ವಿಶೇಷವಾಗಿ ಪ್ರವಾಸಿ ಪ್ರಿಯರಿಗೆ, ಪ್ರಕೃತಿ ಪ್ರಿಯರಿಗೆ ಮಳೆಗಾಲವೆಂದರೆ ಬಹಳ ಇಷ್ಟ. ಏಕೆಂದರೆ ಬಹುಶಃ ಮಳೆಗಾಲದಲ್ಲಿ ಕಾಣಸಿಗುವಂತಹ ದೃಶ್ಯಗಳು ನಮಗೆ ಇತರ ಸೀಸನ್ ಗಳಲ್ಲಿ ಸಿಗುವುದು ತುಸು ಕಷ್ಟವೇ. ಧುಮ್ಮಿಕ್ಕಿ ಹರಿಯುವ ಜಲಪಾತಗಳು, ರಭಸದಿಂದ ಹರಿಯುವ ನದಿಗಳು, ಹಚ್ಚ ಹಸಿರು ಹೊದ್ದು ನಿಂತ ಬೆಟ್ಟ ಗುಡ್ಡಗಳು... ಅಬ್ಬಬ್ಬಾ ಹೀಗೆ ಕಣ್ಣಿಗೆ ಕಾಣುವ ದೃಶ್ಯಗಳು ಒಂದೇ, ಎರಡೇ... ಇನ್ನು ಮಹಾನಗರಗಳಲ್ಲಿ ವಾಸಿಸುವವರು ನಮಗೆಲ್ಲಿ ಆ ಭಾಗ್ಯ ಎಂದು ಕೊರಗಬೇಡಿ. ನಾವಿಂದು ಬೆಂಗಳೂರಿಗೆ ಸಮೀಪವಿರುವ ಅಂತಹ ಕೆಲವು ಸ್ಥಳಗಳ ಕುರಿತು ಮಾಹಿತಿ ನೀಡಲಿದ್ದೇವೆ.
ಬ್ಯೂಸಿ ಶೆಡ್ಯೂಲ್ ನಿಂದ ಬಿಡುವಾದಾಗ ಈ ಸ್ಥಳಗಳಿಗೆ ಭೇಟಿ ನೀಡುವುದನ್ನು ಮರೆಯದಿರಿ. ಭಾರತದಲಿರುವ ಈ ಸ್ಥಳಗಳ ಸೌಂದರ್ಯವನ್ನು ಸ್ವರ್ಗಕ್ಕೆ ಹೋಲಿಸಲಾಗುತ್ತದೆ. ಈ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕೆಲವು ದಿನಗಳವರೆಗೆ ಉಳಿಯಲು ವ್ಯವಸ್ಥೆಯೂ ಇದೆ. ಈ ಬಾರಿ ನೀವು ಕೂಡ ಈ ಸ್ಥಳಗಳಲ್ಲಿ ಯಾವುದಾದರೂ ಒಂದನ್ನು ನೋಡಲು ತೆರಳಿ. ಒಮ್ಮೆ ನೋಡಿದವರು ನೀವು ಮತ್ತೆ ಮತ್ತೆ ಅದೇ ಸ್ಥಳಗಳಿಗೆ ಹಿಂತಿರುಗಲು ಬಯಸುತ್ತೀರಿ.

ಸಂತಸ ತರಲಿದೆ ಮಳೆಗಾಲದ ಭೇಟಿ
ಭಾರತದ ಟೆಕ್ ಕ್ಯಾಪಿಟಲ್ ಎಂದೇ ಕರೆಯಲ್ಪಡುವ ಬೆಂಗಳೂರು ಕರ್ನಾಟಕದ ಅತ್ಯಂತ ಗದ್ದಲದ ಮಹಾನಗರವಾಗಿದೆ. ಈ ನಗರವು ಅನೇಕ ಸುಂದರವಾದ ಸ್ಥಳಗಳಿಂದ ಸುತ್ತುವರೆದಿದೆ. ಈ ಸ್ಥಳಗಳಿಗೆ ಮಳೆಗಾಲದ ಸಮಯದಲ್ಲಿ ಭೇಟಿ ನೀಡುವುದು ಸಾಕಷ್ಟು ಸಂತೋಷವನ್ನುಂಟು ಮಾಡುತ್ತದೆ. ಇದಲ್ಲದೆ ಮಳೆಗಾದಲ್ಲಿ ಹಸಿರು ಎಲ್ಲೆಡೆ ಹರಡಿರುತ್ತದೆ. ಅದನ್ನು ನೋಡುವುದರಿಂದ ಯಾರಿಗೆ ಆಗಲಿ ಲಾಂಗ್ ಡ್ರೈವ್‌ಗೆ ಹೋಗಲು ಪ್ರಚೋದಿಸುತ್ತದೆ. ನೀವು ಸಹ ಬೆಂಗಳೂರಿನಲ್ಲಿ ಅಥವಾ ಸುತ್ತಮುತ್ತ ವಾಸಿಸುತ್ತಿದ್ದರೆ ಅಥವಾ ಮುಂದಿನ ದಿನಗಳಲ್ಲಿ ಇಲ್ಲಿಗೆ ಹೋಗಲು ಯೋಜಿಸುತ್ತಿದ್ದರೆ ಗುಣಮಟ್ಟದ ಸಮಯವನ್ನು ಕಳೆಯಲು, ಹೊಸತನ್ನು ಅನುಭವಿಸಲು ಈ ಕೆಲವು ಸ್ಥಳಗಳಿಗೆ ಭೇಟಿ ಕೊಡಬಹುದು.

ಕಾಫಿ ಪರಿಮಳ ಅನುಭವಿಸಿ...
ನೀವು ಬೆಂಗಳೂರಿನ ನೈಋತ್ಯ ಕಡೆಗೆ ಹೋಗುವ ಪ್ಲಾನ್ ಏನಾದರೂ ಇದ್ದರೆ ಕೂರ್ಗ್‌ನ ಸುಂದರವಾದ ನೋಟವು ನಿಮ್ಮನ್ನು ಆಕರ್ಷಿಸದೆ ಇರಲಾರದು. ಈ ಜಿಲ್ಲೆಯ ಸೌಂದರ್ಯವನ್ನು ಮಳೆಗಾಲದಲ್ಲಿ ನೋಡಲೇಬೇಕು. ಹಚ್ಚ ಹಸಿರಿನ ಕಾಫಿ ತೋಟಗಳಿಂದ ಹಿಡಿದು ಮಂಜು ತುಂಬಿದ ಕಣಿವೆಗಳು ಮತ್ತು ಅವುಗಳ ಮೂಲಕ ಹಾದುಹೋಗುವ ಅಂಕುಡೊಂಕಾದ ರಸ್ತೆಗಳು...ನೀವು ಖಂಡಿತ ಮೈಮರೆಯದೆ ಇರಲಾರಿರಿ. ಇಲ್ಲಿನ ಅಬ್ಬೆ ಫಾಲ್ಸ್‌ಗೂ ಪ್ರವಾಸ ಕೈಗೊಳ್ಳಿ ಅಥವಾ ಕಾಫಿ ಎಸ್ಟೇಟ್‌ನಲ್ಲಿ ಉಳಿದು ಕಾಫಿಯ ಪರಿಮಳವನ್ನು ಅನುಭವಿಸಿ, ಆನಂದಿಸಬಹುದು. ಬೆಂಗಳೂರಿಂದ ಕೂರ್ಗ್ 250 ಕಿಮೀ ದೂರದಲ್ಲಿದೆ.
ರೋಮಾಂಚನಗೊಳಿಸುವ ನಿಗೂಢ ಗುಹೆಗಳು
ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಹೋಗುವ ಪ್ಲಾನ್ ಮಾಡಿದ್ದರೆ ಪ್ರಶಾಂತತೆಯಿಂದ ಇರುವ ಬೆಟ್ಟಗಳು, ಹಚ್ಚ ಹಸಿರಿನ ಕಾಫಿ ತೋಟಗಳನ್ನು ನೋಡಬಯಸುವವರಿಗೆ, ರಜಾದಿನ ಕಳೆಯಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ತಾಜಾ ಹುರಿದ ಕಾಫಿ ಬೀಜಗಳ ಪರಿಮಳವನ್ನು ನೀವು ಇಲ್ಲಿ ಬರೀ ಗಾಳಿಯಲ್ಲಿಯೇ ಆಸ್ವಾದಿಸಬಹುದು. ಇದಲ್ಲದೆ, ಬಾಬಾ ಬುಡನ್‌ಗಿರಿ ಬೆಟ್ಟಗಳ ಆಕರ್ಷಣೆಯನ್ನು ಕಣ್ತುಂಬಿಕೊಳ್ಳಬಹುದು. ಅಲ್ಲಿನ ನಿಗೂಢ ಗುಹೆಗಳು ಪ್ರವಾಸಿಗರನ್ನು ರೋಮಾಂಚನಗೊಳಿಸುತ್ತವೆ. ಕರ್ನಾಟಕದ ಅತ್ಯುನ್ನತ ಶಿಖರವಾದ ಮುಳ್ಳಯ್ಯನಗಿರಿಯ ಬೆಟ್ಟಗಳು ಮಂಜಿನಿಂದಲೇ ಮುಳುಗಿವೆ. ಅಷ್ಟೇ ಅಲ್ಲ, ಅವುಗಳ ಸುತ್ತಲಿನ ಕಣಿವೆಯ ರಮಣೀಯ ನೋಟ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಭದ್ರಾ ವನ್ಯಜೀವಿ ಅಭಯಾರಣ್ಯ ಮತ್ತು ಹಿರೇಕೊಳಲೆ ಕೆರೆಯಂತಹ ಸ್ಥಳಗಳನ್ನು ಸಹ ನಿಮ್ಮ ಪ್ರವಾಸಿ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು. ಬೆಂಗಳೂರಿನಿಂದ ಚಿಕ್ಕಮಗಳೂರು 245 ಕಿಮೀ ದೂರದಲ್ಲಿದೆ.

ಸುಂದರವಾದ ಲಾಂಗ್ ಡ್ರೈವ್ ಆನಂದಿಸಿ
ಮಳೆಗಾಲದಲ್ಲಿ ಬೆಂಗಳೂರಿನ ಸಮೀಪದ ಸ್ಥಳಗಳಿಗೆ ಭೇಟಿ ನೀಡಬೇಕೆಂದರೆ ವಯನಾಡ್ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಇದು ಈ ಸೀಸನ್ ನಲ್ಲಿ ಇಲ್ಲಿಗೆ ಬರುವ ಪ್ರವಾಸಿಗರನ್ನು ತೆರೆದ ತೋಳುಗಳಿಂದ ಸ್ವಾಗತಿಸುತ್ತದೆ. ನೀವು ನಗರವನ್ನು ಪ್ರವೇಶಿಸುತ್ತಿದ್ದಂತೆ ಸುಂದರವಾದ ಲಾಂಗ್ ಡ್ರೈವ್ ಆನಂದಿಸಬಹುದು. ಇಲ್ಲಿನ ಹಚ್ಚ ಹಸಿರು ಎಲೆಗಳು, ಹಳೆಯ ಕಾಲದ ಲೇಕ್‌ಗಳು ತಣ್ಣನೆಯ ಮಳೆಗಾಲದಲ್ಲಿ ನಿಮ್ಮ ಹೃದಯವನ್ನು ಬೆಚ್ಚಗಾಗಿಸುತ್ತವೆ. ಇಲ್ಲಿಗೆ ಬಂದರೆ ಖಂಡಿತ ಬಾಣಾಸುರ ಸಾಗರ ಅಣೆಕಟ್ಟನ್ನು ನೋಡಿ. ಇದಲ್ಲದೇ ಮೀನಮುಟ್ಟಿ ಜಲಪಾತ ಕೂಡ ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಜೊತೆಗೆ ವಯನಾಡಿನ ಬುಡಕಟ್ಟು ಪಾರಂಪರಿಕ ಗ್ರಾಮವಾದ ಎನ್ ಊರು ಮತ್ತು ಎಡಕ್ಕಲ್ ಗುಹೆಗಳಿಗೆ ಭೇಟಿ ನೀಡಲು ಸಮಯ ಮಾಡಿಕೊಳ್ಳಿ. ಬೆಂಗಳೂರಿನಿಂದ ವಯನಾಡ್ 270 ಕಿಮೀ ದೂರದಲ್ಲಿದೆ.
ಪ್ರಕೃತಿ ಮತ್ತು ವನ್ಯಜೀವಿ ಪ್ರಿಯರಿಗೆ ಸ್ವರ್ಗ
ಬೆಂಗಳೂರಿನಿಂದ ಆಗುಂಬೆ ಅಷ್ಟೇನೂ ದೂರದಲ್ಲಿ ಇಲ್ಲ ಬಿಡಿ. ಇದನ್ನು "ದಕ್ಷಿಣದ ಚಿರಾಪುಂಜಿ" ಎಂದೂ ಕರೆಯುತ್ತಾರೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಆಗುಂಬೆಯು ಪ್ರಕೃತಿ ಮತ್ತು ವನ್ಯಜೀವಿ ಪ್ರಿಯರಿಗೆ ಸ್ವರ್ಗವಾಗಿದೆ. ಈ ಪ್ರದೇಶವು ತನ್ನ ಜೀವವೈವಿಧ್ಯತೆಗೆ ಹೆಸರುವಾಸಿಯಾಗಿದೆ, ಇದು ವಿವಿಧ ಸಸ್ಯ ಮತ್ತು ಪ್ರಾಣಿ ಪ್ರಭೇದಗಳನ್ನು ಒಳಗೊಂಡಿದೆ. ಈ ಸ್ಥಳವು ನೇಚರ್ ವಾಕ್‌ಗೆ ಸೂಕ್ತವಾದ ಸ್ಥಳವಾಗಿದೆ. ಬೆಂಗಳೂರಿನಿಂದ ಆಗುಂಬೆ 350 ಕಿಮೀ ದೂರದಲ್ಲಿದೆ.


Click it and Unblock the Notifications

















