'ದಕ್ಷಿಣದ ಚಿರಾಪುಂಜಿ' ಎಂದೇ ಖ್ಯಾತಿಯಾಗಿರುವ, ಕರ್ನಾಟಕದ ಮಲೆನಾಡು ಪ್ರದೇಶದಲ್ಲಿರುವ 'ಆಗುಂಬೆ' ಒಂದು ಸುಂದರವಾದ ಪುಟ್ಟ ಗ್ರಾಮ. ಇದನ್ನು ದೇಶದಲ್ಲೇ ಅತಿ ಹೆಚ್ಚು ಮಳೆ ಬೀಳುವ ಎರಡನೇ ಸ್ಥಳ ಎಂದು ಗುರುತಿಸಲಾಗಿದೆ. ಪಶ್ಚಿಮ ಘಟ್ಟದಲ್ಲಿರುವ ಆಗುಂಬೆ ಮಳೆಕಾಡುಗಳನ್ನು ಹೊಂದಿದೆ. ಅಷ್ಟೇ ಅಲ್ಲ, ಇಲ್ಲಿ ಜಲಪಾತಗಳು, ನದಿಗಳು, ಸುಂದರವಾದ ಕಾಡುಗಳು ಮತ್ತು ಕಾಡು ಪ್ರಾಣಿಗಳನ್ನು ನೋಡಬಹುದು.
ವಿಶೇಷವಾಗಿ ಇದು ಕಿಂಗ್ ಕೋಬ್ರಾ (ಕಾಳಿಂಗ ಸರ್ಪ) ವಾಸಸ್ಥಾನವಾಗಿ ಜನಪ್ರಿಯವಾಗಿದೆ. ಆಗುಂಬೆಯಲ್ಲಿ ನೋಡಬಹುದಾದ ಅತ್ಯಂತ ಸುಂದರವಾದ ಹಾವುಗಳಲ್ಲಿ ಕಿಂಗ್ ಕೋಬ್ರಾ ಕೂಡ ಒಂದಾಗಿದೆ. ಆಗುಂಬೆಯು ದೇಶದಲ್ಲಿಯೇ ಅತಿ ಹೆಚ್ಚು ಸಂಖ್ಯೆಯ ಹಾವುಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ಕಾಳಿಂಗ ಅತ್ಯಂತ ವಿಷಕಾರಿ ಹಾವು
ಕಾಳಿಂಗ ಸರ್ಪ 12-18 ಅಡಿ ಉದ್ದವಿದ್ದು, ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿದೆ. ಇದು ಗೂಡು ಕಟ್ಟುವ ಏಕೈಕ ಹಾವು. ಇತ್ತೀಚೆಗೆ ಪ್ರಕಟವಾದ ಅಧ್ಯಯನವು ಕಾಡಿನಲ್ಲಿ ಕಾಳಿಂಗದ ಬಹು ಪ್ರಭೇದಗಳಿವೆ ಎಂದು ತಿಳಿಸುತ್ತದೆ. ಕಾಳಿಂಗ ಸರ್ಪ ಸರಾಸರಿ 10 ರಿಂದ 13 ಅಡಿಗಳವರೆಗೆ ಬೆಳೆಯುತ್ತದೆ. 19.1 ಅಡಿ ಉದ್ದದ ಕಾಳಿಂಗ ಸಹ ಇತ್ತು ಎನ್ನಲಾಗಿದೆ.
ಗಂಡು ಸರ್ಪಗಳು ಹೆಣ್ಣಿಗಿಂತ ದೊಡ್ಡದಾಗಿರುತ್ತವೆ. ಪಶ್ಚಿಮ ಘಟ್ಟಗಳಲ್ಲಿ ಸೆರೆಹಿಡಿಯಲಾದ ಗಂಡು ಕಾಳಿಂಗ 10 ಕೆಜಿ ತೂಕವಿದ್ದರೆ, ಹೆಣ್ಣು ಸುಮಾರು 5 ಕೆಜಿ ತೂಗುತ್ತದೆ. ಕಾಳಿಂಗ ಸರ್ಪಗಳು ಸಾಮಾನ್ಯವಾಗಿ ಜನರ ಸಂಪರ್ಕಕ್ಕೆ ಬಂದರೂ ಜನರಿಗೆ ಕಚ್ಚುವುದು ಅಪರೂಪ. ಇದು ಎದ್ದು ನಿಲ್ಲುವುದನ್ನು ನೋಡಲು ಗಟ್ಟಿ ಗುಂಡಿಗೆ ಇರಬೇಕು. ಪಶ್ಚಿಮ ಘಟ್ಟಗಳ ಅನೇಕ ಭಾಗಗಳಲ್ಲಿ ಕಾಳಿಂಗ ಸರ್ಪವನ್ನು ಜನರು ಪೂಜಿಸುತ್ತಾರೆ.

ಭಾರತದಲ್ಲಿ ಎಲ್ಲೆಲ್ಲಿ ಕಂಡು ಬರುತ್ತದೆ?
ಸಾಮಾನ್ಯವಾಗಿ ಕಾಳಿಂಗ ವಿವಿಧ ರೀತಿಯ ಆವಾಸಸ್ಥಾನಗಳಲ್ಲಿ ಕಂಡುಬರುತ್ತದೆ. ಭಾರತದಲ್ಲಿ ಕಾಳಿಂಗ ಸರ್ಪವು ಪಶ್ಚಿಮ ಘಟ್ಟಗಳು, ಉತ್ತರಾಖಂಡ ರಾಜ್ಯದ ಶಿವಾಲಿಕ್ ಮತ್ತು ತೇರೈ ಪ್ರದೇಶಗಳ ತಪ್ಪಲಿನಲ್ಲಿ, ಆಂಧ್ರ ಪ್ರದೇಶ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಪೂರ್ವ ಘಟ್ಟಗಳಲ್ಲಿ ಕಂಡುಬರುತ್ತದೆ. ಸಿಕ್ಕಿಂ ಮತ್ತು ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ತ್ರಿಪುರ ಮತ್ತು ಮಣಿಪುರ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಯೂ ಕಾಳಿಂಗ ಪ್ರಭೇದಗಳನ್ನು ಕಾಣಬಹುದು.

ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ (ARRS)
ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ ಬೆಂಗಳೂರಿನಿಂದ ಸುಮಾರು 300 ಕಿಮೀ ದೂರದಲ್ಲಿ ಚಿಕ್ಕಮಗಳೂರು ಹೆದ್ದಾರಿಯಲ್ಲಿದೆ. ARRS ಅನ್ನು 2005 ರಲ್ಲಿ ಭಾರತೀಯ ಹರ್ಪಿಟಾಲಜಿಸ್ಟ್ ರೊಮುಲಸ್ ವಿಟೇಕರ್ ಸ್ಥಾಪಿಸಿದರು. ಸಂಶೋಧನಾ ಕೇಂದ್ರದಲ್ಲಿ ಕಿಂಗ್ ಕೋಬ್ರಾದ ಬಗ್ಗೆ ಅಧ್ಯಯನ ಮಾಡಲಾಗುತ್ತದೆ. ಜೊತೆಗೆ ಅವುಗಳನ್ನು ಟ್ರ್ಯಾಕ್ ಮಾಡಲಾಗುತ್ತದೆ.
ಸಂಶೋಧನಾ ಕೇಂದ್ರದಲ್ಲಿ ಅತಿಥಿಗಳಿಗಾಗಿ 2 ಕಾಟೇಜ್'ಗಳಿವೆ. ಆಗುಂಬೆಯ ಸುತ್ತ ಮುತ್ತಲಿನ ಪ್ರದೇಶಗಳು ಹೆಚ್ಚು ಜಿಗಣೆಗಳಿಂದ ಮುತ್ತಿಕೊಂಡಿರುತ್ತದೆ. ಆದ್ದರಿಂದ ಒಂದು ಜೋಡಿ ಲೀಚ್ ಸಾಕ್ಸ್ ಖರೀದಿಸಲು ಮರೆಯಬೇಡಿ. ಸಂಶೋಧನಾ ಕೇಂದ್ರದಲ್ಲಿ ಮಳೆಕಾಡು ಮತ್ತು ಸಂರಕ್ಷಣೆಯ ಬಗ್ಗೆ ಉತ್ಸುಕರಾಗಿರುವ ಅತ್ಯಂತ ಡೆಡಿಕೇಟೆಡ್ ಸಿಬ್ಬಂದಿಯನ್ನು ನಾವು ನೋಡಬಹುದು.

ಪ್ರವಾಸಿಗರನ್ನು ಆಕರ್ಷಿಸುವ ಕೆಸಿಆರ್‌ಇ
ಕಾಳಿಂಗ ಸೆಂಟರ್ ಫಾರ್ ರೈನ್‌ಫಾರೆಸ್ಟ್ ಇಕಾಲಜಿ ಅಥವಾ ಕೆಸಿಆರ್‌ಇ ಹೆಚ್ಚಾಗಿ ಕಾಳಿಂಗ ಸರ್ಪದ ಮೇಲೆ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಆಗುಂಬೆಯ ಗುಡ್ಡುಕೆರೆ ಎಂಬ ಪುಟ್ಟ ಹಳ್ಳಿಯಲ್ಲಿರುವ ಕೆಸಿಆರ್‌ಇ ಹಾವಿನ ಬಗ್ಗೆ ಜನರಿಗೆ ಶಿಕ್ಷಣ ನೀಡುತ್ತದೆ. ಹರ್ಪಿಟಾಲಜಿಸ್ಟ್ ಆಗಿರುವ ಪಿ.ಗೌರಿ ಶಂಕರ್ ಅವರು ತಮ್ಮ ಪತ್ನಿ ಶರ್ಮಿಳಾ ಅವರೊಂದಿಗೆ ಇದನ್ನು ಸ್ಥಾಪಿಸಿದರು, ಕಾಳಿಂಗವನ್ನು ರಕ್ಷಿಸುವ ಈ ಸಂಸ್ಥೆ ಆಗುಂಬೆ ರಾಜ ಪರಂಪರೆಯನ್ನು ಉಳಿಸಲು ಸಹಾಯ ಮಾಡುತ್ತಿದೆ.
ಕಾಳಿಂಗ ವೀಕ್ಷಣೆ ಮತ್ತು ವನ್ಯಜೀವಿ ವೀಕ್ಷಣೆಯ ಚಾರಣಗಳಿಗಿಂತ ಭಿನ್ನವಾಗಿ ಕೆಸಿಆರ್‌ಇ ಕಾರ್ಯಕ್ರಮಗಳು ಹೆಚ್ಚಿನ ಶೈಕ್ಷಣಿಕ ಅನುಭವವನ್ನು ನೀಡುತ್ತದೆ. ಜೊತೆಗೆ ಜಗತ್ತಿನಾದ್ಯಂತ ಪ್ರವಾಸಿಗರನ್ನು ಆಕರ್ಷಿಸಿದೆ. ಈ ಸಂಸ್ಥೆಯು ವರ್ಷಗಳಲ್ಲಿ ಸಾವಿರಾರು ಕಿಂಗ್ ಕೋಬ್ರಾಗಳನ್ನು ರಕ್ಷಿಸಿ ಸ್ಥಳಾಂತರಿಸಿದೆ. ಕೆಸಿಆರ್‌ಇ ಹಾವುಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ, ಹಾವುಗಳನ್ನು ಕೊಲ್ಲುವ ಬದಲು ರಕ್ಷಣೆ ಮಾಡಲು ಸ್ಥಳೀಯ ಜನರಲ್ಲಿ ವಿಶ್ವಾಸವನ್ನು ತುಂಬುತ್ತಿದೆ.

ಕಾಳಿಂಗ ಮಾತ್ರವಲ್ಲ, ಈ ಪ್ರಾಣಿಗಳೂ ಇವೆ
ಆಗುಂಬೆ ಅತ್ಯಂತ ವೈವಿಧ್ಯಮಯ ಪ್ರಾಣಿ ಪ್ರಭೇದಗಳಿಗೆ ನೆಲೆಯಾಗಿದೆ. ಇದು ಸಿಂಹ-ಬಾಲದ ಮಕಾಕ್‌ಗಳು, ಬಂಗಾಳ ಹುಲಿಗಳು, ಚಿರತೆಗಳು, ಸಾಂಬಾರ್ ಜಿಂಕೆ, ದೈತ್ಯ ಅಳಿಲು, ಧೋಲೆ (ಭಾರತೀಯ ಕಾಡು ನಾಯಿ), ಗೌರ್ (ಭಾರತೀಯ ಕಾಡೆಮ್ಮೆ) ಮತ್ತು ಬಾರ್ಕಿಂಗ್ ಡೀರ್'ಗಳು ಇಲ್ಲಿದೆ.

ಏನೆನೆಲ್ಲಾ ನೋಡಬಹುದು ಗೊತ್ತಾ?
ಆಗುಂಬೆಗೆ ಬಂದಾಗ ಸೂರ್ಯಾಸ್ತವನ್ನು ನೋಡುವುದುನ್ನು ಮರೆಯದಿರಿ. ಸೂರ್ಯಾಸ್ತ ನೋಡದೆ ಹೋದರೆ ಆಗುಂಬೆ ಪ್ರವಾಸ ಅಪೂರ್ಣ ಎಂದು ಹೇಳಲಾಗುತ್ತದೆ. ಸನ್‌ಸೆಟ್ ಪಾಯಿಂಟ್ ನೋಡಲು ಆಗುಂಬೆಯಿಂದ 10 ನಿಮಿಷವಾಗುತ್ತದೆ. ಆಗುಂಬೆ ಪಶ್ಚಿಮ ಘಟ್ಟಗಳಲ್ಲಿನ ಅತಿ ಎತ್ತರದ ಶಿಖರವಾಗಿದೆ. ಹೊಯ್ಸಳರ ಕಾಲದ 14 ನೇ ಶತಮಾನದ ಗೋಪಾಲಕೃಷ್ಣ ದೇವಾಲಯವು ಆಗುಂಬೆಯ ಮತ್ತೊಂದು ಜನಪ್ರಿಯ ಸ್ಥಳವಾಗಿದೆ. ನೆಲಮಾಳಿಗೆಯಿಂದ ಗರ್ಭ ಗೃಹಕ್ಕೆ 108 ಮೆಟ್ಟಿಲುಗಳಿವೆ. ಇದು ಶ್ರೀಕೃಷ್ಣನ 108 ಹೆಸರುಗಳನ್ನು ಸಂಕೇತಿಸುತ್ತದೆ.
ಹಾಗೆಯೇ ಬರ್ಕಣ ಜಲಪಾತಕ್ಕೆ ನೀವು ಟ್ರೆಕ್ಕಿಂಗ್ ಕೂಡ ಹೋಗಬಹುದು. ಇದು ಆಗುಂಬೆಯಿಂದ ಕೇವಲ 7 ಕಿ.ಮೀ ದೂರದಲ್ಲಿದೆ. ಮಳೆಕಾಡಿನಲ್ಲಿರುವ ಮತ್ತೊಂದು ಜಲಪಾತ ಜೋಗಿ ಗುಂಡಿ. ಇತರ ಜಲಪಾತಗಳಂತೆ, ಇದು ಎತ್ತರದಿಂದ ಬೀಳುವುದಿಲ್ಲ. ಜಲಪಾತವು ಮುಖ್ಯ ಪಟ್ಟಣದಿಂದ ಸುಮಾರು 4 ಕಿಮೀ ದೂರದಲ್ಲಿದೆ. ಒನಕೆ ಅಬ್ಬಿ ಜಲಪಾತವು ಕೂಡ ಆಗುಂಬೆ ಗ್ರಾಮದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದು, ಪಶ್ಚಿಮ ಘಟ್ಟಗಳ ಅಂಚಿನಲ್ಲಿದೆ. ಬೇಸರದ ಸಂಗತಿಯೆಂದರೆ ಇದು ಬೇಸಿಗೆಯಲ್ಲಿ ಸಂಪೂರ್ಣವಾಗಿ ಒಣಗುತ್ತದೆ. ಆದ್ದರಿಂದ ಇದನ್ನು ನೋಡಲು ಉತ್ತಮ ಸಮಯವೆಂದರೆ ಚಳಿಗಾಲದ ತಿಂಗಳುಗಳು.

ಈ ಸಮಯದಲ್ಲಿ ಹೊರಡಿ
ನವೆಂಬರ್ ನಿಂದ ಫೆಬ್ರವರಿವರೆಗೆ ಆಗುಂಬೆಗೆ ಭೇಟಿ ನೀಡುವುದು ಉತ್ತಮ. ಇಲ್ಲಿಗೆ ಬಸ್ ಅಥವಾ ಕಾರಿನಲ್ಲಿ ಬರಬಹುದು. ಇಲ್ಲಿಂದ ಹತ್ತಿರದ ವಿಮಾನ ನಿಲ್ದಾಣವೆಂದರೆ ಸುಮಾರು 95 ಕಿಮೀ ದೂರದಲ್ಲಿರುವ ಮಂಗಳೂರು ವಿಮಾನ ನಿಲ್ದಾಣ. ಹತ್ತಿರದ ರೈಲುಮಾರ್ಗವು ಉಡುಪಿ ರೈಲು ನಿಲ್ದಾಣ. ಇದು ಸುಮಾರು 50 ಕಿಮೀ ದೂರದಲ್ಲಿದೆ. ನೀವು ಶಿವಮೊಗ್ಗ ಮಾರ್ಗವಾಗಿಯೂ ಈ ಸ್ಥಳಕ್ಕೆ ಭೇಟಿ ನೀಡಬಹುದು.


Click it and Unblock the Notifications

















