ಪ್ರತಾಪಘಡ್ - ಪ್ರವಾಸಿ ಪುಣ್ಯಧಾಮದ ಒಂದು ಇಣುಕು ನೋಟ.

ಪ್ರತಾಪಘಡ್ ಉತ್ತರ ಪ್ರದೇಶದ ಒಂದು ಜಿಲ್ಲೆಯಾಗಿದ್ದು, ತನ್ನ ಹೆಸರನ್ನು ಕೇಂದ್ರ ಕಾರ್ಯಸ್ಥಾನವಾದ "ಬೇಲ ಪ್ರತಾಪಘಡ್" ಎಂಬ ಪಟ್ಟಣದಿಂದ ಪಡೆದುಕೊಂಡಿದೆ.  ಸ್ಥಳೀಯ ಇತಿಹಾಸದ ಪ್ರಕಾರ, ಅದೇ ಸಂಸ್ಥಾನದ ರಾಜನಾದ ಅಜಿತ್ ಪ್ರತಾಪ್ ಸಿಂಗ್, ಅರೋರದ ಸಮೀಪದಲ್ಲಿರುವ  ರಾಂಪುರ ಎಂಬಲ್ಲಿ ತನ್ನ ಆಡಳಿತದ ಕೇಂದ್ರ ಸ್ಥಾನವನ್ನು ಹೊಂದಿದ್ದನು.  ತನ್ನ ಆಳ್ವಿಕೆಯ ಕಾಲದಲ್ಲಿ, ಈತನು ಕೋಟೆಯೊಂದನ್ನು ನಿರ್ಮಿಸಿ, ಅದಕ್ಕೆ ತನ್ನದೇ ಹೆಸರನ್ನೊಳಗೊಂಡಂತೆ, ಪ್ರತಾಪಘಡ್ ಎಂದು ನಾಮಕರಣ ಮಾಡಿದನು.  ಮುಂದೆ 1858 ರಲ್ಲಿ ಪ್ರತಾಪಘಡ್ ಜಿಲ್ಲೆಯು ನಿರ್ಮಾಣಗೊಂಡಾಗ, ಆ ಜಿಲ್ಲೆಗೆ "ಬೇಲಾ ಪ್ರತಾಪಘಡ್" ಎಂದು ಹೆಸರಿಸಲಾಯಿತು.  ಬೇಲ ಎಂಬುದು, ಸಾಯಿ ನದಿ ತೀರದಲ್ಲಿರುವ ಬೇಲಾ ಭವಾನಿ ದೇವಾಲಯವನ್ನು ಸೂಚಿಸುತ್ತದೆ.

ಪ್ರತಾಪಘಡ್ ನ ಸುತ್ತಮುತ್ತಲ ಪ್ರವಾಸಿ ತಾಣಗಳು

ಪ್ರತಾಪಘಡ್ ಜಿಲ್ಲೆಯು, ರಾಮಾಯಣ, ಮಹಾಭಾರತದಂತಹ ಪೌರಾಣಿಕ ಕಾಲದಲ್ಲಿಯೂ ಸಹ ತನ್ನ ಮೂಲವನ್ನು ಹೊಂದಿದೆ.  ಭಗವಾನ್ ಶ್ರೀ ರಾಮಚಂದ್ರನು ಪ್ರತಾಪಘಡ್ ಅನ್ನು ಸಂದರ್ಶಿಸಿದ್ದು, ಬೇಲಾ ಭವಾನಿ ಮಂದಿರವಿರುವ ಸ್ಥಳದಲ್ಲಿ ಪೂಜೆಯನ್ನು ಕೈಗೊಂಡಿದ್ದನು ಎಂದು ನಂಬಲಾಗಿದೆ.  ಭಯಹರನಾಥ ಧಾಮವು ಮಹಾಭಾರತದಲ್ಲಿ ಉಲ್ಲೇಖಿತವಾಗಿದೆ.  ಪುರಾಣದ ಪ್ರಕಾರ, ಪಂಚ ಪಾಂಡವರಲ್ಲಿ ಎರಡನೆಯವನಾದ ಭೀಮಸೇನನು ಅಸುರನಾದ ಬಕಾಸುರನನ್ನು ಕೊಂದು, ಈ ಧಾಮದಲ್ಲಿ ಶಿವಲಿಂಗವನ್ನು ಸ್ಥಾಪಿಸಿದ್ದನು.

ಪ್ರತಾಪಘಡ್ ನಲ್ಲಿ ಹರಿಯುವ ಸಾಯಿ ನದಿಯು, ಹಿಂದೂಗಳಿಗೆ ಪವಿತ್ರ ನದಿಯಾಗಿದ್ದು, ಇಲ್ಲಿ ಪವಿತ್ರ ಸ್ನಾನಗೈಯಲು ಸಹಸ್ರಾರು ಯಾತ್ರಾರ್ಥಿಗಳು ಇಲ್ಲಿಗೆ ಆಗಮಿಸುತ್ತಾರೆ.  ಹಿಂದೂಗಳಿಗೆ ಮಾತ್ರವಲ್ಲದೇ, ಪ್ರತಾಪಘಡ್ ಬೌಧ್ಧರಿಗೂ ಆಕರ್ಷಣೀಯವಾಗಿದ್ದು ಇಲ್ಲಿನ "ಕೋಟ್" ಎಂಬ ಸನ್ಯಾಸಿ ಮಠವನ್ನು ಸಂದರ್ಶಿಸಲು ಅವರು ಬರುತ್ತಾರೆ.

ಪ್ರತಾಪಘಡ್ ಅನ್ನು ಸಂದರ್ಶಿಸಲು ಅತಿ ಪ್ರಶಸ್ತ ಕಾಲ

ಅಕ್ಟೋಬರ್ ನಿಂದ ಮಾರ್ಚ್ ತಿಂಗಳವರೆಗಿನ ಅವಧಿಯು ಸಂದರ್ಶಿಸಲು ಅತಿ ಸೂಕ್ತ ಕಾಲವಾಗಿರುತ್ತದೆ.  ವರ್ಷದ ಇತರ ಕಾಲಾವಧಿಯಲ್ಲಿ ವಾತಾವರಣವು ಅತಿ ಉಷ್ಣಾಂಶದಿಂದ ಕೂಡಿದ್ದು, ಒಣ ಹವೆಯಿರುತ್ತದೆ.

Please Wait while comments are loading...