಗಳು ಲಭ್ಯ.

ತಲಕಾವೇರಿ:

ತಲಕಾವೇರಿ:

ಕರ್ನಾಟಕದ ಜೀವನದಿ ಕಾವೇರಿಯು ಉಗಮವಾಗುವ ಸ್ಥಳ ಇದಾಗಿದ್ದು ಮಡಿಕೇರಿ ನಗರದಿಂದ 35 ಕಿ.ಮೀ ಹಾಗು ಭಾಗಮಂಡಲ ಪಟ್ಟಣದಿಂದ ಕೇವಲ 8 ಕಿ.ಮೀ ದೂರದಲ್ಲಿ ನೆಲೆಸಿದೆ. ಬ್ರಹ್ಮಗಿರಿ ಪರ್ವತದಲ್ಲಿ ನೆಲೆಸಿರುವ ಈ ಧಾರ್ಮಿಕ ತಾಣವು ಸಮುದ್ರ ಮಟ್ಟದಿಂದ 4,187 ಅಡಿಗಳಷ್ಟು ಎತ್ತರವಿದ್ದು ಪ್ರಕೃತಿಯ ವಿಹಂಗಮ ನೋಟವನ್ನು ಒದಗಿಸುತ್ತದೆ. ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಈ ತಾಣವು ತನ್ನ ರಮಣೀಯ ದೃಶ್ಯಗಳಿಂದ ಛಾಯಾಗ್ರಾಹಕರ ಸ್ವರ್ಗವಾಗಿಯೂ ಪರಿಣಮಿಸಿದೆ. ಇಲ್ಲಿನ ಸೂರ್ಯೋದಯ ಹಾಗು ಸೂರ್ಯಾಸ್ತಗಳಂತು ನೋಡಲು ಇನ್ನೂ ಅದ್ಭುತ.

ಸ್ಥಳ: ಭಾಗಮಂಡಲದಿಂದ 8 ಕಿ.ಮೀ
ಪ್ರಯಾಣ: ಮಡಿಕೇರಿಯಿಂದ ಮಂಗಳೂರಿನೆಡೆ ಹೋಗುವ ದಾರಿಯಲ್ಲಿ 35 ಕಿ.ಮೀ ದೂರ
ತಲುಪುವ ಬಗೆ: ಮಡಿಕೇರಿ ನಗರದಿಂದ ಖಾಸಗಿ ಹಾಗು ಸರ್ಕಾರಿ ಬಸ್ಸುಗಳೆರಡೂ ಲಭ್ಯ.

ಬೈಲಕುಪ್ಪೆ:

ಬೈಲಕುಪ್ಪೆ:

ಭಾರತದಲ್ಲಿರುವ ಟಿಬೆಟ್ಟಿನ ದೊಡ್ಡ ವಸತಿ ಸಮುಚ್ಚಯಗಳಲ್ಲೊಂದಾಗಿದೆ ಈ ತಾಣ. ಇಲ್ಲಿಗೆ ಕಾಲುಡಿತ್ತಿರುವ ಹಾಗೆ ನಾವು ಟಿಬೆಟ್ಟಿನಲ್ಲಿದೆವೆನೋ ಎಂಬ ಆಭಾಸ ಮೂದದೆ ಇರಲಾರದು. ಹಲವು ಬೌದ್ಧ ಮಠಗಳು, 16000 ನಿರಾಶ್ರಿತರು, 6000 ಬೌದ್ಧ ಸನ್ಯಾಸಿಗಳನ್ನು ಹೊಂದಿರುವ ಈ ಗ್ರಾಮವು 1960 ರಲ್ಲಿ ಸ್ಥಾಪಿತವಾಗಿದೆ. ಪ್ರವಾಸಿಗರನ್ನು ಮುಗುಳ್ನಗೆಯಿಂದ ಸ್ವಾಗತಿಸುವ ಇಲ್ಲಿನ ಜನರ ಸಂಸ್ಕೃತಿಯನ್ನು ಅತಿ ಹತ್ತಿರದಿಂದ ಗಮನಿಸಬಹುದು. ಮಠಗಳಲ್ಲಿ 40 ಅಡಿಗಳಷ್ಟು ಎತ್ತರದ ಬುದ್ಧ ಹಾಗು ಪದ್ಮಸಂಭವರ ವಿಗ್ರಹಗಳನ್ನು ಹೊಂದಿರುವ ಈ ಗ್ರಾಮದಲ್ಲಿ ಚೈನಾ ಹಾಗು ಟಿಬೆಟ್ ದೇಶಗಳ ಅಸಲಿ ಉತ್ಪನ್ನಗಳನ್ನು ಕೊಂಡುಕೊಳ್ಳಬಹುದು. ಆಗಾಗ ಬೌದ್ಧ ಗುರು ದಲೈ ಲಾಮಾ ಭೇಟಿ ನೀಡುವ ಈ ಗ್ರಾಮದಲ್ಲಿ ರುಚಿಕರವಾದ ಚೈನೀಸ್ ಖಾದ್ಯಗಳನ್ನೂ ಸವಿಯಬಹುದು.

ಸ್ಥಳ: ಕುಶಾಲನಗರ/ಮೈಸೂರಿಗೆ ಹೋಗುವ ದಾರಿಯಲ್ಲಿ
ಪ್ರಯಾಣ: ಮಡಿಕೇರಿಯಿಂದ 41 ಕಿ.ಮೀ ಹಾಗು ಕುಶಾಲನಗರದಿಂದ 6 ಕಿ.ಮೀ
ತಲುಪುವ ಬಗೆ: ಮಡಿಕೇರಿ, ಕುಶಾಲನಗರ ಹಾಗು ಸುಂಟಿಕೊಪ್ಪಗಳಿಂದ ಖಾಸಗಿ ಹಾಗು ಸರ್ಕಾರಿ ಬಸ್ಸುಗಳು ದೊರೆಯುತ್ತವೆ.

ಅಬ್ಬೆ ಜಲಪಾತ:

ಅಬ್ಬೆ ಜಲಪಾತ:

ಅಬ್ಬಿ ಎಂತಲೂ ಕರೆಯಲ್ಪಡುವ ಈ ಸುಂದರ ಜಲಪಾತವು ಕೊಡಗಿನ ಮಡಿಕೇರಿ ನಗರದಿಂದ ಸುಮಾರು 7 ಕಿ.ಮೀ ದೂರದಲ್ಲಿದೆ. ಮಡಿಕೇರಿಯಿಂದ ಇಲ್ಲಿಗೆ ತೆರಳುವ ಹಾದಿಯು ಹೆಚ್ಚು ಅಗಲವಾಗಿರಲಾರದೆ, ಹಲವು ಉಬ್ಬು ತಗ್ಗುಗಳು ಹಾಗು ಸಾಕಷ್ಟು ತಿರುವುಗಳನ್ನು ಹೊಂದಿರುವುದರಿಂದ ಪಯಣಿಸುವಾಗ ರೋಮಾಂಚನಕಾರಿಯಾದ ಅನುಭವವನ್ನು ಒದಗಿಸುತ್ತದೆ.

ಸ್ಥಳ: ಮಡಿಕೇರಿಯಿಂದ ಏಳು ಕಿ.ಮೀ
ತಲುಪುವ ಬಗೆ: ರಿಕ್ಷಾ ಅಥವಾ ಪ್ರವಾಸಿ ಟ್ಯಾಕ್ಸಿ

ಇರುಪು ಜಲಪಾತ:

ಇರುಪು ಜಲಪಾತ:

ಇರ್ಪು ಎಂದೂ ಕರೆಯಲ್ಪಡುವ ಈ ಜಲಪಾತವಿರುವುದು ಕೊಡಗಿನ ಕುಟ್ಟಾ ಎಂಬ ಹಳ್ಳಿಯಲ್ಲಿ. ಲಕ್ಷ್ಮಣ ತೀರ್ಥ ನದಿಯ ತೊರೆಯಾಗಿರುವ ಇದು ಧಾರ್ಮಿಕವಾಗಿಯು ಮಹತ್ವವುಳ್ಳದ್ದಾಗಿದೆ. 60 ಮೀ. ಎತ್ತರದಿಂದ ನೀರು ಹರಿಯುತ್ತ ಅಂತಿಮವಾಗಿ ಕಾವೇರಿಯೊಂದಿಗೆ ಬೆರೆಯುತ್ತದೆ. ಈ ಜಲಪಾತ ತಾಣದ ಬಳಿ ರಾಮೇಶ್ವರ ದೇವಾಲಯವನ್ನು ಕಾಣಬಹುದು. ಗಮನದಲ್ಲಿಡ ಬೇಕಾದ ಸಂಗತಿಯೆಂದರೆ ಈ ಜಲಪಾತದ ಆಚೆ ಸುತ್ತಾಡುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಆ ಪ್ರದೇಶವು ಸಂರಕ್ಷಿತ ಅರಣ್ಯ ಭಾಗಕ್ಕೆ ಒಳಪಡುತ್ತದೆ.

ಸ್ಥಳ: ಕುಟ್ಟಾ ಹಳ್ಳಿ
ಪ್ರಯಾಣ: ಮಡಿಕೇರಿಯಿಂದ 80 ಕಿ.ಮೀ, ಗೋಣಿಕೊಪ್ಪದಿಂದ 30 ಕಿ.ಮೀ, ನಾಗರಹೊಳೆಯಿಂದ 25 ಕಿ.ಮೀ ಹಾಗು ವಿರಾಜಪೇಟೆಯಿಂದ 48 ಕಿ.ಮೀ ದೂರವಿದೆ.
ತಲುಪುವ ಬಗೆ: ಪ್ರವಾಸಿ ಟ್ಯಾಕ್ಸಿ

ನಿಸರ್ಗಧಾಮ:

ನಿಸರ್ಗಧಾಮ:

ನಿಸರ್ಗಧಾಮವು ಒಂದು ನಿಸರ್ಗ ಉದ್ಯಾನವಾಗಿದ್ದು ಮಕ್ಕಳಿಂದ ಹಿಡಿದು ವೃದ್ಧರಿಗೂ ಕೂಡ ಇದು ನೆಚ್ಚಿನ ತಾಣವಾಗಿದೆ. ಪ್ರಕೃತಿ ಪ್ರಿಯರಿಗಂತೂ ಇದು ಸ್ವರ್ಗಕ್ಕೆ ಸಮಾನವೆಂದೆ ಹೇಳಬಹುದು. 64 ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿರುವ ಈ ದ್ವೀಪೋದ್ಯಾನವನ್ನು ತೂಗು ಸೇತುವೆಯ ಮೂಲಕ ತಲುಪಬಹುದಾಗಿದೆ. ಮನರಂಜನೆ, ವಿರಾಮ, ಹರಟೆ, ವಿಶ್ರಾಂತಿ, ಆಟ ಬಯಸುವವರೆಲ್ಲರಿಗೂ ಇದು ಒಂದು ಪರಿಣಾಮಕಾರಿಯಾದ ಸ್ಥಳವಾಗಿದೆ. ಇಲ್ಲಿನ ಪರಿಸರವು ಭೇಟಿ ನೀಡಿದ ಎಂಥವರಿಗಾದರೂ ಸರಿ ಮೋಡಿ ಮಾಡದೆ ಇರಲಾರದು. ಬಿದಿರು ಕುಟೀರಗಳ ಉಪಹಾರ ಗೃಹಗಳು, ಚಿಲಿಪಿಲಿ ಗುಟ್ಟುತ್ತಿರುವ ಹಕ್ಕಿಗಳು, ಪ್ರಶಾಂತಮಯ ನಾದ ಹೊಮ್ಮಿಸುವ ವಾತಾವರಣ ನಿಮ್ಮನ್ನು ಅತಿ ವಿನಮ್ರತೆಯಿಂದ ಸ್ವಾಗತಿಸುತ್ತವೆ.

ಸ್ಥಳ: ಗುಡ್ಡೆ ಹೊಸೂರು
ಪ್ರಯಾಣ: ಮಡಿಕೇರಿಯಿಂದ 30 ಕಿ.ಮೀ, ಕುಶಾಲನಗರದಿಂದ 4 ಕಿ.ಮೀ ಹಾಗು ಮೈಸೂರಿನಿಂದ 95 ಕಿ.ಮೀ ದೂರದಲ್ಲಿದೆ.
ತಲುಪುವ ಬಗೆ: ಮಡಿಕೇರಿ ಹಾಗು ಕುಶಾಲನಗರಗಳಿಂದ ಸರ್ಕಾರಿ ಹಾಗು ಖಾಸಗಿ ಬಸ್ಸುಗಳು ದೊರೆಯುತ್ತವೆ.

ಹಾರಂಗಿ ಆಣೆಕಟ್ಟು:

ಹಾರಂಗಿ ಆಣೆಕಟ್ಟು:

ಕಾವೇರಿಯ ಉಪನದಿಗೆ ಅಡ್ಡಲಾಗಿ ಕಟ್ಟಲಾದ ಹಾರಂಗಿ ಆಣೆಕಟ್ಟು ಹಡ್ಗೂರ್ ಎಂಬ ಹಳ್ಳಿಯಲ್ಲಿದ್ದು, ಕುಶಾಲನಗರದಿಂದ 8 ಕಿ.ಮೀ ಹಾಗು ಮಡಿಕೇರಿಯಿಂದ 36 ಕಿ.ಮೀ ದೂರದಲ್ಲಿದೆ. 47 ಮೀ. ಎತ್ತರ ಹಾಗು 846 ಮೀ. ಉದ್ದವಿರುವ ಈ ಆಣೆಕಟ್ಟು ಮಳೆಗಾಲದ ಸಮಯದಲ್ಲಿ ಬಹುಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಏಕೆಂದರೆ ಈ ಸಂದರ್ಭದಲ್ಲಿ ಆಣೆಕಟ್ಟಿನಿಂದ ಬಿಡಲಾಗುವ ನೀರು ಭೂಮಿಗೆ ಅಪ್ಪಳಿಸುವ ದೃಶ್ಯವು ಅದ್ಭುತವಾಗಿ ಗೋಚರಿಸುತ್ತದೆ. ಮುಂಗಡ ಕಾಯ್ದಿರಿಸುವಿಕೆಯಿಂದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹವನ್ನು ಪಡೆಯಬಹುದು. ಸಂಜೆ 6 ಘಂಟೆಯವರೆಗೆ ಮಾತ್ರ ಇದು ತೆರೆದಿರುತ್ತದೆ.

ಸ್ಥಳ: ಹಡ್ಗೂರ್ ಹಳ್ಳಿ
ಪ್ರಯಾಣ: ಕುಶಾಲನಗರದಿಂದ 8 ಕಿ.ಮೀ ಹಾಗು ಮಡಿಕೇರಿಯಿಂದ 36 ಕಿ.ಮೀ ದೂರದಲ್ಲಿದೆ.
ತಲುಪುವ ಬಗೆ: ಪ್ರವಾಸಿ ಟ್ಯಾಕ್ಸಿ ಅಥವಾ ಕುಶಾಲನಗರದಿಂದ ಸೋಮವಾರಪೇಟೆ ಹೋಗುವ ಬಸ್ಸುಗಳು ಹಾರಂಗಿ ಮೂಲಕವಾಗಿ ಹೊರಡುತ್ತವೆ.

ಕಾಫಿ ತೋಟ:

ಕಾಫಿ ತೋಟ:

ಕೊಡಗಿನಲ್ಲಿನ ಕಾಫಿ ತೋಟದಲ್ಲಿನ ಪ್ರವಾಸವು ಒಂದು ಅವಿಸ್ಮರಣೀಯವಾದ ಅನುಭವ. ಇಲ್ಲಿನ ಕಾಫಿ ತೋಟಗಳ ಮಾಲಿಕರೊಂದಿಗೆ ತೋಟದಲ್ಲಿ ಸುತ್ತಾಡುತ್ತ ಕಾಫಿಯನ್ನು ಬೆಳೆಯುವುದರಿಂದ ಹಿಡಿದು ಅದನ್ನು ಮಾರುವ ಬಗೆಯವರೆಗಿನ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದು. ಶತಮಾನಗಳಷ್ಟು ಹಳೆಯದಾದ ಎತ್ತರದ ಪ್ರದೇಶಗಳಲ್ಲಿ ನೆಲೆಸಿರುವ ಕಾಫಿ ತೋಟಗಳಲ್ಲಿ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತ ಬಿಸಿ ಬಿಸಿ ಕಾಫಿ ಸ್ವಾದವನ್ನು ಹೀರುತ್ತ ನಮ್ಮನ್ನ ನಾವು ಮರೆಯುವಂತೆ ಮಾಡುತ್ತದೆ ಈ ತೋಟಗಳು. ಗಮನದಲ್ಲಿಡಬೇಕಾದ ಒಂದು ವಿಷಯವೆಂದರೆ ಕಾಫಿ ತೋಟಗಳಿಗೆ ಭೇಟಿ ನೀಡಲು ರಿಸಾರ್ಟುಗಳ ಅಥವಾ ನುರಿತ ಮಾರ್ಗದರ್ಶಿಗಳ ಸಹಾಯ ಪಡೆಯಬೇಕು.

ಸ್ಥಳ: ಕೊಡಗಿನ ಬಹುತೇಕ ಭಾಗ (ಮುಂಗಡವಾಗಿ ಅನುಮತಿ ಪಡೆಯಬೇಕು)
ತಲುಪುವ ಬಗೆ: ಬಾಡಿಗೆ ಟ್ಯಾಕ್ಸಿ ಅಥವಾ ಸ್ವಂತ ವಾಹನ

Read more about: travel and tourism
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X