» »ಸಾಗರವೆಂಬ ಸುಂದರ ಲೋಕ... ಇಲ್ಲಿಗೆ ಯಾವಾಗ ಹೋಗಬೇಕು?

ಸಾಗರವೆಂಬ ಸುಂದರ ಲೋಕ... ಇಲ್ಲಿಗೆ ಯಾವಾಗ ಹೋಗಬೇಕು?

By: Divya

ಸಾಹಿತ್ಯ, ಸಂಗೀತ, ಕೃಷಿ, ಶಿಕ್ಷಣ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾಗರ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಮಲೆನಾಡು ಪ್ರದೇಶದಲ್ಲಿ ಬರುವ ಈ ತಾಣ ರಮಣೀಯ ಪ್ರವಾಸ ತಾಣಗಳನ್ನು ಒಳಗೊಂಡಿದೆ. ಯಕ್ಷಗಾನ ಎನ್ನುವ ಕರ್ನಾಟಕದ ಕಲೆಗೆ ಹೆಜ್ಜೆ ಹಾಕುವ ಕಲಾವಿದರು ಇಲ್ಲಿದ್ದಾರೆ. ಇಲ್ಲಿಗೆ ಒಮ್ಮೆ ಬಂದರೆ ಸುಂದರ ಲೋಕದ ಪರಿಚಯ ನಿಮಗಾಗುತ್ತದೆ.

ಬೆಂಗಳೂರಿನಿಂದ 388.1 ಕಿ.ಮೀ. ವ್ಯಾಪ್ತಿಯಲ್ಲಿರುವ ಈ ತಾಣಕ್ಕೆ ವಾರದ ರಜೆ ಅಥವಾ ದೀರ್ಘಾವಧಿಯ ರಜೆಯಲ್ಲಿ ಬರಬಹುದು. ನಾಲ್ಕುನೂರು ವರ್ಷಗಳ ಇತಿಹಾಸ ಹೊಂದಿರುವ ಈ ತಾಣದಲ್ಲಿ ಅನೇಕ ರಾಜ ಮಹರಾಜರು ಆಳಿ ಹೋಗಿದ್ದಾರೆ. ಅವರ ಕಾಲದ ಕೆಲವು ಕುರುಹುಗಳು ಇಂದಿಗೂ ಜೀವಂತವಾಗಿವೆ. ಮಲೆನಾಡು ಪ್ರದೇಶ ವ್ಯಾಪ್ತಿಗೆ ಒಳಪಟ್ಟ ಈ ನಗರದ ಪ್ರಮುಖ ಪ್ರವಾಸ ತಾಣಗಳ ಪರಿಚಯ ಮಾಡಿಕೊಳ್ಳೋಣ ಬನ್ನಿ...

ಜೋಗ

ಜೋಗ

ಭಾರತದಲ್ಲಿಯೇ ಅತ್ಯಂತ ಎತ್ತರವಾದ ಜಲಧಾರೆ ಎಂದರೆ ಜೋಗ ಜಲಪಾತ. ಇದು ಜಗತ್ತಿನಲ್ಲಿ 23ನೇ ಅದ್ಭುತ ಜಲಪಾತ ಎಂದು ಪರಿಗಣಿಸಲಾಗಿದೆ. ಶರಾವತಿ ನದಿಯಿಂದ ಜನ್ಮ ತಾಳುವ ಈ ಜಲಧಾರೆ ಸಾಗರದಿಂದ 29 ಕಿ.ಮೀ. ದೂರದಲ್ಲಿದೆ. ಮಳೆಗಾಲದಲ್ಲಿ ಮೈದುಂಬಿ ಧುಮುಕುವ ಈ ಜಲಧಾರೆ ರಾಜ, ರೋರರ್, ರಾಕೆಟ್ ಮತ್ತು ರಾಣಿ ಎಂದು ನಾಲ್ಕು ಕವಲುಗಳಾಗಿ ಧುಮುಕುತ್ತದೆ. 273 ಮೀ. ಎತ್ತರದಿಂದ ಬೀಳುವ ಈ ಜಲಪಾತಕ್ಕೆ ಅನೇಕ ಬಸ್ ವ್ಯವಸ್ಥೆಗಳಿವೆ.
PC: wikipedia.org

ಕೆಳದಿ ರಾಮೇಶ್ವರ ದೇಗುಲ

ಕೆಳದಿ ರಾಮೇಶ್ವರ ದೇಗುಲ

ರಾಜ ವಂಶರಿಂದ ಪ್ರಸಿದ್ಧಿ ಪಡೆದ ಕೆಳದಿ ಪಟ್ಟಣವು ಸಾಗರದಿಂದ 8 ಕಿ.ಮೀ. ದೂರದಲ್ಲಿದೆ. ಸುಂದರ ಕೆತ್ತನೆಯ ದೇವಾಲಯವು ಇಲ್ಲಿಯ ಪ್ರಮುಖ ಆಕರ್ಷಣೆ. ಈ ದೇವಾಲಯದ ಎದುರು ಪುಟ್ಟದಾದ ನಂದಿ ಮೂರ್ತಿಯಿದೆ. ಸುಂದರ ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ದೇಗುಲದ ಗೋಡೆಗಳ ಮೇಲೆ ಹಳೆಗನ್ನಡದ ಬರಹಗಳನ್ನು ಕಾಣಬಹುದು. ಹೊಯ್ಸಳ ಹಾಗೂ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡ ಈ ದೇಗುಲದ ಎಡಭಾಗದಲ್ಲಿ ಪಾರ್ವತಿ ದೇವಸ್ಥಾನ ಇರುವುದನ್ನು ಕಾಣಬಹುದು.
PC: wikipedia.org

ಸಿಗಂಧೂರು

ಸಿಗಂಧೂರು

ಇಲ್ಲಿರುವ ಚೌಡೇಶ್ವರಿ ಅಮ್ಮನ ದೇವಾಲಯ ಬಹಳ ಪ್ರಸಿದ್ಧಿ ಪಡೆದಿದೆ. ಭಕ್ತರ ಕಷ್ಟಗಳನ್ನು ನಿವಾರಿಸುವ ಈ ತಾಯಿಗೆ ಭಕ್ತರ ಹರಿವು ಹೆಚ್ಚಾಗಿಯೇ ಇವೆ. ಭಕ್ತರು ಕಳೆದುಕೊಂಡ ವಸ್ತುಗಳನ್ನು ತಾಯಿಯಲ್ಲಿ ಹೇಳಿಕೊಂಡರೆ, ಪುನಃ ಅದು ಕೈ ಸೇರುತ್ತದೆ ಎನ್ನುವ ನಂಬಿಕೆ ಇದೆ. ಸಾಗರದಿಂದ 32 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ ಶರಾವತಿ ಹಿನ್ನೀರಿನಲ್ಲಿ ದೋಣಿ ವಿಹಾರದ ಮೂಲಕ ಹೋಗಬೇಕು. ದೋಣಿ ವಿಹಾರವು ಮಧುರ ಅನುಭವ ನೀಡುವುದು.

ಹೊನ್ನೇಮರಡು

ಹೊನ್ನೇಮರಡು

ಇತ್ತೀಚಿನ ದಿನದಲ್ಲಿ ಪ್ರಸಿದ್ಧಿ ಪಡೆಯುತ್ತಿರುವ ಈ ತಾಣದಲ್ಲಿ ಸಾಹಸ ಕ್ರೀಡೆಯನ್ನು ಆಡಬಹುದು. ಚಾರಣ ಪ್ರಿಯರು ಚಾರಣ ಮಾಡಬಹುದು. ಶರಾವತಿ ನದಿಯ ಹಿನ್ನೀರಿನಿಂದ ಆವೃತ್ತವಾದ ಈ ಜಾಗದಲ್ಲಿ ಜಲಕ್ರೀಡೆಗೂ ಅವಕಾಶವಿದೆ. ಸಾಗರದಿಂದ 25 ಕಿ.ಮೀ. ದೂರದಲ್ಲಿದೆ.
PC: flickr.com

ಇಕ್ಕೇರಿ

ಇಕ್ಕೇರಿ

ಹೊಯ್ಸಳರ ಶೈಲಿಯ ಸುಂದರ ಕೆತ್ತನೆ ಹೊಂದಿರುವ ಅಘೋರೇಶ್ವರ ದೇಗುಲ ಅತ್ಯಂತ ಪ್ರಸಿದ್ಧಿ ಪಡೆದಿದೆ. ಸಾಗರದಿಂದ 5 ಕಿ.ಮೀ. ಇರುವ ಈ ತಾಣ ನಯನ ಮನೋಹರವಾಗಿದೆ. ದೇಗುಲದಲ್ಲಿ ಶಿವಲಿಂಗವನ್ನು ಆರಾಧಿಸಲಾಗುತ್ತದೆ. 32 ಕೈಗಳ ಅಘೋರೇಶ್ವರ ಉತ್ಸವ ಮೂರ್ತಿ ಅದ್ಭುತವಾಗಿದೆ. ದೇಗುಲದ ಗೋಡೆಯ ಮೇಲೆ ಗಣಪತಿ, ಷಣ್ಮುಖ, ಮಹಿಷಮರ್ದಿನಿ, ಭೈರವ ಸೇರಿದಂತೆ ವಿವಿಧ ಬಗೆಯ ಕೆತ್ತನೆಗಳಿರುವುದನ್ನು ಗಮನಿಸಬಹುದು.
PC: wikimedia.org

ಕಲಸಿ

ಕಲಸಿ

ಸಾಗರದಿಂದ 8 ಕಿ.ಮೀ ದೂರದಲ್ಲಿರುವ ಈ ತಾಣ ಪವಿತ್ರ ಕ್ಷೇತ್ರಗಳಲ್ಲೊಂದು. ಇಲ್ಲಿ ಶಿವ ಹಾಗೂ ಮಲ್ಲಿಕಾರ್ಜುನ ಎನ್ನುವ ಎರಡು ಪ್ರಮುಖ ಅವಳಿ ದೇವಾಲಯಗಳಿವೆ. 12ನೇ ಶತಮಾನದ ಈ ದೇವಾಲಯಗಳು ಹೊಯ್ಸಳರ ಶೈಲಿಯಲ್ಲಿವೆ. ಕಲಸಿಯಲ್ಲಿರುವ ಬಹಳ ದೊಡ್ಡ ದೇವಾಲಯ ಎಂಬ ಹಿರಿಮೆಗೆ ಇವು ಪಾತ್ರವಾಗಿವೆ.
PC: wikipedia.org

ಹೆಗ್ಗೋಡು

ಹೆಗ್ಗೋಡು

ಸಾಗರ ತಾಲೂಕಿನ ಒಂದು ಪುಟ್ಟ ಹಳ್ಳಿ ಇದು. ಇಲ್ಲಿ ಜಗತ್ ಪ್ರಸಿದ್ಧಿ ಪಡೆದ ನಿನಾಸಂ ನಾಟಕ ಸಂಸ್ಥೆಯಿದೆ. ನಾಟಕ, ಚಲನಚಿತ್ರ ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಹಾಗೂ ತರಬೇತಿಗಳು ಸದಾಕಾಲ ನಡೆಯುತ್ತಲೇ ಇರುತ್ತವೆ. ಆರು ದಶಕಗಳ ಹಿಂದೆ, ಒಂದು ಚಿಕ್ಕ ಸಂಸ್ಥೆಯಾಗಿ ಮಿನುಗುತ್ತಿದ್ದ ನಿನಾಸಂ ಇದೀಗ ಜಗತ್ ವಿಖ್ಯಾತಿ ಪಡೆದಿದೆ.
PC: flickr.com

Read more about: sagara
Please Wait while comments are loading...