ಪಡುಮ್ ಪುಖುರಿಯನ್ನು ತೇಜ್‍ಪುರಕ್ಕೆ ಭೇಟಿ ನೀಡಿದ ಯಾವೊಬ್ಬ ಪ್ರವಾಸಿಗನು ನೋಡಲು ತಪ್ಪಿಸಿಕೊಳ್ಳಬಾರದು. ಇದು ನಗರದ ಕೇಂದ್ರಭಾಗದಲ್ಲಿ ನೆಲೆಗೊಂಡಿದ್ದು, ತನ್ನ ನಡುವೆ ಒಂದು ದ್ವೀಪವನ್ನು ಹೊಂದಿದೆ. ಈ ದ್ವೀಪಕ್ಕೆ ಒಂದು ಕಬ್ಬಿಣದ ಸೇತುವೆಯ ಮೂಲಕ ನಾವು ತಲುಪಬಹುದು. ಪಡುಮ್ ಪುಖುರಿಯು ಮಕ್ಕಳ ಪಾಲಿಗೆ ಅತ್ಯಂತ ಪ್ರಸಿದ್ಧ ಆಕರ್ಷಣೆಯಾಗಿದೆ. ಬೇಸಿಗೆಯ ದಿನಗಳಲ್ಲಿ ಈ ಕೆರೆಯ ಸುತ್ತ ಮುತ್ತ ವಾಯು ವಿಹಾರ ಮತ್ತು ವಿಹಾರಕ್ಕೆಂದು ಬಂದವರನ್ನು ನಾವು ನೋಡಬಹುದು. ಇದು ನಿಜಕ್ಕು ಪ್ರತಿಯೊಬ್ಬರಿಗೆ ಉತ್ಸಾಹವನ್ನು ತುಂಬುವ ತಾಣವಾಗಿದೆ.
ಪಡುಮ್ ಪುಖುರಿಯ ಪ್ರಧಾನ ಆಕರ್ಷಣೆಯೆಂದರೆ ಇಲ್ಲಿನ ದೋಣಿ ಯಾನ ಮತ್ತು ಪುಟಾಣಿ ರೈಲುಗಳು. ಜೊತೆಗೆ ಇಲ್ಲಿನ ದ್ವೀಪದಲ್ಲಿ ಒಂದು ಸಂಗೀತ ಕಾರಂಜಿ ಸಹ ಇದ್ದು, ಸಂಜೆಯ ಹೊತ್ತು ಇದನ್ನು ಚಾಲೂ ಮಾಡಲಾಗುತ್ತದೆ. ಈ ಸಂಗೀತ ಕಾರಂಜಿಯಿಂದ ಮತ್ತು ತಂಪಾದ ವಾತಾವರಣದಿಂದಾಗಿ ಇಲ್ಲಿ ಮನಮೋಹಕವಾದ ವಾತಾವರಣವು ನಿರ್ಮಾಣವಾಗುತ್ತದೆ. ಪಡುಮ್ ಪುಖುರಿ ಎಂದರೆ ಅಸ್ಸಾಮಿ ಭಾಷೆಯಲ್ಲಿ ತಾವರೆ ಕೆರೆ ಎಂದಾಗುತ್ತದೆ. ಇಲ್ಲಿ ’ಪಡುಮ್’ ಎಂದರೆ ತಾವರೆ ’ಪುಖುರಿ’ ಎಂದರೆ ಕೆರೆ ಎಂದರ್ಥ.
ಪಡುಮ್ ಪುಖುರಿಗೆ ತಲುಪುವುದು ಅಷ್ಟೇನು ಕಷ್ಟವಲ್ಲ, ಇದು ರಾಜ್ಯ ಸರ್ಕಾರಿ ಬಸ್ ನಿಲ್ದಾಣಕ್ಕೆ ಸಮೀಪದಲ್ಲಿರುವುದರಿಂದ ಇಲ್ಲಿಗೆ ಯಾರು ಬೇಕಾದರು ಸುಲಭವಾಗಿ ತಲುಪಬಹುದು.


Click it and Unblock the Notifications