ಸಂಸ್ಕೃತಿ, ಸಂಪ್ರದಾಯಗಳಿಂದ ವಿಶ್ವದಲ್ಲೆ ಶ್ರೀಮಂತವಾಗಿರುವ ಭಾರತ ದೇಶದ ಒಂದು ಪ್ರಮುಖ ಅಂಗವೆಂದರೆ ಇಲ್ಲಿ ಕಂಡುಬರುವ ದೇವಾಲಯಗಳು. ಈ ದೇವಾಲಯಗಳು ಸಾಮಾನ್ಯವಾಗಿ ಇತರೆ ಕಟ್ಟಡಗಳಂತಿರದೆ ತನ್ನದೆ ಆದ ವಿಶೀಷ್ಟ ವಾಸ್ತುಶಿಲ್ಪ ಶೈಲಿಯನ್ನು ಒಳಗೊಂಡಿರುತ್ತವೆ. ದೇವಾಲಯಗಳ ಮುಖ್ಯ ಲಕ್ಷಣಗಳೆಂದರೆ ಅದರ ಗೋಪುರಗಳು ಹಾಗು ವಿಮಾನಗಳು. ನಮ್ಮಲ್ಲಿ ಬಹುಜನರಿಗೆ ಗೋಪುರಗಳು ಹಾಗು ವಿಮಾನಗಳ ಬಗ್ಗೆ ಗೊಂದಲವಿದೆ. ಸಾಮಾನ್ಯವಾಗಿ ಗೋಪುರಗಳು ದೇವಸ್ಥಾನಗಳ ಪ್ರವೇಶ ದ್ವಾರಗಳಂತೆ ಕಾರ್ಯನಿರ್ವಹಿಸುತ್ತವೆ ಹಾಗು ವಿಮಾನಗಳು ದೇವಸ್ಥಾನದ ಗರ್ಭಗುಡಿಯ ಮೇಲಿರುವ ರಚನೆಯಾಗಿದೆ. ಇವೆರಡರಲ್ಲಿ ಸಾಮಾನ್ಯವಾಗಿ ಗೋಪುರಗಳು ಎತ್ತರದ ರಚನೆಯಾಗಿದ್ದು ತುದಿಯಲ್ಲಿ ಕಲ್ಲಿನ ಕಳಶವನ್ನು ಹೊಂದಿರುತ್ತವೆ.
ಭಾರತದಲ್ಲಿ ಹಲವು ಎತ್ತರದ ಗೋಪುರಗಳು ಹಾಗು ವಿಮಾನಗಳು ಕಂಡುಬರುತ್ತವೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತಮಿಳುನಾಡಿನಲ್ಲಿ ಈ ವಿಶೀಷ್ಟ ರಚನೆಗಳನ್ನು ಕಾಣಬಹುದಾಗಿದೆ. ಈ ಲೇಖನದ ಮೂಲಕ ಭಾರತದಲ್ಲಿರುವ ಎತ್ತರದ ಗೋಪುರಗಳು ಹಾಗು ವಿಮಾನಗಳ ಕುರಿತು ತಿಳಿದುಕೊಳ್ಳೋಣ.

ಮುರುಡೇಶ್ವರ ದೇವಸ್ಥಾನ:
ಕರ್ನಾಟಕ ರಾಜ್ಯದ ಮುರುಡೇಶ್ವರದಲ್ಲಿರುವ ಈ ರಾಜ ಗೋಪುರವು ದೇಶದ ಅತಿ ಎತ್ತರದ ಗೋಪುರವಾಗಿದೆ. ತನ್ನ ಮೂರು ಬದಿಗಳಲ್ಲಿ ಅರೇಬಿಯನ್ ಸಮುದ್ರದಿಂದ ಆವರಿಸಿರುವ ಕಂದುಕ ಗುಡ್ಡದ ಮೇಲೆ ನಿರ್ಮಿಸಲಾಗಿರುವ ಈ ಗೋಪುರವು 249 ಅಡಿಗಳಷ್ಟು ಎತ್ತರವಿದೆ. ಈ ದೇವಾಲಯ ಶಿವನಿಗೆ ಸಮರ್ಪಿತವಾದ ದೇವಾಲಯವಾಗಿದೆ.
ಚಿತ್ರಕೃಪೆ: Nilesh Kodikal

ಶ್ರೀರಂಗನಾಥಸ್ವಾಮಿ ದೇವಾಲಯ, ಶ್ರೀರಂಗಂ
ತಮಿಳುನಾಡಿನ ಶ್ರೀರಂಗಂ ಧಾರ್ಮಿಕ ಕ್ಷೇತ್ರದಲ್ಲಿರುವ ಈ ದೇವಸ್ಥಾನವು ವಿಷ್ಣುವಿನ ಅವತಾರ ರಂಗನಾಥ ಸ್ವಾಮಿಗೆ ಸಮರ್ಪಿತವಾದ ದೇವಾಲಯವಾಗಿದೆ. 243 ಅಡಿಗಳಷ್ಟು ಎತ್ತರವಿರುವ ಈ ದೇವಾಲಯದ ಗೋಪುರವು ಭಾರತದ ಅತಿ ಎತ್ತರದ ಗೋಪುರಗಳ ಪೈಕಿ ಒಂದಾಗಿದೆ.
ಚಿತ್ರಕೃಪೆ: sowrirajan s

ಅನ್ನಾಮಲಯರ್/ಅರುಣಾಚಲೇಶ್ವರ ದೇವಸ್ಥಾನ, ತಿರುವಣ್ಣಾಮಲೈ
ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ಶಿವನಿಗೆ ಸಮರ್ಪಿತವಾದ ಈ ದೇವಸ್ಥಾನದ ಗೋಪುರವು 216.5 ಅಡಿಗಳಷ್ಟು ಎತ್ತರವಿದೆ. ಅಣ್ಣಾಮಲೈ ಪರ್ವತಗಳ ಬುಡದಲ್ಲಿ ನೆಲೆಸಿರುವ, ಅರುಣಾಚಲೇಶ್ವರ ಎಂತಲೂ ಕರೆಸಿಕೊಳ್ಳುವ ಈ ದೇವಸ್ಥಾನವು ಪಂಚಭೂತ ದೇವಸ್ಥಾನಗಳ ಪೈಕಿ ಒಂದಾಗಿದೆ.
ಚಿತ್ರಕೃಪೆ: Adam Jones adamjones.freeservers.com

ತಿರುವಿಲ್ಲಿಪುತೂರ್ ದಿವ್ಯ ದೇಶಂ:
ತಮಿಳುನಾಡಿನ ಶ್ರೀವಿಲ್ಲಿಪುತೂರ್ ಪಟ್ಟಣದಲ್ಲಿರುವ ಈ ದೇವಸ್ಥಾನದ ಗೋಪುರವು 193.5 ಅಡಿಗಳಷ್ಟು ಎತ್ತರವಿದೆ. 2000ವರ್ಷಗಳಷ್ಟು ಪುರಾತನವಾದ ಈ ದೇವಸ್ಥಾನವು ವಿಷ್ಣುವಿನ ಆಲಯವಾಗಿದ್ದು 108 ದಿವ್ಯದೇಶಂ ಗಳ ಪೈಕಿ ಒಂದಾಗಿದೆ. ಮದುರೈನಿಂದ 74 ಕಿ.ಮೀ ಗಳಷ್ಟು ದೂರದಲ್ಲಿ ಈ ದೇವಸ್ಥಾನವಿದೆ.
ಚಿತ್ರಕೃಪೆ

ಉಳಗಳಂದ ಪೆರುಮಾಳ್ ದೇವಸ್ಥಾನ:
ತಮಿಳುನಾಡಿನ ತಿರುಕ್ಕೊಯಿಲೂರ್ ನಲ್ಲಿರುವ ಈ ದೇವಸ್ಥಾನವು ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ದೇವಾಲಯವಾಗಿದೆ. ದಿವ್ಯದೇಶಂ ನ 108 ದೇವಸ್ಥಾನಗಳ ಪೈಕಿ ಇದು ಕೂಡ ಒಂದಾಗಿರುವ ಈ ದೇವಸ್ಥಾನದ ಗೋಪುರದ ಎತ್ತರವು 192 ಅಡಿಗಳಷ್ಟು.
ಚಿತ್ರಕೃಪೆ: Bmohanraj91

ಏಕಾಂಬರೇಶ್ವರರ್ ದೇವಸ್ಥಾನ:
ತಮಿಳುನಾಡಿನ ಕಾಂಚೀಪುರಂ ನಲ್ಲಿರುವ ಬೃಹತ್ ದೇವಾಲಯ ಇದಾಗಿದೆ. ಶಿವನಿಗೆ ಸಮರ್ಪಿತವಾದ ಈ ದೇವಾಲಯದ ಗೋಪುರದ ಎತ್ತರವು 190 ಅಡಿಗಳು.
ಚಿತ್ರಕೃಪೆ: Ssriram mt

ಮೀನಾಕ್ಷಿ ಅಮ್ಮನವರ ದೇವಸ್ಥಾನ:
ತಮಿಳುನಾಡಿನ ಪ್ರಖ್ಯಾತ ಶ್ರೀಕ್ಷೇತ್ರ ಮದುರೈನಲ್ಲಿರುವ ಮೀನಾಕ್ಷಿ ದೇವಿಯ ಈ ದೇವಸ್ಥಾನ ಸಮೂಹದಲ್ಲಿ ಒಟ್ಟು 14 ಗೋಪುರಗಳಿದ್ದು, ಅತ್ಯಂತ ಎತ್ತರದ ಗೋಪುರವು 170 ಅಡಿಗಳಷ್ಟು ಎತ್ತರವಿದೆ.

ಸಾರಂಗಪಾಣಿ ದೇವಸ್ಥಾನ:
ತಮಿಳುನಾಡಿನ ಕುಂಭಕೋಣಂ ನಲ್ಲಿರುವ ಈ ದೇವಸ್ಥಾನವು ವಿಷ್ಣುವಿಗೆ ಸಮರ್ಪಿತವಾದ ದೇವಸ್ಥಾನವಾಗಿದ್ದು 164 ಅಡಿಗಳಷ್ಟು ಎತ್ತರದ ರಾಜಗೋಪುರವನ್ನು ಹೊಂದಿದೆ.
ಚಿತ್ರಕೃಪೆ: Adam Jones adamjones.freeservers.com

ರಾಜಗೋಪಾಲಸ್ವಾಮಿ ದೇವಾಲಯ:
ತಮಿಳುನಾಡಿನ ಮನ್ನಾರಗುಡಿಯಲ್ಲಿರುವ ರಾಜಗೋಪಾಲ ಸ್ವಾಮಿಯ ದೇವಸ್ಥಾನದ ಗೋಪುರವು 154 ಅಡಿಗಳಷ್ಟು ಎತ್ತರವಿದೆ.

ವಿಮಾನಗಳು: ಬೃಹದೇಶ್ವರ ದೇವಸ್ಥಾನ
ತಮಿಳುನಾಡಿನ ತಂಜಾವೂರಿನಲ್ಲಿರುವ ವಿಶ್ವ ಪ್ರಖ್ಯಾತ ಬೃಹದೇಶ್ವರ ದೇವಸ್ಥಾನವು 216 ಅಡಿಗಳಷ್ಟು ಎತ್ತರದ ವಿಮಾನ ಗೋಪುರವನ್ನು ಹೊಂದಿದೆ.
ಚಿತ್ರಕೃಪೆ: gf

ವಿಮಾನಗಳು: ಪುರಿ ದೇವಸ್ಥಾನ
ಒಡಿಶಾ ರಾಜ್ಯದ ಪುರಿಯಲ್ಲಿರುವ ಜಗನ್ನಾಥ ಸ್ವಾಮಿಯ ಈ ದೇವಸ್ಥಾನದ ವಿಮಾನವು 216 ಅಡಿಗಳಷ್ಟು ಎತ್ತರವಿದೆ.
ಚಿತ್ರಕೃಪೆ: Amartyabag

ವಿಮಾನಗಳು: ಲಿಂಗರಾಜ ದೇವಸ್ಥಾನ
ಒಡಿಶಾ ರಾಜ್ಯದ ರಾಜಧಾನಿ ನಗರವಾದ ಭುವನೇಶ್ವರದಲ್ಲಿರುವ ಲಿಂಗರಾಜನ ಈ ದೇವಸ್ಥಾನದ ವಿಮಾನ ಗೋಪುರವು 183.7 ಅಡಿಗಳಷ್ಟು ಎತ್ತರವಾಗಿದೆ.
ಚಿತ್ರಕೃಪೆ

ವಿಮಾನಗಳು: ಕೋನಾರ್ಕ್ ಸೂರ್ಯ ದೇವಾಲಯ
ಒಡಿಶಾದ ಕೋನಾರ್ಕ್ ನಲ್ಲಿರುವ ವಿಶ್ವಪಾರಂಪರಿಕ ತಾಣವಾದ ಕೋನಾರ್ಕ್ ಸೂರ್ಯ ದೇವಾಲಯವು 130 ( ಮುಂಚೆ 230 ಅಡಿಗಳು) ಅಡಿಗಳಷ್ಟು ಎತ್ತರದ ವಿಮಾನ ಗೋಪುರವನ್ನು ಹೊಂದಿದೆ.
ಚಿತ್ರಕೃಪೆ: G-u-t


Click it and Unblock the Notifications


















