Friendship Day 2024: ಸ್ನೇಹಿತರ ದಿನಾಚರಣೆ ಅನೇಕ ಜನರಿಗೆ ಬಹಳ ವಿಶೇಷವಾದ ದಿನವಾಗಿದೆ. ಈ ವಿಶೇಷ ಸಂದರ್ಭದಲ್ಲಿ ಕೆಲವರು ತಮ್ಮ ಸ್ನೇಹಿತರಿಗಾಗಿ ಸರ್ಪ್ರೈಸ್ ಪಾರ್ಟಿ ಏರ್ಪಡಿಸಿದರೆ, ಇನ್ನು ಕೆಲವರು ಈ ವಿಶೇಷ ಸಂದರ್ಭದಲ್ಲಿ ಸುತ್ತಾಡಲು ಹೋಗುತ್ತಾರೆ.
ಈ ವರ್ಷ ಆಗಸ್ಟ್ 4 ರ ಭಾನುವಾರದಂದು ದೇಶಾದ್ಯಂತ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಇದು ವಾರಾಂತ್ಯದಲ್ಲಿ ಬರುವುದರಿಂದ, ಅನೇಕ ಜನರು ತಮ್ಮ ಗೆಳೆಯರು ಅಥವಾ ಸ್ನೇಹಿತರೊಂದಿಗೆ ದೇಶದ ಸುಂದರ ಸ್ಥಳಗಳನ್ನು ವೀಕ್ಷಿಸಲು ಸಿದ್ದವಾಗುತ್ತಿರುತ್ತೀರಿ ಅಲ್ಲವೇ. ಅಂದಹಾಗೆ ನೀವು ಫ್ರೆಂಡ್‌ಶಿಪ್ ಡೇ ಸಂದರ್ಭದಲ್ಲಿ ಕರ್ನಾಟಕದ ಸುಂದರವಾದ ಸ್ಥಳಗಳಿಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ ನಾವು ಕೆಲವು ಸ್ಥಳಗಳ ಮಾಹಿತಿ ನೀಡುತ್ತವೆ. ಅಲ್ಲಿ ನೀವು ಸ್ನೇಹಿತರ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಬಹುದು.

ಗೋಕರ್ಣ
ಕರ್ನಾಟಕದ ಅತ್ಯಂತ ಸುಂದರವಾದ ಮತ್ತು ಪ್ರಸಿದ್ಧವಾದ ಸ್ಥಳಗಳಿಗೆ ಭೇಟಿ ನೀಡಲು ಯೋಜಿಸುವಾಗ ಗೋಕರ್ಣದ ಹೆಸರನ್ನು ಖಂಡಿತವಾಗಿಯೂ ನೆನಪಿಸಿಕೊಳ್ಳಲಾಗುತ್ತದೆ. ಇದು ದಕ್ಷಿಣ ಭಾರತದ ಒಂದು ಸುಂದರವಾದ ಸ್ಥಳವಾಗಿದ್ದು, ವಿದೇಶಿ ಪ್ರವಾಸಿಗರು ಸಹ ಇಲ್ಲಿಗೆ ಬರುತ್ತಾರೆ.
ಗೋಕರ್ಣವನ್ನು ಅತ್ಯುತ್ತಮ ಸ್ನೇಹ ದಿನದ ತಾಣವೆಂದು ಪರಿಗಣಿಸಲಾಗಿದೆ. ಇಲ್ಲಿ ನೀವು ಸ್ನೇಹಿತರೊಂದಿಗೆ ರಾತ್ರಿ ಪಾರ್ಟಿಯನ್ನು ಆನಂದಿಸಬಹುದು. ಇಲ್ಲಿರುವ ಕಡಲತೀರದ ಉದ್ದಕ್ಕೂ ನೀವು ಸ್ಮರಣೀಯ ಪಾರ್ಟಿಯನ್ನು ಮಾಡಬಹುದು. ಗೋಕರ್ಣದಲ್ಲಿ ನೀವು ಓಂ ಬೀಚ್, ಹಾಫ್ ಮೂನ್ ಬೀಚ್ ಮತ್ತು ಪ್ಯಾರಡೈಸ್ ಬೀಚ್‌ನಂತಹ ಅದ್ಭುತ ಸ್ಥಳಗಳನ್ನು ಅನ್ವೇಷಿಸಬಹುದು.
ತೆರಳುವುದು ಹೇಗೆ?
ಗೋಕರ್ಣವು ಕರ್ನಾಟಕದ ಎಲ್ಲಾ ಪ್ರಮುಖ ನಗರಗಳಿಂದ ರೈಲು ಮತ್ತು ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಹತ್ತಿರದ ವಿಮಾನ ನಿಲ್ದಾಣವು 150 ಕಿಮೀ ದೂರದಲ್ಲಿರುವ ಗೋವಾದ ದಾಬೋಲಿಮ್‌ನಲ್ಲಿದೆ. ಗೋಕರ್ಣ ರೈಲು ನಿಲ್ದಾಣವು ನಗರದ ಮಧ್ಯಭಾಗದಿಂದ 10 ಕಿ.ಮೀ ದೂರದಲ್ಲಿದೆ. ಬೆಂಗಳೂರು ಮತ್ತು ಗೋವಾದಿಂದ ಬಸ್ ಸೇವೆಗಳು ಲಭ್ಯವಿದೆ.

ಕೂರ್ಗ್
ಕೂರ್ಗ್ ಕರ್ನಾಟಕದ ಸುಂದರವಾದ ಗಿರಿಧಾಮವಾಗಿದ್ದು , ಇಲ್ಲಿಗೆ ಸ್ಥಳೀಯರು ಮಾತ್ರವಲ್ಲದೆ ವಿದೇಶಿ ಪ್ರವಾಸಿಗರೂ ಸಹ ಭೇಟಿ ನೀಡುತ್ತಾರೆ. ಸಮುದ್ರ ಮಟ್ಟದಿಂದ 1 ಸಾವಿರ ಮೀಟರ್‌ಗಿಂತ ಹೆಚ್ಚು ಎತ್ತರದಲ್ಲಿರುವ ಕೂರ್ಗ್ ಅನ್ನು ಭಾರತದ ಸ್ಕಾಟ್‌ಲ್ಯಾಂಡ್ ಎಂದೂ ಕರೆಯಲಾಗುತ್ತದೆ.
ನೀರು ಮತ್ತು ಪ್ರಕೃತಿಯ ಸೌಂದರ್ಯಕ್ಕೆ ಮಾತ್ರವಲ್ಲ, ಸ್ನೇಹಿತರೊಂದಿಗೆ ಮೋಜು ಮಾಡಲು ಕೂರ್ಗ್ ಅತ್ಯುತ್ತಮ ತಾಣವೆಂದು ಪರಿಗಣಿಸಲಾಗಿದೆ. ಕೂರ್ಗ್‌ನಲ್ಲಿ ಫ್ರೆಂಡ್‌ಶಿಪ್ ಡೇ ಸಂದರ್ಭದಲ್ಲಿ, ಅನೇಕ ವಿಲ್ಲಾಗಳು ಮತ್ತು ರೆಸಾರ್ಟ್‌ಗಳು ರಾತ್ರಿ ಪಾರ್ಟಿಗಳಿಗೆ ಸಜ್ಜಾಗಿದ್ದು, ಅಲ್ಲಿ ನೀವು ಸಹ ಹೋಗಬಹುದು. ಇಲ್ಲಿನ ಚಹಾ ತೋಟಗಳಲ್ಲಿ ನೀವು ಸ್ಮರಣೀಯ ಸಮಯವನ್ನು ಕಳೆಯಬಹುದು. ಕೂರ್ಗ್‌ನಲ್ಲಿರುವ ಅಬ್ಬೆ ಜಲಪಾತ ಮತ್ತು ತಡಿಯಂಡಮಾಲ್ ಶಿಖರವನ್ನು ನೋಡಲು ತಪ್ಪಿಸಿಕೊಳ್ಳಬೇಡಿ.
ತೆರಳುವುದು ಹೇಗೆ?
ಇಲ್ಲಿಗೆ ರಸ್ತೆಯ ಮೂಲಕ ಮಾತ್ರ ಪ್ರವೇಶಿಸಬಹುದು. ಕರ್ನಾಟಕದ ಪ್ರಮುಖ ನಗರಗಳಿಂದ ಕೂರ್ಗ್‌ಗೆ ಅನೇಕ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಹೋಗುತ್ತವೆ. ಕೂರ್ಗ್ನಲ್ಲಿ ರೈಲು ನಿಲ್ದಾಣವಿಲ್ಲ ಮತ್ತು ಹತ್ತಿರದ ರೈಲು ನಿಲ್ದಾಣ ಮೈಸೂರಿನಲ್ಲಿದೆ (120 ಕಿಮೀ). ಹತ್ತಿರದ ವಿಮಾನ ನಿಲ್ದಾಣವೆಂದರೆ ಮಂಗಳೂರಿನಲ್ಲಿ (152 ಕಿಮೀ). ಪ್ರವಾಸಿಗರು ಬಸ್ ಅಥವಾ ಟ್ಯಾಕ್ಸಿ ಮೂಲಕ ಕೂರ್ಗ್‌ಗೆ ಹೋಗಬಹುದು.

ಚಿಕ್ಕಮಗಳೂರು
ಚಿಕ್ಕಮಗಳೂರನ್ನು ಕರ್ನಾಟಕದ ಸುಂದರ ಮತ್ತು ಜನಪ್ರಿಯ ಪ್ರವಾಸಿ ತಾಣವೆಂದು ಪರಿಗಣಿಸಲಾಗಿದೆ. ಈ ನಗರವನ್ನು ಅನೇಕ ಜನರು 'ಕರ್ನಾಟಕದ ಕಾಫಿ ಲ್ಯಾಂಡ್' ಎಂದೂ ಕರೆಯುತ್ತಾರೆ.
ಸ್ನೇಹ ದಿನಾಚರಣೆಯನ್ನು ಆಚರಿಸಲು ಚಿಕ್ಕಮಗಳೂರನ್ನು ಅತ್ಯುತ್ತಮ ತಾಣವೆಂದು ಪರಿಗಣಿಸಲಾಗಿದೆ. ಫ್ರೆಂಡ್ ಶಿಪ್ ಡೇ ಸಂದರ್ಭದಲ್ಲಿ ದೇಶದ ಮೂಲೆ ಮೂಲೆಯಿಂದ ಜನರು ಪಾರ್ಟಿಯನ್ನು ಮಾಡಲು ಇಲ್ಲಿಗೆ ಬರುತ್ತಾರೆ. ರಾತ್ರಿ ವೇಳೆ ಅನೇಕ ಹೋಟೆಲ್‌ಗಳು, ವಿಲ್ಲಾಗಳು ಮತ್ತು ರೆಸಾರ್ಟ್‌ಗಳಲ್ಲಿ ಪಾರ್ಟಿಗಳು ನಡೆಯುತ್ತವೆ, ಅಲ್ಲಿ ನೀವು ಸಹ ಹೋಗಬಹುದು. ಚಿಕ್ಕಮಗಳೂರಿನಲ್ಲಿ ನೀವು ಮುಳ್ಳಯ್ಯನಗಿರಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಮತ್ತು ಬಾಬಾ ಬುಡನ್ ಗಿರಿಯಂತಹ ಸ್ಥಳಗಳನ್ನು ಸ್ನೇಹಿತರೊಂದಿಗೆ ಅನ್ವೇಷಿಸಬಹುದು.
ತೆರಳುವುದು ಹೇಗೆ?
ಚಿಕ್ಕಮಗಳೂರು ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಬೆಂಗಳೂರಿನಿಂದ ಸಾಮಾನ್ಯ ಬಸ್ ಮತ್ತು ಕ್ಯಾಬ್ ಸೇವೆಗಳು ಲಭ್ಯವಿದೆ. ಹತ್ತಿರದ ವಿಮಾನ ನಿಲ್ದಾಣವೆಂದರೆ ಶಿವಮೊಗ್ಗ ವಿಮಾನ ನಿಲ್ದಾಣ. ಹತ್ತಿರದ ರೈಲು ನಿಲ್ದಾಣ ಕಡೂರು (40 ಕಿಮೀ). ಪ್ರವಾಸಿಗರು ಈ ಮೂಲಕ ಸಹ ನಗರವನ್ನು ಪ್ರವೇಶಿಸಬಹುದು.

ದಾಂಡೇಲಿ
ಈ ಸುಂದರವಾದ ಸ್ಥಳದ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ, ಆದರೆ ನಿಮ್ಮ ಮಾಹಿತಿಗಾಗಿ ಹೇಳುವುದಾದರೆ ಇದನ್ನು ಕರ್ನಾಟಕ ಮತ್ತು ದಕ್ಷಿಣ ಭಾರತದ ಸಾಹಸ ಭೂಮಿ ಎಂದು ಕರೆಯಲಾಗುತ್ತದೆ.
ಕರ್ನಾಟಕ ಮತ್ತು ಗೋವಾದ ಗಡಿಯ ಸಮೀಪದಲ್ಲಿರುವ ದಾಂಡೇಲಿಯು ಸ್ನೇಹ ದಿನಾಚರಣೆಯ ಅತ್ಯುತ್ತಮ ತಾಣವೆಂದು ಪರಿಗಣಿಸಲಾಗಿದೆ . ಇಲ್ಲಿ ನೀವು ಪಾರ್ಟಿಯ ಜೊತೆಗೆ ರಾಫ್ಟಿಂಗ್, ಬೋಟಿಂಗ್, ಸಾಹಸ ಟ್ರೆಕ್ಕಿಂಗ್, ಜಂಗಲ್ ಸಫಾರಿ, ನದಿ ಬದಿಯ ಮೀನುಗಾರಿಕೆಯನ್ನು ಸಹ ಆನಂದಿಸಬಹುದು. ಇಲ್ಲಿ ನೀವು ಖುಷಿಯಾಗಿ ರಾತ್ರಿ ಕಳೆಯಬಹುದು.
ತೆರಳುವುದು ಹೇಗೆ?
ದಾಂಡೇಲಿಯೂ ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ, ನಿಯಮಿತ ಬಸ್ ಸೇವೆಗಳು ಈ ಸ್ಥಳವನ್ನು ಭಾರತದ ಉಳಿದ ಭಾಗಗಳಿಗೆ ಸಂಪರ್ಕಿಸುತ್ತದೆ. ದಾಂಡೇಲಿಗೆ ನೇರ ರೈಲು ಅಥವಾ ವಿಮಾನ ಸಂಪರ್ಕವಿಲ್ಲ. ದಾಂಡೇಲಿಯಿಂದ 23 ಕಿಮೀ ದೂರದಲ್ಲಿರುವ ಅಳ್ನಾವರ್ ಜಂಕ್ಷನ್ ಹತ್ತಿರದ ರೈಲು ನಿಲ್ದಾಣವಾಗಿದೆ. ದಾಂಡೇಲಿಯಿಂದ 56 ಕಿಮೀ ದೂರದಲ್ಲಿರುವ ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣವಿದೆ.
ಈ ಸ್ಥಳಗಳನ್ನು ನೋಡಿ
ಫ್ರೆಂಡ್‌ಶಿಪ್ ಡೇ ಆಚರಿಸಲು ಅನೇಕ ಉತ್ತಮ ಸ್ಥಳಗಳು ಕರ್ನಾಟಕದಲ್ಲಿವೆ. ಬೆಂಗಳೂರು, ಮೈಸೂರು, ಹಂಪಿ, ಕಬಿನಿ ಮತ್ತು ಬಂಡೀಪುರದಂತಹ ಅದ್ಭುತ ಸ್ಥಳಗಳು ಸಹ ನಿಮ್ಮ ಗಮ್ಯಸ್ಥಾನವಾಗಬಹುದು.


Click it and Unblock the Notifications


















