ಒಯಸಿಸ್ ಕಾಂಪ್ಲೆಕ್ಸ್ ಕರ್ನಾಲ್‍ನಲ್ಲಿರುವ ಉಚನ ಎಂಬ ಹಳ್ಳಿಯಲ್ಲಿ ನೆಲೆಗೊಂಡಿದೆ. ಇದು ರಾಷ್ಟ್ರೀಯ ಹೆದ್ದಾರಿ 1 ಎಂದು ಗುರುತಿಸಲ್ಪಟ್ಟಿರುವ ಗ್ರಾಂಡ್ ಟ್ರಂಕ್ ರಸ್ತೆಯಲ್ಲಿ ಕಂಡು ಬರುತ್ತದೆ. ಕರ್ನಾಲ್ ಕೆರೆಯ ದಂಡೆಯ ಪ್ರಶಾಂತವಾದ ಪರಿಸರದಲ್ಲಿ ನೆಲೆಗೊಂಡಿರುವ ಈ ಪ್ರವಾಸಿ ತಾಣವು ಪ್ರವಾಸಿಗರನ್ನು ಮೋಡಿ ಮಾಡುತ್ತದೆ. ಈ ಕೆರೆಯಲ್ಲಿ ದೋಣಿ ವಿಹಾರ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ಪ್ರಶಾಂತವಾದ ವಾತಾವರಣದಲ್ಲಿ, ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನುವ ಪಕ್ಷಿಗಳ ಕಲರವಗಳ ನಡುವೆ ದೋಣಿ ವಿಹಾರ ಮಾಡುವುದು ನಿಜಕ್ಕೂ ಒಂದು ಚೇತೋಹಾರಿ ಅನುಭವವಾಗಿರುತ್ತದೆ.
ಈ ರೆಸಾರ್ಟ್ ಸುತ್ತ ಹುಲ್ಲು ಹಾಸು ಮತ್ತು ನೀರನ್ನು ನಾವು ಕಾಣಬಹುದು. ಹೆದ್ದಾರಿಯಲ್ಲಿ ಪಯಣಿಸುವ ಪ್ರವಾಸಿಗರಿಗೆ ಇದು ವಿಶ್ರಾಂತಿಯನ್ನು ಮತ್ತು ಉಪಾಹಾರವನ್ನು ಒದಗಿಸುತ್ತದೆ. ಇಲ್ಲಿನ ಸ್ಥಳೀಯರು ತಮ್ಮ ಪ್ರೀತಿ ಪಾತ್ರರೊಂದಿಗೆ ಇಲ್ಲಿಗೆ ವಿಹಾರಕ್ಕೆ ಅಥವಾ ರಾತ್ರಿ ತಂಗಲು ಆಗಮಿಸುತ್ತಾರೆ. ಇಲ್ಲಿ ಕೆರೆ ಮತ್ತು ಕಾಲುವೆಯ ಸುತ್ತಲು ಕಾಟೇಜುಗಳನ್ನು ನಿರ್ಮಿಸಿದ್ದಾರೆ.
ಒಯಸಿಸ್ ಸಂಕೀರ್ಣವು ದಿನವಿಡೀ ಪ್ರವಾಸಿಗರಿಂದ ಗಿಜಿಗಿಜಿಗುಟ್ಟುತ್ತಿರುತ್ತದೆ. ಇಲ್ಲಿನ ಶಾಪಿಂಗ್ ಮಾಲ್‍ನಲ್ಲಿ ವ್ಯಾಪಾರ ಮಾಡಲು, ಕೆಫೆಟೇರಿಯದಲ್ಲಿ ಕಾಫೀ ಕುಡಿಯಲು, ರೆಸ್ಟೌರೆಂಟ್‍ನಲ್ಲಿ, ಗಿಫ್ಟ್ ಶಾಪಿನಲ್ಲಿ, ಚಾಟ್ ಶಾಪ್‍ನಲ್ಲಿ, ಫ್ರೂಟ್ ಜ್ಯೂಸ್ ಶಾಪ್‍ನಲ್ಲಿ ಸದಾ ಪ್ರವಾಸಿಗರು ಕಿಕ್ಕಿರಿದು ತುಂಬಿರುತ್ತಾರೆ. ಇವುಗಳ ಜೊತೆಗೆ ಇಲ್ಲಿ ಒಂದು ಕ್ರಾಫ್ಟ್ ಬಜಾರ್ ಸಹ ಇದೆ. ದೆಹಲಿ ಹಾಟ್ ರೀತಿಯಲ್ಲಿಯೇ ಇಲ್ಲಿ ಸಹ ಕರಕುಶಲ ವಸ್ತುಗಳನ್ನು ಮತ್ತು ಕೈಮಗ್ಗದ ವಸ್ತುಗಳನ್ನು ನಾವು ಕೊಳ್ಳಬಹುದು. ಈ ಕಾಂಪ್ಲೆಕ್ಸಿನಲ್ಲಿ ಪೆಟ್ರೊಲ್ ಪಂಪ್, ಕಾರ್ ಪಾರ್ಕಿಂಗ್, ಮಕ್ಕಳಿಗಾಗಿ ಇಲ್ಲಿ ಉಯ್ಯಾಲೆ ಮತ್ತು ಜಾರುಗುಪ್ಪೆಗಳಂತಹ ಇತರ ಸೌಲಭ್ಯಗಳನ್ನು ಸಹ ಇಡಲಾಗಿದೆ.


Click it and Unblock the Notifications