Search
  • Follow NativePlanet
Share
» »ಬೇಸಿಗೆ ರಜೆಯ ಅಪರೂಪದ ರಜಾ ತಾಣಗಳು

ಬೇಸಿಗೆ ರಜೆಯ ಅಪರೂಪದ ರಜಾ ತಾಣಗಳು

By Vijay

ಹೆಚ್ಚು ಕಡಿಮೆ ಫೆಬ್ರುವರಿ ತಿಂಗಳಿನ ಕೊನೆಯಲ್ಲಿ ಪ್ರಾರಂಭವಾಗುವ ಬೇಸಿಗೆಯು ಭಾರತದಲ್ಲಿ ಸಾಮಾನ್ಯವಾಗಿ ಜೂನ್ ವರೆಗೂ ವಿಸ್ತರಿಸಿರುತ್ತದೆ. ಇತ್ತೀಚಿನ ಕೆಲವು ವರ್ಷಗಳಿಂದ ಬೇಸಿಗೆಯು ಅಕ್ಷರಶಃ ಭೂಮಿಯನ್ನು ಕಾಯ್ದ ಬಾಣಲೆಯನ್ನಾಗಿ ಮಾಡಿರುವುದಂತೂ ಸತ್ಯ. ಮತ್ತೊಂದು ವಿಷಯವೆಂದರೆ ಸಾಮಾನ್ಯವಾಗಿ ಬೇಸಿಗೆಯ ಸಮಯದಲ್ಲೆ ವಿದ್ಯಾರ್ಥಿಗಳ ವರ್ಷದ ಶೈಕ್ಷಣಿಕ ಚಟುವಟಿಕೆಯು ಮುಕ್ತಾಯಗೊಂಡು ದೀರ್ಘಾವಧಿಯ ಬಿಡುವು ದೊರಕಿರುತ್ತದೆ. ಒಂದೆಡೆ ಬೇಸಿಗೆಯ ಕಾವು ಮೈಮನಗಳನ್ನು ಕುದಿಸುತ್ತಿದ್ದರೆ, ಇನ್ನೊಂದೆಡೆ ಅದಕ್ಕೆ ಪರಿಹಾರವೆಂಬಂತೆ ಗಿರಿಧಾಮಗಳ, ತಂಪು ಪ್ರದೇಶಗಳ ಪ್ರವಾಸಕ್ಕೆ ಹೊರಡುವ ಯೋಜನೆಯು ಅಲೆ ಅಲೆಯಾಗಿ ಸಾರ್ಥಕತೆಯ ಭಾವನೆಯನ್ನು ಮನದಲ್ಲಿ ಮೂಡಿಸುತ್ತದೆ.

ಹೌದು, ಬೇಸಿಗೆಯೆ ಹಾಗೆ...ನಿಂತಲ್ಲಿ ನಿಲ್ಲಲಾರದೆ, ಕೂತಲ್ಲಿ ಕೂಡಲಾರದೆ ಅತ್ತಿಂದಿತ್ತ ಚಲಿಸುತ್ತಿರಬೇಕೆಂದು ಹಂಬಲ ಉಂಟಾಗುತ್ತದೆ. ಚಪಲ ಚೆನ್ನಿಗರಾಯನ ತರಹ ಯಾವುದಾದರೂ ತಂಪುಮಯ ಪ್ರದೇಶಗಳಿಗೆ ಹೋಗಿ ದಿನಗಳನ್ನು ತಳ್ಳಬೇಕೆಂಬ ಆಸೆ ಮೂಡುವುದು ಸಹಜ. ಬಹುಶಃ ಪ್ರಕೃತಿ ಮಾತೆಯು ಮನುಷ್ಯನಿಗೆ ಬೇಸಿಗೆಯಲ್ಲಿ ತಲೆದೋರುವ ಇಂತಹ ಸ್ಥಿತಿಗತಿಗಳ ಬಗ್ಗೆ ಮೊದಲೆ ಅರಿತಿದ್ದಳೊ ಏನೊ...ಅದಕ್ಕೆಂದೆ ಶಮನ ಪರಿಹಾರಾರ್ಥವಾಗಿ ಅಲ್ಲಲ್ಲಿ ಮನಸೂರೆಗೊಳ್ಳುವ, ತಂಪಾದ ಆಹ್ಲಾದಕರ ಭಾವನೆ ಮೂಡುವ ಕೆಲವು ಆದರ್ಶಮಯ ಗಿರಿಧಾಮಗಳನ್ನು, ತಂಪು ಪ್ರದೇಶಗಳನ್ನು ಮನುಷ್ಯನಿಗೆ ಕರುಣಿಸಿದ್ದಾಳೆ. ಭಾರತದಲ್ಲಿ ಬೇಸಿಗೆಯ ಸಮಯವನ್ನು ಆರಾಮದಾಯಕವಾಗಿ ಕಳೆಯಲು ಅನೇಕ ಗಿರಿಧಾಮ ಪ್ರದೇಶಗಳನ್ನು ಕಾಣಬಹುದು. ಅವುಗಳಲ್ಲಿ ಕೆಲವು ವಿಶೀಷ್ಟವಾದ ಪ್ರದೇಶಗಳ ಕುರಿತು ಈ ಲೇಖನದ ಮೂಲಕ ತಿಳಿಯೋಣ.

ನುಬ್ರಾ ಕಣಿವೆ:

ನುಬ್ರಾ ಕಣಿವೆ:

ಅಷ್ಟೊಂದಾಗಿ ಇದರ ಹೆಸರನ್ನು ಬಹುತೇಕರು ಕೇಳದೆ ಇದ್ದರೂ ಇಲ್ಲಿನ ನೋಟವಂತೂ ಅತ್ಯದ್ಭುತ. ಬೇಸಿಗೆಯ ಸಮಯವನ್ನು ಅತಿ ಸಂತಸ ಹಾಗು ರೋಮಾಂಚನಕಾರಿಯಾಗಿ ಇಲ್ಲಿ ಕಳೆಯಬಹುದು. ಇದರ ಮೂಲ ಹೆಸರು ಡುಮ್ರಾ (Ldumra) ಅಂದರೆ ಸ್ಥಳೀಯವಾಗಿ "ಹೂವುಗಳ ಕಣಿವೆ" ಎಂದರ್ಥ. ಇದಿರುವುದು ಲಡಾಖ್ ಕಣಿವೆಯ ಈಶಾನ್ಯ ದಿಕ್ಕಿಗೆ. ಲಡಾಖ್ ಜಿಲ್ಲೆಯ ರಾಜಧಾನಿ ಪಟ್ಟಣವಾದ ಲೇಹ್ ನಗರದ ಉತ್ತರ ದಿಕ್ಕಿಗೆ ಸುಮಾರು 150 ಕಿ.ಮೀ ದೂರದಲ್ಲಿ ಈ ಕಣಿವೆಯು ನೆಲೆಸಿದೆ. ವಿಶ್ವದ ಅತಿ ಎತ್ತರದಲ್ಲಿರುವ ವಾಹನ ಸಂಚಾರ ದಾರಿಯಾದ ಖರ್ದುಂಗ್ ಲಾ ಪಾಸ್ ಮೂಲಕ ಈ ಕಣಿವೆಗೆ ತಲುಪಬಹುದಾಗಿದೆ.

ಚಿತ್ರಕೃಪೆ: Raghavan V

ಖಜ್ಜಿಯಾರ್:

ಖಜ್ಜಿಯಾರ್:

ಖಜ್ಜಿಯಾರ್, ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಡಾಲ್‍ಹೌಸಿ ಬಳಿಯಿರುವ ಒಂದು ನಯನ ಮನೋಹರ ಗಿರಿಧಾಮವಾಗಿದೆ. ಇದೊಂದು ಸಣ್ಣ ಭೂಪ್ರದೇಶವಾಗಿದ್ದು ಮಧ್ಯದಲ್ಲಿ ಸುಂದರವಾದ ಕೆರೆ ಹಾಗು ಸುತ್ತಲೂ ದಟ್ಟ ಹಸಿರಿನ ಗಿಡ-ಮರಗಳು ಮತ್ತು ಕಾಡಿನಿಂದ ಕಂಗೊಳಿಸುತ್ತದೆ. ಪಶ್ಚಿಮ ಹಿಮಾಲಯದ ದೌಲಾಧರ್ ಪರ್ವತ ಶ್ರೇಣಿಗಳ ಅತ್ಯದ್ಭುತ ನೋಟವನ್ನು ಇಲ್ಲಿಂದ ಸವಿಯಬಹುದಾಗಿದ್ದು, ಕಾಲಾಟಾಪ್ ವನ್ಯಜೀವಿಧಾಮದ ಅನುಭವವನ್ನು ಇಲ್ಲಿ ಪಡೆಯಬಹುದಾಗಿದೆ.

ಚಿತ್ರಕೃಪೆ: Sandeep Brar Jat

ತವಾಂಗ್:

ತವಾಂಗ್:

ಭಾರತದ ಅರುಣಾಚಲ ಪ್ರದೇಶದಲ್ಲಿ ನೆಲೆಸಿರುವ ಈ ಪ್ರದೇಶವು ದೇಶದ ಅತಿ ದೊಡ್ಡ ಬೌದ್ಧ ಮಠವನ್ನು ಹೊಂದಿದ್ದು ಅದಕ್ಕಾಗಿ ಪ್ರಖ್ಯಾತವಾಗಿದೆ. ಕೇವಲ ಬೌದ್ಧ ಮಠದಿಂದಾಗಿಯೆ ಅಲ್ಲದೆ ಈ ಪ್ರದೇಶವು ಕರಕುಶಲ ಸಾಮಗ್ರಿಗಳು, ಜಾಂಗ್ ಜಲಪಾತ ಹಾಗು ಮಂಜುಗಟ್ಟಿದ ಅಥವಾ ಘನಿರ್ಭವಿಸಿದ ಕೆರೆಯಿಂದಾಗಿಯೂ ಜನಪ್ರಿಯವಾಗಿದೆ. ಬೇಸಿಗೆಯನ್ನು ಕಳೆಯಲು ಅಹ್ಲಾದಕರ ವಾತಾವರಣ ಇಲ್ಲಿದೆ.

ಚಿತ್ರಕೃಪೆ: rajkumar1220

ಚಿರಾಪುಂಜಿ:

ಚಿರಾಪುಂಜಿ:

ಮುಂಗಾರು ಮಳೆ ಚಿತ್ರದ ಆ ಹಿತಕರ ತಾಜಾ ಮಳೆ ದೃಶ್ಯಗಳು ಚಿತ್ರ ನೋಡಿದವರೆಲ್ಲರ ಅಕ್ಷಿ ಪಟಲದಲ್ಲಿ ಹಾಸು ಹೊಕ್ಕಾಗಿದೆ ಎಂದರೆ ತಪ್ಪಾಗಲಾರದು. ಕೇವಲ ನಿಯಮಿತ ಅವಧಿಯವರೆಗೆ ಮಾತ್ರ ಅನುಭವಿಸಬಹುದಾದ ಅಂತಹ ದೃಶ್ಯಗಳು ಬಹು ದೀರ್ಘಾವಧಿಯವರೆಗೆ ಸವಿಯ ಬೇಕೆಂದಿದ್ದರೆ ಮೇಘಾಲಯ ರಾಜ್ಯದ ಚಿರಾಪುಂಜಿಗೆ ಭೇಟಿ ನೀಡಬಹುದು. ಇದು ಜಗತ್ತಿನ ಎರಡನೆಯ ಅತಿ ತೇವಮಯ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಲಿಂಪಾಂಗ್:

ಕಲಿಂಪಾಂಗ್:

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕಂಡುಬರುವ ಮಹಾಭಾರತ ಪರ್ವತ ಶ್ರೇಣಿಗಳಲ್ಲಿ(ಲೆಸ್ಸರ್ ಹಿಮಾಲಯ ಎಂದೂ ಕರೆಯಲ್ಪಡುತ್ತದೆ) ಕಂಡುಬರುತ್ತದೆ ಈ ಸುಂದರ ಪಟ್ಟಣ ಕಾಲಿಂಪಾಂಗ್. ಬೇಸಿಗೆಯ ಸಮಯದಲ್ಲಿ ಅತಿ ಹಿತಕರವಾದ ವಾತಾವರಣವನ್ನು ಕರುಣಿಸುವ ಇಲ್ಲಿ ತೀಸ್ತಾ ನದಿ ಕಣಿವೆ, ಹೂವುಗಳ ಮಾರುಕಟ್ಟೆ, ವನ್ಯಜೀವನ ಸಂಪತ್ತು ಮುಂತಾದವುಗಳನ್ನು ಆಸ್ವಾದಿಸಬಹುದಾಗಿದೆ.

ಚಿತ್ರಕೃಪೆ: Anuj Kumar Pradhan

ಹಾರ್ಸ್ಲಿ ಬೆಟ್ಟಗಳು:

ಹಾರ್ಸ್ಲಿ ಬೆಟ್ಟಗಳು:

ಆಂಧ್ರಪ್ರದೇಶದ ಮದನಪಲ್ಲಿ ಎಂಬಲ್ಲಿ ಅತಿ ಜನಪ್ರಿಯವಾದ ಬೇಸಿಗೆ ರಜೆಯ ಮಜೆಯನ್ನು ಅನುಭವಿಸಬಹುದಾದ ಉತ್ಕೃಷ್ಟ ತಾಣವನ್ನು ಕಾಣಬಹುದು. ಹಾರ್ಸ್ಲಿ ಹಿಲ್ ಒಂದು ಪ್ರಖ್ಯಾತ ಪ್ರಾಕೃತಿಕ ಸೊಬಗಿನ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಸುಂದರವಾದ ಅಲ್ಲಮಂದ ಹಾಗು ಗುಲ್ ಮೊಹರ್ ಮರಗಳಿಂದ ಕಂಗೊಳಿಸುತ್ತದೆ. ಗಂಗೋತ್ರಿ ಕೆರೆ, ಸಂಗ್ರಹಾಲಾಯ, ಎತ್ತರದ ವೀಕ್ಷಣಾ ಸ್ಥಳ, ಸಾಹಸಮಯ ಚಟುವಟಿಕೆಗಳು ಇಲ್ಲಿನ ಕೆಲವು ಪ್ರಮುಖ ಆಕರ್ಷಣೆಗಳು.

ಚಿತ್ರಕೃಪೆ: Henri Bergius

ಕದ್ಮತ್ ದ್ವೀಪ:

ಕದ್ಮತ್ ದ್ವೀಪ:

ಬೇಸಿಗೆಯ ಬೇಗೆಯನ್ನು ಸೆದೆ ಬಡಿಯಲು ಕೇವಲ ತಂಪು ಪ್ರದೇಶಗಳೆ ಆಗಬೇಕೆಂದೇನಿಲ್ಲ. ವಿವಿಧ ಜಲಾಕರ್ಷಣೆಗಳನ್ನು ಒದಗಿಸುವ ಹಲವು ಪ್ರಸಿದ್ಧ ಕಡಲ ಕಿನಾರೆಗಳೂ ಸಹ ಬೇಸಿಗೆ ರಜೆಯ ಆನಂದವನ್ನು ಕರುಣಿಸುವಲ್ಲಿ ಸಹಕಾರಿಯಾಗಿವೆ. ಲಕ್ಷದ್ವೀಪ ಸಮೂಹದಲ್ಲಿರುವ ಕದ್ಮತ್ ದ್ವೀಪವು ಬೇಸಿಗೆಯನ್ನು ರೋಮಾಂಚನಕಾರಿಯಾಗಿ ಕಳೆಯಬಹುದಾದ ಒಂದು ಅನುಪಮ ತಾಣವಾಗಿದೆ. ಸ್ಕೂಬಾ ಡೈವಿಂಗ್, ಸ್ನಾರ್ಕೇಲಿಂಗ್ ನಂತಹ ಅದ್ಭುತ ಸಮುದ್ರ ಚಟುವಟಿಕೆಗಳ ಆನಂದವನ್ನು ಇಲ್ಲಿ ಸವಿಯಬಹುದು.

ಚಿತ್ರಕೃಪೆ: Manvendra Bhangui

ಯೇರ್ಕಾಡ್:

ಯೇರ್ಕಾಡ್:

ತಮಿಳುನಾಡಿನ ಸೇಲಂ ಪಟಣದ ಬಳಿಯಿರುವ ಪೂರ್ವ ಘಟ್ಟದ ಒಡಲಿನಲ್ಲಿ ನೆಲೆಸಿರುವ ಸುಂದರ ಪುಟ್ಟ ಗಿರಿಧಾಮವೇ ಯೇರ್ಕಾಡ್. "ದಕ್ಷಿಣದ ರತ್ನ" ಎಂದು ಪ್ರೀತಿಯಿಂದ ಕರೆಯಲ್ಪಡುವ ಈ ಗಿರಿಧಾಮವು ಒಂದು ಜನಪ್ರಿಯ ಪ್ರವಾಸಿ ತಾಣವಾಗಿಯೂ ಹೆಸರು ಪಡೆದಿದೆ. ದೋಣಿ ವಿಹಾರ ಸೌಲಭ್ಯವನ್ನು ಹೊಂದಿರುವ ಇಲ್ಲಿನ ಯೇರ್ಕಾಡ್ ಕೆರೆಯು ಪ್ರಮುಖವಾದ ಪ್ರವಾಸಿ ಆಕರ್ಷಣೆಯಾಗಿದ್ದು, ಸುತ್ತಲೂ ಉದ್ಯಾನಗಳು ಹಾಗು ದಟ್ಟವಾದ ಗಿಡ ಮರಗಳಿಂದ ಸುತ್ತುವರೆದಿದೆ.

ಚಿತ್ರಕೃಪೆ: Mithun Kundu

ಪೊನ್ಮುಡಿ:

ಪೊನ್ಮುಡಿ:

"ಸ್ವರ್ಣ ಶೃಂಗ" ಎಂಬ ಖ್ಯಾತಿಯ ಪೊನ್ಮುಡಿ ಗಿರಿಧಾಮವು ಕೇರಳದ ಪಶ್ಚಿಮ ಘಟ್ಟದ ಸುಂದರ ಕಾನನದಲ್ಲಿ ನೆಲೆಸಿರುವ ಬೇಸಿಗೆ ಸಮಯದ ಸುಂದರ ಪ್ರದೇಶವಾಗಿದೆ. ತಿರುವನಂತಪುರಂ ಜಿಲ್ಲೆಯಲ್ಲಿರುವ ಪೊನ್ಮುಡಿ ಗಿರಿಧಾಮವು ಮನ ಮುದಿಸುವಂತಹ ನೈಸರ್ಗಿಕ ಸೌಂದರ್ಯ ಹೊತ್ತು ಧನ್ಯವಾಗಿದೆ. ಅಪಾರವಾದ ವನ್ಯಜೀವಿ ಸಂಪತ್ತು ಹಾಗು ಅವನತಿಯ ಅಂಚಿನಲ್ಲಿರುವ ಕೆಲವು ಅಪರೂಪದ ಪಕ್ಷಿಗಳಿಗೆ ಆಸರೆ ನೀಡಿರುವ ಈ ಪ್ರದೇಶವು ಪಶ್ಚಿಮ ಘಟ್ಟದ ಎತ್ತರದ ಶಿಖರಗಳ ಪೈಕಿ ಒಂದಾಗಿರುವ ಅಗಸ್ತ್ಯಾರಕೂಡಂ ಶಿಖರದ ಅದ್ಭುತ ನೋಟವನ್ನು ಕರುಣಿಸುತ್ತದೆ.

ಚಿತ್ರಕೃಪೆ: vishwaant

ಗೋಕರ್ಣ:

ಗೋಕರ್ಣ:

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣವು ಒಂದು ಪ್ರಖ್ಯಾತ ಧಾರ್ಮಿಕ ಹಾಗು ಪ್ರವಾಸಿ ಕ್ಷೇತ್ರವಾಗಿದೆ. ಇಲ್ಲಿನ ಪ್ರಶಾಂತಮಯ ಕಡಲ ತೀರವು ಒಂದೆಡೆ ಭವ್ಯ ಅರೇಬಿಅಯನ್ ಸಮುದ್ರದ ಹಾಗು ಇನ್ನೊಂದೆಡೆ ಪಶ್ಚಿಮ ಘಟ್ಟದ ಕಲ್ಲು ಬೆಟ್ಟಗಳ ರಮಣೀಯ ದೃಶ್ಯಗಳನ್ನು ಒದಗಿಸುತ್ತದೆ. ಕುಡ್ಲೆ ಬೀಚ್, ಓಂ ಬೀಚ್, ಹಾಫ್ ಮೂನ್ ಬೀಚ್ ಮುಂತಾದವುಗಳು ಇಲ್ಲಿನ ಕೆಲವು ಪ್ರಸಿದ್ಧ ಕಡಲ ತೀರಗಳಾಗಿವೆ.

ಚಿತ್ರಕೃಪೆ: Axis of eran

ಮಾಪುಸಾ:

ಮಾಪುಸಾ:

ಉತ್ತರ ಗೋವಾದ ಪ್ರಮುಖ ಪ್ರವಾಸಿ ಪಟ್ಟಣವಾದ ಮಾಪುಸಾ ಕೆಲವು ವಿಶೀಷ್ಟ ಕಡಲ ತೀರಗಳಿಗೆ ಹೆಸರುವಾಸಿಯಾಗಿದೆ. ಸ್ಥಳೀಯ ಮಾರುಕಟ್ಟೆ, ಸಂಸ್ಕೃತಿ-ಸಂಪ್ರದಾಯ, ಜನರ ಓಡಾಟ ಬೇಸಿಗೆ ಸಮಯವನ್ನು ರಸಮಯವನ್ನಾಗಿ ಮಾಡುತ್ತದೆ.

ಚಿತ್ರಕೃಪೆ: Aaron C

ಅಲಿಬಾಗ್:

ಅಲಿಬಾಗ್:

ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ನೆಲೆಸಿರುವ ಒಂದು ಸುಂದರ ಕಡಲ ತೀರ ಪಟ್ಟಣವೆ ಅಲಿಬಾಗ್. ಸಮುದ್ರ ಕೋಟೆಗಳು, ದೇವಾಲಯಗಳು ಹಾಗು ತೀರಗಳಿಂದಾಗಿ ಈ ಪ್ರದೇಶವು ನೆಚ್ಚಿನ ಪ್ರವಾಸಿ ತಾಣವಾಗಿದೆ. ಸಮುದ್ರ ತೀರದ ಕಪ್ಪು ಬಣ್ಣದ ಮರಳು ಹಾಗು ಪ್ರಶಾಂತಮಯ ವಾತಾವರಣದಿಂದಾಗಿ ಈ ಪ್ರದೇಶ ಹೆಚ್ಚು ಭೇಟಿ ನೀಡಲ್ಪಡುವ ತಾಣವಾಗಿದೆ.

ಚಿತ್ರಕೃಪೆ: Vijay yerzal

ಮೌಂಟ್ ಅಬು:

ಮೌಂಟ್ ಅಬು:

ಸಾಮಾನ್ಯವಾಗಿ ರಾಜಸ್ಥಾನವು ಉಷ್ಣಮಯ ವಾತಾವರಣ ಹೊಂದಿದೆ. ಅದರಲ್ಲೂ ಬೇಸಿಗೆಯ ಸಮಯವು ಪ್ರಾಣವನ್ನೆ ಹೀರುತ್ತಿರುವಂತಿರುತ್ತದೆ. ಇಷ್ಟಾಗ್ಯೂ ಈ ರಾಜ್ಯದಲ್ಲಿ ಅಹ್ಲಾದಕರ ವಾತಾವರಣವುಳ್ಳ ಒಂದು ಸುಂದರ್ ಗಿರಿಧಾಮವಿದೆ ಎಂದರೆ ನಂಬುವುದು ಸ್ವಲ್ಪ ಕಷ್ಟವಾದಿತು. ಆದರೆ ಇದು ಸತ್ಯವಾದ ಸಂಗತಿ. ಹೌದು ಮೌಂಟ್ ಅಬು ರಾಜಸ್ಥಾನದ ಒಂದು ಸುಂದರ ಗಿರಿಧಾಮ ಪ್ರದೇಶವಾಗಿದೆ. ಅರಾವಳಿ ಪರ್ವತ ಶ್ರೇಣಿಯಲ್ಲಿ ನೆಲೆಸಿರುವ ಈ ಗಿರಿಧಾಮವನ್ನು "ಮರಭೂಮಿಯ ಓಯಸಿಸ್" ಎಂದೆ ಕರೆಯಲಾಗುತ್ತದೆ. ಓಯಾಸಿಸ್ ಎಂದರೆ ಅಪರೂಪವಾಗಿ ದೊರೆಯುವ ಹಿತ ಎಂಬರ್ಥ ಕೊಡುತ್ತದೆ.

ಚಿತ್ರಕೃಪೆ: CorrectKnowledge

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+