ಇಂದು ಮಂಗಳವಾರ ಮುಂಜಾನೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದ ನಂತರ ಜಿಲ್ಲಾಡಳಿತವು ಅಕ್ಟೋಬರ್ 16 , ಬುಧವಾರದಂದು ಶಾಲೆಗಳಿಗೆ ರಜೆ ಘೋಷಿಸಿದೆ. ಅಲ್ಲದೆ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತೆ ಸೂಚಿಸಿದೆ. ಈ ಸೂಚನೆಗಳನ್ನು ಅನುಸರಿಸಿ ಅನೇಕ ಕಂಪನಿಗಳು ನಾಳೆ ವರ್ಕ್ ಫ್ರಂ ಅನ್ನು ಘೋಷಿಸಿವೆ.
ಭಾರತ ಹವಾಮಾನ ಇಲಾಖೆ ಅಧಿಕಾರಿಗಳ ಪ್ರಕಾರ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ದಕ್ಷಿಣ ಭಾರತದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಶುಷ್ಕ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ. ಮುಂದಿನ ಮೂರ್ನಾಲ್ಕು ದಿನಗಳ ಕಾಲ ಪರಿಸ್ಥಿತಿ ಇದೇ ರೀತಿ ಮುಂದುವರಿಯಬಹುದು.

ಮಂಗಳವಾರ ಬೆಳಗ್ಗೆಯಿಂದಲೇ ಬೆಂಗಳೂರಿನ ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು. ಅಂದಹಾಗೆ ಕಳೆದ 24 ಗಂಟೆಗಳಲ್ಲಿ ನಗರದಲ್ಲಿ 16 ಮಿ.ಮೀ ಮಳೆ ದಾಖಲಾಗಿದೆ. ಐಎಂಡಿ ಯೆಲ್ಲೋ ಅಲರ್ಟ್ ಸಹ ಘೋಷಿಸಿರುವುದರಿಂದ ಮಳೆಯು ದೈನಂದಿನ ಜೀವನಕ್ಕೆ ಅಡ್ಡಿಪಡಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಶಾಲೆಗಳಿಗೆ ಜಿಲ್ಲಾಡಳಿತ ಅಧಿಸೂಚನೆ ಹೊರಡಿಸಿದ್ದು, ಅಧಿಸೂಚನೆಯ ಪ್ರಕಾರ ಸುರಕ್ಷತಾ ದೃಷ್ಟಿಯಿಂದ ನಾಳೆ ಅಕ್ಟೋಬರ್ 16 ರಂದು ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುವುದು. ಹಾಗೆಯೇ ವಾಲ್ಮೀಕಿ ಜಯಂತಿ ಪ್ರಯುಕ್ತ ಅಕ್ಟೋಬರ್ 17ರ ಗುರುವಾರವೂ ಶಾಲೆಗಳಿಗೆ ರಜೆ ನೀಡಲಾಗಿದೆ.
ಬೆಂಗಳೂರು ನಗರ ಡಿಸಿ ಜಗದೀಶ ಅವರು ಹೊರಡಿಸಿರುವ ಪತ್ರದಲ್ಲಿ ಕಂಪನಿಗಳಿಗೆ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತೆ ಸೂಚಿಸಲಾಗಿದೆ. ಈ ಅಧಿಸೂಚನೆಯ ಅನುಸಾರ ವೆರ್ಸ್ ಇನ್ನೋವೇಶನ್, ಗ್ರೇನಿಯಮ್ ಇನ್ಫಾರ್ಮೇಷನ್ ಟೆಕ್ನಾಲಜೀಸ್ ಸೇರಿದಂತೆ ಹಲವು ಕಂಪನಿಗಳು ಬೆಂಗಳೂರಿನಲ್ಲಿರುವ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ (WFH) ಅನ್ನು ಘೋಷಿಸಿವೆ.
ಕರ್ನಾಟಕ ಕರಾವಳಿಯ ಜೊತೆಗೆ ತುಮಕೂರು, ಮೈಸೂರು, ಕೊಡಗು, ಚಿಕ್ಕಮಗಳೂರು, ಹಾಸನ, ಕೋಲಾರ, ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿಯೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅಷ್ಟೇ ಅಲ್ಲ, ಈ ನಗರಗಳಲ್ಲಿ 6 ಸೆಂ.ಮೀ ಮತ್ತು 11 ಸೆಂ.ಮೀ ನಡುವೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ.


Click it and Unblock the Notifications

















