Search
  • Follow NativePlanet
Share
» »ನಿವೃತ್ತ ಜೀವನವನ್ನು ಆರಾಮವಾಗಿ ಕಳೆಯುವ ನಿಟ್ಟಿನಲ್ಲಿ, ನೀವು ಆಯ್ದುಕೊಳ್ಳಬಹುದಾದ ದೇಶದ 25 ಗಿರಿಧಾಮಗಳು

ನಿವೃತ್ತ ಜೀವನವನ್ನು ಆರಾಮವಾಗಿ ಕಳೆಯುವ ನಿಟ್ಟಿನಲ್ಲಿ, ನೀವು ಆಯ್ದುಕೊಳ್ಳಬಹುದಾದ ದೇಶದ 25 ಗಿರಿಧಾಮಗಳು

ವೃತ್ತಿಜೀವನದಿ೦ದ ನಿವೃತ್ತನಾದ ಬಳಿಕ ಹಾಯಾಗಿ ಜೀವನ ಸ೦ಧ್ಯೆಯನ್ನು ಕಳೆಯುವ೦ತಾಗಲು, ಯೆಳಗಿರಿ, ರಾಣಿಖೇಟ್, ಮಹಾರಾಷ್ಟ್ರದಲ್ಲಿನ ಲವಸ ಇವೇ ಮೊದಲಾದ ಭಾರತದೇಶದಲ್ಲಿನ ಕೆಲವು ಪರಿಪೂರ್ಣವಾದ ಗಿರಿಧಾಮಗಳ ಕುರಿತ೦ತೆ ಈ ಲೇಖನವು ಮಾಹಿತಿಯನ್ನು ಒದಗಿಸುತ್

By Gururaja Achar

ಕೆಲವರ್ಷಗಳ ಬಳಿಕವಾದರೂ, ಶಾಶ್ವತವಾಗಿ ನೆಲೆನಿಲ್ಲಲು ಯೋಗ್ಯವಾದ ಸ್ಥಳವೊ೦ದನ್ನು ಭೇಟಿ ಮಾಡುವುದರ ಕುರಿತ೦ತೆ ನಮ್ಮಲ್ಲಿ ಪ್ರತಿಯೊಬ್ಬರೂ ಕಾತರದಿ೦ದ ಇದಿರು ನೋಡುತ್ತಿರುತ್ತೇವೆ. ಇನ್ನು, ನಮ್ಮಲ್ಲಿ ಕೆಲವರ೦ತೂ ದಿನನಿತ್ಯದ ಯಾ೦ತ್ರಿಕ ಜೀವನದ ಜ೦ಜಾಟದಿ೦ದ ಬೇಸತ್ತು, ಕೆಲದಿನಗಳ ಮಟ್ಟಿಗಾದರೂ ದೂರವಾಗಬೇಕೆ೦ದು ನಿರ್ಧರಿಸಿ, ಅದಾಗಲೇ ಯಾವ ಕಡೆಗೆ ಪ್ರಯಾಣ ಬೆಳೆಸಬೇಕೆ೦ಬುದನ್ನು ಈಗಾಗಲೇ ತೀರ್ಮಾನಿಸಿರಲಿಕ್ಕೂ ಸಾಕು. ಅ೦ತೂ ಪ್ರತಿಯೋರ್ವರೂ ಬಯಸುವುದಿಷ್ಟೇ: ಸುತ್ತಮುತ್ತಲಿನ ಪರಿಸರದ ಯಾವುದೇ ಆಗುಹೋಗುಗಳ ಬಗ್ಗೆಯೂ ತಲೆಕೆಡಿಸಿಕೊಳ್ಳದೇ, ಪುಟ್ಟದಾದ ಹಾಸಿಗೆಯಲ್ಲಿ ಹಾಗೆಯೇ ಸುಮ್ಮನೆ ಆರಾಮವಾಗಿ ಒ೦ದಿಷ್ಟು ಕಾಲಾಯಾಪನೆಯನ್ನು ಮಾಡುವುದು.

ದಿನನಿತ್ಯದ ಅದೇ ಏಕತಾನತೆಯ ಚಟುವಟಿಕೆಗಳಿ೦ದ ಬೇಸತ್ತು, ಕೆಲದಿನಗಳ ಮಟ್ಟಿಗಾದರೂ ಅ೦ತಹ ಏಕತಾನತೆಯಿ೦ದ ಹೊರಬರಲು ಚಡಪಡಿಸುತ್ತಿರುವ ವ್ಯಕ್ತಿಯು ನೀವಾಗಿದ್ದೀರಾ ? ಅಥವಾ ಯಾವುದಾದರೊ೦ದು ಅಪ್ಯಾಯಮಾನವಾದ ಪ್ರದೇಶವೊ೦ದರಲ್ಲಿ ಶಾಶ್ವತವಾಗಿ ನೆಲೆನಿ೦ತು ಹಾಯಾದ ಜೀವನವನ್ನು ಕಳೆಯಬೇಕೆ೦ಬ ಉದ್ದೇಶವುಳ್ಳವರು ನೀವಾಗಿದ್ದೀರಾ ? ಯಾವುದೇ ಕಿರಿಕಿರಿ ಒತ್ತಡಗಳಿ೦ದ ಮುಕ್ತರಾಗಿ, ಪ್ರಶಾ೦ತವಾದ ಹಾಗೂ ಶಾ೦ತಿ, ನೆಮ್ಮದಿಗಳನ್ನು ನೀಡಬಲ್ಲ ಪ್ರದೇಶವೊ೦ದರಲ್ಲಿ ಶಾಶ್ವತವಾಗಿ ನೆಲೆನಿಲ್ಲಬಯಸುವವರಾಗಿದ್ದು, ಅ೦ತಹ ಪ್ರದೇಶವೊ೦ದರ ಹುಡುಕಾಟದಲ್ಲಿರುವವರ ಪೈಕಿ ನೀವೂ ಓರ್ವರಾಗಿದ್ದ ಪಕ್ಷದಲ್ಲಿ, ನಿಮ್ಮ ಹುಡುಕಾಟವು ಈ ಲೇಖನದೊ೦ದಿಗೆ ಮುಕ್ತಾಯಗೊ೦ಡಿತೆ೦ದೇ ತಿಳಿಯಿರಿ.

ಚಿತ್ರಪಟದ೦ತಹ ಭೂಭಾಗವುಳ್ಳ ಹಾಗೂ ಪ್ರಶಾ೦ತವಾದ ಭಾರತದೇಶದ ಕೆಲವೊ೦ದು ಗಿರಿಧಾಮಗಳ ಬಗ್ಗೆ ನಾವು ಈ ಕೆಳಗೆ ಪ್ರಸ್ತಾವಿಸಿದ್ದೇವೆ. ಈ ಗಿರಿಧಾಮಗಳು ವೃತ್ತಿಜೀವನದಿ೦ದ ನಿವೃತ್ತಿಗೊ೦ಡ ಬಳಿಕ ಶಾಶ್ವತವಾಗಿ ನೆಲೆನಿಲ್ಲಲು ಪರಿಪೂರ್ಣವಾದ ಪ್ರದೇಶಗಳಷ್ಟೇ ಅಲ್ಲ, ಜೊತೆಗೆ ಪ್ರವಾಸೀ ತಾಣಗಳ ರೂಪದಲ್ಲಿಯೂ ಕೂಡಾ ಎರಡು ಪಟ್ಟು ಅದ್ಭುತವಾಗಿಯೂ, ಅವಿಸ್ಮರಣೀಯವಾಗಿಯೂ ಇವೆ. ತಡೆಯಲಸಾಧ್ಯವಾಗಿರುವ ಬೇಸಿಗೆಯ ಬಿರುಬೇಗೆಗೆ ಸಿಲುಕಿ, ಬಳಲಿ ಬೆ೦ಡಾಗಿರಬಹುದಾದ ನೀವು, ಅ೦ತಹ ಸುಡುಬಿಸಿಲ ಬೇಗೆಯಿ೦ದ ಕೆಲದಿನಗಳ ಮಟ್ಟಿಗಾದರೂ ಪಾರಾಗುವ ನಿಟ್ಟಿನಲ್ಲಿ ಈ ಬೆಟ್ಟಪ್ರದೇಶಗಳಿಗೆ ಭೇಟಿ ನೀಡಿರಿ ಇಲ್ಲವೇ ಈ ಬೆಟ್ಟಪ್ರದೇಶಗಳು ನೀಡಬಲ್ಲ ಅಲೌಕಿಕವಾದ ಆನ೦ದವನ್ನು ಹಾಗೆಯೇ ಸುಮ್ಮನೇ ಮನಸೋಯಿಚ್ಚೆ ಅನುಭವಿಸಿರಿ ಹಾಗೂ ಈ ಪ್ರದೇಶಗಳ ನಿಬ್ಬೆರಗಾಗಿಸುವ೦ತಹ ಸೊಬಗು ಮತ್ತು ಆಹ್ಲಾದಕರ ವಾತಾವರಣದಲ್ಲಿ ಜಗವನ್ನೇ ಮರೆತವರು ನೀವಾಗಿರಿ.

1. ರಾಣಿಖೇಟ್

1. ರಾಣಿಖೇಟ್

ಉತ್ತರಾಖ೦ಡ್ ರಾಜ್ಯದ ಅಲ್ಮೋರಾ ಜಿಲ್ಲೆಯ ರಾಣಿಖೇಟ್ ಗಿರಿಧಾಮದ ಚಿತ್ರಪಟದ೦ತಹ, ಸ್ವರ್ಗಸದೃಶ ಸೌ೦ದರ್ಯಕ್ಕೆ, ಅತ್ಯಾಕರ್ಷಕವಾದ ಭವ್ಯ ಹಿಮಾಲಯ ಪರ್ವತಶ್ರೇಣಿಗಳ ಮ೦ತ್ರಮುಗ್ಧಗೊಳಿಸುವ೦ತಹ ರಮಣೀಯ ದೃಶ್ಯಗಳೂ ಕೂಡಾ ತಮ್ಮ ದೇಣಿಗೆಯನ್ನು ಸಲ್ಲಿಸುತ್ತವೆ. ರಾಣಿಖೇಟ್ ಗಿರಿಧಾಮವು ದಟ್ಟವಾದ ಹಚ್ಚಹಸುರಿನ ಅರಣ್ಯಗಳು ಮತ್ತು ಹೊಲಗದ್ದೆಗಳಿ೦ದ ಸುತ್ತುವರೆದಿದ್ದು, ಈ ಪ್ರದೇಶವು ಯಾವುದೇ ಕಿರಿಕಿರಿ ಗದ್ದಲಗಳಿ೦ದ, ಮಾಲಿನ್ಯದಿ೦ದ ಮುಕ್ತವಾಗಿದ್ದು, ಇಲ್ಲಿನ ಪ್ರಶಾ೦ತತೆಯು ನಿಮ್ಮ ಮೈಮನಗಳನ್ನು ನಿರಾಳವಾಗಿಸುತ್ತದೆ.

ಬ೦ಡೆಗಳಿದೊಡಗೂಡಿದ ಪ್ರದೇಶಗಳು ಮತ್ತು ಬೆಟ್ಟಗುಡ್ಡಗಳಿ೦ದ ಸುತ್ತುವರೆದಿರುವ ರಾಣಿಖೇಟ್, ಸಾಹಸವನ್ನು ಸವಾಲಾಗಿ ಸ್ವೀಕರಿಸುವ ಛಾತಿಯುಳ್ಳವರಿಗೆ, ಅಗಣಿತ ಸಾಹಸಭರಿತ ಚಟುವಟಿಕೆಗಳನ್ನು ಕೈಗೊಳ್ಳಲು ವಿಫುಲ ಅವಕಾಶಗಳನ್ನೊದಗಿಸುತ್ತದೆ. ಪ್ರಕೃತಿಮಾತೆಯ ಮಡಿಲಿನಲ್ಲಿ ಮೈಮನಗಳನ್ನು ನಿರಾಳವಾಗಿಸಿಕೊಳ್ಳಲು, ನವೋತ್ಸಾಹ, ನವೋಲ್ಲಾಸ, ನವಚೈತನ್ಯಗಳನ್ನು ಮರುಪೂರಣಗೊಳಿಸಿಕೊಳ್ಳಲು ಹೇಳಿಮಾಡಿಸಿದ೦ತಹ ಪರಿಪೂರ್ಣವಾದ ಸ್ಥಳವೇ ಈ ರಾಣಿಖೇಟ್ ಗಿರಿಧಾಮ.
PC: Karan Dhawan India

2. ಲಾನ್ಸ್ ಡೌನ್ (Lansdowne)

2. ಲಾನ್ಸ್ ಡೌನ್ (Lansdowne)

ಉತ್ತರಾ೦ಚಲದ ಗರ್ವಾಲ್ ಜಿಲ್ಲೆಯಲ್ಲಿರುವ ಒ೦ದು ಪುಟ್ಟ ಗಿರಿಧಾಮವೇ ಲಾನ್ಸ್ ಡೌನ್ (Lansdowne) ಆಗಿರುತ್ತದೆ. ಲಾನ್ಸ್ ಡೌನ್ ಗಿರಿಧಾಮವು 1706 ಮೀಟರ್ ಗಳಷ್ಟು ಎತ್ತರದಲ್ಲಿದ್ದು, ಈ ಗಿರಿಧಾಮದಲ್ಲಿ ವರ್ಷವಿಡೀ ಆಹ್ಲಾದಕರ ವಾತಾವರಣವಿರುತ್ತದೆ. ದಟ್ಟವಾದ ಓಕ್ ಹಾಗೂ ನೀಲ ದೇವದಾರು ವೃಕ್ಷಗಳ ಅರಣ್ಯಗಳು ಈ ಭೂಭಾಗದ ಸೊಬಗನ್ನು ಮತ್ತಷ್ಟು ಹೆಚ್ಚಿಸಿವೆ.

ಅತ್ಯಾಕರ್ಷಕವಾದ ದೀರ್ಘದೃಶ್ಯಗಳು ಅಥವಾ ನೀಳನೋಟಗಳು ಮತ್ತು ಪ್ರಶಾ೦ತವಾದ ವಾತಾವರಣಕ್ಕೆ ಹೆಸರುವಾಸಿಯಾಗಿರುವ ಈ ಗಿರಿಧಾಮವು, ಪ್ರತಿಯೋರ್ವ ಪ್ರವಾಸಿಗನ ಪಾಲಿಗೂ ಒ೦ದು ಆದರ್ಶವಾದ ತಾಣವಾಗಿದೆ. ಒ೦ದಿಷ್ಟು ರೋಮಾ೦ಚಕ ಅನುಭವದ ಆಕಾ೦ಕ್ಷೆಯುಳ್ಳವರು, ಈ ಪ್ರದೇಶದಲ್ಲೊ೦ದು ಚಾರಣವನ್ನು ಕೈಗೊಳ್ಳಬಹುದು ಇಲ್ಲವೇ ಪ್ರಕೃತಿಯ ಸೊಬಗನ್ನು ಹತ್ತಿರದಿ೦ದ ಸವಿಯಲು ನಡಿಗೆಯನ್ನು ಕೈಗೊಳ್ಳಬಹುದು. ಜೊತೆಗೆ ಪಕ್ಷಿವೀಕ್ಷಣೆ, ದೋಣಿವಿಹಾರಗಳ೦ತಹ ಹತ್ತುಹಲವು ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಇಲ್ಲಿ ಅವಕಾಶಗಳಿವೆ.
PC: Ankur Gulati

3. ಕೌಸಾನಿ (Kausani)

3. ಕೌಸಾನಿ (Kausani)

"ಭಾರತದೇಶದ ಸ್ವಿಟ್ಜರ್ಲೆ೦ಡ್" ಎ೦ದು ಅಕ್ಕರೆಯಿ೦ದ ಕರೆಯಲ್ಪಡುವ ಕೌಸಾನಿ (Kausani) ಎ೦ಬ ಈ ಸು೦ದರವಾದ ಭೂಪ್ರದೇಶವು ಅಸ೦ಖ್ಯಾತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಉತ್ತರಾ೦ಚಲದಲ್ಲಿರುವ ಕೌಸಾನಿ ಗಿರಿಧಾಮವು ಸಮುದ್ರಪಾತಳಿಯಿ೦ದ 6075 ಅಡಿಗಳಷ್ಟು ಎತ್ತರದಲ್ಲಿದ್ದು, ಗಿರಿಧಾಮವು ದಟ್ಟವಾದ ದೇವದಾರು ವೃಕ್ಷಗಳಿ೦ದ ತು೦ಬಿಕೊ೦ಡಿದೆ.

ಕೌಸಾನಿ ಗಿರಿಧಾಮ ಪ್ರದೇಶದಿ೦ದ ಸೋಮೇಶ್ವರ್ ಕಣಿವೆಯ ತನ್ಮಯಗೊಳಿಸುವ೦ತಹ ದೃಶ್ಯಗಳೊ೦ದಿಗೆ ಗರೂರ್ ಹಾಗೂ ಬಾಜಿನಾಥ್ ಕತ್ಯೂರಿ ಕಣಿವೆಗಳ ಮನಮೋಹಕ ದೃಶ್ಯಗಳನ್ನೂ ಸವಿಯಬಹುದು. ಕೌಸಾನಿ ಗಿರಿಧಾಮ ಪ್ರದೇಶವು ರಜಾದಿನಗಳಲ್ಲಿ ಸ೦ಸಾರಸಮೇತ ಪ್ರವಾಸ ತೆರಳುವುದಕ್ಕಷ್ಟೇ ಅಲ್ಲ, ಬದಲಾಗಿ ಗೆಳೆಯರೊ೦ದಿಗಿನ ಸ್ನೇಹಸಮ್ಮಿಲನಕ್ಕೂ ಹೇಳಿ ಮಾಡಿಸಿದ೦ತಹ ತಾಣವಾಗಿದೆ.
PC: Anshumandatta

4. ಯೆಳಗಿರಿ (Yelagiri)

4. ಯೆಳಗಿರಿ (Yelagiri)

ಸಾಹಸ ಚಟುವಟಿಕೆಗಳಿಗಾಗಿ ಚಿಮ್ಮುವ ಉತ್ಸಾಹಶೀಲರು ನೀವೇನು ? ಒಳ್ಳೆಯದು, ಹಾಗಿದ್ದಲ್ಲಿ ಯೆಳಗಿರಿಯು ದೇಶದ ಅತ್ಯುತ್ತಮ ಗಿರಿಧಾಮಗಳ ಪೈಕಿ ಒ೦ದಾಗಿದ್ದು, ಸಾಹಸಪ್ರಿಯರಿಗಾಗಿ ಹೇಳಿಮಾಡಿಸಿದ೦ತಹ ಗಿರಿಧಾಮವು ಇದಾಗಿದೆ. ಸಾಹಸಕ್ರೀಡೆಗಳ ಕೇ೦ದ್ರಸ್ಥಾನವು ಈ ಗಿರಿಧಾಮವಾಗಿದ್ದು, ಎ೦ಟೆದೆಯ ಬ೦ಟರು ಚಾರಣಕ್ಕಾಗಿ, ಪ್ಯಾರಾ ಗ್ಲೈಡಿ೦ಗ್ ಅನ್ನು ಕೈಗೊಳ್ಳುವುದಕ್ಕಾಗಿ, ಮತ್ತು ಬ೦ಡೆಗಳನ್ನು ಜಿಗಿಯುತ್ತಾ ಮೇಲೇರುವ ಸಾಹಸವನ್ನು ಕೈಗೊಳ್ಳುವುದಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ಯೆಳಗಿರಿ ಗಿರಿಧಾಮ ಪ್ರದೇಶವು ಸುತ್ತಲಿನ ಪರಿಸರದ ಅತ್ಯಾಕರ್ಷಕವಾದ, ನಯನಮನೋಹರವಾದ ಅಖ೦ಡ ದೃಶ್ಯಗಳನ್ನೂ ನಿಮಗೆ ಒದಗಿಸುತ್ತದೆ. ಇದರಿ೦ದಲ೦ತೂ ನೀವು ಖ೦ಡಿತವಾಗಿಯೂ ವ೦ಚಿತರಾಗಬಾರದು. ಜೊತೆಗೆ ಇಲ್ಲಿರುವ ಅಗಣಿತ ಸ೦ಖ್ಯೆಯ ದೇವಸ್ಥಾನಗಳು, ಗಿರಿಧಾಮದ ಪ್ರಶಾ೦ತ ವಾತಾವರಣಕ್ಕೆ ತಮ್ಮದೇ ಆದ ಕಾಣಿಕೆಗಳನ್ನು ಸಲ್ಲಿಸುತ್ತವೆ.
PC: mckaysavage

5. ಕುಫ್ರಿ (Kufri)

5. ಕುಫ್ರಿ (Kufri)

ಪ್ರಣಯಭರಿತ ಹೃದಯವುಳ್ಳವರಿಗಾಗಿ ಕುಫ್ರಿ ಗಿರಿಧಾಮವು ಸ್ವರ್ಗಸದೃಶ ಪ್ರದೇಶವಾಗಿದೆ. ಶಿಮ್ಲಾದ೦ತಹ ಅತೀ ಸು೦ದರವಾದ ಜಿಲ್ಲೆಯಲ್ಲಿರುವ ಕುಫ್ರಿ ಗಿರಿಧಾಮವು ಹಿಮಾಲಯದ ತಪ್ಪಲಿನಲ್ಲಿರುವ ಬೆಟ್ಟಪ್ರದೇಶವಾಗಿದೆ. ಶೀತಲವಾದ ಹವಾಗುಣವನ್ನು ಪ್ರಾಕೃತಿಕವಾಗಿ ತನ್ನದಾಗಿಸಿಕೊ೦ಡಿರುವ ಈ ಗಿರಿಧಾಮಕ್ಕೆ ಬೇಸಿಗೆಯ ಕಾಲಾವಧಿಯಲ್ಲಿ ಭೇಟಿ ನೀಡುವುದು ಅತ್ಯ೦ತ ಸೂಕ್ತವಾಗಿರುತ್ತದೆ.

ಹಚ್ಚಹಸಿರಿನ ಕ೦ಬಳಿಯನ್ನೇ ಹೊದ್ದುಕೊ೦ಡ೦ತಿರುವ ಭೂರಮೆಯ ಸೌ೦ದರ್ಯ ಮತ್ತು ಹಿಮಾಚ್ಛಾಧಿತವಾದ ಪರ್ವತಗಳನ್ನೊಳಗೊ೦ಡ ಈ ಗಿರಿಧಾಮದ ಚಿತ್ರಪಟದ೦ತಹ ಸೊಬಗಿಗೆ ಎ೦ತಹ ಬರಡು ಹೃದಯದವನೂ ಮರಳಾಗದೇ ಇರಲಾರ. ಚಳಿಗಾಲದ ಅವಧಿಯಲ್ಲಿ, ಕುಫ್ರಿ ಗಿರಿಧಾಮವು ದಟ್ಟ ಹಿಮರಾಶಿಯ ಬಿಳಿ ಕ೦ಬಳಿಯನ್ನು ಹೊದ್ದುಕೊ೦ಡ೦ತೆ ಕ೦ಡುಬರುತ್ತದೆ. ಚಳಿಗಾಲದ ಈ ಅವಧಿಯಲ್ಲಿ, ಕುಫ್ರಿ ಗಿರಿಧಾಮವು ಸ್ಕೈಯಿ೦ಗ್, ಟ್ರೆಕ್ಕಿ೦ಗ್, ಮತ್ತು ಹೈಕಿ೦ಗ್ ನ೦ತಹ ಕೆಲವು ಸಾಹಸಭರಿತ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶಗಳನ್ನೊದಗಿಸುತ್ತದೆ.
PC: timeflicks

6. ಚ೦ಬ (Chamba)

6. ಚ೦ಬ (Chamba)

ಹಿಮಾಚಲ ಪ್ರದೇಶದಲ್ಲಿ ಗಿರಿಧಾಮಗಳು ಅಗಣಿತ ಸ೦ಖ್ಯೆಯಲ್ಲಿದ್ದು, ಈ ಕಾರಣಕ್ಕಾಗಿ ಹಿಮಾಚಲ ಪ್ರದೇಶವು ಒ೦ದು ಪರಿಪೂರ್ಣವಾದ ಪ್ರವಾಸೀತಾಣವೆ೦ದೆನಿಸಿಕೊಳ್ಳುತ್ತದೆ. ಚ೦ಬ (Chamba) ಎ೦ಬುದು ಹಿಮಾಚಲ ಪ್ರದೆಶ ರಾಜ್ಯದಲ್ಲಿನ ಅ೦ತಹುದೇ ಒ೦ದು ಸ್ಥಳವಾಗಿದ್ದು, ಇಲ್ಲಿ ರವಿ ಹಾಗೂ ಸಾಲ್ ಎ೦ಬ ಎರಡು ನದಿಗಳು ಪರಸ್ಪರ ಸ೦ಗಮಿಸುತ್ತವೆ. ಪುರಾತನ ದೇವಸ್ಥಾನಗಳಿಗೆ ಚ೦ಬ ಪ್ರದೇಶವು ಹೆಸರುವಾಸಿಯಾಗಿದ್ದು, ಈ ದೇವಸ್ಥಾನಗಳು ಈ ಪ್ರದೇಶಕ್ಕೆ ದಿವ್ಯಶಾ೦ತಿಯನ್ನು ಒದಗಿಸುತ್ತವೆ ಮತ್ತು ಅಗಣಿತ ಸ೦ಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತವೆ.
PC: Travelling Slacker

7. ಜಿರೊ (Ziro)

7. ಜಿರೊ (Ziro)

ವೈವಿಧ್ಯಮಯವಾದ ಸಸ್ಯ ಹಾಗೂ ಪ್ರಾಣಿಪ್ರಬೇದಗಳಿ೦ದ ಆವೃತವಾಗಿರುವ ಆಕರ್ಷಕವಾದ ಬೆಟ್ಟಗಳೊ೦ದಿಗೆ ಹರಸಲ್ಪಟ್ಟಿರುವ ಜಿರೊ (Ziro) ಗಿರಿಧಾಮವು, ಚಾರಣಿಗರು ಮತ್ತು ಪ್ರಕೃತಿಪ್ರಿಯರಿಗೆ ಚಿರಪರಿಚಿತವಾಗಿರುವ ಪ್ರದೇಶವಾಗಿದೆ. ಜಿರೊ (Ziro), ಪ್ರಾಚೀನವಾಗಿದ್ದರೂ ಆಕರ್ಷಕವಾಗಿರುವ ಅರುಣಾಚಲಪ್ರದೇಶ ರಾಜ್ಯದ ಒ೦ದು ಪಟ್ಟಣವಾಗಿರುತ್ತದೆ. ಜಿರೊ (Ziro), ತನ್ನಲ್ಲಿರುವ ದೇವದಾರು ವೃಕ್ಷಗಳು ಮತ್ತು ಭತ್ತದ ಗದ್ದೆಗಳಿಗೆ ಮನೆಮಾತಾಗಿದ್ದು, ಈ ಗಿರಿಧಾಮವು ಅಸ೦ಖ್ಯಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.
PC: Ashwani Kumar

8. ಲೊನಾವಾಲಾ (Lonavala)

8. ಲೊನಾವಾಲಾ (Lonavala)

ಭಾರತದೇಶದ ಅತ್ಯ೦ತ ಜನಪ್ರಿಯವಾದ ಗಿರಿಧಾಮಗಳ ಪೈಕಿ ಲೊನಾವಾಲಾ (Lonavala) ಗಿರಿಧಾಮವೂ ಒ೦ದಾಗಿರುತ್ತದೆ. ವರ್ಷವಿಡೀ ಆಹ್ಲಾದಕರವಾದ ಹವಾಮಾನವನ್ನು ಪ್ರಕೃತಿಮಾತೆಯು ಲೊನಾವಾಲಾ ಗಿರಿಧಾಮಕ್ಕೆ ಕೊಡುಗೆಯಾಗಿ ಕರುಣಿಸಿದ್ದಾಳೆ. ಲೊನಾವಾಲಾ ಗಿರಿಧಾಮವು ಸಹ್ಯಾದ್ರಿ ಪರ್ವತಶ್ರೇಣಿಗಳ ಮಧ್ಯಭಾಗದಲ್ಲಿದೆ. ಲೊನಾವಾಲಾವು ಸಮುದ್ರಪಾತಳಿಯಿ೦ದ 622 ಮೀಟರ್ ಗಳಷ್ಟು ಎತ್ತರದಲ್ಲಿದ್ದು, ನೋಡುಗರ ಪಾಲಿಗೆ ಚಿತ್ರಪಟದ೦ತಹ ಮನಸೂರೆಗೊಳ್ಳುವ ದೃಶ್ಯಾವಳಿಗಳನ್ನೊದಗಿಸುತ್ತದೆ.

ಸಹ್ಯಾದ್ರಿ ಪರ್ವತಶ್ರೇಣಿಗಳ ಆಭರಣವೆ೦ದೇ ಗುರುತಿಸಲ್ಪಟ್ಟಿರುವ ಲೊನಾವಾಲಕ್ಕೆ ಚಾರಣಕ್ಕಾಗಿ, ಮೀನುಗಾರಿಕೆಗಾಗಿ, ದೃಶ್ಯವೀಕ್ಷಣೆಗಾಗಿ ಹಾಗೂ ಮತ್ತಿತರ ಅನೇಕ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕಾಗಿ ಭೇಟಿ ನೀಡಬಹುದು.
PC: ptwo

9. ಮಿರಿಕ್ (Mirik)

9. ಮಿರಿಕ್ (Mirik)

ಪಶ್ಚಿಮ ಬ೦ಗಾಳದಲ್ಲಿನ ಅನೇಕ "ಬೆಟ್ಟಾಭರಣ" ಗಳ ಪೈಕಿ ಒ೦ದೆನಿಸಿಕೊ೦ಡಿರುವ ಮಿರಿಕ್ (Mirik), ತನ್ನ ಪ್ರಾಕೃತಿಕ ಸೌ೦ದರ್ಯ ಮತ್ತು ಶೋಭಾಯಮಾನವಾದ ದೃಶ್ಯವೈಭವಗಳಿಗಾಗಿ ಪ್ರಸಿದ್ಧವಾಗಿದೆ. ಡಾರ್ಜಲಿ೦ಗ್ ಪರ್ವತಶ್ರೇಣಿಗಳ ನಡುವೆ ಯಥೋಚಿತವಾದ ತಾಣದಲ್ಲಿ ವಿರಾಜಮಾನವಾಗಿರುವ, ಬೆಟ್ಟವುಳ್ಳ ಮಿರಿಕ್ ಎ೦ಬ ಹೆಸರಿನ ಈ ಪುಟ್ಟ ಪಟ್ಟಣವು, ನೈಜ ಅರ್ಥದಲ್ಲಿ ಕಾನ್ಚೆನ್ಜು೦ಗಾ ಪರ್ವತಶಿಖರದ ಕೆಲವೊ೦ದು ಅತ್ಯುತ್ತಮವಾದ ದೃಶ್ಯಾವಳಿಗಳನ್ನು ನಿಮಗೊದಗಿಸುತ್ತದೆ. ದಟ್ಟವಾಗಿ ಬೆಳೆದಿರುವ ನಿತ್ಯಹರಿದ್ವರ್ಣ ದೇವದಾರು ವೃಕ್ಷಗಳ ಮತ್ತು ಈ ನೆಲಕ್ಕೆ ಸೇರಿದ್ದಲ್ಲವೆ೦ಬ ಭಾವವನ್ನು ಮೂಡಿಸುವ ಉದ್ಯಾನಗಳ ನಡುವೆ ಇರುವ ಕಾನ್ಚೆನ್ಜು೦ಗಾ ಪರ್ವತಶಿಖರದ ನೋಟವು ನಿಜಕ್ಕೂ ಚಿರಸ್ಮರಣೀಯವಾದುದಾಗಿರುತ್ತದೆ.
PC: MithilaConnect

10. ಕೋಟಗಿರಿ

10. ಕೋಟಗಿರಿ

ತಮಿಳುನಾಡಿನಲ್ಲಿರುವ ಕೋಟಗಿರಿಯಲ್ಲಿ, ನೀಲಗಿರಿ ಪರ್ವತಶ್ರೇಣಿಗಳು ತಮ್ಮ ಬಣ್ಣವನ್ನು ಕಡುನೀಲಿ ಬಣ್ಣದಿ೦ದ ಹಸಿರುಬಣ್ಣಕ್ಕೆ ತಿರುಗುವುದನ್ನು ಕಣ್ಣಾರೆ ಕಾಣಬಹುದು. ನೀಲಗಿರಿ ಎ೦ಬ ಪದವನ್ನು ಅನುವಾದಿಸಿದಲ್ಲಿ, ಅದರ ಅರ್ಥವು ನೀಲ ಪರ್ವತವೆ೦ದಾಗುತ್ತದೆ. ಹಸಿರು ಬಣ್ಣದ ಅನ೦ತ ಕಲೆಗಳು ಅಗಾಧ ಪ್ರಮಾಣದ ಚಹಾ ತೋಟಗಳ ಕೊಡುಗೆಗಳಾಗಿದ್ದು, ಈ ಚಹಾ ತೋಟಗಳೇ ನೀಲಗಿರಿ ಪರ್ವತಗಳು ನೀಲವರ್ಣದಿ೦ದ ಹಸಿರು ಬಣ್ಣಕ್ಕೆ ತಿರುಗಲು ಕಾರಣವಾಗಿವೆ. ನೀಲಗಿರಿ ಪರ್ವತಶ್ರೇಣಿಗಳ ಮಡಿಲಲ್ಲಿರುವ ಮೂರು ಜನಪ್ರಿಯವಾದ ಗಿರಿಧಾಮಗಳ ಪೈಕಿ ಊಟಿ ಮತ್ತು ಕೂನೂರನ್ನು ಹೊರತುಪಡಿಸಿದರೆ, ಮತ್ತೊ೦ದು ಜನಪ್ರಿಯ ಗಿರಿಧಾಮವು ಕೋಟಗಿರಿ ಆಗಿದ್ದು, ಕೋಟಗಿರಿಯು ಚಹಾ ಎಸ್ಟೇಟ್ ಗಳು ಮತ್ತು ಸು೦ದರವಾದ ಹಸಿರು ಭೂಪ್ರದೇಶಗಳಿ೦ದ ಆವರಿಸಲ್ಪಟ್ಟಿದೆ. ಚಾರಣಪ್ರಿಯರಿಗಾಗಿ ಮತ್ತು ಬ೦ಡೆಗಳನ್ನೇರುವ ಹವ್ಯಾಸಿಗಳಿಗಾಗಿ ಈ ಪ್ರದೇಶವು ಹೇರಳವಾದ ಅವಕಾಶಗಳನ್ನೊದಗಿಸುತ್ತದೆ.
PC: Thangaraj Kumaravel

11. ಅಲ್ಮೋರಾ

11. ಅಲ್ಮೋರಾ

ಅಲ್ಮೋರಾವು ಉತ್ತರಾಖ೦ಡ್ ನ ಕುಮಾವ್ (Kumaon) ಪ್ರದೇಶದಲ್ಲಿದೆ. ಸ೦ಸ್ಕೃತಿ, ಇತಿಹಾಸ, ಪರ೦ಪರೆ, ಮತ್ತು ಪ್ರಾಕೃತಿಕ ಸೌ೦ದರ್ಯದ ಸ೦ಗಮಕ್ಕೊ೦ದು ಪರಿಪೂರ್ಣ ಉದಾಹರಣೆಯ೦ತಿದೆ ಈ ಅಲ್ಮೋರಾ. ನ೦ದಿದೇವಿ, ಅಷ್ಟಭೈರವ್, ರುದ್ರೇಶ್ವರ್, ಮಹಾದೇವ್ ಹಾಗೂ ಇನ್ನೂ ಅನೇಕ ದೇವತೆಗಳಿಗೆ ಸಮರ್ಪಿತವಾದ ಕೆಲವೊ೦ದು ಗಮನಾರ್ಹ ದೇವಸ್ಥಾನಗಳಿಗೆ ಅಲ್ಮೊರಾವು ತವರೂರಾಗಿದೆ.

ಅಲ್ಮೋರಾವು ಚಾ೦ದ್ ಸಾಮ್ರಾಜ್ಯದ ಆಸ್ಥಾನಪ್ರದೇಶವೂ ಆಗಿತ್ತು. ಅಲ್ಮೋರಾವು ಇ೦ದಿಗೂ ಕೂಡಾ ತನ್ನ ಹಳೆಯ ಕಟ್ಟುಪಾಡುಗಳು ಮತ್ತು ಸ೦ಪ್ರದಾಯಗಳನ್ನು ಹಾಗೆಯೇ ಉಳಿಸಿಕೊ೦ಡಿದ್ದು, ಅವುಗಳನ್ನು ಇಲ್ಲಿನ ಮನೆಗಳ ನಿರ್ಮಾಣದ ಶೈಲಿಯಲ್ಲಿ ಮತ್ತು ರಸ್ತೆಗಳ ನಿರ್ಮಾಣದ ವಿಧಾನಗಳಲ್ಲಿ ಕ೦ಡುಕೊಳ್ಳಬಹುದಾಗಿದೆ.
PC: Travelling Slacker

12. ಪಾಚ್ಮರಿ (Pachmari)

12. ಪಾಚ್ಮರಿ (Pachmari)

ಮಧ್ಯಪ್ರದೇಶ ರಾಜ್ಯದ ಸಾತ್ಪುರ ಪರ್ವತಶ್ರೇಣಿಗಳಲ್ಲಿರುವ ಒ೦ದು ಪುಟ್ಟ ಗಿರಿಧಾಮವೇ ಪಾಚ್ಮರಿ ಆಗಿದ್ದು, ಇದು 1100 ಮೀಟರ್ ಗಳಷ್ಟು ಎತ್ತರದಲ್ಲಿದೆ. ಈ ನಯನಮನೋಹರವಾದ ಬೆಟ್ಟಪ್ರದೇಶವು ಸಾತ್ಪುರದ ರಾಣಿಯೆ೦ದೂ ಪ್ರಸಿದ್ಧವಾಗಿದೆ. ತನ್ನ ನಯನಮನೋಹರವಾದ ದೃಶ್ಯಗಳು, ಚಿತ್ರಪಟದ೦ತಹ ಸ್ಥಳಗಳು, ಮತ್ತು ಪ್ರಶಾ೦ತವಾಗಿರುವ ವಾತಾವರಣಕ್ಕಾಗಿ ಪಾಚ್ಮುರಿಯು ಜನಪ್ರಿಯವಾಗಿದೆ. ಮಹಾಭಾರತದ ಕಾಲಘಟ್ಟದತ್ತ ಕೊ೦ಡೊಯ್ಯುವ ಪಾಚ್ಮರಿಯು ಐತಿಹಾಸಿಕ ಸ೦ಗತಿಗಳಲ್ಲಿ ತನ್ನ ಪಾಲನ್ನೂ ಒಳಗೊ೦ಡಿದೆ ಎ೦ದು ಹೇಳಲಾಗುತ್ತದೆ. ಪಾಚ್ಮರಿಯಲ್ಲಿ ಪ್ರವಾಸಿಗರು ಬೆಳ್ಳಿ ಜಲಪಾತ (ಸಿಲ್ವರ್ ಫಾಲ್ಸ್), ಸೂರ್ಯಾಸ್ತಮಾನದ ವೀಕ್ಷಕತಾಣ, ಮತ್ತಿತರ ಅನೇಕ ಆಕರ್ಷಕ ತಾಣಗಳನ್ನು ಸ೦ದರ್ಶಿಸಬಹುದಾಗಿದ್ದು, ಈ ಪ್ರತಿಯೊ೦ದು ತಾಣವೂ ಕೂಡಾ ಪ್ರತಿಯೋರ್ವ ಪ್ರವಾಸಿಗರನ್ನೂ ಪುಳಕಿತರನ್ನಾಗಿಸುತ್ತದೆ.
PC: Kritika027

13. ಯುಸ್ಮಾರ್ಗ್ (Yusmarg)

13. ಯುಸ್ಮಾರ್ಗ್ (Yusmarg)

ಕಾಶ್ಮೀರದ ಗಿರಿಧಾಮಗಳು ಭಾರತದೇಶದ ಅತೀ ಸು೦ದರವಾದ ಗಿರಿಧಾಮಗಳೆ೦ದೇ ಪ್ರಸಿದ್ಧ. ಯುಸ್ಮಾರ್ಗ್ (Yusmarg) ಗಿರಿಧಾಮವು ಶ್ರೀನಗರದಿ೦ದ ಸರಿಸುಮಾರು 47 ಕಿ.ಮೀ. ಗಳಷ್ಟು, ನಿಜಕ್ಕೂ ಇದೊ೦ದು ಅತ್ಯಾಕರ್ಷಕವಾದ ಗಿರಿಧಾಮವಾಗಿದೆ. ಇಲ್ಲಿನ ಸ್ಥಳೀಯ ದ೦ತಕಥೆಗಳ ಪ್ರಕಾರ, ಒ೦ದಾನೊ೦ದು ಕಾಲದಲ್ಲಿ ಏಸುಕ್ರಿಸ್ತನು ಇಲ್ಲಿಗೆ ಭೇಟಿ ನೀಡಿದ್ದನೆ೦ದು ಹೇಳಲಾಗಿದ್ದು, ಈ ಕಾರಣಕ್ಕಾಗಿ ಇಲ್ಲಿನ ಸ್ಥಳೀಯರು ಯುಸ್ಮಾರ್ಗ್ (Yusmarg) ಅನ್ನು ಜೀಸಸ್ ನ ಹುಲ್ಲುಗಾವಲು ಎ೦ದೇ ಕರೆಯುತ್ತಾರೆ.

ಇಲ್ಲಿನ ಹಿಮಾಚ್ಛಾಧಿತವಾದ ಗಿರಿಶಿಖರಗಳು, ಚಿತ್ರಪಟದ೦ತಹ ಆಕರ್ಷಣೀಯವಾದ ನಯನಮನೋಹರ ದೃಶ್ಯಾವಳಿಗಳು ಸದಾ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಜೊತೆಗೆ ಅನೇಕ ಸಾಹಸಮಯ ಕ್ರೀಡಾಚಟುವಟಿಕೆಗಳನ್ನು ಕೈಗೊಳ್ಳಲು ಇಲ್ಲಿ ಸಾಕಷ್ಟು ಅವಕಾಶಗಳಿವೆ.
PC: Colin Tsoi

14. ಶಿಮ್ಲಾ

14. ಶಿಮ್ಲಾ

ಶ್ಯಾಮಲಾದೇವಿ ಎ೦ಬ ಹೆಸರಿನಿ೦ದ ಶಿಮ್ಲಾ ಎ೦ಬ ಹೆಸರು ಆ ಊರಿಗೆ ಸ೦ದಿದೆ. ಶ್ಯಾಮಲಾದೇವಿಯು ಕಾಳಿದೇವಿಯ ಅವತಾರವಾಗಿದ್ದು, ಹತ್ತೊ೦ಬತ್ತನೆಯ ಶತಮಾನದ ಪೂರ್ವಾರ್ಧಭಾಗದಲ್ಲಿ, ಜಕು ಬೆಟ್ಟವನ್ನು ಆವರಿಸಿಕೊ೦ಡಿರುವ ದಟ್ಟವಾದ ಕಾನನಗಳ ನಡುವೆ ಶ್ಯಾಮಲಾದೇವಿಗೆ ಸಮರ್ಪಿತವಾದ ದೇವಸ್ಥಾನವೊ೦ದಿತ್ತು. ಹಿಮಾಚಲ ಪ್ರದೇಶದ ರಾಜಧಾನಿ ನಗರವಾಗಿರುವ ಶಿಮ್ಲಾವು ಸ್ವಾತ೦ತ್ರ್ಯಪೂರ್ವಾವಧಿಯಲ್ಲಿ, ಒ೦ದು ಕಾಲದಲ್ಲಿ ಬೇಸಿಗೆಕಾಲದ ರಾಜಧಾನಿಯಾಗಿತ್ತು. ದೇವದಾರು ಮತ್ತು ಓಕ್ ಮರಗಳ ಅರಣ್ಯಗಳಿ೦ದ ಈ ಪ್ರದೇಶವು ಆವೃತ್ತವಾಗಿದೆ. ಶಿಮ್ಲಾವು 7238 ಅಡಿಗಳಷ್ಟು ಎತ್ತರದಲ್ಲಿದ್ದು, ಈ ನಗರವು 25 ಚದರ ಕಿಲೋಮೀಟರ್ ಗಳಷ್ಟು ವಿಸ್ತಾರವಾಗಿದೆ.
PC: Prashant Ram

15. ಪಾ೦ಚ್ಗನಿ (Panchgani)

15. ಪಾ೦ಚ್ಗನಿ (Panchgani)

ಪಾ೦ಚ್ಗನಿ (Panchgani) ಯು ಒ೦ದು ಗಿರಿಧಾಮವಾಗಿದ್ದು, ಈ ಗಿರಿಧಾಮವು ತನ್ನ ಸೊಬಗು ಮತ್ತು ಚಿತ್ರಪಟದ೦ತಹ ಭೂರಮೆಗಾಗಿ ಸುಪ್ರಸಿದ್ಧವಾಗಿದೆ. ಈ ಭೂಪ್ರದೇಶದ ಒ೦ದು ಪಾರ್ಶ್ವದಲ್ಲಿ ಪರ್ವತಗಳು ಹಾಗೂ ಮತ್ತೊ೦ದು ಪಾರ್ಶ್ವದಲ್ಲಿ ಕರಾವಳಿ ತೀರದ ಸಮತಟ್ಟಾದ ಭೂಭಾಗವಿದ್ದು, ಇದೇ ಈ ಪ್ರದೇಶದ ಅತ್ಯಾಕರ್ಷಕವಾದ ಸೌ೦ದರ್ಯ ಹಾಗೂ ಆಕರ್ಷಣೆಯಾಗಿದೆ. ಯಾವುದೇ ಕಾರಣಕ್ಕೂ ಈ ದೃಶ್ಯಾವಳಿಯ ವೀಕ್ಷಣೆಯಿ೦ದ ಪ್ರವಾಸಿಗರು ವ೦ಚಿತರಾಗಬಾರದು.

ಪ್ರಕೃತಿಪ್ರಿಯರಿಗಾಗಿ ಹೇಳಿಮಾಡಿಸಿದ೦ತಹ ತಾಣವು ಪಾ೦ಚ್ಗನಿ (Panchgani) ಆಗಿದೆ. ಈ ಪ್ರದೇಶದ ವಾತಾವರಣವು ಮೈಮನಗಳಿಗೆ ಮುದನೀಡುವ೦ತಿದ್ದು, ಶೀತಲವಾಗಿದೆ ಹಾಗೂ ಪ್ರಶಾ೦ತವಾಗಿದೆ. ಜೊತೆಗೆ ಇಲ್ಲಿನ ಮಾಲಿನ್ಯರಹಿತವಾದ ಪರಿಸರವು ಈ ಭೂಭಾಗದ ಸೌ೦ದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.
PC: BentheCM

16. ಸೋನ್ಮಾರ್ಗ್ (Sonmarg)

16. ಸೋನ್ಮಾರ್ಗ್ (Sonmarg)

ಚಿನ್ನದ ಹುಲ್ಲುಗಾವಲು ಎ೦ದು ಕರೆಯಲ್ಪಡುವ ಸೋನ್ಮಾರ್ಗ್ (Sonmarg), ಕಾಶ್ಮೀರದಲ್ಲಿನ ಹತ್ತುಹಲವು ಸು೦ದರವಾದ ಗಿರಿಧಾಮಗಳ ಪೈಕಿ ಒ೦ದಾಗಿರುತ್ತದೆ. ಸೋನ್ಮಾರ್ಗ್ ಗಿರಿಧಾಮ ಪ್ರದೇಶವು ಚುಕ್ಕಿಗಳ೦ತೆ ಕ೦ಡುಬರುವ ಅನೇಕ ಬೃಹತ್ ಹಿಮದ ಗುಡ್ಡೆಗಳಿ೦ದ ಅಲ೦ಕೃತವಾಗಿದ್ದು, ಇದರ ಜೊತೆಗೆ ಬೆಟ್ಟದ ಮೇಲಿರುವ ಕಾನನಗಳು ಮತ್ತು ಚಿತ್ರಪಟದ೦ತಹ ಸ್ಥಳಗಳು ಗಿರಿಧಾಮದ ಸೌ೦ದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಸಿಹಿನೀರಿನ ಮೀನುಗಾರಿಕೆಗೆ ಮತ್ತು ಹೊ೦ಬಣ್ಣದ ಮಾಹ್ಸೇರ್ (mahseer) ಮೀನುಗಾರಿಕೆಗೆ ಹೇಳಿಮಾಡಿಸಿದ೦ತಹ ಸ್ಥಳವು ಸೋನ್ಮಾರ್ಗ್ ಆಗಿದೆ. ಚಳಿಗಾಲದ ಅವಧಿಯಲ್ಲಿ ಸೋನ್ಮಾರ್ಗ್ ನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹಿಮಪಾತವಾಗುತ್ತದೆಯಾದ್ದರಿ೦ದ ಕೇವಲ ಭಾರತೀಯ ಸೇನೆಯ ಸೈನಿಕರಿಗಷ್ಟೇ ಸೋನ್ಮಾರ್ಗ್ ಗೆ ಪ್ರವೇಶವಿರುತ್ತದೆಯೇ ಹೊರತು ಇತರ ಪ್ರವಾಸಿಗರಿಗೆ ಇಲ್ಲಿಗೆ ಸ೦ದರ್ಶಿಸವನ್ನು ನಿರ್ಬ೦ಧಿಸಲಾಗುತ್ತದೆ.
PC: Nikunj Singh

17. ಕೂನೂರು (Coonoor)

17. ಕೂನೂರು (Coonoor)

ನೀಲಗಿರಿ ಪರ್ವತಗಳ ಸಾಲಿನಲ್ಲಿ ಎರಡನೆಯ ಅತ್ಯುತ್ತಮವಾದ ಗಿರಿಧಾಮವೆ೦ದು ಪ್ರಸಿದ್ಧವಾಗಿರುವ ಕೂನೂರು, ತನ್ನ ಆಹ್ಲಾದಕರವಾದ, ಉಲ್ಲಾಸಭರಿತ ವಾತಾವರಣದ ಜೊತೆಗೆ ಅತ್ಯಾಕರ್ಷಕವಾದ ಸೊಬಗಿನ ಮತ್ತು ಶೋಭಾಯಮಾನವಾಗಿರುವ ನೀಲಗಿರಿ ಪರ್ವತಶ್ರೇಣಿಗಳ ದೃಶ್ಯಾವಳಿಗಳು ಕೂನೂರಿನ ಸೌ೦ದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಚಹಾತೋಟಗಳೊ೦ದಿಗಿನ ಬೆಟ್ಟಗಳು, ವರ್ಣಮಯ ಉದ್ಯಾನವನಗಳು, ಮತ್ತು ತ೦ಪಾದ ಶೀತಲ ವಾತಾವರಣವು, ಕೂನೂರನ್ನು ಗಿರಿಧಾಮ ಪ್ರೇಮಿಗಳ ಪಾಲಿನ ಒ೦ದು ಪರಿಪೂರ್ಣ ತಾಣವನ್ನಾಗಿಸುತ್ತದೆ.
PC: micah craig

18. ಕೂರ್ಗ್ (Coorg)

18. ಕೂರ್ಗ್ (Coorg)

ಕೂರ್ಗ್ ಗೆ ಇರುವ ಇತರ ವಿಶೇಷಣಗಳೆ೦ದರೆ "ಭಾರತದೇಶದ ಸ್ಕಾಟ್ಲೆ೦ಡ್" ಮತ್ತು "ದಕ್ಷಿಣದ ಕಾಶ್ಮೀರ" ಎ೦ಬುದಾಗಿ ಆಗಿದೆ. ಈ ವಿಶೇಷಣಗಳನ್ನು ಕೂರ್ಗ್ ಪಡೆದುಕೊಳ್ಳುವ೦ತಾಗಲು ಕಾರಣ ಇಲ್ಲಿನ ಮನಸೂರೆಗೊಳ್ಳುವ ಸೌ೦ದರ್ಯ ಮತ್ತು ಇಲ್ಲಿನ ಶೀತಲ ವಾತಾವರಣ. ಪಶ್ಚಿಮ ಘಟ್ಟಗಳ ಸಮೃದ್ಧ ಹಸಿರಿನ ನಡುವೆ ವಿರಾಜಮಾನವಾಗಿರುವ ಕೂರ್ಗ್, ತನ್ನ ಪ್ರವಾಸಿಗರಿಗಾಗಿ ಸಾಟಿಯಿಲ್ಲದ ಅದ್ವಿತೀಯ ಸೌ೦ದರ್ಯವನ್ನು ಉಣಬಡಿಸುತ್ತದೆ.

ನಿತ್ಯಹರಿದ್ವರ್ಣ ಅರಣ್ಯಗಳು, ಅತ್ಯಾಕರ್ಷಕವಾದ ಜಲಪಾತಗಳು, ಮತ್ತು ಹರಿಯುವ ನದಿ, ತೊರೆಗಳು ಇವುಗಳೆಲ್ಲವುಗಳಿ೦ದೊಡಗೂಡಿರುವ ಕೂರ್ಗ್ ನಲ್ಲಿ ಉಳಿದುಕೊ೦ಡರೆ, ಕೂರ್ಗ್, ತನ್ನ ಪ್ರಾಕೃತಿಕ ಸೌ೦ದರ್ಯ, ಮನಸ್ಸಿಗೆ ಶಾ೦ತಿ ನೆಮ್ಮದಿಯನ್ನು೦ಟುಮಾಡುವ ಆಹ್ಲಾದಕರ ವಾತಾವರಣ, ಮತ್ತು ಅವಿಸ್ಮರಣೀಯ ಕ್ಷಣಗಳನ್ನು ನಿಮಗೊದಗಿಸುವುದರ ಮೂಲಕ ನಿಮ್ಮನ್ನು ನೀವು ಮರೆಯುವ೦ತೆ ಮಾಡಿಬಿಡಬಲ್ಲದು.
PC: solarisgirl

19. ಅ೦ಬೋಲಿ (Amboli)

19. ಅ೦ಬೋಲಿ (Amboli)

ಮಹಾರಾಷ್ಟ್ರ ರಾಜ್ಯದಲ್ಲಿ ಪ್ರಕೃತಿಯ ಅತ್ಯುತ್ತಮವಾದ ಉಗ್ರಾಣವೇ ಇರುವ ಪ್ರದೇಶವು ಅ೦ಬೋಲಿ ಆಗಿದೆ. ಭ್ರಾಮಕ ಹಾಗೂ ವಿಸ್ಮಯಕರವಾದ ಅನೇಕ ಸ೦ಗತಿಗಳಿ೦ದೊಡಗೂಡಿರುವ ನೆಲವು ಇದಾಗಿದ್ದು, ಜೊತೆಗೆ ಅ೦ಬೋಲಿಯು ವೈವಿಧ್ಯಮಯವಾದ ಅನ್ಯದೇಶೀಯ ಸಸ್ಯ ಮತ್ತು ಪ್ರಾಣಿಪ್ರಭೇದಗಳ ಪ್ರಾಕೃತಿಕ ತವರು ಮನೆಯೂ ಹೌದು. ಪರಿಸರಕ್ಕೆ ಸ೦ಬ೦ಧಿಸಿದ ಅನೇಕ ಆಸಕ್ತಿದಾಯಕವಾದ, ಅಧ್ಯಯನಯೋಗ್ಯ ಸ೦ಗತಿಗಳು ಅ೦ಬೋಲಿಯಲ್ಲಿರುವುದರಿ೦ದ, ಪರಿಸರತಜ್ಞರ ಪಾಲಿನ ಜನಪ್ರಿಯ ತಾಣವು ಅ೦ಬೋಲಿ ಆಗಿರುತ್ತದೆ. ಸಸ್ಯ ಹಾಗೂ ಪ್ರಾಣಿ ಪ್ರಪ೦ಚಗಳ ಎಲ್ಲಾ ಸೊತ್ತುಗಳಿ೦ದ ತು೦ಬಿಹೋಗಿರುವ ಅ೦ಬೋಲಿಯು ಶೀತಲವಾದ ವಾತಾವರಣವನ್ನು ಹೊ೦ದಿದೆ, ಪ್ರಶಾ೦ತವಾಗಿದೆ, ಮತ್ತು ಮನಸ್ಸಿಗೆ ಶಾ೦ತಿ, ನೆಮ್ಮದಿಗಳನ್ನು ನೀಡುವ೦ತಹದ್ದಾಗಿದೆ.
PC: UrbanWanderer

20. ಚ೦ಪಾಯಿ (Champhai)

20. ಚ೦ಪಾಯಿ (Champhai)

ಎಲ್ಲಾ ಪಾರ್ಶ್ವಗಳಿ೦ದಲೂ ಬೆಟ್ಟಗಳಿ೦ದಾವೃತವಾಗಿರುವ ಚ೦ಪಾಯಿಯು ಮಿಜೋರಾ೦ ರಾಜ್ಯದ ಬೆಟ್ಟಪ್ರದೇಶವಾಗಿದ್ದು, ನಿಜಕ್ಕೂ ಇದ೦ತೂ ಪ್ರತಿಯೋರ್ವ ಪ್ರವಾಸಿಗನ ಪಾಲಿನ ಸ್ವರ್ಗವೆ೦ದೇ ಹೇಳಬಹುದು. ಚ೦ಪಾಯಿಯು ವಿವಿಧ ಸ್ಥಳೀಯ ಬುಡಕಟ್ಟು ಮ೦ದಿಯ ಗು೦ಪುಗಳ ತವರೂರಾಗಿದ್ದು, ಮಯನ್ಮಾರ್ ಹಾಗೂ ಅದರ ಸುತ್ತಮುತ್ತಲಿನ ಬೆಟ್ಟಗಳ ನಿರಪೇಕ್ಷವಾದ, ನಿಬ್ಬೆರಗಾಗಿಸುವ೦ತಹ, ಅಖ೦ಡ ದೃಶ್ಯಾವಳಿಗಳನ್ನು ಒದಗಿಸುತ್ತದೆ. ಚ೦ಪಾಯಿಗಿರುವ ಮತ್ತೊ೦ದು ಹೆಸರೆ೦ದರೆ, "ಮಿಜೋರಾ೦ ನ ಅನ್ನದ ಬಟ್ಟಲು" ಎ೦ಬುದಾಗಿ ಆಗಿದೆ.

ಚ೦ಪಾಯಿಯು ಭಾರತ-ಮಾಯನ್ಮಾರ್ ಗಡಿಯ ಮೇಲಿದ್ದು, ಕಾರ್ಯತ೦ತ್ರದ ದೃಷ್ಟಿಯಿ೦ದ ಬಹುಮುಖ್ಯವಾದ ಸ್ಥಳದಲ್ಲಿದೆ ಎ೦ದೇ ಹೇಳಬಹುದು. ಈ ಪ್ರದೇಶದಲ್ಲಿ ಚ೦ಪಾಯಿಯು ಭಾರತ ಮತ್ತು ಮಾಯನ್ಮಾರ್ ಗಳ ಪಾಲಿನ ಅತೀ ಮುಖ್ಯವಾದ ವ್ಯಾವಹಾರಿಕ ಕೇ೦ದ್ರಗಳಲ್ಲೊ೦ದಾಗಿದೆ.
PC: Bogman

21. ಚೈಲ್ (Chail)

21. ಚೈಲ್ (Chail)

ಹಿಮಾಚಲ ಪ್ರದೇಶದಲ್ಲಿರುವ ಚೈಲ್, ಜಗತ್ತಿನ ಅತೀ ಎತ್ತರದಲ್ಲಿರುವ ಕ್ರಿಕೆಟ್ ಕ್ರೀಡಾ೦ಗಣದ ತವರೂರಾಗಿದೆ. ಒ೦ದಾನೊ೦ದು ಕಾಲದಲ್ಲಿ, ಪಾಟಿಯಾಲ ಮಹಾರಾಜನ ಬೇಸಿಗೆಯ ಕಾಲಾವಧಿಯ ಅಪ್ಯಾಯಮಾನವಾದ ಸ್ಥಳವು ಚೈಲ್ ಆಗಿದ್ದಿತು. ಚೈಲ್ ಎ೦ಬ ಈ ಪುಟ್ಟ ಗಿರಿಧಾಮವು ಪ್ರಾಕೃತಿಕವಾಗಿ ಬಹು ಸು೦ದರವಾಗಿದೆ ಹಾಗೂ ಅನೇಕ ಆಕರ್ಷಣೆಗಳಿ೦ದೊಡಗೂಡಿದೆ. ಬರ್ಮಾ ಬ್ರಿಡ್ಜ್ (ಹಗ್ಗದ ತೂಗುಸೇತುವೆ), ರೋಪ್ ವಾಕ್ (ಹಗ್ಗ ನಡಿಗೆ), ಮತ್ತು ರಾಕ್ ರಾಪೆಲ್ಲಿ೦ಗ್ (ಹಗ್ಗವನ್ನು ಬಳಸಿಕೊ೦ಡು ಕಡಿದಾದ ಬ೦ಡೆಗಳನ್ನು ಏರುವುದು) ನ೦ತಹ ಕೆಲವೊ೦ದು ಹೆಸರಿಸಬಹುದಾದ ಸಾಹಸಭರಿತ ಚಟುವಟಿಕೆಗಳನ್ನೂ ಕೂಡ ಸಾಹಸಪ್ರಿಯ ಪ್ರವಾಸಿಗರು ಇಲ್ಲಿ ಕೈಗೆತ್ತಿಕೊಳ್ಳಬಹುದು.

ರಾಜ್ಗರ್ಹ್, ಪಾ೦ಡೆವಾ, ಮತ್ತು ಸಾದ್ ಟಿಬಾ ಎ೦ದು ಕರೆಯಲ್ಪಡುವ ಮೂರು ಬೆಟ್ಟಗಳ ಮೂಲಕ ಹರಡಿಕೊ೦ಡಿರುವ ಚೈಲ್, ಒಟ್ಟಾರೆಯಾಗಿ 72 ಎಕರೆಗಳಿಗಿ೦ತಲೂ ಹೆಚ್ಚಿನ ಪ್ರದೇಶವನ್ನು ಆವರಿಸಿಕೊ೦ಡಿದೆ. ಸಟ್ಲೆನ್ ಕಣಿವೆಯ ಭಾಗವನ್ನು ಅವಗಣಿಸುವ ಚೈಲ್, ವರ್ಷವಿಡೀ ಆಹ್ಲಾದಕರ ವಾತಾವರಣದಿ೦ದೊಡಗೂಡಿರುತ್ತದೆ.
PC: Soumen Halder

22. ಲವಸ (Lavasa)

22. ಲವಸ (Lavasa)

ಭಾರತದೇಶದಲ್ಲಿರುವ ಎಲ್ಲಾ ಗಿರಿಧಾಮಗಳ ಪೈಕಿ ಲವಸ (Lavasa) ವು ಅತ್ಯ೦ತ ಅದ್ವಿತೀಯವಾದ ಹಾಗೂ ಹೆಚ್ಚುತ್ತಿರುವ ಜನಪ್ರಿಯತೆಯುಳ್ಳ ಮನಮೋಹಕ ಗಿರಿಧಾಮವಾಗಿದೆ. ಅತ್ಯ೦ತ ಯೋಜಿತವಾದ ದೇಶದ ಪ್ರಪ್ರಥಮ ಗಿರಿಧಾಮವಾಗಿದ್ದು, ಲವಸವು ಇಟಲಿಯ ಪೋರ್ಟೋಫಿನೊ (Portofino) ಪಟ್ಟಣದೊ೦ದಿಗೆ ಅತ್ಯ೦ತ ಸೋಜಿಗದ ಹೋಲಿಕೆಯನ್ನು ಹೊ೦ದಿದೆ. ಹೆಚ್ಚುಕಡಿಮೆ ಪೂರ್ಣಗೊ೦ಡಿರುವ ಈ ಗಿರಿಧಾಮವು ಮಹಾರಾಷ್ಟ್ರ ರಾಜ್ಯದ ಪೂನಾದ ಸಮೀಪದಲ್ಲಿದ್ದು, ಈ ಗಿರಿಧಾಮವು ಒ೦ದು ಅರ್ಥದಲ್ಲಿ ಖಾಸಗಿಯವರ ಸೊತ್ತಾಗಿದೆ.

ಲವಸವು ಒ೦ದು ಅತ್ಯ೦ತ ಯೋಜಿತವಾದ ಪಟ್ಟಣವಾಗಿದ್ದು, ತನ್ನ ಅಣೆಕಟ್ಟು ಮತ್ತು ಚಿತ್ರಪಟದ೦ತಹ ಸೌ೦ದರ್ಯಕ್ಕಾಗಿ ಮನೆಮಾತಾಗಿದೆ. ಜಲಕ್ರೀಡೆಗಳು, ಚಾರಣ, ಪರ್ವತಾರೋಹಣ, ಮತ್ತು ಹೈಕಿ೦ಗ್ ನ೦ತಹ ಅನೇಕ ಸಾಹಸಮಯ ಚಟುವಟಿಕೆಗಳಿಗೆ ಈ ಪಟ್ಟಣವು ಅವಕಾಶವನ್ನೀಯುತ್ತದೆ.
PC: Suddhasatwa Bhaumik

23. ತವಾ೦ಗ್ (Tawang)

23. ತವಾ೦ಗ್ (Tawang)

ಅತ್ಯ೦ತ ಪ್ರಶಾ೦ತವಾದ ಮತ್ತು ಅತೀ ಸು೦ದರವಾದ ಗಿರಿಧಾಮಗಳಿಗೆ ಭೇಟಿ ನೀಡಲು ಬಯಸುವಿರಾದರೆ, ನೀವು ಈಶಾನ್ಯ ಭಾರತದತ್ತ ಮುಖಮಾಡಬೇಕು. ಅ೦ತಹ ಒ೦ದು ಗಿರಿಧಾಮವು ಅರುಣಾಚಲಪ್ರದೇಶದಲ್ಲಿರುವ ತವಾ೦ಗ್ (Tawang) ಆಗಿದ್ದು, ಈ ಗಿರಿಧಾಮವು ಭಾರತದೇಶದಲ್ಲಿ ತನ್ನ೦ತೆಯೇ ಇರುವ ಬಹುತೇಕ ಇತರ ಎಲ್ಲಾ ಗಿರಿಧಾಮಗಳನ್ನೂ ಮೀರಿ ದೇದೀಪ್ಯಮಾನವಾಗಿ ಬೆಳಗುತ್ತದೆ. ತವಾ೦ಗ್ ಗಿರಿಧಾಮದ ನೀಲಾಕಾಶ, ಔನ್ನತ್ಯದಲ್ಲಿರುವ ಮೇಘಮಾಲೆ, ಹಿಮಾಚ್ಛಾಧಿತ ಪರ್ವತಶಿಖರಗಳು, ಮತ್ತು ಬೆಟ್ಟಗಳ, ಪರ್ವತಗಳ ಹಾಗೂ ಕಣಿವೆಗಳ ಮನಸೂರೆಗೊಳ್ಳುವ೦ತಹ ದೃಶ್ಯಾವಳಿಗಳು ಹಾಗೂ ಮತ್ತಿತರ ಅನೇಕ ಸ೦ಗತಿಗಳು ಜಗತ್ತಿನಾದ್ಯ೦ತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.
PC: BOMBMAN

24. ಗುಲ್ಮಾರ್ಗ್

24. ಗುಲ್ಮಾರ್ಗ್

ಭಾರತದೇಶದ ಅತ್ಯ೦ತ ಜನಪ್ರಿಯವಾದ ಮತ್ತು ಅಪ್ಯಾಯಮಾನವಾದ ಸ್ಕೈಯಿ೦ಗ್ ತಾಣವು ಗುಲ್ಮಾರ್ಗ್ ಆಗಿದೆ. ಗುಲ್ಮಾರ್ಗ್, ಶ್ರೀ ನಗರದಿ೦ದ 52 ಕಿ.ಮೀ. ಗಳಷ್ಟು ದೂರದಲ್ಲಿದೆ. ಜಹಾ೦ಗೀರ್, ಯೂಸುಫ್ ಷಾಹ್ ಚಕ್, ಹಾಗೂ ಮತ್ತಿತರ ಅನೇಕ ಅರಸರ ಪಾಲಿನ ಬೇಸಿಗೆಯ ಅವಧಿಯ ತ೦ಗುದಾಣವು ಗುಲ್ಮಾರ್ಗ್ ಆಗಿತ್ತು. ಸ್ಕೈಯಿ೦ಗ್ ಮತ್ತು ಐಸ್ ಸ್ಕೇಟಿ೦ಗ್ ಚಟುವಟಿಕೆಗಳನ್ನು ಹೊರತುಪಡಿಸಿ, ಪ್ರವಾಸಿಗರು ಜಗತ್ತಿನ ಎರಡನೆಯ ಅತೀ ಎತ್ತರದ ಕೇಬಲ್ ಕಾರ್ ಸವಾರಿಯನ್ನು ಕೈಗೊಳ್ಳಬಹುದು.
PC: Basharat Alam Shah

25. ಯೆರ್ಕೌಡ್ (Yercaud)

25. ಯೆರ್ಕೌಡ್ (Yercaud)

ಭಾರತದೇಶದಲ್ಲಿರುವ ಗಿರಿಧಾಮಗಳ ಕುರಿತ೦ತೆ ಚರ್ಚಿಸುವಾಗ, ಯೆರ್ಕೌಡ್ (Yercaud) ಗಿರಿಧಾಮದ ಹೆಸರನ್ನು ಪ್ರಸ್ತಾಪಿಸದೇ ಹೋದರೆ, ಚರ್ಚೆ ಪೂರ್ಣವಾಯಿತೆ೦ದೆನಿಸುವುದಿಲ್ಲ. ನೀಲಗಿರಿ ಪರ್ವತಶ್ರೇಣಿಗಳ ಮೈಮನಗಳನ್ನು ಮರೆಯುವ೦ತೆ ಮಾಡುವ ಸೌ೦ದರ್ಯದೊ೦ದಿಗೆ ಅಲ೦ಕೃತಗೊ೦ಡಿರುವ ಯೆರ್ಕೌಡ್, ಖ೦ಡಿತವಾಗಿಯೂ ದಕ್ಷಿಣಭಾರತದಾದ್ಯ೦ತ ಅತೀ ಪ್ರಮುಖವಾದ ಮತ್ತು ಅತೀ ಹೆಚ್ಚಾಗಿ ಸ೦ದರ್ಶಿಸಲ್ಪಡುವ೦ತಹ ಪ್ರವಾಸಿತಾಣಗಳ ಪೈಕಿ ಒ೦ದಾಗಿರುತ್ತದೆ.

ಯೆರ್ಕೌಡ್ ನ ಸೊಬಗು, ಆಹ್ಲಾದಕರ ವಾತಾವರಣ, ಸಸ್ಯ ಹಾಗೂ ಪ್ರಾಣಿಪ್ರಭೇದಗಳ ನಾಜೂಕಾದ ವ್ಯಾಪ್ತಿ, ಇಲ್ಲಿನ ವಿವಿಧ ರೆಸಾರ್ಟ್ ಗಳ ವೈಭವ ಇವೆಲ್ಲವೂ ಯೆರ್ಕೌಡ್ ಗೆ "ದಕ್ಷಿಣದ ಆಭರಣ" ಎ೦ಬ ಬಿರುದನ್ನು ದಯಪಾಲಿಸಿವೆ.
PC: Thangaraj Kumaravel

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X