Search
  • Follow NativePlanet
Share
» »ಮಕ್ಕಳಿಗೆ ಹೇಳಿ ಮಾಡಿಸಿದ ತಾಣ ಈ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ   

ಮಕ್ಕಳಿಗೆ ಹೇಳಿ ಮಾಡಿಸಿದ ತಾಣ ಈ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ   

ಶಿವಮೊಗ್ಗ ಭಾಗದೆಡೆ ಪ್ರವಾಸ ಹಮ್ಮಿಕೊಳ್ಳುವವರಿಗೆ ಹಚ್ಚ ಹಸಿರಿನಿಂದ ಕೂಡಿರುವ ಮುಗಿಲೆತ್ತರದ ಮರಗಳು, ಅಡಿಕೆ ಮರಗಳು, ಚಿಕ್ಕ ಚಿಕ್ಕ ಝರಿಗಳು, ಹಳ್ಳ-ಕೊಳ್ಳಗಳು, ಪುಟ್ಟ ಪುಟ್ಟ ಸೇತುವೆಗಳು ಯಥೇಚ್ಛವಾಗಿ ಕಾಣಸಿಗುತ್ತವೆ. ಹಾಗೆಯೇ ಕಾಡೊಳಗಿನ ಊರಿನೊಳಗೆ ಹೋದರಂತೂ ನಿಮಗೆ ಸಾರಗ, ನವಿಲು, ಮೊಲಗಳು, ಕಾಡುಕೋಳಿಯ ದರ್ಶನವಾಗಬಹುದು. ಮಳೆಗಾಲದಲ್ಲಂತೂ ಮೊಣಕಾಲುದ್ದದ ನೀರಿನಲ್ಲಿ ನಡೆಯುವುದೇ ಚೆಂದ.

ನೀವಿಲ್ಲಿ ಆನೆ ನೋಡಬೇಕೆಂದರೆ ಸಕ್ರೆಬೈಲಿಗೆ, ವಿಶಿಷ್ಟ ಜಾತಿಯ ಪಕ್ಷಿಗಳನ್ನು ನೋಡಬೇಕೆಂದರೆ ಮಂಡಗದ್ದೆಗೆ, ಜಲಪಾತ ನೋಡಬೇಕೆಂದರೆ ಜೋಗಕ್ಕೆ, ಬೆಟ್ಟ ಗುಡ್ಡಗಳನ್ನು ಏರಬೇಕೆಂದರೆ ಕವಲೆದುರ್ಗಕ್ಕೆ ಭೇಟಿ ನೀಡಬಹುದು. ಹೇಳುತ್ತಾ ಹೋದರೆ ಇಷ್ಟುದ್ದದ ಪಟ್ಟಿಯೇ ಬೆಳೆಯುತ್ತದೆ. ಆದರೆ ಶಿವಮೊಗ್ಗಕ್ಕೆ ಒಂದು ದಿನದ ಪ್ರವಾಸ ಹಮ್ಮಿಕೊಳ್ಳುವವರು ನೋಡಲೇಬೇಕಾದಂತಹ ಕೆಲವು ಜನಪ್ರಿಯ ಪ್ರವಾಸಿ ಸ್ಥಳಗಳಿವೆ. ಅದರಲ್ಲಿ ಒಂದು ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ.

ಅತ್ಯುತ್ತಮ ವನ್ಯಜೀವಿ ಅಭಯಾರಣ್ಯ

ಅತ್ಯುತ್ತಮ ವನ್ಯಜೀವಿ ಅಭಯಾರಣ್ಯ

‘ಲಯನ್ ಸಫಾರಿ' ಅಥವಾ ‘ಸಿಂಹಧಾಮ' ಎಂದೇ ಹೆಚ್ಚು ಫೇಮಸ್ ಆಗಿರುವ ಶಿವಮೊಗ್ಗದ ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಸಂರಕ್ಷಿತ ಪ್ರದೇಶವು ಕರ್ನಾಟಕದ ಅತ್ಯುತ್ತಮ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿದೆ. 200 ಹೆಕ್ಟೇರ್‌'ಗಳಷ್ಟು ವಿಶಾಲವಾದ ಪ್ರದೇಶದಲ್ಲಿರುವ ಈ ವನ್ಯಜೀವಿ ಅಭಯಾರಣ್ಯದಲ್ಲಿ ಪ್ರವಾಸಿಗರು ವಿವಿಧ ಜಾತಿಯ ಕಾಡು ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ನೋಡಬಹುದು. ಪ್ರತಿಯೊಂದು ಮೂಲೆಯಲ್ಲಿ ವಿವಿಧ ರೀತಿಯ ಸಸ್ಯ-ಮರಗಳನ್ನು ನೋಬಹುದು. ಇದು ಶಿವಮೊಗ್ಗ-ಸಾಗರ ರಸ್ತೆಯಲ್ಲಿದೆ. ನಿಮಗೆ ಶಿವಮೊಗ್ಗದಿಂದ ಸುಮಾರು 10 ಕಿ.ಮೀ ದೂರವಾಗಬಹುದು. ಇಲ್ಲಿ ಸರ್ಕಸ್‌'ಗಳಿಂದ ರಕ್ಷಿಸಲ್ಪಟ್ಟ ಸಿಂಹಗಳು ಮತ್ತು ಹುಲಿಗಳಿಗೆ ಪುನರ್ವಸತಿ ಕಲ್ಪಿಸಲಾಗುತ್ತದೆ. ಅರಣ್ಯ ಇಲಾಖೆ ವತಿಯಿಂದ ಪ್ರವಾಸಿಗರಿಗೆ ಸಫಾರಿ ಕೂಡ ಇರುತ್ತದೆ. ಅಂದಹಾಗೆ ಸಫಾರಿಯನ್ನು 1998 ರಲ್ಲಿ ಪ್ರಾರಂಭಿಸಲಾಯಿತು.

ಮಕ್ಕಳಿಗಂತೂ ಹಬ್ಬ

ಮಕ್ಕಳಿಗಂತೂ ಹಬ್ಬ

ಪ್ರಾಣಿ ಪಕ್ಷಿಗಳನ್ನು, ಪ್ರಕೃತಿಯನ್ನು ಇಷ್ಟಪಡುವ ಮಕ್ಕಳು ಒಮ್ಮೆ ಶಿವಮೊಗ್ಗಕ್ಕೆ ಬಂದರೆ ಲಯನ್ ಸಫಾರಿಗೆ ಭೇಟಿ ನೀಡುವುದನ್ನು ಮರೆಯಬೇಡಿ. ಇಲ್ಲಿ ಕಾಡು ಕೋಣ, ಸ್ಲಾಥ್ ಬೇರ್, ಕತ್ತೆ ಕಿರುಬ, ಜಿಂಕೆ, ಕಪ್ಪು ಚಿರತೆ, ಮೊಸಳೆ, ನವಿಲು, ಆಸ್ಟ್ರಿಚ್ ಪಕ್ಷಿ, ನೀರಾನೆ, ವಿವಿಧ ಜಾತಿಯ ಗಿಳಿಗಳು, ಬಾತುಕೋಳಿಗಳು, ಹೆಬ್ಬಾವು ಹೀಗೆ ಅನೇಕ ಸರಿಸೃಪಗಳನ್ನು ವೀಕ್ಷಿಸಬಹುದು. ಸಫಾರಿಗೆ ಶುಲ್ಕವಿದ್ದು, ಸಫಾರಿ ಹೋದಾಗ ಹುಲಿ ಮತ್ತು ಸಿಂಹಗಳನ್ನು ನೋಡಬಹುದು. ಮಕ್ಕಳು ಸಫಾರಿ ವೀಕ್ಷಿಸಿ, ಪ್ರಾಣಿಗಳನ್ನು ನೋಡಿ ಬಂದ ಮೇಲೆ ಆಟವಾಡಲು ಸ್ವಚ್ಛ ಸುಂದರವಾಗಿರುವ ಉದ್ಯಾನವನವಿದೆ. ಇಲ್ಲಿ ಮಕ್ಕಳೊಂದಿಗೆ ಪಾಲಕರು ಉತ್ತಮ ಸಮಯ ಕಳೆಯಬಹುದು. ಇತ್ತೀಚಿನ ದಿನಗಳಲ್ಲಿ ಜೀಪ್ ಸಫಾರಿ ಹೆಚ್ಚು ಜನಪ್ರಿಯವಾಗಿದೆ.

ಪ್ರವಾಸಿಗರು ಗಮನಿಸಬೇಕಾದ ವಿಷಯಗಳು

ಪ್ರವಾಸಿಗರು ಗಮನಿಸಬೇಕಾದ ವಿಷಯಗಳು

ಸಿಂಹಧಾಮವು ಮಂಗಳವಾರ ಮತ್ತು ರಾಷ್ಟ್ರೀಯ ರಜಾದಿನಗಳಲ್ಲಿ ತೆರೆದಿರುವುದಿಲ್ಲ. ಇತರ ದಿನಗಳಲ್ಲಿ ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00 ಮತ್ತು ಮಧ್ಯಾಹ್ನ 2:15 ರಿಂದ ಸಂಜೆ 5:00ರವರೆಗೆ ತೆರೆದಿರುತ್ತದೆ. ಛಾಯಾಗ್ರಹಣಕ್ಕೆ ಮತ್ತು ವಿಡಿಯೋ ಮಾಡಲು ಅವಕಾಶವಿದೆ. ವಿಶ್ರಾಂತಿ ಕೊಠಡಿಯ ಸೌಲಭ್ಯವೂ ಇದೆ. ನೀವು ಒಮ್ಮೆ ಒಳಗೆ ತೆರಳಿದರೆ 4 ರಿಂದ 5 ಗಂಟೆ ಆರಾಮಾಗಿ ಕಳೆಯಬಹುದು. ನೀವು ವರ್ಷವಿಡೀ ಇಲ್ಲಿಗೆ ಭೇಟಿ ಕೊಡಬಹುದು. ಒಳಗಡೆ ಕ್ಯಾಂಟೀನ್-ಹೊಟೇಲ್ ಇರುವುದರಿಂದ ಹಸಿವಾದಾಗ ರುಚಿಕರವಾದ ಆಹಾರ ಸವಿಯಬಹುದು.

ಒಂದು ದಿನಕ್ಕೆ ದತ್ತು ಪಡೆಯಬಹುದು

ಒಂದು ದಿನಕ್ಕೆ ದತ್ತು ಪಡೆಯಬಹುದು

ಸಾಮಾನ್ಯವಾಗಿ ದೊಡ್ಡ ದೊಡ್ಡ ಮೃಗಾಲಯಗಳಲ್ಲಿ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆಯುವ ಅವಕಶಾವಿರುತ್ತದೆ. ಇಲ್ಲಿಯೂ ನೀವು ಒಂದು ದಿನದ ಮಟ್ಟಿಗೆ ಹುಲಿ ಮತ್ತು ಸಿಂಹವನ್ನು ದತ್ತು ಪಡೆಯಬಹುದು. ಭಾರತೀಯ ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 80 (ಜಿ) ಪ್ರಕಾರ, ಸಂಪೂರ್ಣ ತೆರಿಗೆ ವಿನಾಯಿತಿ ಪಡೆಬಹುದು. ಪ್ರಾಣಿ ಮತ್ತು ಪಕ್ಷಿಗಳನ್ನು ದತ್ತು ಪಡೆಯುವವರು ಮೃಗಾಲಯದ ಯಾವುದೇ ಸಿಬ್ಬಂದಿಗಳನ್ನು ಭೇಟಿ ಮಾಡಬಹುದು. ಈ ಸಂಬಂಧ ಇಲ್ಲಿ ಬ್ಯಾನರ್ ಕೂಡ ಹಾಕಲಾಗಿದ್ದು, ನೀವು ಅಲ್ಲಿ ಕೊಟ್ಟಿರುವ ದೂರವಾಣಿ ಸಂಖ್ಯೆಗೂ ಕರೆ ಮಾಡಿ, ಮಾಹಿತಿ ಪಡೆಯಬಹುದು.

ಹುಟ್ಟುಹಬ್ಬ-ವಾರ್ಷಿಕೋತ್ಸವ ಆಚರಿಸಿಕೊಳ್ಳಿ

ಹುಟ್ಟುಹಬ್ಬ-ವಾರ್ಷಿಕೋತ್ಸವ ಆಚರಿಸಿಕೊಳ್ಳಿ

ಯಾವಾಗಲೂ ಮನೆಯೊಳಗೆ, ಪಾರ್ಟಿ ಹಾಲ್'ನಲ್ಲಿ ಕೇಕ್ ಕಟ್ ಮಾಡಿ ಬೋರ್ ಆಗಿದ್ದರೆ ಒಮ್ಮೆ ಹುಲಿ-ಸಿಂಹಧಾಮಕ್ಕೆ ಬನ್ನಿ. ನಿಮಗೆ ಈ ಹುಲಿ-ಸಿಂಹಧಾಮದಲ್ಲಿ ಹುಟ್ಟಹಬ್ಬ- ವಾರ್ಷಿಕೋತ್ಸವ ಆಚರಿಸಿಕೊಳ್ಳುವುದಕ್ಕೆ ಅವಕಾಶವಿದೆ. ಆದರೆ ಇದಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ನೀವು ಮೃಗಾಲಯದ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು.

ಈ ಮಾರ್ಗವಾಗಿ ಬನ್ನಿ

ಈ ಮಾರ್ಗವಾಗಿ ಬನ್ನಿ

ಶಿವಮೊಗ್ಗ ಜಿಲ್ಲೆಯಿಂದ ಬೇರೆ ಕಡೆ ಪ್ರಯಾಣಿಸಲು ನಿಲ್ದಾಣದ ಹೊರಗಿನಿಂದ ಬಸ್ ಅಥವಾ ಟ್ಯಾಕ್ಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ರಾಜಧಾನಿ ಬೆಂಗಳೂರಿನಿಂದ ಸುಮಾರು 280 ಕಿಮೀ ದೂರದಲ್ಲಿದೆ. ಈ ಮೊದಲೇ ಹೇಳಿದ ಹಾಗೆ ಶಿವಮೊಗ್ಗಕ್ಕೆ ಸಮೀಪವಿದೆ. ಆದರೆ ಬೇರೆ ಭಾಗಗಳಿಂದ ಇಲ್ಲಿಗೆ ಬರುವವರಿಗೆ ಮಾರ್ಗವನ್ನು ಈ ಕೆಳಗೆ ಕೊಡಲಾಗಿದೆ ನೋಡಿ...

ರಸ್ತೆ ಮಾರ್ಗ

ಕರ್ನಾಟಕದ ಜನಪ್ರಿಯ ವನ್ಯಜೀವಿ ಅಭಯಾರಣ್ಯವಾದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮವು ಉತ್ತಮ ರಸ್ತೆ ಸಂಪರ್ಕ ಹೊಂದಿದೆ. ಕರ್ನಾಟಕದ ಎಲ್ಲೆಡೆಯಿಂದ ಉತ್ತಮ ರೈಲು ಮತ್ತು ರಸ್ತೆ ಸಂಪರ್ಕ ಹೊಂದಿದೆ. ಕರ್ನಾಟಕದ ವಿವಿಧ ಭಾಗಗಳಿಂದ ಹಲವಾರು ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಶಿವಮೊಗ್ಗಕ್ಕೆ ಬರುತ್ತವೆ. ಶಿವಮೊಗ್ಗಕ್ಕೆ ಬಂದ ನಂತರ ಪ್ರವಾಸಿಗರು ಟ್ಯಾಕ್ಸಿ ಅಥವಾ ಖಾಸಗಿ ಬಸ್ ಮೂಲಕ ಇಲ್ಲಿಗೆ ತಲುಪಬಹುದು. ಶಿವಮೊಗ್ಗ ಸಮೀಪದಲ್ಲಿ ವಾಸಿಸುತ್ತಿರುವವರು ಇಲ್ಲಿಗೆ ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದು ಬರಬಹುದು.

ರೈಲು ಮಾರ್ಗ

ರೈಲು ನಿಲ್ದಾಣ ಶಿವಮೊಗ್ಗದಲ್ಲಿಯೇ ಇದೆ. ಪ್ರವಾಸಿಗರು ಬೇರೆ ಬೇರೆ ಭಾಗಗಳಿಂದ ಶಿವಮೊಗ್ಗವನ್ನು ತಲುಪಲು ರೈಲನ್ನು ಆಯ್ಕೆ ಮಾಡಿಕೊಳ್ಳಬಹುದು. ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮವನ್ನು ತಲುಪಲು ರೈಲು ನಿಲ್ದಾಣದಿಂದ ಟ್ಯಾಕ್ಸಿಗಳು ಮತ್ತು ಸ್ಥಳೀಯ ಬಸ್ಸುಗಳು, ಆಟೋಗಳು ಲಭ್ಯವಿವೆ.

ವಾಯು ಮಾರ್ಗ

ಶಿವಮೊಗ್ಗಕ್ಕೆ ತಲುಪಬೇಕೆಂದರೆ ಹತ್ತಿರದ ವಿಮಾನ ನಿಲ್ದಾಣ ಮಂಗಳೂರಿನಲ್ಲಿದೆ. ಇದು ಸುಮಾರು 165 ಕಿಮೀ ದೂರದಲ್ಲಿದೆ. ವಿಮಾನ ನಿಲ್ದಾಣದಿಂದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮವನ್ನು ತಲುಪಲು ಖಾಸಗಿ ವಾಹನಗಳು ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X