ಭಾರತ ದೇಶದಲ್ಲಿ ಅನೇಕ ವಿವಿಧ ರಾಜಮನೆತನಗಳ ಆಡಳಿತಗಾರರು ಆಳಿರುವ ವಿಷಯ ನಮಗೆ ಇತಿಹಾಸದ ಮೂಲಕ ತಿಳಿದುಬರುತ್ತದೆ. ಕಾಲದ ವಿವಿಧ ಹಂತಗಳಲ್ಲಿ ರಾಜರು ನಿರ್ಮಿಸಿದ ಕೋಟೆ, ಅರಮನೆಗಳು ತಮ್ಮ ವಿಭಿನ್ನವಾದ ಕಲಾತ್ಮಕ ವಾಸ್ತುಶಿಲ್ಪದಿಂದ ಇಂದು ಪ್ರಖ್ಯಾತ ಪ್ರವಾಸಿ ಆಕರ್ಷಣೆಗಳಾಗಿರುವುದು ಅಲ್ಲದೆ ಅವುಗಳಲ್ಲಿ ಹಲವು ಭವ್ಯವಾದ ಅರಮನೆ ಹೋಟೆಲುಗಳಲ್ಲಿ ಪರಿವರ್ತನೆಗೊಂಡು ಕಂಗೊಳಿಸುತ್ತಿರುವುದೂ ನಿಜ. ಸಾಮಾನ್ಯವಾಗಿ ಕೋಟೆಗಳು ಅಥವಾ ಅರಮನೆಗಳೆಂದಾಗ ನಮ್ಮಲ್ಲಿ ಹಲವು ಬಗೆಯ ಕಲ್ಪನೆಗಳು ಬರುವುದು ಸಹಜ. ಒಮ್ಮೊಮ್ಮೆಯಂತೂ ಅಂತಹ ಅರಮನೆಗಳಲ್ಲಿ ಇದ್ದಾಗ ಯಾವ ರೀತಿ ಅನುಭವ ಸಿಗಬಹುದೆಂಬ ಬಯಕೆಯು ಕೂಡ ಉಂಟಾಗುತ್ತದೆ.
ಇಂತಹ ಬಯಕೆಯುಳ್ಳ ಪ್ರವಾಸಿ ಪ್ರೀಯರನ್ನೆ ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಹಲವು ಅದ್ಭುತ ಅರಮನೆಗಳು ಇಂದು ಭವ್ಯ ಹೋಟೆಲುಗಳಾಗಿ ಪರಿವರ್ತನೆಗೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿರುವುದು ಭಾರತದಲ್ಲೂ ಕಂಡುಬರುತ್ತವೆ. ಅರಮನೆಗಳ ಮೂಲ ರಚನೆಗೆ ಧಕ್ಕೆ ಬಾರದಂತೆ, ಆಧುನಿಕ ಸೌಲಭ್ಯಗಳನ್ನು ಒದಗಿಸಿ, ಅರಮನೆಗಳಲ್ಲಿ ಸಿಗಬಹುದಾದ ಒಂದು ನೈಜ ರೀತಿಯ ಅನುಭವವನ್ನು ಒದಗಿಸುತ್ತವೆ ಈ ಹೋಟೆಲುಗಳು. ಈ ಲೇಖನವು ಭಾರತದಲ್ಲಿ ಕಂಡುಬರುವ ಅಂತಹ ಕೆಲವು ಅದ್ಭುತ ಅರಮನೆ ಹೋಟೆಲುಗಳ ಪರಿಚಯ ನಿಮಗೆ ಮಾಡಿಸುತ್ತದೆ. ಒಂದೊಂದಾಗಿ ಸ್ಲೈಡಿನಲ್ಲಿ ಓದಿ ತಿಳಿಯಿರಿ ಹಾಗು ಅವಕಾಶ ದೊರೆತಾಗ ನೀವು ಈ ಹೋಟೆಲುಗಳಿಗೆ ಭೇಟಿ ನೀಡಿ.

ಲಲಿತ್ ಮಹಲ್, ಮೈಸೂರು
ಲಲಿತ್ ಮಹಲ್ ಮೈಸೂರು ನಗರದ ಎರಡನೆಯ ದೊಡ್ಡ ಅರಮನೆಯಾಗಿದೆ. 1921 ರಲ್ಲಿ ನಿರ್ಮಿಸಲಾದ ಈ ಅರಮನೆಯು ಚಾಮುಂಡಿ ಬೆಟ್ಟದ ಬಳಿಯಿದೆ. ಮೈಸೂರು ಮಹಾರಾಜ ನಾಲ್ಕನೆಯ ಕೃಷ್ಣರಾಜ ಒಡೆಯರ್ ಅವರಿಂದ ಈ ಅರಮನೆಯು ಭಾರತದ ವೈಸ್‍ರಾಯ್ ವಾಸಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ನಿರ್ಮಿಸಲಾಗಿದೆ. ಲಂಡನ್ನಿನ ಸೇಂಟ್ ಪೌಲ್ ಕ್ಯಾಥೇಡ್ರಲ್ ರಚನೆಯ ಹಲವು ಸಾಮ್ಯತೆಗಳನ್ನು ಹೊಂದಿರುವ ಈ ಅರಮನೆಯು 1974 ರಲ್ಲಿ ವೈಭವಯುತವಾದ ಹೋಟೆಲ್ ಆಗಿ ಪರಿವರ್ತನೆಗೊಂಡಿತು. ಪ್ರಸ್ತುತ ಭಾರತ ಸರ್ಕಾರ ಅಧೀನದ ಐ.ಟಿ.ಡಿ.ಸಿಯ ಅಶೋಕ ಗ್ರೂಪ್ ಸಮೂಹದ ಗಣ್ಯ ಹೋಟೆಲುಗಳಲ್ಲಿ ಒಂದಾಗಿ ಈ ಅರಮನೆ ಹೋಟೆಲ್ ಕಾರ್ಯನಿರ್ವಹಿಸುತ್ತಿದೆ.
ಚಿತ್ರಕೃಪೆ: Ezhuttukari

ಫರ್ನ್ ಹಿಲ್ ಪ್ಯಾಲೇಸ್, ಊಟಿ
ತಮಿಳುನಾಡಿನ ಊಟಿ ಗಿರಿಧಾಮದಲ್ಲಿ ನೆಲೆಸಿರುವ ಫರ್ನ್ ಹಿಲ್ ಅರಮನೆಯು ಒಂದೊಮ್ಮೆ ಮೈಸೂರು ಮಹಾರಾಜರ ಬೇಸಿಗೆಯ ಅರಮನೆಯಾಗಿತ್ತು. 1844 ರಲ್ಲಿ ನಿರ್ಮಿಸಲಾದ ಈ ಅರಮನೆಯು ಸ್ವಿಟ್ಜರ್ಲೆಂಡ್ ನಲ್ಲಿ ಕಾಣಸಿಗುವ ಮನೆಗಳಂತೆ ಗೋಚರಿಸುತ್ತದೆ. 50 ಎಕರೆಗಳಷ್ಟಿರುವ ಹಸಿರುಮಯ ಪ್ರದೇಶದಲ್ಲಿ ಈ ಅರಮನೆಯನ್ನು ನಿರ್ಮಿಸಲಾಗಿದ್ದು ವಿಶೀಷ್ಟ ವಾಸ್ತುಶಿಲ್ಪದಿಂದ ಕಂಗೊಳಿಸುತ್ತದೆ. ಸುಮಾರು 50 ಕೊಠಡಿ ಹಾಗು ಕಾಟೇಜ್ ಗಳು ಇಲ್ಲಿ ಲಭ್ಯವಿದ್ದು ಒಂದು ಉತ್ತಮ ಬಗೆಯ ಅನುಭವವನ್ನು ಇದು ನೀಡುತ್ತದೆ.
ಚಿತ್ರಕೃಪೆ: Ascidian

ಬೊಲ್ಗಾಟ್ಟಿ ಪ್ಯಾಲೇಸ್, ಕೊಚ್ಚಿ
ಕೇರಳದ ಕೊಚ್ಚಿ ಯಲ್ಲಿನ ಬೊಲ್ಗಟ್ಟಿ ದ್ವೀಪದಲ್ಲಿ ಈ ವೈಭವಯುತ ಅರಮನೆ ಹೋಟೆಲ್ ನೆಲೆಸಿದೆ. ಹಾಲ್ಯಾಂಡ್ ದೇಶದ ಹೊರಗೆ ಇನ್ನೂ ಅಸ್ತಿತ್ವದಲ್ಲಿರುವ ಡಚ್ಚರ ಅರಮನೆ ಇದಾಗಿದ್ದು 1744 ರಲ್ಲಿ ಡಚ್ ವ್ಯಾಪಾರಿಗಳಿಂದ ಇದನ್ನು ನಿರ್ಮಿಸಲಾಗಿದೆ. 1909 ರಲ್ಲಿ ಬ್ರಿಟೀಷರಿಗೆ ಭೋಗ್ಯಕ್ಕೆ ನೀಡಲಾದ ಈ ಅರಮನೆಯು ಭಾರತ ಸ್ವಾತಂತ್ರ್ಯಗಳಿಸಿದ ನಂತರ ಹೆರಿಟೇಜ್ ಹೋಟೆಲ್ ಆಗಿ ಪರಿವರ್ತನೆಗೊಂಡಿತು. ಪ್ರಸ್ತುತ ಈ ರಿಸಾರ್ಟಿನಲ್ಲಿ 9 ರಂಧ್ರಗಳುಳ್ಳ ಗಾಲ್ಫ್ ಆಟದ ಮೈದಾನ, ಈಜುಕೊಳ ಹಾಗು ಆಯುರ್ವೇದಿಕ ಕೇಂದ್ರಗಳನ್ನು ಕಾಣಬಹುದು. ಅಲ್ಲದೆ ಪ್ರವಾಸಿಗರಿಗೆಂದು ಪ್ರತಿನಿತ್ಯ ಇಲ್ಲಿ ಕಥಕ್ಕಳಿ ನೃತ್ಯವನ್ನು ಏರ್ಪಡಿಸಲಾಗುತ್ತದೆ.

ಲೇಕ್ ಪ್ಯಾಲೇಸ್, ಉದೈಪುರ್
ರಾಜಸ್ಥಾನದ ಉದೈಪುರದ ಪಿಚೋಲಾ ಕೆರೆಯ ಮಧ್ಯದಲ್ಲಿರುವ ಲೇಕ್ ಪ್ಯಾಲೇಸ್ ಹೋಟೆಲ್ ಒಂದು ನಯನಮನೋಹರವಾದ ಹೋಟೆಲ್ ಆಗಿದೆ. ಕೆರೆಯ ಮಧ್ಯದ ನಿಸರ್ಗಸಹಜ ನಾಲ್ಕು ಎಕರೆಗಳಷ್ಟು ವಿಸ್ತಾರವಾದ ದಿಬ್ಬ ಪ್ರದೇಶದಲ್ಲಿ ಈ ಅರಮನೆಯನ್ನು ಉದೈಪುರದ ರಾಜ ಎರಡನೆಯ ಮಹಾರಾಣಾ ಜಗತ್ ಸಿಂಗ್ ಅವರ ನಿರ್ದೇಶನದಂತೆ 1743-46 ರ ಸಮಯದಲ್ಲಿ ನಿರ್ಮಿಸಲಾಗಿದೆ. ಪ್ರಸ್ತುತ ಇದೊಂದು ಐಷಾರಾಮಿ ಹೋಟೆಲ್ ಆಗಿ ಪರಿವರ್ತನೆಗೊಂಡಿದ್ದು 83 ಕೊಠಡಿಗಳನ್ನು ಹೊಂದಿದೆ. ಅಷ್ಟೆ ಅಲ್ಲ, ಹೋಟೆಲ್ ಆವರಣದಲ್ಲಿ ಸುಂದರವಾದ ಕೃತಕ ಕೊಳವನ್ನು ನಿರ್ಮಿಸಲಾಗಿದ್ದು ಇಲ್ಲಿನ ಒಟ್ಟಾರೆ ವಾತಾವರಣವು ಅತ್ಯಂತ ಆಕರ್ಷಕವಾಗಿದೆ.
ಚಿತ್ರಕೃಪೆ: Flicka

ಲೇಕ್ ಪ್ಯಾಲೇಸ್, ಉದೈಪುರ್
ಕೆರೆಯ ಮಧ್ಯದಲ್ಲಿರುವ ಹೋಟೆಲಿನ ಆವರಣದಲ್ಲಿರುವ ನೈದಿಲೆಯ (ಲಿಲಿ) ಸುಂದರ ಕೃತಕ ಕೊಳ.
ಚಿತ್ರಕೃಪೆ: CC-BY-SA-3.0.

ಪ್ಯಾಲೇಸ್ ಹೋಟೆಲ್ ಬಿಕಾನೇರ್ ಹೌಸ್, ಮೌಂಟ್ ಅಬು
ರಾಜಸ್ಥಾನದ ಮನಮೋಹಕ ಗಿರಿಧಾಮವಾದ ಮೌಂಟ್ ಅಬುವಿನಲ್ಲಿ ಈ ಅರಮಯನ್ನು ನಿರ್ಮಿಸಲಾಗಿದೆ. 1893 ರಲ್ಲಿ ನಿರ್ಮಿಸಲಾದ ಈ ಅರಮನೆಯು ಅಂದಿನ ಮಹಾರಾಜರ ಬೇಸಿಗೆಯ ರಜಾ ಕಾಲದ ಸಮಯ ಕಳೆಯುವ ತಾಣವಾಗಿತ್ತು. ಆ ಕಾಲದ ವರ್ಣಚಿತ್ರಗಳು ಹಾಗು ಕಲಾತ್ಮಕತೆಯನ್ನು ಒಳಗೊಂಡಿರುವ ಈ ಹೆರಿಟೇಜ್ ಹೋಟೆಲ್ ವಿಶಾಲವಾದ ಸುಸಜ್ಜಿತ ಕೊಠಡಿಗಳನ್ನು ಒಳಗೊಂಡಿದೆ.
ಚಿತ್ರಕೃಪೆ: palacehotelbikanerhouse

ಬಲ್ಸಾಮಂದ್ ಲೇಕ್ ಪ್ಯಾಲೇಸ್, ಜೋಧಪುರ್
ರಾಜಸ್ಥಾನದ ಜೋಧಪುರ್ ನಗರದಿಂದ ಐದು ಕಿ.ಮೀ ದೂರದಲ್ಲಿ ಈ ಹೆರಿಟೇಜ್ ಹೋಟೆಲ್ ಅನ್ನು ಕಾಣಬಹುದು. ಸುಂದರ ಬಲ್ಸಾಮಂದ್ ಕೆರೆಗೆ ಅಭುಮುಖವಾಗಿ ನೆಲೆಸಿರುವ ಈ ಸುಂದರ ಹೋಟೆಲ್ ಆವರಣವು 60 ಎಕರೆಯಷ್ಟು ವಿಸ್ತಾರವಾಗಿ ಹರಡಿದೆ.

ಫೋರ್ಟ್ ಖೆಜರ್ಲಾ, ಜೋಧಪುರ್
400 ವರ್ಷಗಳಷ್ಟು ಪುರಾತನವಾದ ಪರಿವರ್ತನೆಗೊಂಡ ಈ ಹೆರಿಟೇಜ್ ಹೋಟೆಲ್ ಜೋಧಪುರ್ ನಗರದ ಹೊರವಲಯದಲ್ಲಿ ಸ್ಥಿತವಾಗಿದೆ. ರಾಜಸ್ಥಾನಿನ ಮರಳುಗಾಡಿನ ಅನುಭವದಿಂದ ಹಿಡಿದು ಮುಳುಗುವ ಸೂರ್ಯನ ಸುಂದರ ಹಿನ್ನಿಲೆಯನ್ನು ಈ ಹೋಟೆಲ್ ಪ್ರವಾಸಿಗರಿಗೆ ಒದಗಿಸುತ್ತದೆ. ಈ ಹೋಟೆಲಿನ ಒಂದು ಅನನ್ಯ ಸಂಗತಿಯೆಂದರೆ ಅತಿಥಿಗಳು ಇಲ್ಲೆ ವಾಸವಿರುವ ರಾಜವಂಶಸ್ಥರೊಂದಿಗೆಯೆ ತಂಗಬಹುದು. ಇದೊಂದು ವಿಶೀಷ್ಟ್ವಾದ ಅನುಭವವನ್ನು ಪ್ರವಾಸಿಗರಿಗೆ ಕರುಣಿಸುತ್ತದೆ.
ಚಿತ್ರಕೃಪೆ: jodhpurfortkhejarla


Click it and Unblock the Notifications


















