ಪ್ರವಾಸ, ಪ್ರಯಾಣ ಎಂದರೆ ನಮಗಿಷ್ಟವಿಲ್ಲ ಎಂದು ಹೇಳುವವರು ವಿರಳಾತಿವಿರಳ. ಬಹುತೇಕರಿಗೆ ಪ್ರಯಾಣವೆಂದರೆ ಪ್ರೀತಿ. ಇವರಲ್ಲಿ ಕೆಲವರಿಗೆ ಹಸಿರೆಂದರೆ ಇಷ್ಟ, ಮತ್ತೆ ಕೆಲವರಿಗೆ ಗುಡ್ಡಗಾಡು ಪ್ರದೇಶ, ಇನ್ನು ಕೆಲವರು ಸಮುದ್ರ ತೀರದಲ್ಲಿ ರಜೆ ಕಳೆಯಲು ಇಷ್ಟಪಡುತ್ತಾರೆ. ಹಾಗಾದರೆ ಕಡಲ ತೀರಗಳಲ್ಲಿ ಸಮಯ ಕಳೆಯಲು ಇಷ್ಟಪಡುವವರಲ್ಲಿ ನೀವೂ ಒಬ್ಬರಾಗಿದ್ದರೆ, ಈ ಮಾಹಿತಿ ತಿಳಿದುಕೊಂಡಿರಲೇಬೇಕು. ಸಮುದ್ರ ತೀರದಲ್ಲಿ ರಜಾದಿನಗಳನ್ನು ಕಳೆಯುವುದೇ ಒಂದು ರೀತಿಯ ವಿಶಿಷ್ಟ ಅನುಭವ.
ನೀಲಿ ನೀರು ಮತ್ತು ಬಿಳಿ ಮರಳಿನ ನಡುವೆ ಆಟವಾಡುವುದೆಂದರೆ ಒಂಥರಾ ಮಜಾ. ಆದರೆ ಕಪ್ಪು ಮರಳಿನ ಬೀಚ್ ನಲ್ಲಿ ನೀವು ಎಂದಾದರೂ ಆಟವಾಡಿದ್ದೀರಾ?, ಬಿಳಿ, ಹೊಂಬಣ್ಣದ ಮರಳು ಗೊತ್ತು, ಇದೇನು ಕಪ್ಪು ಮರಳು ಅಂತೀರಾ.. ಎಲ್ಲರಿಗೂ ಕಡಲತೀರದ ಚಿತ್ರಣ ಮನಸ್ಸಿಗೆ ಬಂದಾಗ, ನೀಲಿ ನೀರು ಮತ್ತು ಬಿಳಿ ಮರಳಿನ ಚಿತ್ರ ಮಾತ್ರ ಕಾಣಿಸುತ್ತದೆ. ಬಹುತೇಕರಿಗೆ ಗೊತ್ತಿರದ ವಿಚಾರವೆಂದರೆ ವಿದೇಶದಲ್ಲಿ ಮಾತ್ರವಲ್ಲ, ನಮ್ಮ ರಾಜ್ಯದಲ್ಲೂ ಸುಂದರವಾದ ಕಪ್ಪು ಮರಳಿನ ಬೀಚ್ ಇದೆ. ಬನ್ನಿ ಹಾಗಾದರೆ ಎಲ್ಲೆಲ್ಲಿ ಇಂತಹ ಬೀಚ್‌ಗಳಿವೆ ಎಂದು ಒಮ್ಮೆ ನೋಡೋಣ...
ಕಪ್ಪು ಮರಳಿನಿಂದಾಗಿ ಬಹಳ ಪ್ರಸಿದ್ಧ
ಕಪ್ಪು ಮರಳಿನ ಕಡಲತೀರಗಳು ವಿದೇಶಗಳಲ್ಲಿ ಮಾತ್ರ ಕಂಡುಬರುತ್ತವೆ ಎಂದು ನೀವು ಯೋಚಿಸುತ್ತಿರಬಹುದು. ಭಾರತದಲ್ಲಿ ಇಂತಹ ಬೀಚ್ ಇಲ್ಲವೇ ಇಲ್ಲ ಬಿಡಿ ಎನ್ನುವವರು ಒಮ್ಮೆ ಉತ್ತರ ಕನ್ನಡ ಜಿಲ್ಲೆಯತ್ತ ಹೋಗಿ. ಏಕೆಂದರೆ ಕಪ್ಪು ಮರಳು ಕಂಡುಬರುವ ಅನೇಕ ಕಡಲತೀರಗಳು ಭಾರತದಲ್ಲಿಯೂ ಇವೆ. ಇವುಗಳಲ್ಲಿ ಕರ್ನಾಟಕದ ತಿಲಮತಿ ಬೀಚ್ ಕೂಡ ಒಂದು. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಈ ಕಡಲತೀರವು ಕಪ್ಪು ಮರಳಿನಿಂದಾಗಿ ಬಹಳ ಪ್ರಸಿದ್ಧವಾಗಿದೆ. ಇಲ್ಲಿನ ಮರಳು ಕಪ್ಪು ಎಳ್ಳಿನಂತೆ ಕಾಣುವುದರಿಂದ ಇದಕ್ಕೆ ತಿಲಮತಿ ಎಂಬ ಹೆಸರು ಬಂದಿದೆ.

ಬೀಚ್ ವಿಶೇಷತೆಗಳೇನು?
ಕಾರವಾರಕ್ಕೆ ಪ್ರವಾಸ ಕೈಗೊಂಡಾಗ ಇಲ್ಲಿಗೆ ಭೇಟಿ ನೀಡಿ. ತಿಲಮತಿ ಬೀಚ್ ಸುಂದರವಾದ ಏಕಾಂತ ತೀರಪ್ರದೇಶವಾಗಿದ್ದು, ಮಜಾಲಿಯಲ್ಲಿನ ಗಬಿಟ್ವಾಡಾದಿಂದ ಸುಮಾರು ಒಂದು ಕಿಲೋಮೀಟರ್ ನಷ್ಟು ದೂರವಿದೆ. ಕಡಲ ತೀರದ ವಿಶೇಷ ಲಕ್ಷಣವೆಂದರೆ ಎಳ್ಳು ಬೀಜಗಳನ್ನು ಹೋಲುವ ಬಸಾಲ್ಟಿಕ್ ಕಪ್ಪು ಬಣ್ಣದ ಮರಳು. ಇಲ್ಲಿನ ಜನಪ್ರಿಯ ಚಟುವಟಿಕೆಗಳೆಂದರೆ ರಾಕ್ ಕ್ಲೈಂಬಿಂಗ್, ಹೈಕಿಂಗ್, ಡಾಲ್ಫಿನ್ ಸ್ಪಾಟಿಂಗ್, ಕಯಾಕಿಂಗ್, ರೋಯಿಂಗ್, ಪೆಡಲಿಂಗ್ ಮತ್ತು ನೇಚರ್ ವಾಕಿಂಗ್. ಜೊತೆಗೆ ಅತಿವೇಗದ ದೋಣಿ ವಿಹಾರವನ್ನು ಮಿಸ್ ಮಾಡಿಕೊಳ್ಳಲೇಬೇಡಿ. ಕ್ರೂಸ್ ಸವಾರಿ ಪ್ರವಾಸಿಗರನ್ನು ದಿನವಿಡೀ ಕಾರ್ಯನಿರತವಾಗಿರಿಸುವ ಮತ್ತೊಂದು ಚಟುವಟಿಕೆಯಾಗಿದೆ.
ಬಹಳ ಸ್ವಚ್ಛವಾದ ಬೀಚ್
ಕಾಳಿ ನದಿಯು ತಂದ ಕಪ್ಪು ಮರಳನ್ನು ಅರಬ್ಬೀ ಸಮುದ್ರವು ಈ ಸ್ಥಳಕ್ಕೆ ಸುರಿಯುತ್ತದೆ ಎಂದು ನಂಬಲಾಗಿದೆ. ಮಜಾಲಿ ಬೀಚ್ ಮತ್ತು ಪಾಮ್ ಬೀಚ್ ಒಂದಕ್ಕೊಂದು ಹೊಂದಿಕೊಂಡಿರುವುದರಿಂದ ಇದನ್ನು ಗೋವಾ ಟೂರ್ ಪ್ಯಾಕೇಜ್‌ಗಳೊಂದಿಗೆ ಭೇಟಿ ಮಾಡಬಹುದು. ಸಮುದ್ರದ ಅಲೆಗಳ ನಡುವೆ ಒಂಟಿಯಾಗಿ ಸಮಯ ಕಳೆಯಲು ಮತ್ತು ಆನಂದಿಸಲು ಬಯಸುವವರಿಗೆ ಇದು ಸೂಕ್ತವಾದ ಪ್ರವಾಸಿ ತಾಣವಾಗಿದೆ. ಬೆಟ್ಟಗಳ ನಡುವೆ ಇರುವ ಈ ಏಕಾಂತ ಕಡಲತೀರದಲ್ಲಿ ಅದ್ಭುತವಾದ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಬಹುದು. ಪ್ರವಾಸಿಗರು ಬಂಡೆಗಳು ಅಥವಾ ಹತ್ತಿರದ ಬೆಟ್ಟಗಳ ಮೇಲೆ ಟೆಂಟ್ ಹಾಕಿಕೊಂಡು ರಾತ್ರಿ ಉಳಿಯಲು ಯೋಜಿಸಬಹುದು.
ತಿಲಮತಿ ಬೀಚ್ ಬಹಳ ಸ್ವಚ್ಛವಾಗಿದೆ ಮತ್ತು ಸಾಹಸ ಪ್ರಿಯರಿಗೆ ಪರಿಪೂರ್ಣ ತಾಣವಾಗಿದೆ. ಸಂದರ್ಶಕರು ಹತ್ತಿರದ ಮಜಾಲಿ ಬೀಚ್ ಗ್ರಾಮದಲ್ಲಿ ಒದಗಿಸಲಾದ ಕೆಲವು ಮನರಂಜನಾ ಸೌಲಭ್ಯಗಳನ್ನು ಆನಂದಿಸಬಹುದು. ಮಳೆಗಾಲದಲ್ಲಿ ಕಡಲತೀರವನ್ನು ಪ್ರವೇಶಿಸುವುದು ಕಷ್ಟ. ಬೀಚ್ ನೋಡುವ ಸಮಯ ಬೆಳಗ್ಗೆ 6- 7. ಪ್ರವೇಶ ಉಚಿತ.

ಗ್ರೀಸ್‌ನ ಸ್ಯಾಂಟೋರಿನಿ
ಕಪ್ಪು ಮರಳಿನ ಕಡಲತೀರ ಹೊಂದಿರುವ ಮತ್ತೊಂದು ಸ್ಥಳ ಗ್ರೀಸ್‌ನ ಸ್ಯಾಂಟೋರಿನಿ. ಸ್ಯಾಂಟೊರಿನಿ ಗ್ರೀಸ್‌ನ ಅತ್ಯಂತ ಅದ್ಭುತವಾದ ದ್ವೀಪಗಳಲ್ಲಿ ಒಂದಾಗಿದೆ. ಇದು ಸೈಕ್ಲೇಡ್ಸ್ ದ್ವೀಪಗಳ ಒಂದು ಭಾಗವಾಗಿದೆ. ಅರ್ಧಚಂದ್ರಾಕಾರದ ದ್ವೀಪವು ಅದರ ಸಾಂಪ್ರದಾಯಿಕ ಬಿಳಿ ಮನೆಗಳು, ನೀಲಿ ಗುಮ್ಮಟ ಚರ್ಚುಗಳು ಮತ್ತು ವೈಂಡ್ಮಿಲ್‌ಗಳಿಗೆ ಹೆಸರುವಾಸಿಯಾಗಿದೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಛಾಯಾಚಿತ್ರ ತೆಗೆದ ದ್ವೀಪವಾಗಿದೆ. ಅಷ್ಟೇ ಅಲ್ಲ, ಮಧುಚಂದ್ರಕ್ಕಾಗಿ ಹೆಚ್ಚು ಬೇಡಿಕೆಯಿರುವ ಸ್ಥಳಗಳಲ್ಲಿ ಇದು ಒಂದಾಗಿದೆ.

ನ್ಯೂಜಿಲೆಂಡ್
ನ್ಯೂಜಿಲೆಂಡ್‌ನ ಆಕ್ಲೆಂಡ್ ಬಳಿಯ ಉತ್ತರ ದ್ವೀಪದಲ್ಲಿ ಮುರಿಬಾಯಿ ಎಂಬ ಹೆಸರಿನ ಅತ್ಯಂತ ಸುಂದರವಾದ ಬೀಚ್ ಇದೆ. ಈ ಕಡಲತೀರದ ವಿಶೇಷತೆಯೆಂದರೆ ಇಲ್ಲಿನ ಮರಳು ಕಪ್ಪು. ಈ ಪ್ರದೇಶದಲ್ಲಿ ಸಂಭವಿಸಿದ ಪ್ರಾಚೀನ ಜ್ವಾಲಾಮುಖಿ ಸ್ಫೋಟದಿಂದ ಬಿಡುಗಡೆಯಾದ ಖನಿಜಗಳಿಂದಾಗಿ ಈ ಕಪ್ಪು ಮರಳು ರೂಪುಗೊಂಡಿದೆ. ಮುರಿಬಾಯಿ ಬೀಚ್ ತನ್ನ ಕಪ್ಪು ಮರಳಿಗೆ ಮಾತ್ರವಲ್ಲದೆ, ದೊಡ್ಡ ಗ್ಯಾನೆಟ್ ಪಕ್ಷಿಗಳ ವಸಾಹತು, ಕಡಿದಾದ ಬಂಡೆಗಳು ಮತ್ತು ಅತ್ಯುತ್ತಮ ಸರ್ಫ್‌ಗೆ ಹೆಸರುವಾಸಿಯಾಗಿದೆ.


Click it and Unblock the Notifications

















