ಕುರುವ ದ್ವೀಪ ಎಂಬುದು ಕಬಿನಿ ನದಿಯಲ್ಲಿರುವ ನದಿ ಮುಖಜ ಭೂಮಿಯಾಗಿದೆ. ಈ ನದಿಯು ವಯನಾಡಿನ ಪ್ರಮುಖ ನದಿಯಾಗಿದೆ.
ಈ ಮುಖಜ ಭೂಮಿಯು ಹಚ್ಚ ಹಸಿರಿನಿಂದ ಕೂಡಿದ ಕುರುವ ದ್ವೀಪವನ್ನು ನಿರ್ಮಾಣ ಮಾಡಿದೆ. ಇಲ್ಲಿಗೆ ಭೇಟಿ ಕೊಡುವ ಯಾರು ಬೇಕಾದರು ಇಲ್ಲಿನ ವೈವಿಧ್ಯ ಭರಿತವಾದ ಪ್ರಾಣಿ ಸಂಪತ್ತು ಮತ್ತು ಸಸ್ಯ ಸಂಪತ್ತನ್ನು ಕಾಣಬಹುದು. ಕುರುವ ದ್ವೀಪವು ಅಪರೂಪದ ಪಕ್ಷಿಗಳ ಆವಾಸತಾಣವಾಗಿದೆ. ಈ ದ್ವೀಪದಲ್ಲಿ ವಿದೇಶಗಳ ಆರ್ಕಿಡ್ ಮತ್ತು ಗಿಡಮೂಲಿಕೆಗಳನ್ನು ಸಹ ಕಾಣಬಹುದು. ಪರಿಸರದ ಕುರಿತು ಆಸಕ್ತಿಯಿರುವ ಪ್ರವಾಸಿಗರು ಇಲ್ಲಿರುವ ವೈವಿಧ್ಯಭರಿತವಾದ ಪರಿಸರವನ್ನು ವೀಕ್ಷಿಸಲು ಭೇಟಿ ಕೊಡುತ್ತಿರುತ್ತಾರೆ. ಈ ಪ್ರಾಕೃತಿಕ ಶ್ರೀಮಂತಿಕೆಯು ಕುರುವ ದ್ವೀಪಕ್ಕೆ ವಿಶ್ವದೆಲ್ಲೆಡೆಯಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ.
ಈ ದ್ವೀಪಕ್ಕೆ ಹೋಗಲು ಬಯಸುವವರು ಕೇರಳ ಪ್ರವಾಸೋದ್ಯಮ ಇಲಾಖೆಯವರು ಒದಗಿಸುವ ಫೈಬರ್ ದೋಣಿ ಮತ್ತು ತೆಪ್ಪಗಳ ಮೂಲಕ ತಲುಪಬಹುದು. ಈ ದ್ವೀಪಕ್ಕೆ ವರ್ಷದಲ್ಲಿ ಕೆಲವು ಕಾಲದವರೆಗೆ ಮಾತ್ರ ಪ್ರವೇಶಾವಕಾಶ ಲಭ್ಯವಿರುತ್ತದೆ. ಈ ನಿಯಮವನ್ನು ಈ ದ್ವೀಪದ ಸ್ವಾಭಾವಿಕ ವರ್ಚಸ್ಸನ್ನು ಉಳಿಸಿಕೊಂಡು ಬರುವ ಸಲುವಾಗಿ ಜಾರಿಗೆ ತರಲಾಗಿದೆ. ಇಲ್ಲಿಗೆ ಭೇಟಿ ಕೊಡುವ ಮೊದಲು ಅರಣ್ಯ ಇಲಾಖೆಯಿಂದ ಅನುಮತಿಯನ್ನು ಪಡೆಯುವುದು ಅತ್ಯಾವಶ್ಯಕ.