ತಟ್ಟೆಕೆರೆ...ಈ ಹೆಸರು ಕೇಳಿದಾಕ್ಷಣ ಎಲ್ಲೋ ಕೇಳಿದ ನೆನಪು ಅನಿಸುತ್ತಿರಬೇಕು ಅಲ್ಲವೇ..ಹೌದು ದಿನಪತ್ರಿಕೆಗಳಲ್ಲಿ ಅಲ್ಲಲ್ಲಿ ಈ ಊರಿನ ಬಗ್ಗೆ ಕೇಳಿರುತ್ತೀರಿ. ಆದರೆ ಇಲ್ಲಿ ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಒಂದು ಅದ್ಭುತ ತಾಣವಿದೆ ಎಂಬುದು ಗೊತ್ತಾ?... ಹೌದು ಇಲ್ಲೊಂದು ಕೆರೆ ಇದೆ. ಜೊತೆಗೆ ದೇವಸ್ಥಾನವೂ ಇದೆ. ಕುಟುಂಬದೊಂದಿಗೆ ಭೇಟಿ ನೀಡಲು ತಟ್ಟೆಕೆರೆ ಉತ್ತಮ ತಾಣವಾಗಿದೆ. ಆದರೆ ಈ ಸ್ಥಳದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ, ಆದ್ದರಿಂದ ನೀವು ಇಲ್ಲಿ ಹೆಚ್ಚು ಜನಸಂದಣಿಯನ್ನು ನೋಡಲು ಸಾಧ್ಯವಿಲ್ಲ. ಬೆಂಗಳೂರಿನಿಂದ ಇಲ್ಲಿಗೆ ತಲುಪಲು ನಿಮಗೆ 1.30 ಗಂಟೆಗಳು ತೆಗೆದುಕೊಳ್ಳಬಹುದು. ಆದ್ದರಿಂದ, ದೀಪಾವಳಿಯ ನಂತರ ವಾರಾಂತ್ಯದಲ್ಲಿ ನೀವು ಇಲ್ಲಿಗೆ ಹೋಗಲು ಯೋಜಿಸಬಹುದು. ಕೆರೆ ದಟ್ಟವಾದ ಕಾಡಿನ ಮಧ್ಯದಲ್ಲಿದೆ. ಹುಷಾರ್..ಈ ಪ್ರದೇಶವು ಆನೆಗಳ ಪ್ರವೇಶ ಕೇಂದ್ರವೂ ಆಗಿದೆ.
ಒಂದು ದಿನದ ಪ್ರವಾಸಕ್ಕೆ....
ಬೆಂಗಳೂರಿನಿಂದ ಸುಮಾರು 60 ಕಿಮೀ ದೂರದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಆಚೆಗೆ ದಕ್ಷಿಣಕ್ಕೆ ತಟ್ಟೆಕೆರೆಯನ್ನು ನೋಡಬಹುದು. ಇಂದಿಗೂ ಬಹುತೇಕರಿಗೆ ಈ ಸ್ಥಳದ ಬಗ್ಗೆ ತಿಳಿದಿಲ್ಲ. ಏಕೆಂದರೆ ಬೆಂಗಳೂರಿನಲ್ಲಿ ನೋಡಬಹುದಾದ, ಭೇಟಿ ಕೊಡಬಹುದಾದ ಪ್ರವಾಸಿ ತಾಣಗಳ ಪಟ್ಟಿ ತೆಗೆದು ನೋಡಿದರೆ ನಿಮಗೆ ತಟ್ಟೆಕೆರೆ ಬಹುಶಃ ಸಿಗಲಿಕ್ಕಿಲ್ಲ. ಆದರೆ ಕೆಲವೇ ಜನರಿಗೆ ಮಾತ್ರ ತಿಳಿದಿರುವ ಈ ರಮಣೀಯ ತಾಣವು ಖಂಡಿತವಾಗಿಯೂ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ.

ಬೆಳಗಿನ ಜಾವ ಬನ್ನಿ...
ಬಹುಶಃ ಕೆರೆ ಅದರ ವೃತ್ತಾಕಾರದ ಆಕಾರದಿಂದ ಈ ಹೆಸರನ್ನು ಪಡೆದುಕೊಂಡಿದೆ. ತಟ್ಟೆಕೆರೆಯು ಒಂದು ದೊಡ್ಡ ಕೆರೆ. ಇಲ್ಲಿಯೇ ಸಮೀಪದಲ್ಲಿ ಒಂದು ಚಿಕ್ಕ ಮಹದೇಶ್ವರ ದೇವಾಲಯವಿದೆ. ಹತ್ತಿರದಲ್ಲಿ ಕೆಲವು ಕಾವಲು ಗೋಪುರಗಳಿದ್ದು, ಸಾಕಷ್ಟು ಪಕ್ಷಿಗಳನ್ನು ಕಾಣಬಹುದು. ತಟ್ಟೆಕೆರೆ ಕೆರೆಯನ್ನು ತಲುಪಲು ಮುಖ್ಯರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಸುಮಾರು ಒಂದು ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಬೇಕು. ಈ ಪ್ರದೇಶದಲ್ಲಿ ಸಾಕಷ್ಟು ಪಕ್ಷಿಗಳನ್ನು ಕಾಣಬಹುದು. ಮುಖ್ಯವಾಗಿ ಲ್ಯಾಪ್‌ವಿಂಗ್‌ಗಳು, ಬೀ ಈಟರ್ಸ್, ಕೈಟ್ಸ್, ಕೊಕ್ಕರೆಗಳು ಮತ್ತು ಮಿಂಚುಳ್ಳಿಗಳು. ನಿಮಗೆ ಇಲ್ಲಿನ ಪ್ರಶಾಂತತೆ ಖಂಡಿತ ಇಷ್ಟವಾಗುತ್ತದೆ. ಪಕ್ಷಿ ವೀಕ್ಷಣೆ ಮತ್ತು ಛಾಯಾಗ್ರಹಣಕ್ಕಾಗಿ ಉತ್ತಮ ಕ್ಯಾಮೆರಾಗಳನ್ನು ಒಯ್ಯಿರಿ. ವಿಶೇಷವಾಗಿ ಬೆಳಗಿನ ಜಾವದಲ್ಲಿ ಕೆರೆ ಅದ್ಭುತವಾಗಿ ಕಾಣುತ್ತದೆ, ಆದ್ದರಿಂದ ಸೂರ್ಯೋದಯದ ಸಮಯಕ್ಕೆ ಇಲ್ಲಿಗೆ ತಲುಪಲು ಮರೆಯದಿರಿ.

ತಲುಪುವುದು ಹೇಗೆ?
ಈ ಪ್ರದೇಶದಲ್ಲಿ ನೀವು ಅಲ್ಲಲ್ಲಿ ಸಾಕಷ್ಟು ವಿದ್ಯುತ್ ಬೇಲಿಗಳನ್ನು ನೋಡಬಹುದು. ಏಕೆಂದರೆ ಕಾಡು ಪ್ರಾಣಿಗಳು ಅದರಲ್ಲೂ ಆನೆಗಳ ಬರುವ ಸುಳಿವನ್ನು ಇವು ನೀಡುತ್ತವೆ. ಇವುಗಳ ಮೇಲೆ ನಿಗಾ ಇರಿಸಿ. ಆದರೆ ಕಾಡಿನೊಳಗೆ ಆಳವಾಗಿ ಹೋಗಬೇಡಿ. ಬನ್ನೇರುಘಟ್ಟ ರಸ್ತೆ ಮತ್ತು ಕನಕಪುರ ರಸ್ತೆಯ ಮೂಲಕ ತಟ್ಟೆಕೆರೆಯನ್ನು ತಲುಪಬಹುದು. ಹತ್ತಿರದಲ್ಲಿ ಯಾವುದೇ ಸೌಲಭ್ಯಗಳು ಲಭ್ಯವಿಲ್ಲದ ಕಾರಣ ಆಹಾರ ಮತ್ತು ನೀರನ್ನು ಒಯ್ಯಿರಿ.

ಸಮೀಪವಿರುವ ಪ್ರವಾಸಿ ತಾಣಗಳು
ಭೀಮೇಶ್ವರಿ: ಮಂಡ್ಯ ಜಿಲ್ಲೆಯ ಚಿಕ್ಕ ಪಟ್ಟಣವಾದ ಭೀಮೇಶ್ವರಿಯು ಮಹಸೀರ್ ಮೀನುಗಳಿಗೆ ನೆಲೆಯಾಗಿದೆ. ಈ ಪಟ್ಟಣವು ಕೂಡ ಪ್ರಶಾಂತವಾಗಿದೆ ಮತ್ತು ಬೆಂಗಳೂರಿನಿಂದ ಒಂದು ಸಣ್ಣ ಪ್ರವಾಸಕ್ಕೆ ಸೂಕ್ತವಾದ ಸ್ಥಳವಾಗಿದೆ. ಭೀಮೇಶ್ವರಿಗೆ ಸಾಹಸ ಪ್ರಿಯರು ಮತ್ತು ಪಕ್ಷಿ ವೀಕ್ಷಕರು ಹೆಚ್ಚಾಗಿ ಭೇಟಿ ನೀಡುತ್ತಾರೆ. ಇತ್ತೀಚೆಗೆ ಅನೇಕ ಸ್ಥಳೀಯರು ಮತ್ತು ಪ್ರವಾಸಿಗರು ಇಲ್ಲಿಯೇ ಬಿಡಾರ ಹೂಡಿ ಅಡುಗೆ ಮಾಡುವುದರಿಂದ ನದಿಯ ದಡದಲ್ಲಿ ಕಸದ ಸಮಸ್ಯೆ ಎದುರಾಗಿದೆ. ಬೆಂಗಳೂರಿನಿಂದ ಲಾಂಗ್ ಡ್ರೈವ್ ಮತ್ತು ಒಂದು ದಿನದ ವಿಹಾರವನ್ನು ಬಯಸುವವರಿಗೆ ಭೀಮೇಶ್ವರಿ ಉತ್ತಮ ಸ್ಥಳವಾಗಿದೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ: 104.27 ಚದರ ಕಿ.ಮೀ ವಿಸ್ತೀರ್ಣದಲ್ಲಿ ಹರಡಿರುವ ಈ ಬೃಹತ್ ರಾಷ್ಟ್ರೀಯ ಉದ್ಯಾನವನದ ಸುತ್ತಲೂ ಪ್ರವಾಸ ಮಾಡಲು ಜೀಪ್ ಮತ್ತು ಕಾರುಗಳನ್ನು ಬಾಡಿಗೆಗೆ ಪಡೆಯಬಹುದು ಅಥವಾ ಬಸ್ ಹತ್ತಬಹುದು. ಉದ್ಯಾನವನವು ಚಿಟ್ಟೆ ಪಾರ್ಕ್, ಅಕ್ವೇರಿಯಂ, ಮಕ್ಕಳ ಉದ್ಯಾನವನ, ಮೃಗಾಲಯ, ಮೊಸಳೆ ಸಾಕಣೆಯಂತಹ ಮುಂತಾದ ಹಲವಾರು ಸಂಸ್ಥೆಗಳನ್ನು ಒಳಗೊಂಡಿದೆ. ಬೆಂಗಳೂರಿನ ಹೊರವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನವು ನಗರದಲ್ಲಿ ಅತ್ಯಂತ ಜನಪ್ರಿಯ ಮತ್ತು ಪ್ರತಿಯೊಬ್ಬ ಪ್ರವಾಸಿ ಪ್ರಿಯರು ಭೇಟಿ ನೀಡುವ ಸ್ಥಳಗಳಲ್ಲಿ ಒಂದಾಗಿದೆ.


Click it and Unblock the Notifications

















