ಮಂಡ್ಯ ಜಿಲ್ಲೆಯು ಸಾಕಷ್ಟು ಆಕರ್ಷಕ ಪ್ರೇಕ್ಷಣೀಯ ಸ್ಥಲಗಳಿಂದ ಕೂಡಿದೆ. ಈ ಜಿಲ್ಲೆಯಲ್ಲಿರುವ ಪಾಂಡವಪುರವೂ ಸಹ ಪ್ರವಾಸ ಮಾಡಲು ಯೋಗ್ಯವಾದ ಸ್ಥಳವಾಗಿದೆ. ಇದು ಮಂಡ್ಯ ನಗರದ ಪಶ್ಚಿಮಕ್ಕೆ ಸುಮಾರು 30 ಕಿ.ಮೀ ಗಳಷ್ಟು ದೂರದಲ್ಲಿದೆ. ಏರಿಳಿತಗಳಿಂದ ಕೂಡಿದ ಬೆಟ್ಟಗಳಿಂದ ಸುತ್ತುವರೆದಿರುವ ಇದರ ಪೂರ್ವ ಮತ್ತು ಉತ್ತರ ಭಾಗಗಳು ಹಿರೋಡೆ (ಕುಂತಿ ಬೆಟ್ಟ)ಮತ್ತು ಮೇಲುಕೋಟೆ ಬೆಟ್ಟಗಳಿಂದ ಕೊಡಿದೆ.
ನಿಮಗಿಷ್ಟವಾಗಬಹುದಾದ : ಸಕ್ಕರೆ ನಾಡು ಮಂಡ್ಯದ ಬೆಲ್ಲದಂತಹ ಆಕರ್ಷಣೆಗಳು
ಇಲ್ಲಿ ಲೋಕಪಾವನಿ ನದಿ ಹರಿದಿದ್ದು ಮುಂದೆ ಇದು ದಕ್ಷಿಣಕ್ಕೆ ಕರೀಘಟ್ಟದ ಬಳಿ ಕಾವೇರಿನದಿಯನ್ನು ಸೇರಿಕೊಳ್ಳುತ್ತದೆ. ಪಾಂಡವಪುರವನ್ನು ಮೊದಲಿಗೆ 'ಹಿರೋಡೆ' ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ದಂತಕಥೆಯ ಪ್ರಕಾರ, ಹಿಂದೆ ಇಲ್ಲಿನ ಕುಂತಿ ಬೆಟ್ಟದಲ್ಲಿ ಬಕಾಸುರ ರಾಕ್ಷಸ ವಾಸಿಸುತ್ತಿದ್ದ. ಅವನಿಗೆ ಚಿಕ್ಕಾಡೆಯಿಂದ ಚಿಕ್ಕ ಎಡೆ (ಆಹಾರ) ಹೋದರೆ ಪಾಂಡವಪುರದಿಂದ ಹಿರಿ ಎಡೆ ಹೋಗುತ್ತಿತ್ತು.

ಚಿತ್ರಕೃಪೆ: Shyamal
ಹೀಗೆ ಹಿರೆ ಎಡೆ ಇಲ್ಲಿಂದ ಹೊಗುತ್ತಿದ್ದುದರಿಂದ ಇದಕ್ಕೆ ಹಿರೋಡೆ ಎಂಬ ಹೆಸರು ಬಂದಿತ್ತೆನ್ನಲಾಗಿದೆ. ಕಡೆಗೆ ಪಾಂಡವರು ತಮ್ಮ ವನವಾಸದ ಸಂದರ್ಭದಲ್ಲಿ ಇಲ್ಲಿಗೆ ಬಂದಿದ್ದಾಗ ಬಕಾಸುರನ ಕುರಿತು ತಿಳಿದು ಅದಕ್ಕೆ ಪರಿಹಾರವಾಗಿ ಭೀಮನು ಬಕಾಸುರನಿದ್ದ ಬೆಟ್ಟಕ್ಕೆ ತೆರಳಿ ಅವನನ್ನು ವಧಿಸಿ ಜನರನ್ನು ಕಷ್ಟದಿಂದ ಪಾರುಮಾಡಿದ್ದ. ಹೀಗೆ ಪಾಂಡವರ ಹಿನ್ನಿಲೆಯ ಕಾರಣ 1947 ರ ಸಮಯದಲ್ಲಿ ಇದಕ್ಕೆ ಪಾಂಡವಪುರ ಎಂಬ ಹೆಸರು ಬಂತು.

ಚಿತ್ರಕೃಪೆ: Rameshbabukv
ಮೇಲುಕೋಟೆ ಪಾಂಡವಪುರದಿಂದ 28 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಧಾರ್ಮಿಕ ಪ್ರವಾಸಿ ಆಕರ್ಷಣೆಯ ಕ್ಷೇತ್ರ. ಹಿಂದೆ ದ್ವಾಪರ ಯುಗದಲ್ಲಿ ಯಾದವರು ಹಾಗೂ ಕೃಷ್ಣ ನಾರಾಯಣನನ್ನು ಇಲ್ಲಿ ಪೂಜಿಸಿದ್ದರಿಂದ ಮುಂದೆ ಅಂದರೆ ಇಂದಿಗೆ 900 ವರ್ಷಗಳ ಹಿಂದೆ ರಾಮಾನುಜಾಚಾರ್ಯರು ಇಲ್ಲಿನ ದೇವಾಲಯ, ಕಲ್ಯಾಣಿಗಳನ್ನು ಜೀರ್ಣೋದ್ಧಾರ ಮಾಡಿದರು. ನಂತರ ಇದಕ್ಕೆ ಯದು-ಶೈಲ ಎಂದು ಕರೆಯಲಾಯಿತು.

ಚಿತ್ರಕೃಪೆ: ಸಂದೀಪ್ ಮಂಡ್ಯ
ಮೇಲುಕೋಟೆಯಲ್ಲಿ ಪ್ರಮುಖವಾಗಿ ಚೆಲುವ ನಾರಾಯಣಸ್ವಾಮಿ ಹಾಗೂ ಯೋಗನರಸಿಂಹಸ್ವಾಮಿ ದೇವಾಲಯಗಳನ್ನು ನೋಡಬಹುದು. ಚೆಲುವನಾರಾಯಣನ ದೇಗುಲ ಮೇಲುಕೋಟೆ ಗ್ರಾಮದಲ್ಲಿದ್ದರೆ ಇಲ್ಲಿನ ಬೆಟ್ಟದ ಮೇಲೆ ಯೋಗನರಸಿಂಹಸ್ವಾಮಿಯ ದೇವಾಲಯವಿದೆ. ಪ್ರತಿ ವರ್ಷ ಮಾರ್ಚ್ ತಿಂಗಳಿನಲ್ಲಿ ಇಲ್ಲಿ ಪ್ರಖ್ಯಾತ ವೈರಮುಡಿ ಉತ್ಸವವು ಚೆಲುವ ನಾರಾಯಣಸ್ವಾಮಿಗೆ ನಡೆಯುತ್ತದೆ.

ಚಿತ್ರಕೃಪೆ: ಸಂದೀಪ್ ಮಂಡ್ಯ
ಮೇಲುಕೋಟೆ ಬೆಟ್ಟಕ್ಕೆ ಹೊಂದಿಕೊಂಡಂತೆ ಕೆರೆತೊಣ್ಣೂರು ಎಂಬ ಆಕರ್ಷಕ ಸ್ಥಳವೊಂದನ್ನು ಇಲ್ಲಿ ಕಾಣಬಹುದು. ತೊಣ್ಣೂರು ಕೆರೆ ಎಂತಲೂ ಕರೆಯಲಾಗುವ ಈ ಕೆರೆಯನ್ನು ರಾಮಾನುಜಾಚಾರ್ಯರು ನಿರ್ಮಿಸಿದರು ಎಂಬ ಪ್ರತೀತಿಯಿದೆ. ಇನ್ನೊಂದು ಕಥೆಯಂತೆ ಸಾವಿರ ಜೈನ ಯತಿಗಳನ್ನು ವಾದದಲ್ಲಿ ರಾಮಾನುಜರು ಸೋಲಿಸಿದ್ದು ಇದೆ ಸ್ಥಳದಲ್ಲಂತೆ. ಪ್ರಶಾಂತ ಪರಿಸರದ ಈ ಸ್ಥಳ ಅದ್ಭುತ ಅನುಭವ ನೀಡುತ್ತದೆ.

ಚಿತ್ರಕೃಪೆ: ಸಂದೀಪ್ ಮಂಡ್ಯ
ಪಾಂಡವಪುರದಲ್ಲಿ ನೋಡಬಹುದಾದ ಇನ್ನೊಂದು ಆಕರ್ಷಕ ಸ್ಥಳವೆಂದರೆ ಕುಂತಿ ಬೆಟ್ಟ. ಪಾಂಡವರು ತಮ್ಮ ಅಜ್ಞಾತವಾಸದ ಸಂದರ್ಭದಲ್ಲಿ ಇಲ್ಲಿ ನೆಲೆಸಿದ್ದರಿಂದ ಇದಕ್ಕೆ ಕುಂತಿ ಬೆಟ್ಟ ಎಂಬ ಹೆಸರು ಬಂದಿದೆ. ಅಲ್ಲದೆ ಇಲ್ಲಿಯೆ ಬಕಾಸುರನ ವಧೆಯಾಗಿದೆ ಎಂದು ನಂಬಲಾಗಿದೆ. ಅಲ್ಲದೆ ಟಿಪ್ಪು ಆಡಳಿತ ಸಮಯದಲ್ಲಿ ಫ್ರೆಂಚ್ ಸೈನಿಕರು ಇಲ್ಲಿ ಬೀಡು ಬಿಟ್ಟಿದ್ದರಿಂದ ಇದಕ್ಕೆ ಫ್ರೆಂಚ್ ರಾಕ್ಸ್ ಎಂದೂ ಸಹ ಕರೆಯಲಾಗುತ್ತದೆ.
ನಿಮಗಿಷ್ಟವಾಗಬಹುದಾದ : ಮೈಸೂರು ಹಾಗೂ ಸುತ್ತಮುತ್ತಲಿರುವ ಪ್ರೇಕ್ಷಣೀಯ ಸ್ಥಳಗಳು
ಪಾಂಡವಪುರದಿಂದ ಕೇವಲ 14 ಕಿ.ಮಿ ದೂರದಲ್ಲಿ ಕರಿಘಟ್ಟ ಎಂಬ ಸ್ಥಳವಿದ್ದು ಇಲ್ಲಿನ ಬೆಟ್ಟದ ಮೇಲೆ ದ್ರಾವಿಡ ವಿನ್ಯಾಸದಲ್ಲಿ ನಿರ್ಮಿಸಲಾದ ಶ್ರೀ ವೆಂಕಟೇಶ್ವರನ ದೇವಸ್ಥಾನವಿದೆ. ಬೆಂಗಳೂರಿನಿಂದ 161 ಕಿ.ಮೀ ಗಳಷ್ಟು ದೂರವಿರುವ ಪಾಂಡವಪುರಕ್ಕೆ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ದೊರೆಯುತ್ತವೆ ಅಲ್ಲದೆ, ಬೆಂಗಳೂರಿನಿಂದ ಉತ್ತಮವಾದ ರೈಲಿನ ಸಂಪರ್ಕವೂ ಇದೆ.


Click it and Unblock the Notifications
















