Search
  • Follow NativePlanet
Share
» »ಚಿಕ್ಕಮಗಳೂರಿನಲ್ಲಿ ಧೋ ಎಂದು ಸುರಿಯುತ್ತಿರುವ ಮಳೆ: ಪ್ರವಾಸ ಮುಂದೂಡುವಂತೆ ಮನವಿ, ಭಣಗುಡುತ್ತಿರುವ ಪ್ರವಾಸಿ ತಾಣಗಳು

ಚಿಕ್ಕಮಗಳೂರಿನಲ್ಲಿ ಧೋ ಎಂದು ಸುರಿಯುತ್ತಿರುವ ಮಳೆ: ಪ್ರವಾಸ ಮುಂದೂಡುವಂತೆ ಮನವಿ, ಭಣಗುಡುತ್ತಿರುವ ಪ್ರವಾಸಿ ತಾಣಗಳು

ರಾಜಧಾನಿ ಬೆಂಗಳೂರು ಮಾತ್ರವಲ್ಲದೆ, ರಾಜ್ಯದಾದ್ಯಂತ ಮಳೆ ನಿರಂತರವಾಗಿ ಸುರಿಯುತ್ತಲೇ ಇದೆ. ಹಗಲಿನಲ್ಲಿ ಸ್ವಲ್ಪ ಸಮಯ ಬಿಡುವು ಕೊಡುವ ವರುಣರಾಯ ರಾತ್ರಿ ಮಾತ್ರ ಸದ್ದಿಲ್ಲದೆ ತನ್ನ ಆರ್ಭಟ ಶುರುವಿಟ್ಟುಕೊಳ್ಳುತ್ತದೆ. ಇದರಿಂದ ಅಲ್ಲಲ್ಲಿ ಅನಾಹುತಗಳೂ ಸಂಭವಿಸಿವೆ. ಪ್ರವಾಸಿಗರ ನೆಚ್ಚಿನ ತಾಣ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಹಿಂಗಾರು ಮಳೆಯಿಂದ ರೈತರಂತೂ ರೋಸಿ ಹೋಗಿದ್ದಾರೆ. ಇದು ಪ್ರವಾಸೋದ್ಯಮದ ಮೇಲೂ ಭಾರೀ ಹೊಡೆತಕ್ಕೆ ಕಾರಣವಾಗಿದೆ. ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಒಂದು ವಾರ ಪ್ರವಾಸ ಮತ್ತು ಚಾರಣ ಮುಂದೂಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ನದಿ, ತಗ್ಗು ಪ್ರದೇಶಗಳಿಗೆ ಸಾರ್ವಜನಿಕರು ತೆರಳದಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೂಚಿಸಿದ್ದು, ಮುಂದಿನ 3 ದಿನಗಳ ಕಾಲ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಪ್ರವಾಸ ಮುಂದೂಡಲು ಸೂಚನೆ

ಚಿಕ್ಕಮಗಳೂರಿನ ಹಲವೆಡೆ ಭೂಕುಸಿತ ಸಹ ಉಂಟಾಗಿದ್ದು, ಮುಂದಿನ ಒಂದು ವಾರದವರೆಗೆ ಅಥವಾ ಮಳೆ ಕಡಿಮೆಯಾಗುವವರೆಗೆ ಮುನ್ನೆಚ್ಚರಿಕೆ ಕ್ರಮವಹಿಸಲು ಸೂಚಿಸಲಾಗಿದೆ. ನದಿಗಳಿಗೆ ಅಥವಾ ತಗ್ಗು ಪ್ರದೇಶಗಳಿಗೆ ತೆರಳದಂತೆ ಕಟ್ಟೆಚ್ಚರ ವಹಿಸಲು ತಿಳಿಸಲಾಗಿದೆ. ಚಾರಣಿಗರು ಹಾಗೂ ಹೋಂ ಸ್ಟೇ, ರೆಸಾರ್ಟ್, ಅರಣ್ಯ ಇಲಾಖೆ ವತಿಯಿಂದ ಕೈಗೊಳ್ಳುವ ಟ್ರಕ್ಕಿಂಗ್ ಅನ್ನು ಒಂದು ವಾರ ಸ್ಥಗಿತಗೊಳಿಸಿ ಮುಂದೂಡಲಾಗಿದೆ.

ಧಾರಾಕಾರ ಮಳೆ

ಚಿಕ್ಕಮಗಳೂರು ಜಿಲ್ಲೆಯ ಕಡೂರು, ಮೂಡಿಗೆರೆ, ಶೃಂಗೇರಿ, ಕಳಸ‌ ಭಾಗದಲ್ಲಿ ಭಾರೀ ಮಳೆ ಸುರಿದಿದೆ. ಮಳೆಗೆ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಕಡೂರು ಪಟ್ಟಣದ ಬಳಿ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

karnatakaheavyraininchikkamagalurudistrict

ಮುಳ್ಳಯ್ಯನಗಿರಿ ಸುತ್ತಮುತ್ತಲೂ ಮಳೆ

ಜನಪ್ರಿಯ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಅಕ್ಕಪಕ್ಕದ ಭಾಗಗಳಲ್ಲಿಯೂ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಳ್ಳಯ್ಯನಗಿರಿ ಬೆಟ್ಟ ರಾಜ್ಯದಲ್ಲೇ ಅತೀ ಎತ್ತರ ಗಿರಿಶಿಖರ ಎಂಬ ಖ್ಯಾತಿಯನ್ನು ಪಡೆದಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 6330 ಅಡಿಗಳಷ್ಟು ಎತ್ತರದಲ್ಲಿದ್ದು, ಚಾರಣಿಗರಿಗೆ ಹೇಳಿಮಾಡಿಸಿದ ತಾಣವಾಗಿದೆ. ಆದರೆ ಹಿಂದೆಂದೂ ಕಂಡು ಕೇಳರಿಯದಷ್ಟು ಒಂದೇ ಸಮನೆ ಸುರಿಯುತ್ತಿರುವ ಮಳೆಗೆ ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್‌ಗಿರಿಯಲ್ಲಿ ರಸ್ತೆಯಲ್ಲೇ ಎರಡು ಅಡಿಗೂ ಹೆಚ್ಚು ನೀರು ಹರಿಯುತ್ತಿದೆ.

ಭಣಗುಡುತ್ತಿರುವ ಪ್ರವಾಸಿ ತಾಣಗಳು

ಮಳೆಯ ಎಫೆಕ್ಟ್ ಚಿಕ್ಕಮಗಳೂರು ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದ್ದು, ಪ್ರಸಿದ್ಧ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಖಾಲಿ ಖಾಲಿಯಾಗಿವೆ. ಸಾಮಾನ್ಯವಾಗಿ ಬೆಂಗಳೂರು ಭಾಗದಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಚಂದ್ರದ್ರೋಣ ಪರ್ವತಕ್ಕೆ ತೆರಳುತ್ತಿದ್ದರು. ಆದರೆ ಧೋ ಎಂದು ಸುರಿಯುತ್ತಿರುವ ಮಳೆಗೆ ಪ್ರವಾಸಿಗರು ಇತ್ತ ಮುಖ ಸಹ ಮಾಡುತ್ತಿಲ್ಲ.

karnatakaheavyraininchikkamagalurudistrict

ಇಲ್ಲಿಗೆ ಸಮೀಪದಲ್ಲಿ ಶ್ರೀದೇವಿರಮ್ಮ ಬೆಟ್ಟ (Deviramma Betta) ಕೂಡ ಇದ್ದು, ಸಾಮಾನ್ಯವಾಗಿ ದೀಪಾವಳಿ ನರಕ ಚತುದರ್ಶಿಯ ಸಮಯದಲ್ಲಿ ಇಲ್ಲಿಗೆ ಭಕ್ತಸಾಗರವೇ ಹರಿದು ಬರುತ್ತದೆ. ರಾಜ್ಯದ ವಿವಿಧೆಡೆಯಿಂದ ಬರುವ ಸಾವಿರಾರು ಭಕ್ತರು ಬೆಟ್ಟ ಹತ್ತಿ ದೇವಿರಮ್ಮ ದೇವಿಯ ದರ್ಶನ ಪಡೆಯುತ್ತಾರೆ. ಬೆಟ್ಟದ ಹಸಿರು ಹುಲ್ಲಿನ ಹಾಸಿನ ಮೇಲೆ ಆವರಿಸಿರುವ ಮಂಜನ್ನು ನೋಡುತ್ತಾ ಕಾಫಿತೋಟದೊಳಗಿನಿಂದ ಭಕ್ತರು ಹೋಗುವುದನ್ನು ನೀವಿಲ್ಲಿ ನೋಡಬಹುದು. ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವು ದಿನಗಳು ಬಾಕಿಯಿದ್ದು, ದೇವಿಯ ದರ್ಶನಕ್ಕೆ ಮಳೆ ಅನುವು ಮಾಡಿಕೊಡುತ್ತದೆಯೋ ಕಾದು ನೋಡಬೇಕಿದೆ.

ಪ್ರವಾಸಿಗರಿಲ್ಲದೆ ಖಾಲಿ ಖಾಲಿ

ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಇನಾಂ ದತ್ತಾತ್ರೇಯ ಪೀಠ ಸೇರಿದಂತೆ ಚಂದ್ರದ್ರೋಣ ಪರ್ವತದ ಸಾಲು ಪ್ರವಾಸಿಗರಿಲ್ಲದೆ ಖಾಲಿ ಖಾಲಿಯಾಗಿದೆ. ಪ್ರವಾಸಿಗರು ಇತ್ತ ಕಡೆ ತಲೆ ಹಾಕದಿರುವುದರಿಂದ ಸ್ಥಳೀಯ ವ್ಯಾಪಾರೋದ್ಯಮಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಚಿಕ್ಕ ಪುಟ್ಟ ವ್ಯಾಪಾರಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+