ರಾಂಚಿ ಬೆಟ್ಟವು ರಾಂಚಿಯ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಈ ಬೆಟ್ಟದ ತುದಿಯಲ್ಲಿ ಒಂದು ಶಿವನ ದೇವಾಲಯವನ್ನು ನಾವು ಕಾಣಬಹುದು. ಈ ದೇವಾಲಯದಲ್ಲಿರುವ ಶಿವನಿಗೆ ತಮ್ಮ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವ ಸಲುವಾಗಿ ದೇಶದ ನಾನಾಮೂಲೆಗಳಿಂದ ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ. ಶ್ರಾವಣ ಮೇಳ ಉತ್ಸವದ ಸಂದರ್ಭದಲ್ಲಿ ಇಲ್ಲಿಗೆ ಭಕ್ತಾಧಿಗಳು ಸಾಗರೋಪಾದಿಯಲ್ಲಿ ಆಗಮಿಸುತ್ತಿರುತ್ತಾರೆ.
ಇದರ ಜೊತೆಗೆ ರಾಂಚಿಯ ಬೆಟ್ಟವು ತನ್ನಲ್ಲಿ ಕಾಣಸಿಗುವ ವಿಹಂಗಮ ನೋಟದ ಸಲುವಾಗಿ ಸಹ ಪ್ರವಾಸಿಗರನ್ನು ಬಹು ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ. ಈ ಬೆಟ್ಟದ ತಪ್ಪಲಿನಲ್ಲಿ ಒಂದು ಕೆರೆಯಿದೆ. ಇದನ್ನು ರಾಂಚಿ ಕೆರೆಯೆಂದು ಕರೆಯುತ್ತಾರೆ. ಈ ಕೆರೆಯು ಇಲ್ಲಿನ ಸೌಂದರ್ಯವನ್ನು ಇಮ್ಮಡಿಗೊಳಿಸುವಂತೆ ಮಾಡಿದೆ.
ರಾಂಚಿ ಬೆಟ್ಟಕ್ಕೆ ಈ ನಗರದ ಎಲ್ಲಾ ಮೂಲೆಗಳಿಂದ ಉತ್ತಮ ಸಂಪರ್ಕ ವ್ಯವಸ್ಥೆಯಿದೆ. ಅಲ್ಲದೇ ಈ ಸ್ಥಳವು ಚಾರಣ ಮತ್ತು ಪರ್ವತಾರೋಹಣಕ್ಕೆ ಹೇಳಿ ಮಾಡಿಸಿದ ತಾಣವಾಗಿ ಗುರುತಿಸಿಕೊಂಡಿದೆ. ಈ ಕಾರಣದಿಂದಾಗಿ ಹಲವಾರು ಸಾಹಸೀ ಮನೋಭಾವದ ಪ್ರವಾಸಿಗರು ರಾಂಚಿ ಬೆಟ್ಟದತ್ತ ಆಕರ್ಷಿತರಾಗುತ್ತಿರುತ್ತಾರೆ. ಸ್ಥಳೀಯ ಜನರು ಇದನ್ನು ವಿಹಾರ ತಾಣವಾಗಿ ಬಳಸಿಕೊಳ್ಳುತ್ತಾರೆ.


Click it and Unblock the Notifications