ಕೊಚ್ಚಿಯಲ್ಲಿರುವ ಹಲವಾರು ಕಡಲತೀರಗಳ ಪೈಕಿ ಚೇರೈ ಕಡಲ ತೀರವೂ ಒಂದಾಗಿದೆ. ಕೊಚ್ಚಿ ಕೇಂದ್ರ ಸ್ಥಾನದಿಂದ 25 ಕಿ.ಮೀ ದೂರದಲ್ಲಿರುವ ಈ ಕಡಲತೀರ ವಿಹಾರಕ್ಕೆ ಅತ್ಯುತ್ತಮವಾಗಿದೆ. ಇಲ್ಲೇ ಸಮೀಪದಲ್ಲಿ ವೈಪೀನ್ ದ್ವೀಪವೂ ಇದ್ದು ಇಲ್ಲಿ ಸೂರ್ಯೋದಯ, ಸೂರ್ಯಾಸ್ಥಗಳನ್ನು ನೋಡುವುದೇ ಒಂದು ಸೊಬಗು. ಈ ಹೊತ್ತಿನಲ್ಲಿ ಭಾರೀ ಜನಜಂಗುಳಿಯೇ ನೆರೆದಿರುತ್ತದೆ ಇಲ್ಲಿ. ಹತ್ತಾರು ಉತ್ತಮ ರೆಸ್ಟೋರೆಂಟ್ ಗಳು ಇಲ್ಲಿದ್ದು, ಈಗಷ್ಟೇ ಹಿಡಿದು ತಂದ ಕಡಲ ಜೀವಿಗಳ ರುಚಿಕಟ್ಟಾದ ಖಾದ್ಯಗಳು ಇಲ್ಲಿ ಸಿಗುತ್ತವೆ. ಮೀನು, ಸೀಗಡಿ, ಹಾಗೂ ಸಮುದ್ರ ಏಡಿಗಳ ತಿಂಡಿಗಳು ನಿಮ್ಮ ಬಾಯಲ್ಲಿ ನೀರೂರಿಸುತ್ತವೆ. ಈ ತಾಜಾ ತಿಂಡಿಗಳನ್ನು ಆಸ್ವಾದಿಸುವ ಸಲುವಾಗಿಯೇ ಎಷ್ಟೊ ಜನ ಇಲ್ಲಿಗೆ ಆಗಮಿಸುತ್ತಾರೆ.
ಇಲ್ಲಿನ ಕಡಲತಡಿಯಲ್ಲಿ ಅಲೆಗಳ ಉಬ್ಬರ ಹೆಚ್ಚಾಗಿ ಇರುವುದರಿಂದ ಎಚ್ಚರಿಕೆಯಿಂದ ಹೆಜ್ಜೆ ಎತ್ತಿಡದಿದ್ದರೆ ಅಪಾಯಗಳೂ ಉಂಟು. ಇಲ್ಲಿನ ಮತ್ತೊಂದು ವಿಶೇಷವೆಂದರೆ, ಮದ್ಯಪಾನವನ್ನು ನಿಷೇಧಿಸಲಾಗಿದೆ. ಹಾಗೇನಾದರೂ ಕದ್ದು ಮುಚ್ಚಿ ಕುಡಿಯುತ್ತಾ ಸಿಕ್ಕಿಬಿದ್ದರೆ ಭಾರಿ ಪ್ರಮಾಣದ ದಂಡ ಹಾಗೂ ಶಿಕ್ಷೆಗೂ ಗುರಿಯಾಗಬೇಕಾದೀತು. ಬಿಗಿಯಾದ ಪೊಲೀಸ್ ಪಹರೆಯೂ ಇರುವುದರಿಂದ ನೀವು ಅಂಕೆ ಮೀರಲು ಅವಕಾಶ ಕಡಿಮೆ ಬಿಡಿ!


Click it and Unblock the Notifications