ಹೌದು, ರಾಕ್ಷಸ ರಾಜನೆಂದೆ ಪ್ರಖ್ಯಾತನಾದ, ರಾಮಾಯಣದ ಮುಖ್ಯ ಖಳನಾಯಕ, ಲಂಕಾಧೀಶನಾದ ರಾವಣನಿಗೂ ಸಹ ಮುಡಿಪಾದ ಕೆಲವು ಅತಿ ಅಪರೂಪದ ದೇವಾಲಯಗಳನ್ನು ಭಾರತದಲ್ಲಿಯೂ ಕಾಣಬಹುದು. ರಾವಣ ಅಸುರನಾದರೂ ಸಹ ಮಹಾ ಜ್ಞಾನಿ, ಅಪ್ರತಿಮ ಶಿವಭಕ್ತ, ತ್ರಿಕಾಲ ಸಂಧ್ಯಾವಂದನೆ ಮಾಡುವಾತ. ಹೀಗಾಗಿ ಕೆಲವರಿಗೆ ಕೆಲ ವಿಚಾರಘಳಲ್ಲಿ ರಾವಣ ಆದರ್ಶಮಯ.
ಕಥೆ-ಪುರಾಣ ಏನೇ ಹೇಳಿದರೂ ರಾವಣ ಒಬ್ಬ ಮಹಾನ್ ತಪಸ್ವಿ. ಅತ್ಯಂತ ಕಠಿಣ ತಪಗೈದು ಶಿವನ ಆತ್ಮಲಿಂಗ ಪಡೆದವ. ಇಂತಹ ವಿಚಾರಗಳಲ್ಲಿ ರಾವಣ ಅಸುರನಾದರೂ ಯಾವ ಸುರರಿಗೂ ಕಡಿಮೆಯಲ್ಲ. ರಾವಣನ ಈ ಅಂಶಗಳಿಗೆ ಗೌರವ ಸೂಚಕವಾಗಿ ಈ ದೇವಾಲಯಗಳಿವೆ ಎಂದು ಹೇಳಬಹುದು.
ನಿಮಗಿಷ್ಟವಾಗಬಹುದಾದ : ಬಲು ಅಪರೂಪದ ಬ್ರಹ್ಮನ ದೇವಾಲಯಗಳು
ಈ ಲೇಖನದಲ್ಲಿ ರಾವಣನಿಗೆ ಮುಡಿಪಾದ ಅಥವಾ ಸಂಬಂಧಿಸಿದ ಕೆಲವೆ ಕೆಲವು ಭಾರತದಲ್ಲಿರುವ ಅಪರೂಪದ ದೇವಸ್ಥಾನಗಳ ಕುರಿತು ತಿಳಿಸಲಾಗಿದೆ. ನೀವೇನಾದರೂ ಈ ಸ್ಥಳಗಳಿಗೆ ಭೆಟಿ ನೀಡಿದರೆ ರಾವಣನ ದೇಗುಲಗಳಿಗೆ ಭೇಟಿ ನೀಡಲು ಮರೆಯದಿರಿ.

ರಾವಣನ ದೇವಾಲಯಗಳು:
ಉತ್ತರ ಪ್ರದೇಶದ ಗ್ರೇಟರ್ ನೊಯಿಡಾದಲ್ಲಿರುವ ಬಿಸ್ರಾಖ್ ಎಂಬ ಗ್ರಾಮದಲ್ಲಿ ರಾವಣನಿಗೆ ಮುಡಿಪಾದ ರಾವಣ ಮಂದಿರವಿದೆ. ಸ್ಥಳ ಪುರಾಣದ ಪ್ರಕಾರ ಈ ಸ್ಥಳ ರಾವಣನ ಜನ್ಮ ಸ್ಥಳ ಎಂದು ನಂಬಲಾಗಿದೆ. ಹೊಸದಾದ 42 ಅಡಿ ಉದ್ದದ ಶಿವಲಿಂಗ ಹಾಗೂ 5.5 ಅಡಿ ಎತ್ತರದ ರಾವಣನ ವಿಗ್ರಹಹೊಂದಿರುವ ನೂತನ ದೇವಾಲಯವೊಂದು ನಿರ್ಮಾಣ ಹಂತದಲ್ಲಿಯೂ ಇದೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Dhammika Heenpella

ರಾವಣನ ದೇವಾಲಯಗಳು:
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ಕರಾವಳಿ ಪಟ್ಟಣ ಕಾಕಿನಾಡಾದಲ್ಲಿರುವ ರಾವಣನ ದೇವಾಲಯವು ವಿಶಿಷ್ಟವಾಗಿದೆ. ಶಿವಲಿಂಗವೂ ಇರುವ ಈ ದೇವಾಲಯದ ಹೊರ ಭಾಗದಲ್ಲಿ ರಾವಣನ ಹತ್ತು ತಲೆಗಳುಳ್ಳ ಬೃಹತ್ ವಿಗ್ರಹವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಶಿವ ಹಾಗೂ ರಾವಣನನ್ನು ಪೂಜಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಗ್ರಾಮದ ಬೆಸ್ತರು ರಾವಣನ ಪರಮ ಆರಾಧಕರು.
ಚಿತ್ರಕೃಪೆ: Ravi jrf

ರಾವಣನ ದೇವಾಲಯಗಳು:
ದಶಾನನ ರಾವಣ ದೇವಾಲಯ : ಉತ್ತರ ಪ್ರದೇಶದ ಕಾನಪುರದಲ್ಲಿ ರಾವಣನ ಈ ದೇವಾಲಯವಿದೆ. ನಗರದ ಶಿವಾಲಾ ಪ್ರದೇಶದಲ್ಲಿರುವ ಶಿವ ದೇವಸ್ಥಾನದ ಪಕ್ಕದಲ್ಲಿಯೆ ಈ ರಾವಣನಿಗೆ ಮುಡಿಪಾದ ದೇವಾಲಯವಿದ್ದು ವರ್ಷಕ್ಕೊಂದು ಬಾರಿ ದಸರಾ ಸಂದರ್ಭದಲ್ಲಿ ಮಾತ್ರವೆ ಇದನ್ನು ತೆರೆಯಲಾಗುತ್ತದೆ. ಸಕಲ ವೇದ ಶಾಸ್ತ್ರಗಳಲ್ಲಿ ಪಾರಂಗತನಾಗಿದ್ದ ರಾವಣನಿಗೆ ತಮ್ಮ ಗೌರವ ನಮನಗಳನ್ನು ಅರ್ಪಿಸಲು ಜನರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Kesavan Muthuvel

ರಾವಣನ ದೇವಾಲಯಗಳು:
ರಾಜಸ್ಥಾನದ ಜೋಧಪುರ ನಗರದಲ್ಲಿರುವ ಮುದ್ಗಲ್ ಬ್ರಾಹ್ಮಣರು ತಾವು ರಾವಣನ ವಂಶಜರೆಂದು ನಂಬಿದ್ದು ರಾವಣನಿಗೆ ಮುಡಿಪಾಗಿ ದೇವಸ್ಥಾನ ನಿರ್ಮಿಸುತ್ತಿದ್ದಾರೆ. ರಾವಣನ ಮಡದಿ ಮಂಡೋದರಿಯು ಮಂಡೋರ್ ಎಂಬ ಸ್ಥಳದವಳಾಗಿದ್ದು ಹಿಂದೆ ಮಂಡೋರ್ ಜೋಧಪುರದ ರಾಜಧಾನಿಯಾಗಿತ್ತೆಂದು ನಂಬಲಾಗಿದೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Jeremiah Roth

ರಾವಣನ ದೇವಾಲಯಗಳು:
ಮಧ್ಯಪ್ರದೇಶದ ವಿದೀಶಾ ಜಿಲ್ಲೆಯ ರಾವಣಗ್ರಾಮದಲ್ಲಿ ರಾವಣನಿಗೆ ಮುಡಿಪಾದ ದೇವಾಲಯವಿದೆ. ಇಲ್ಲಿ ಹತ್ತು ಅಡಿಗಳಷ್ಟು ಎತ್ತರದ ರಾವಣನ ವಿಗ್ರಹವಿದ್ದು ಮಲಗಿರುವ ಭಂಗಿಯಲ್ಲಿದೆ. ಗ್ರಾಮದ ಜನರು ಶೃದ್ಧೆ ಭಕ್ತಿಗಳಿಂದ "ರಾವಣ ಬಾಬಾ ನಮಃ" ಎಂದು ಹೇಳಿ ಪೂಜಿಸುತ್ತಾರೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Redtigerxyz

ರಾವಣನ ದೇವಾಲಯಗಳು:
ಮಧ್ಯ ಪ್ರದೇಶದ ಮಂದಸೌರ ನಗರದಲ್ಲಿಯೂ ಸಹ ರಾವಣನಿಗೆ ಮುಡಿಪಾದ ದೇವಾಲಯವಿದೆ. ಇಲ್ಲಿಯ ಜನರು ರಾವಣನ ಮಡದಿ ಮಂಡೋದರಿ ಮಂದಸೌರಿನವಳಾಗಿದ್ದಳೆಂದು ನಂಬುತ್ತಾರೆ ಹಾಗೂ ರಾವಣನನ್ನು ಅಳಿಯನಂತೆಯೂ ಕಾಣುತ್ತಾರೆ. ಹೀಗಾಗಿ ರಾವಣನಿಗೆ ಇಲ್ಲಿ ಆದರ, ಗೌರವ ಬಹಳ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Indi Samarajiva

ರಾವಣನ ದೇವಾಲಯಗಳು:
ಬೈಜನಾಥ ದೇವಾಲಯ : ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಪಾಲಂಪುರದಿಂದ ಕೇವಲ 16 ಕಿ.ಮೀ ದೂರದಲ್ಲಿರುವ ಬೈಜನಾಥ (ವೈದ್ಯನಾಥ) ದೇವಾಲಯವು ರಾವಣನ ಕುರಿತು ವಿಶಿಷ್ಟವಾದ ಹಿನ್ನಿಲೆ ಹೊಂದಿದೆ. ಕಠಿಣ ತಪಗೈದು ಶಿವನನ್ನು ಪ್ರಸನ್ನಗೊಳಿಸಿ ಆತ್ಮಲಿಂಗ ಪಡೆದು ರಾವಣ ಮರಳುವಾಗ ಪ್ರಕೃತಿ ಕರೆ ಓಗೊಟ್ಟು ದನಗಾಹಿಯೊಬ್ಬನಿಗೆ ಆತ್ಮ ಲಿಂಗ ಹಿಡಿಯಲು ಹೇಳಿ ತೆರಳಿದ. ಆ ದನಗಾಹಿ ಯುವಕ ಅದರ ಭಾರ ತಾಳಲಾರದೆ ಆ ಆತ್ಮಲಿಂಗವನ್ನು ಅಲ್ಲಿಯೆ ಇರಿಸಿದ. ಇದೇ ಆತ್ಮಲಿಂಗವು ಇಂದಿ ಬೈಜನಾಥ ದೇವಾಲಯದಲ್ಲಿರುವ ಲಿಂಗವಾಗಿದೆ ಎಂದು ನಂಬಲಾಗುತ್ತದೆ.
ಚಿತ್ರಕೃಪೆ: Rakeshkdogra

ರಾವಣನ ದೇವಾಲಯಗಳು:
ಇನ್ನೊಂದು ವಿಶೇಷವೆಂದರೆ ಉತ್ತರ ಭಾರತದಲ್ಲಿ ದಸರಾ ಸಂದರ್ಭದಲ್ಲಿ ರಾವಣನ ಎತ್ತರದ ಬೊಂಬೆ ತಯಾರಿಸಿ ಅದನ್ನು ಸುಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ರೂಢಿ. ಅತ್ಯಂತ ಸಡಗರದಿಂದ ಆಚರಿಸಲಾಗುವ ಇದನ್ನು ಕೆಟ್ಟದ್ದರ ಮೇಲೆ ಒಳ್ಳೆಯದರ ಜಯ ಎಂದು ಬಿಂಬಿಸಲಾಗುತ್ತದೆ. ಆದರೆ ಈ ಉತ್ಸವವು ಬೈಜನಾಥದಲ್ಲಿ ಕಿಂಚಿತ್ತೂ ಆಚರಿಸಲಾಗುವುದಿಲ್ಲ. ಬದಲಾಗಿ ಇಲ್ಲಿನ ಜನರು ರಾವಣನ ಶಿವನ ಮೇಲಿರುವ ಅಪ್ರತಿಮ ಭಕ್ತಿ ಗೌರವ, ಆದರಗಳನ್ನು ಸಮರ್ಪಿಸುತ್ತಾರೆ.
ಚಿತ್ರಕೃಪೆ: Pierre Andre Leclercq


Click it and Unblock the Notifications















