ಬೆಂಗಳೂರಿಗೆ ಬಂದಾಗ ನಿಮಗೆ ನೋಡಲು ಅನೇಕ ಸ್ಥಳಗಳಿವೆ. ಎಂಜಾಯ್ ಮಾಡಲು ಸಾಕಷ್ಟು ಚಟುವಟಿಕೆಗಳಿವೆ. ಆದರೆ ಬೆಂಗಳೂರು ಮಾತ್ರವಲ್ಲದೆ, ಬೆಂಗಳೂರು ಸುತ್ತಮುತ್ತ ನೋಡಲೂ ಅನೇಕ ತಾಣಗಳಿವೆ. ನಗರದಿಂದ ಅಷ್ಟೇನೂ ದೂರ ಸಹ ಇಲ್ಲ. ಹಾಗಾಗಿ ನೋಡಿದ ಸ್ಥಳವವನ್ನೇ ನೋಡುವ ಬದಲು ಹೊಸ ಹೊಸ ಸ್ಥಳವನ್ನು ಅನ್ವೇಷಿಸಿ ಪ್ರವಾಸ ಮಾಡಿದರೆ ಮೈಂಡ್ ಕೂಡ ರಿಫ್ರೆಶ್ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ ಇಂದು ನಾವು "ಮುತ್ಯಾಲ ಮಡುವು" ಎಂಬ ಸ್ಥಳದ ಬಗ್ಗೆ ತಿಳಿಯೋಣ. ಬಹುತೇಕ ಪ್ರವಾಸಿಗರಿಗೆ ಈ ಸ್ಥಳದ ಪರಿಚಯ ಖಂಡಿತ ಇರುತ್ತದೆ.
ಪರ್ಲ್ ವ್ಯಾಲಿ ಎಂದು ಪ್ರಸಿದ್ಧವಾಗಿರುವ ಇದು ಬೆಂಗಳೂರಿನಿಂದ ಸುಮಾರು 40 ಕಿಲೋಮೀಟರ್ ಮತ್ತು ಆನೇಕಲ್‌ನಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿದೆ. ಮುತ್ಯಾಲ ಮಡುವು ಆಹ್ಲಾದಕರ ಹವಾಮಾನ ಹೊಂದಿದ್ದು, ನಗರ ಜೀವನದ ಜಂಜಾಟದಿಂದ ಸ್ವಲ್ಪ ಶಾಂತಿಯುತ ಸಮಯವನ್ನು ಕಳೆಯಲು ಬಯಸುವವರಿಗೆ ಇದು ಸರಿಯಾದ ಸ್ಥಳವಾಗಿದೆ. ಈ ಸ್ಥಳಕ್ಕೆ ಒಂದು ದಿನದ ಭೇಟಿ ನಿಮ್ಮನ್ನು ದಿನಪೂರ್ತಿ ಸಂತೋಷವಾಗಿಡುತ್ತದೆ. ಕಾಡಿನ ನಡುವಿನ ಚಾರಣ ನಿಮಗೆ ಏನೋ ಸಾಧಿಸಿದ ಭಾವನೆಯನ್ನು ನೀಡುತ್ತದೆ ಮತ್ತು ಮೂಡ್ ರಿಫ್ರೆಶ್ ಮಾಡುತ್ತದೆ.
ಟ್ರೆಕ್ಕಿಂಗ್ ಮಾಡುವವರಿಗೆ ಅತ್ಯುತ್ತಮ ಆಯ್ಕೆ
ಈ ಸುಂದರವಾದ ಪಿಕ್ನಿಕ್ ತಾಣದ ವಿಶೇಷತೆಯೆಂದರೆ ಬೆಟ್ಟಗುಡ್ಡಗಳ ನಡುವೆ ಇರುವ ಇದು ಗಿಡಗಂಟಿಗಳು, ಕಾಡುಮೇಡುಗಳಿಂದ ಕೂಡಿದೆ. ಅಷ್ಟೇ ಅಲ್ಲ, ಇಲ್ಲಿ ವೈವಿಧ್ಯಮಯ ಜಾತಿಯ ಪ್ರಾಣಿ-ಪಕ್ಷಿಗಳು, ಸಸ್ಯ ವರ್ಗವನ್ನು ನೋಡಬಹುದು. ಇಲ್ಲಿನ ಪ್ರಮುಖ ಆಕರ್ಷಣೆ ಜಲಪಾತ. ಬಂಡೆಯ ಮೇಲ್ಮೈಗಳಿಂದ ಬೀಳುವ ನೀರಿನ ಹನಿಗಳು ಮುತ್ತಿನಂತೆ ಕಾಣುತ್ತದೆ. ಆದ್ದರಿಂದ ಇದಕ್ಕೆ 'ಪರ್ಲ್ ವ್ಯಾಲಿ' ಎಂದು ಹೆಸರು. ಸ್ಥಳವು ಟ್ರೆಕ್ಕಿಂಗ್ ಮಾಡುವವರಿಗಂತೂ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ದಟ್ಟವಾದ ಅರಣ್ಯಗಳ ಮೂಲಕ ಹಾದು ಹೋಗುವಾಗ ಶಾಂತಿಯುತ ವಾತವರಣದಲ್ಲಿ ವರ್ಣರಂಜಿತ ಪಕ್ಷಿಗಳ ಚಿಲಿಪಿಲಿ ಮತ್ತು ಎದ್ದುಕಾಣುವ ಚಿಟ್ಟೆಗಳು ತಿರುಗಾಡುವುದನ್ನು ಗುರುತಿಸಬಹುದು. ಅರಣ್ಯವು ಆನೆಗಳು ಮತ್ತು ಕಾಡು ಕರಡಿಗಳಿಗೆ ನೆಲೆಯಾಗಿದೆ. ಅನೇಕ ಅಪರೂಪದ ಹೂವುಗಳು ಈ ಹಚ್ಚ ಹಸಿರಿನ ಕಾಡಿನಲ್ಲಿವೆ. ಆದರೆ ಮಂಗಗಳ ಬಗ್ಗೆ ಮಾತ್ರ ಎಚ್ಚರದಿಂದಿರಬೇಕು.

ಮುತ್ಯಾಲ ಮಡುವು ಎಂದರೇನು?
ಕನ್ನಡದಲ್ಲಿ ಮುತ್ಯಾಲ ಎಂದರೆ 'ಮುತ್ತು'. ಮಡುವು ಎಂದರೆ 'ಕೊಳ'. ಜಲಪಾತದಿಂದ ನೀರು ಹರಿಯುವಾಗ ಅದು ದಾರದಿಂದ ಮುತ್ತುಗಳು ಬಿದ್ದಂತೆ ಭಾಸವಾಗುತ್ತದೆ. ಅದಕ್ಕೆ ಈ ಸ್ಥಳವನ್ನು ಮುತ್ಯಾಲ ಮಡುವು ಎನ್ನುತ್ತಾರೆ.
ಹೀಗೆ ಎಂಜಾಯ್ ಮಾಡಿ...
ಪಿಕ್ನಿಕ್
ಈ ಸ್ಥಳದ ನಿಜವಾದ ಸೌಂದರ್ಯವನ್ನು ಸವಿಯಬೇಕೆಂದರೆ ಮುತ್ಯಾಲ ಮಡುವು ಜಲಪಾತದ ಬಳಿ ಅಥವಾ ಕಾಡಿನಲ್ಲಿ ಪಿಕ್ನಿಕ್ ಮಾಡಿ. ಇಲ್ಲಿ ವಿಶ್ರಮಿಸುವಾಗ ಸುತ್ತಲಿನ ರಮಣೀಯ ಸೌಂದರ್ಯ ಸವಿಯುತ್ತಾ ರುಚಿಕರವಾದ ಆಹಾರವನ್ನು ಆನಂದಿಸಿ.

ಟ್ರೆಕ್ಕಿಂಗ್
ಮುತ್ಯಾಲ ಮಡುವಿನ ದಟ್ಟವಾದ ಕಾಡುಗಳ ನಡುವೆ ಚಾರಣ ಮಾಡುವುದನ್ನು ಮಿಸ್ ಮಾಡಿಕೊಳ್ಳಬೇಡಿ. ಇದು ದಟ್ಟವಾದ ಕಾಡುಗಳು ಸಸ್ಯ ಮತ್ತು ಪ್ರಾಣಿಗಳಿಂದ ಕೂಡಿದ್ದು, ಇವುಗಳನ್ನು ನೋಡುತ್ತಿದ್ದರೆ ನೀವು ಮಂತ್ರಮುಗ್ಧರಾಗುತ್ತೀರಿ. ಚಾರಣದ ಸಮಯದಲ್ಲಿ ನೀವು ಕುಳಿತು ವಿಶ್ರಾಂತಿ ಪಡೆಯುವ ಮಾರ್ಗದಲ್ಲಿ ಹಲವಾರು ಪುಟಾಣಿ ಜಲಪಾತಗಳನ್ನು ಕಣ್ತುಂಬಿಕೊಳ್ಳಬಹುದು.
ಪಕ್ಷಿ ವೀಕ್ಷಣೆ
ಪರ್ಲ್ ವ್ಯಾಲಿಯಲ್ಲಿ ಸಸ್ಯ ಮತ್ತು ಪ್ರಾಣಿಗಳು ಸಮೃದ್ಧವಾಗಿದ್ದು, ನೀವು ವಿವಿಧ ರೀತಿಯ ಪಕ್ಷಿಗಳನ್ನು ಕಾಣಬಹುದು. ಪರ್ಲ್ ವ್ಯಾಲಿ ಅತ್ಯಾಸಕ್ತಿಯ ಪಕ್ಷಿ ವೀಕ್ಷಕರಿಗೆ ನೆಚ್ಚಿನ ತಾಣವಾಗಿದೆ.
ಸರೋವರದಲ್ಲಿ ಈಜಬಹುದು
ಜಲಪಾತದ ಪಕ್ಕದಲ್ಲಿ ಒಂದು ಸಣ್ಣ ಸರೋವರವಿದೆ. ಇದು ತುಂಬಾ ಆಳವಾಗಿಲ್ಲ. ಆದ್ದರಿಂದ ನೀವು ನಿಮ್ಮ ಸ್ನೇಹಿತರೊಂದಿಗೆ ಈಜುತ್ತಾ ಆನಂದಿಸಬಹುದು.
ಭೇಟಿ ನೀಡಲು ಉತ್ತಮ ಸಮಯ
ಮುತ್ಯಾಲ ಮಡುವಿಗೆ ಭೇಟಿ ಕೊಟ್ಟು ಆನಂದಿಸಲು ಉತ್ತಮ ಸಮಯವೆಂದರೆ ಆಗಸ್ಟ್ ಮತ್ತು ನವೆಂಬರ್ ತಿಂಗಳ ನಡುವೆ. ಈ ಅವಧಿಯಲ್ಲಿ ಮೋಡಗಳು, ಜಲಪಾತಗಳು ಸ್ವರ್ಗೀಯವಾಗಿ ಕಾಣುತ್ತವೆ. ಈ ಸಮಯದಲ್ಲಿ ಸ್ಥಳವನ್ನು ಸುತ್ತುವರೆದಿರುವ ಮಂಜು ಮಾಂತ್ರಿಕವಾಗಿ ಕಾಣುತ್ತದೆ.

ತಲುಪುವುದು ಹೇಗೆ?
ವಿಮಾನ: ಮುತ್ಯಾಲ ಮಡುವಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಭಾರತದ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ವಿಮಾನ ನಿಲ್ದಾಣವು ಮುತ್ಯಾಲ ಮಡುವಿನಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಬಾಡಿಗೆ ಕಾರುಗಳು ಮತ್ತು ಬಸ್ಸುಗಳು ಲಭ್ಯವಿದೆ.
ರೈಲು: ಹತ್ತಿರದ ರೈಲು ನಿಲ್ದಾಣವೆಂದರೆ ಬೆಂಗಳೂರು ರೈಲು ನಿಲ್ದಾಣ. ನಿಲ್ದಾಣದಿಂದ ಸುಮಾರು 43 ಕಿ.ಮೀ ದೂರದಲ್ಲಿ ಮುತ್ಯಾಲ ಮಡುವಿದೆ. ಇಲ್ಲಿಂದ ಬಸ್ಸುಗಳು ಮತ್ತು ಬಾಡಿಗೆ ಕಾರುಗಳು ಸುಲಭವಾಗಿ ಲಭ್ಯವಿದ್ದು, ಇಲ್ಲಿಂದ ಮುತ್ಯಾಲ ಮಡುವನ್ನು ಆರಾಮಾಗಿ ತಲುಪಬಹುದು.
ರಸ್ತೆ: ಈ ಮೊದಲೇ ಹೇಳಿದ ಹಾಗೆ ಬೆಂಗಳೂರಿನಿಂದ ಮುತ್ಯಾಲ ಮಡುವಿಗೆ ಸುಮಾರು 40 ಕಿ.ಮೀ. ಎನ್‌ಎಚ್7 ಮೂಲಕ ಮುತ್ಯಾಲ ಮಡುವಿಗೆ ಹೋಗುವ ಮಾರ್ಗವು ಹಳ್ಳಕೊಳ್ಳಗಳಿಲ್ಲದೆ ಸುಗಮವಾಗಿದೆ.


Click it and Unblock the Notifications

















