ಕಾಳಹಸ್ತಿ: ಪವಿತ್ರ ಭೂಮಿ

ಆಂಧ್ರಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಯ ಸಮೀಪವವೇ ಇರುವ ಇನ್ನೊಂದು ಪ್ರಮುಖ ಧಾರ್ಮಿಕ ಶ್ರದ್ಧಾಭಕ್ತಿಯ ಕೇಂದ್ರ ಕಾಳಹಸ್ತಿ. ಶ್ರೀ ಕಾಳಹಸ್ತಿ ಎಂತಲೂ ಇದನ್ನು ಕರೆಯುತ್ತಾರೆ.ಸ್ವರ್ಣಮುಖಿ ನದಿಯ ದಡದಲ್ಲಿರುವ ಈ ಕ್ಷೇತ್ರ ಭಾರತದ ಪವಿತ್ರ ಕ್ಷೇತ್ರಗಳ ಪೈಕಿ ಅತೀ ಮಹತ್ವವುಳ್ಳದ್ದಾಗಿದ್ದು, ಪ್ರತೀ ವರ್ಷ ಲಕ್ಷಾಂತರ ಭಕ್ತರನ್ನು, ಪ್ರವಾಸಿಗರನ್ನು ಸೆಳೆಯುತ್ತದೆ.

ಶ್ರೀ, ಕಾಳ ಮತ್ತು ಹಸ್ತಿ ಮೂರು ಪದಗಳು ಸೇರಿ ಈ ಪ್ರದೇಶದ ಹೆಸರು ಬಂದಿದ್ದು, ಶ್ರೀ ಅಂದರೆ ಜೇಡ, ಕಾಳ ಅಂದರೆ ಸರ್ಪ, ಹಸ್ತಿ ಅಂದರೆ ಆನೆ ಎಂದರ್ಥ ಬರುತ್ತದೆ. ಈ ಮೂರೂ ಪ್ರಾಣಿಗಳು ಶಿವನ ಮುಂದೆ ಮೋಕ್ಷಕ್ಕಾಗಿ ಮಾಡಿಕೊಂಡ ಪ್ರಾರ್ಥನೆಗೆ ಮೆಚ್ಚಿ ಭೂಲೋಕದಲ್ಲಿ ಪೂಜಿಸಲ್ಪಡುವಂತೆ ವರ ನೀಡಿದ. ಅದರ ಪರಿಣಾಮವಾಗಿ ಕಾಳಹಸ್ತಿ ದೇವಾಲಯದಲ್ಲಿ ಇವುಗಳನ್ನು ಸೂಚಿಸುವ ವಿಗ್ರಹವಿದ್ದು ಪೂಜಿಸಲ್ಪಡುತ್ತವೆ ಎಂಬ ನಂಬಿಕೆಯೂ ಇದೆ.

ಮುಖ್ಯ ದೇವಾಲಯದ ಮುಂಭಾಗದಲ್ಲಿ ಈ ಮೂರು ಪ್ರಾಣಿಗಳ ಪ್ರತಿಮೆಯನ್ನು ನಿಲ್ಲಿಸಲಾಗಿದ್ದು ಪೂಜೆ ಸಲ್ಲಿಸಲಾಗುತ್ತದೆ. ದಕ್ಷಿಣ ಭಾರತದ ಅಪೂರ್ವವಾದ ಶಿವನ ಶಕ್ತಿ ಕೇಂದ್ರ ಎಂದೇ ಕಾಳಹಸ್ತಿಯು ಕರೆಸಿಕೊಳ್ಳುತ್ತದೆ. ಪಂಚಭೂತದ ಆವಿರ್ಭವಿಸಿದ ಸ್ಥಳ ಇದು ಎಂಬ ನಂಬಿಕೆಯೂ ಇದೆ.

ಶ್ರೀಕಾಳಹಸ್ತಿಯ ಐತಿಹ್ಯ

ಒಂದು ಕಥೆಯ ಪ್ರಕಾರ ಶಿವ ವಾಯು ವೇಷ ಧರಿಸಿ ಜೇಡ, ಉರಗ ಮತ್ತು ಆನೆಗಳ ರೂಪದಲ್ಲಿ ಕಾಣಿಸಿಕೊಳ್ಳುತಾನೆಂದು ನಂಬಿ ಅವುಗಳನ್ನು ಪೂಜಿಸಲಾಗುತ್ತದೆ. ಇದು ಸ್ಥಳೀಯರ ದೇವರ ಮೇಲಿನ ಭಕ್ತಿಗೆ ಸಾಕ್ಷಿಯಾಗಿದ್ದಲ್ಲದೆ  ದೇವರು ಅವರ ಶಾಪಗಳನ್ನು ವಿಮೋಚಿಸಿ ಮುಕ್ತಿ ಮಾರ್ಗದಲ್ಲಿ ನಡೆಸಿಕೊಂಡು ಹೋಗುತಾನೆಂದು ನಂಬಲಾಗಿದೆ. ಸ್ಕಂದ ಪುರಾಣ, ಶಿವ ಪುರಾಣ ಮತ್ತು ಲಿಂಗ ಪುರಾಣಗಳಲ್ಲಿ ಕಾಳಹಸ್ತಿಯ ಹೆಸರನ್ನು ಉಲ್ಲೇಖಿಸಲಾಗಿದೆ. ಅರ್ಜುನನು ಕಾಳಹಸ್ತಿಶ್ವರನನ್ನು (ಶಿವ) ಪೂಜಿಸಲು ಈ ಸ್ಥಳಕ್ಕೆ ಬಂದು ಬೆಟ್ಟದ ತುದಿಯ ಮೇಲೆ ಋಷಿ ಭಾರದ್ವಾಜರನ್ನು ಭೇಟಿಯಾಗಿ ಅವರ ಸಮ್ಮುಖದಲ್ಲಿ ಪೂಜಿಸಿದ್ದರಿಂದ ಸ್ಕಂದ ಪುರಾಣದಲ್ಲಿ ಪ್ರಸಿದ್ಧಿಯಾಯಿತು. ಇಲ್ಲಿಯ ಮೊದಲ ಕಾವ್ಯದ ಉಲ್ಲೇಖ ಸಂಗ್ರಾಮರ ಆಳ್ವಿಕೆಯ ಸಮಯದಲ್ಲಿ ಕವಿ ನಕ್ಕೀರರ 3 ನೇ ಶತಮಾನದ ಕೃತಿಗಳಲ್ಲಿ ಕಾಣಬಹುದು. ಶ್ರೀಕಾಳಹಸ್ತಿಯ ಧೂರ್ಜಾತಿ ಎಂಬ ಪಟ್ಟಣದಲ್ಲಿ  ನೆಲೆಗೊಂಡ ಇವರು ಕಾಳಹಸ್ಥೀಶ್ವರನನ್ನು ಹೊಗಳಿ ನೂರು ಪ್ಯಾರಾಗಳಷ್ಟು ಪದ್ಯ ಬರೆದ ಖ್ಯಾತಿ ಈ ತೆಲುಗು ಕವಿಗೆ ಸೇರುತ್ತದೆ.

ಭಕ್ತ ಕಣ್ಣಪ್ಪ

ಭಕ್ತ ಕಣ್ಣಪ್ಪನ ಭಕ್ತಿಗೆ ಪ್ರಭಾವಿತನಾಗಿ ಶ್ರೀ ಭಗವಾನ್ ಶಂಕರನು ಪ್ರತ್ಯಕ್ಷನಾಗಿದ್ದನು, ಇದರಿಂದ ಈ ಸ್ಥಳದಲ್ಲಿ ಶಿವಾನಂದಲಹರಿಯನ್ನು ಸ್ಥಾಪಿಸಲಾಯಿತು ಎಂಬ ಪ್ರತೀತಿ ಇದೆ. ತನ್ನ ಕಣ್ಣುಗಳನ್ನೇ ನೀಡಿ ಶಿವನನ್ನು ಮೆಚ್ಚಿಸಿದ ಕಣ್ಣಪ್ಪನ ಅಪಾರ ಭಕ್ತಿಯನ್ನು ಮೆಚ್ಚಲೇಬೇಕು. ಹಿಂದೂ ಸಮುದಾಯದ ಶಿವನ ಆರಾಧಕರು ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಸಿಗುತ್ತಾರೆ.

ವಿಶಿಷ್ಟ ವಿನ್ಯಾಸಗಳ ದೇವಾಲಯಗಳು

ಪ್ರತಿವರ್ಷವೂ ಲಕ್ಷಗಟ್ಟಲೆ ಯಾತ್ರಾರ್ಥಿಗಳನ್ನು ಆಕರ್ಷಿಸುವ ಶ್ರೀಕಾಳಹಸ್ತಿಯು ಪ್ರಮುಖ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಶಿವ ಹಾಗೂ ವಿಷ್ಣುವಿನ ಮೂರ್ತಿಗಳು ಇಲ್ಲಿಯ ವಿಶಿಷ್ಟ ಆಕರ್ಷಣೆಗಳಾಗಿವೆ. ಕಾಳಹಸ್ತಿಯಲ್ಲಿ ಅನೇಕ ರಾಜವಂಶಗಳ ಆಳ್ವಿಕೆಯ ಅಡಿಯಲ್ಲಿ ನಿರ್ಮಿಸಿದ ಹಲವಾರು ದೇವಾಲಯಗಳು ಕಂಡುಬರುತ್ತವೆ, ಅಷ್ಟೆ ಅಲ್ಲದೆ ರಾಜರ ಆದ್ಯತೆಯ ಶೈಲಿಗೆ ಅನುಗುಣವಾಗಿ ವಾಸ್ತುಶಿಲ್ಪವನ್ನು ನಿರ್ಮಿಸಲಾಗುತ್ತಿತ್ತು.

ಚೋಳ, ಪಲ್ಲವ, ವಿಜಯನಗರ ಸಾಮ್ರಾಜ್ಯದ ರಾಜರ ಕಾಲದಲ್ಲಿ ನಿರ್ಮಿಸಲಾಗಿರುವ, ವಿವಿಧ ದೇವಾಲಯಗಳು ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ವಿಜಯನಗರ ಸಾಮ್ರಾಜ್ಯದ ರಾಜರ ಅರಮನೆಗಳ ವೈಭವಕ್ಕೆ ತಕ್ಕಂತೆ ದೇವಾಲಯಗಳು ನಿರ್ಮಿತವಾಗಿದ್ದವು. ಶ್ರದ್ಧಾಭಕ್ತಿ ಹಾಗೂ ಶಾಂತಿಯುತ ವಾತಾವರಣದಲ್ಲಿ ಪಟ್ಟಾಭಿಷೇಕಕ್ಕೆ ಇಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು ಎಂಬ ಪ್ರತೀತಿ ಇದೆ.

ರಾಜನಾದ ಅಚ್ಯುತಾರ್ಯನಿಂದ ನಿರ್ಮಿಸಲಾದ ನೂರು ಕಂಬಗಳ ವಿಶಿಷ್ಟ ಮಂಟಪವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರಸಿದ್ಧ ದೇವಾಲಯಗಳ ಪೈಕಿ ಶ್ರೀ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಭಾರದ್ವಾಜ ಕುಂಡ ತೀರ್ಥ, ಕಾಳಹಸ್ತಿ ದೇವಸ್ಥಾನ ಹಾಗೂ ಶ್ರೀ ದುರ್ಗಾ ದೇವಸ್ಥಾನಗಳು ಪ್ರಮುಖವಾಗಿದ್ದು ಪ್ರವಾಸಿಗರು ಮತ್ತು ಭಕ್ತರು ದೈವಿಕ ಪ್ರಯಾಣದ ಅನುಭವವನ್ನು ಪಡೆಯಬಹುದು.

ಕಾಳಹಸ್ತಿ ಭೇಟಿಗೆ ಸೂಕ್ತ ಸಮಯ

ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದ ಉಷ್ಣತೆ ಇರುವುದರಿಂದ ಈ ಸಮಯವು ಪ್ರವಾಸಕ್ಕೆ ಸೂಕ್ತ ಸಮಯವಾಗಿರುವುದಿಲ್ಲ. ಮಳೆಗಾಲ ಹಾಗೂ ಚಳಿಗಾಲವು ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

ಕಾಳಹಸ್ತಿ ತಲುಪುವುದು ಹೇಗೆ

ಕಾಳಹಸ್ತಿ ಯೋಗ್ಯ ಸಂಪರ್ಕವನ್ನು ಹೊಂದಿದ್ದು ರೈಲು ಮತ್ತು ರಸ್ತೆಯ ಮೂಲಕ ಸಾಗಬಹುದಾಗಿದೆ. ಸೊಗಸಾದ ವಾಸ್ತುಶೈಲಿ ಹಾಗು ಸುತ್ತಮುತ್ತಲಿನ ಹಸಿರುಗಳನ್ನು ನೋಡುತ್ತ ಕಣ್ಮನಗಳನ್ನು ತಣಿಸಿಕೊಳ್ಳಲು ನೆಚ್ಚಿನ ಸ್ಥಳವಾಗಿದೆ.

Please Wait while comments are loading...