ಹಿಂದುಗಳ ಪಾಲಿಗೆ ಶಕ್ತಿಪೀಠಗಳು ಮಹಾ ಶಕ್ತಿಶಾಲಿ ಕ್ಷೇತ್ರಗಳಾಗಿವೆ. ಶಕ್ತಿ ದೇವಿಯ ಅಂದರೆ ಪಾರ್ವತಿ ದೇವಿಯ ವಿವಿಧ ರೂಪಗಳನ್ನು ಅವತಾರಗಳನ್ನು ಶೃದ್ಧೆ-ಭಕ್ತಿಗಳಿಂದ ಪೂಜಿಸುವ ಕ್ಷೇತ್ರಗಳಾಗಿವೆ. ಪಿತಾನಿರ್ಣಯದಂತ ಕೃತಿಗಳಲ್ಲಿ 51 ಶಕ್ತಿಪೀಠಗಳ ಕುರಿತು ತಿಳಿಸಲಾಗಿದ್ದರೆ ಸಿವ ಪುರಾಣ, ಭಾಗವತದಂತಹ ಕೃತಿಗಳಲ್ಲಿ ನಾಲ್ಕು ಆದಿ ಶಕ್ತಿಪೀಠಗಳ ಕುರಿತು ಉಲ್ಲೇಖವಿದೆ.
ಪ್ರಸ್ತುತ ಲೇಖನದ ಮೂಲಕ ನಾಲ್ಕು ಆದಿ ಶಕ್ತಿಪೀಠಗಳ ಕುರಿತು ತಿಳಿಯಿರಿ. ಮಹಾ ಪ್ರಭಾವಿ ಕ್ಷೇತ್ರಗಳಾದ ಈ ಪೀಠಗಳಿಗೆ ತೆರಳಿದಾಗ ಭಕ್ತಿಯಿಂದ ಬೇಡಿದರೆ ಇಷ್ಟಾರ್ಥಗಳೆಲ್ಲವೂ ಸಿದ್ಧಿಸುತ್ತವೆ ಎನ್ನಲಾಗುತ್ತದೆ. ನಾಲ್ಕು ಆದಿ ಶಕ್ತಿಪೀಠಗಳೆಂದರೆ ಪದ್ಮ ಬಿಮಲಾ (ವಿಮಲಾ) ಪೀಠ, ತಾರಾ ತಾರಿಣಿ ಪೀಠ, ಕಾಮಾಖ್ಯ ಪೀಠ ಹಾಗೂ ದಕ್ಷಿಣ ಕಾಳಿಕಾ ಪೀಠ.
ಶಂಕರರು ಪಟ್ಟಿ ಮಾಡಿದ ಆ 18 ಮಹಾ ಶಕ್ತಿಪೀಠಗಳು
ಶಕ್ತಿಪೀಠದ ಪ್ರಮುಖ ಹಾಗೂ ಸಂಕ್ಷಿಪ್ತ ಹಿನ್ನಿಲೆ ಎಂದರೆ, ಶಿವನು ಸತಿದೇವಿಯ ಮೃತ ದೇಹವನ್ನು ಹಿಡಿದು ದುಖಾಗ್ನಿಗಳಿಂದ ನರ್ತಿಸುತ್ತಿದ್ದಾಗ ಅವನನ್ನು ಸಾಂತ್ವನಗೊಳಿಸುವ ದೃಷ್ಟಿಯಿಂದ, ಸತಿಯ ಮೃತ ದೇಹ ನೋಡಲು ಸಾಧ್ಯವಾಗದೆ ಇರೋ ತರಹ ಮಾಡುವುದಕ್ಕಾಗಿ ವಿಷ್ಣು ತನ್ನ ಸುದರ್ಶನ ಚಕ್ರ ಬಿಟ್ಟು ದೇಹದ ತುಂಡುಗಳನ್ನು ಮಾಡಿ ಬಿಸಾಕುವ ಆಜ್ಞೆ ನೀಡುತ್ತಾನೆ. ಅದೇ ರೀತಿಯಾಗಿ ಆ ದೇವಿಯ ದೇಹದ ಕತ್ತರಿಸಿದ ವಿವಿಧ ಭಾಗಗಳು ಒಂದೊಂದು ಸ್ಥಳದಲ್ಲಿ ಬಿದ್ದು ನಿರ್ಮಾಣವಾಗಿರುವುದೆ ಶಕ್ತಿಪೀಠಗಳು.

ಚಿತ್ರಕೃಪೆ: Sankarrukku
ಕಾಲಿಘಾಟ್ ಕಾಳಿ ದೇವಾಲಯ : ಕೊಲ್ಕತ್ತಾದ ಹೂಗ್ಲಿ ನದಿ ತಟದಲ್ಲಿರುವ ಕಾಲಿಘಾಟ್ ಪ್ರದೇಶದಲ್ಲಿರುವ ಕಾಳಿ ದೇವಿಯ ಈ ದೇವಾಲಯವು ಆದಿ ನಾಲ್ಕು ಶಕ್ತಿಪೀಠಗಳಲ್ಲಿ ಒಂದಾಗಿದೆ. ಪುರಾಣದಲ್ಲಿ ಉಲ್ಲೇಖಿಸಲಾಗಿರುವಂತೆ ಇಲ್ಲಿರುವ ಕಾಳಿ ದೇವಿಯು ಸತಿ ದೇವಿಯ ತುಂಡರಿಸಲಾದ ದೇಹದಲ್ಲಿ ಕಾಲ್ಬೆರಳುಗಳನ್ನು ಪ್ರತಿನಿಧಿಸುತ್ತದೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವಿಯ ದರ್ಶನ ಕೋರಿ ಇಲ್ಲಿಗೆ ಬರುತ್ತಾರೆ.

ಕಾಮಾಖ್ಯ ದೇವಾಲಯ, ಚಿತ್ರಕೃಪೆ: Kunal Dalui
ಕಾಮಾಖ್ಯ ಪೀಠ : ಆಸ್ಸಾಂ ರಾಜ್ಯದ ದೊಡ್ಡ ನಗರವಾದ ಗುವಾಹಟಿಯ ಪಶ್ಚಿಮ ಭಾಗದಲ್ಲಿರುವ ಕಾಮಾಖ್ಯ ದೇವಿಯ ದೇವಾಲಯವು ನಾಲ್ಕು ಆದಿ ಶಕ್ತಿಪೀಠಗಳ ಪೈಕಿ ಒಂದಾಗಿದೆ. ಕಾಮಾಖ್ಯ ದೇವಿಯ ಈ ಪೀಠವು ಸತಿಯ ಯೋನಿ ಬಿದ್ದ ಸ್ಥಳವನ್ನು ಪ್ರತಿನಿಧಿಸುತ್ತದೆ. ವಿಶೇಷವೆಂದರೆ ಇಲ್ಲಿ ದೇವಿಯ ಋತುಸ್ರಾವವನ್ನು ಉತ್ಸವವನ್ನಾಗಿ ವರ್ಷದಲೊಂದು ಬಾರಿ ಆಚರಿಸಲಾಗುತ್ತದೆ. ಇದೊಂದು ತಾಂತ್ರಿಕ ಶಕ್ತಿಗೆ ಪ್ರಸಿದ್ಧವಾಗಿರುವ ದೇವಾಲಯವೂ ಸಹ ಆಗಿದೆ.

ತಾರಾ ತಾರಿಣಿ ದೇವಾಲಯ, ಚಿತ್ರಕೃಪೆ: Jnanaranjan sahu
ತಾರಾ ತಾರಿಣಿ : ಒಡಿಶಾದ ಗಂಜಾಂ ಜಿಲ್ಲೆಯ ಬ್ರಹ್ಮಪುರ ಬಳಿಯ ಋಷಿಕುಲ್ಯಾ ನದಿ ತಟದಲ್ಲಿರುವ ಪೂರ್ಣಗಿರಿ ಬೆಟ್ಟದಲ್ಲಿರುವ ಮಾ ತಾರಾ ತಾರಿಣಿ ದೇವಿಯ ಈ ದೇವಾಲಯವು ಆದಿ ನಾಲ್ಕು ಮಹಾಶಕ್ತಿಪೀಠಗಳ ಪೈಕಿ ಒಂದಾಗಿದೆ. ಈ ಶಕ್ತಿಪೀಠವು ಸತಿ ದೇವಿ ದೇಹದ ಸ್ತನಗಳನ್ನು ಪ್ರತಿನಿಧಿಸುವ ಶಕ್ತಿಪೀಠವಾಗಿದೆ. ಹಿಂದು ಧರ್ಮದ ಶಾಕ್ತ ಪಂಥದವರ ಪರಮ ಪುಣ್ಯ ಕ್ಷೇತ್ರವಾಗಿ, ತಾಂತ್ರಿಕವಾಗಿ ಹೆಚ್ಚು ಆರಾಧಿಸಲ್ಪಡುವ ದೇವಾಲಯವಾಗಿ ತಾರಾ ತಾರಿಣಿ ದೇವಾಲಯವು ಗಮನಸೆಳೆಯುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಾಲಯಕ್ಕೆ ಪ್ರತಿನಿತ್ಯ ಭೇಟಿ ನೀಡುತ್ತಾರೆ.

ಜಗನ್ನಾಥ ದೇವಾಲಯ ಸಂಕೀರ್ಣ, ಚಿತ್ರಕೃಪೆ: Shiva-Nataraja
ವಿಮಲಾ ಖಂಡ ಶಕ್ತಿಪೀಠ : ಒಡಿಶಾದ ಜಗನ್ನಾಥ ಪುರಿಯಲ್ಲಿರುವ ಪ್ರಖ್ಯಾತ ಜಗನ್ನಾಥ ದೇವಾಲಯ ಸಂಕೀರ್ಣದಲ್ಲೆ ವಿಮಲಾ ದೇವಿಯ ಈ ಶಕ್ತಿಪೀಠವಿದೆ. ಇದು ಸತಿಯ ಕಾಲುಗಳು ಬಿದ್ದ ಸ್ಥಳವನ್ನು ಪ್ರತಿನಿಧಿಸುತ್ತದೆ. ವಿಶೇಷವೆಂದರೆ ಜಗನ್ನಾಥನಿಗೆ ಅರ್ಪಿಸಲಾದ ಪ್ರಸಾದವನ್ನು ವಿಮಲಾ ದೇವಿಗೆ ಅರ್ಪಿಸಿದ ನಂತರವೆ ಅದನ್ನು ಮಹಾಪ್ರಸಾದವನ್ನಾಗಿ ಪರಿಗಣಿಸಲಾಗುತ್ತದೆ.


Click it and Unblock the Notifications


















