ಶ್ರೀ ಉಜ್ಜೈನಿ ಮಹಾಕಾಳಿ ದೇವಾಲಯವು ಹೈದರಬಾದಿನ ಸಿಕಂದರಬಾದ್ ಪ್ರದೇಶದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಸುಮಾರು 200 ವರ್ಷಗಳಷ್ಟು ಹಳೆಯದು ಎಂದು ಭಾವಿಸಲಾಗಿದೆ. ಪ್ರತಿದಿನ ಇಲ್ಲಿ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಲು ನೂರಾರು ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ. ಈ ದೇವಾಲಯವನ್ನು ಶಕ್ತಿದೇವತೆಯಾದ ಮಹಾಕಾಳಿ ದೇವಿಗಾಗಿ ನಿರ್ಮಿಸಲಾಗಿದೆ. ಈ ದೇವಾಲಯವು ಅಷಾಢ ಮಾಸದಲ್ಲಿ ಬರುವ ಭಾನುವಾರ ಮತ್ತು ಸೋಮವಾರಗಳಂದು ನಡೆಯುವ ಅಷಾಢ ಜಾತರಗೆ ಭಾರಿ ಪ್ರಸಿದ್ಧಿಯನ್ನು ಪಡೆದಿದೆ. ಈ ಎರಡು ದಿನಗಳನ್ನು ಇಲ್ಲಿನ ದೇವಿಯನ್ನು ಪೂಜಿಸಲು ಅತ್ಯಂತ ಪವಿತ್ರವೆಂದು ಭಾವಿಸಲಾಗಿದೆ.ಬೊನಲು ಉತ್ಸವವನ್ನು ಇಲ್ಲಿ ಅತ್ಯಂತ ವೈಭವದಿಂದ ಹಾಗು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ.
ಈ ಉತ್ಸವವು ಹೈದರಬಾದ್ ಮತ್ತು ಸಿಕಂದರಬಾದ್‍ಗಳಲ್ಲಿ ಪ್ರತ್ಯೇಕವಾಗಿ ಆಚರಿಸಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ತೆಲಂಗಾಣ ಮತ್ತು ರಾಯಲಸೀಮದಿಂದ ಅಸಂಖ್ಯಾತ ಭಕ್ತಾಧಿಗಳು ಆಗಮಿಸುತ್ತಾರೆ. ಬೊನಲು ಉತ್ಸವವನ್ನು ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಪ್ರತಿವರ್ಷ ಆಚರಿಸಲಾಗುತ್ತದೆ. ಈ ತಿಂಗಳುಗಳಲ್ಲಿ ಮಹಾಕಾಳಿಗೆ ಹರಕೆ ಸಲ್ಲಿಸಲು ಮತ್ತು ಜೀವಿಗಳನ್ನು ಕಾಪಾಡುವಂತೆ ಕೋರಿ ಪೂಜಿಸಲು ಅತ್ಯಂತ ಪವಿತ್ರವೆಂದು ಭಾವಿಸಲಾಗಿದೆ.


Click it and Unblock the Notifications