ಗಣೇಶ ದೇವರು ಮುದ್ದಾದ, ಶಕ್ತಿಶಾಲಿ ಮತ್ತು ಚುರುಕಾದ ಗಣೇಶನು ತನ್ನ ನೋಟದಲ್ಲಿಯೂ ವಿಶಿಷ್ಟತೆಯನ್ನು ಹೊಂದಿದ ದೇವರು. ಹೊಸದಾಗಿ ಗಾಡಿ ಖರೀದಿ ಮಾಡಲಿ, ಅಥವಾ ಯಾವುದಾದರೂ ಕೆಲಸವನ್ನು ಪ್ರಾರಂಭಿಸುವುದಾಗಲಿ ಅಥವಾ ಯಾವುದೇ ಶುಭಕಾರ್ಯಕ್ರಮಗಳನ್ನು ಪ್ರಾರಂಭಿಸುವುದಕ್ಕಾಗಲಿ ಹಿಂದುಗಳು ಪ್ರಥಮವಾಗಿ ಗಣೇಶನಿಗೆ ಪೂಜೆ ಸಲ್ಲಿಸಿ ನಂತರವೇ ಕೆಲಗಳನ್ನು ಮುಂದುವರಿಸುವುದು ಸರ್ವೇ ಸಾಮಾನ್ಯವಾದ ವಿಷಯವಾಗಿದ್ದು ಜನ ಅಷ್ಟೇ ಭಕ್ತಿ ಶ್ರದ್ದೆಯಿಂದ ವಿನಾಯಕನನ್ನು ಆರಾಧಿಸುತ್ತಾರೆ.
ಭಾರತಾದ್ಯಂತ ಹಲವಾರು ಗಣೇಶನನ್ನು ಪೂಜಿಸಲಾಗುವ ದೇವಾಲಯಗಳನ್ನು ಕಾಣಬಹುದಾಗಿದ್ದು ಪ್ರತಿಯೊಂದಕ್ಕೂ ತನ್ನದೇ ಆದ ದಂತಕಥೆಗಳು ಮತ್ತು ಮಹತ್ವವನ್ನು ಹೊಂದಿದೆ. ಈ ಲೇಖನದಲ್ಲಿ ಇಡಗುಂಜಿಯ ಶ್ರೀ ವಿನಾಯಕ ದೇವಾಲಯದ ಪ್ರಾಮುಖ್ಯತೆಯ ಬಗ್ಗೆ ತಿಳಿಯೋಣಇಡಗುಂಜಿ ದೇವಾಲಯ

ಮನಮೋಹಕ ಇಡಗುಂಜಿ ಗ್ರಾಮವು ಶರಾವತಿ ನದಿಯ ದಡದಲ್ಲಿದ್ದು ಪ್ರತೀ ವರ್ಷ ಒಂದು ಸುಮಾರು ಒಂದು ಮಿಲಿಯನ್ ಭಕ್ತರಿಂದ ಭೇಟಿ ನೀಡಲ್ಪಡುತ್ತದೆ. ಇದು ಇಡಗುಂಜಿ ಗಣೇಶನ ಶಕ್ತಿ ಎನ್ನಬಹುದು ಅಲ್ಲವೆ! ಇದಕ್ಕೆ ಸಂಬಂಧಿಸಿದ ದಂತಕಥೆಗಳ ಪ್ರಕಾರ ಈ ದೇವನು ಈ ಭೂಮಿಯನ್ನು ರಕ್ಷಿಸುವುದಾಗಿ ಮಾತುಕೊಟ್ಟು ಎಂದೆಂದಿಗೂ ಇಲ್ಲೇ ಉಳಿಯುವುದಾಗಿ ನಿರ್ಧಾರ ಮಾಡಿದನೆನ್ನಲಾಗುತ್ತದೆ.
ಇಡಗುಂಜಿ ದೇವಾಲಯದ ಗಣೇಶನ ಶಿಲ್ಪವು ಎರಡು ಕೈಗಳನ್ನು ಹೊಂದಿರುವ ದ್ವಿಭುಜ ಆಕಾರದಲ್ಲಿದೆ (ಎರಡು ಭುಜಗಳು) ದೇವರ ಈ ವಿಗ್ರಹವು ಇಡಗುಂಜಿಯ ಪ್ರಮುಖ ಆಕರ್ಷಣೆಯಾಗಿದೆ. 1500 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇವಾಲಯವು ಜನರ ಗಮನವನ್ನು ಸೆಳೆಯುವುದರಲ್ಲಿ ಸಂಶಯವೇ ಇಲ್ಲ. ಗಣೇಶನ ನಿಂತಿರುವ ಭಂಗಿಯ ಕಪ್ಪು ಕಲ್ಲಿನ ಮೂರ್ತಿಯು ಗರ್ಭಗುಡಿಯನ್ನು ಆಕ್ರಮಿಸುತ್ತದೆ ಅಲ್ಲದೆ ಈ ವಿಗ್ರಹದ ಒಂದು ಕೈಯಲ್ಲಿ ತಾವರೆ ಹೂವು ಮತ್ತು ಇನ್ನೊಂದು ಕೈಯಲ್ಲಿ ಇಷ್ಟ ತಿನಿಸಾದ ಮೋದಕವನ್ನು ಹಿಡಿದಿರುವುದು ಕಂಡುಬರುವ ಗಣೇಶನ ಈ ಮೂರ್ತಿಯನ್ನು ಕಂಡ ಕೂಡಲೇ ಯಾರಾದರೂ ಭಕ್ತಿ ಪರವಶರಾಗುತ್ತಾರೆ. ಹಲವಾರು ಜನರು ಇಡಗುಂಜಿ ಗಣೇಶನಲ್ಲಿರುವ ಶಕ್ತಿಯ ಅನುಭವವನ್ನು ಪಡೆದಿದ್ದಾರೆ. ಆದುದರಿಂದ ಈ ದೇವಾಲಯವು ಪಶ್ಚಿಮ ಕರಾವಳಿಯ ಅತ್ಯಂತ ಮಹತ್ವವುಳ್ಳ ಹಾಗೂ ಪ್ರಮುಖ ದೇವಾಲಯವೆನಿಸಿದೆ.
ಇಡಗುಂಜಿ ದೇವಸ್ಥಾನದ ಸಮಯ ಇಡಗುಂಜಿ ಗಣಪತಿ ದೇವಸ್ಥಾನವು ಬೆಳಿಗ್ಗೆ 6 ರಿಂದ ಮಧ್ಯಾಹ್ನ 1 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ ಮತ್ತು ಮತ್ತೆ ಮಧ್ಯಾಹ್ನ 3 ರಿಂದ ರಾತ್ರಿ 8.30 ರವರೆಗೆ ತೆರೆದಿರುತ್ತದೆ. ಬೆಳಿಗ್ಗೆ 7 ರಿಂದ ರಾತ್ರಿ 11 ರವರೆಗೆ ಭಗವಂತನಿಗೆ ನೀಡುವ ಅಭಿಷೇಕವನ್ನು (ಪವಿತ್ರ ಸ್ನಾನ) ಭಕ್ತರು ವೀಕ್ಷಿಸಬಹುದು.
ಇಡಗುಂಜಿ ದೇವಾಲಯದ ಹಿಂದಿನ ದಂತ ಕಥೆಗಳು
ಒಂದು ಸ್ಥಳವನ್ನು ಜನಪ್ರಿಯಗೊಳಿಸುವಲ್ಲಿ ಆಯಾ ಪ್ರದೇಶಕ್ಕೆ ಸಂಬಂಧಿಸಿದ ಪುರಾಣದ ಕಥೆಗಳೂ ಪ್ರಮುಖ ಪಾತ್ರವಹಿಸುತ್ತವೆ ಅದರಂತೆ ಇಡಗುಂಜಿಯೂ ಕೂಡ ಆಸಕ್ತಿದಾಯಕ ದಂತಕಥೆಯನ್ನು ಹೊಂದಿದೆ!
ಈ ಸ್ಥಳಕ್ಕೆ ಸಂಬಂಧಿಸಿದ ಪುರಾಣಗಳ ಪ್ರಕಾರ, ದ್ವಾಪರ ಯುಗದ (ಮೂರನೇ ಹಿಂದೂ ಪೌರಾಣಿಕ ಯುಗ) ಕೊನೆಯಲ್ಲಿ ಶ್ರೀಕೃಷ್ಣನು ಭೂಮಿಯನ್ನು ತೊರೆಯಲಿದ್ದನು. ಇದು ಎಲ್ಲಾ ಋಷಿಗಳು ಮತ್ತು ಸಾಮಾನ್ಯರಿಗೆ ಅಹಿತಕರವಾದ ಸುದ್ದಿಯಾಗಿತ್ತು, ಏಕೆಂದರೆ ಇದರಿಂದಾಗಿ ಪ್ರಪಂಚವು ರಕ್ಷಣೆಯಿಲ್ಲದೆ ಉಳಿಯುತ್ತದೆ ಆದ್ದರಿಂದ ಮಹಾ ಋಷಿಗಳು ಕಲಿಯುಗದಲ್ಲಿ (4 ನೇ ಪೌರಾಣಿಕ ಯುಗ) ಭೂಮಿಯನ್ನು ರಕ್ಷಿಸಲು ಶ್ರೀಕೃಷ್ಣನನ್ನು ಬೇಡಿ ತಪಸ್ಸು ಮಾಡಲು ನಿರ್ಧರಿಸಿದರು.

ಇಡಗುಂಜಿಯಲ್ಲಿರುವ ಬಲಿ ಪೀಠ
ಮುನಿ ವಲಾಖಿಲ್ಯರು ಋಷಿ ವಾಲಖಿಲ್ಯನು ಶರಾವತಿ ನದಿಯ ದಡದಲ್ಲಿರುವ ಕುಂಜವನ ಎಂಬ ಕಾಡಿನಲ್ಲಿ ತನ್ನ ಯಜ್ಞವನ್ನು ಪ್ರಾರಂಭಿಸಿದನು. ದುರದೃಷ್ಟವಶಾತ್, ಅವನ ಆಚರಣೆಗಳು ರಾಕ್ಷಸರಿಂದ ತೊಂದರೆಗೀಡಾದವು. ಆದ್ದರಿಂದ, ಅವರು ಮಹಾನ್ ಋಷಿ ನಾರದರಿಂದ ಪರಿಹಾರವನ್ನು ಹುಡುಕುತ್ತಾರೆ.ಅದರಂತೆ ನಾರದರು ಅಡೆತಡೆಗಳನ್ನು ನಿವಾರಿಸುವ ಗಣಪತಿಯನ್ನು ಪೂಜಿಸುವಂತೆ ಸಲಹೆ ನೀಡಿದರು. ಎಲ್ಲಾ ಋಷಿಗಳ ಒಪ್ಪಿಗೆಯ ಮೇರೆಗೆ ಅವರು ಗಣಪತಿ ಮತ್ತು ತ್ರಿಮೂರ್ತಿಗಳನ್ನು ಯಾಗದ ಆಚರಣೆಗಳಿಗೆ ಆಹ್ವಾನಿಸುತ್ತಾರೆ. ತ್ರಿಮೂರ್ತಿಗಳು ಗಣೇಶನ ಜೊತೆಗೆ ಕುಂಜನವನಕ್ಕೆ ಈ ಯಾಗದಲ್ಲಿ ಪಾಲ್ಗೊಳ್ಳಲು ಬರುತ್ತಾರೆ ಇಲ್ಲಿ ಗಣೇಶನನ್ನು ಅಪಾರ ಶ್ರದ್ದೆ ಭಕ್ತಿಯಿಂದ ಪೂಜಿಸಲಾಗುತ್ತದೆ. ಮತ್ತು ದೇವತೀರ್ಥ ಎಂಬ ಕೆರೆಯನ್ನು ನಿರ್ಮಿಸಲಾಗುತ್ತದೆ. ಇಲ್ಲಿ ಕೊಡಲಾದ ಪ್ರಾಮಾಣಿಕತೆ ಮತ್ತು ಗೌರವದಿಂದ ಪ್ರಭಾವಿತನಾದ ಗಣೇಶನು ಕುಂಜನವನದಲ್ಲಿ ಶಾಶ್ವತವಾಗಿ ಉಳಿಯಲು ನಿರ್ಧರಿಸಿದನು. ಕಾಲಾನಂತರ ಈ ಕುಂಜವನವು ನಂತರ ಇಡಗುಂಜಿ ಎಂದು ಕರೆಯಲ್ಪಟ್ಟು, ಇದನ್ನು ಈಗ ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ.
ಇಡಗುಂಜಿ ಗಣೇಶ ದೇವಾಲಯದಲ್ಲಿರುವ ಸೌಲಭ್ಯಗಳು
ಪಂಚಕಜ್ಜಾಯ ಇದು ಇಲ್ಲಿ ದೇವರಿಗೆ ಅರ್ಪಿಸಲಾಗುವ ಮುಖ್ಯವಾದ ಮತ್ತು ವಿಶೇಷವಾದ ಪ್ರಸಾದವಾಗಿದೆ. ವಿಶೇಷ ಪೂಜೆಗಳ ಹೊರತಾಗಿ, ಯಾತ್ರಾರ್ಥಿಗಳು ಮಯೂರ್ ಪ್ರಸಾದ ಭೋಜನಾಲಯದಲ್ಲಿ (ದೇವಾಲಯದ ಭೋಜನಶಾಲೆ) ಮಧ್ಯಾಹ್ನ ಆಹಾರವನ್ನು ಸೇವಿಸಬಹುದು. ಇಡಗುಂಜಿ ದೇವಸ್ಥಾನದಲ್ಲಿ ಮದುವೆ, ಉಪನಯನ ಮತ್ತು ಚೌಲ (ಕೂದಲು ಕತ್ತರಿಸುವ ಸಮಾರಂಭ) ಮುಂತಾದ ಕಾರ್ಯಕ್ರಮಗಳಿಗೆ ಸಭಾಂಗಣ ಲಭ್ಯವಿದೆ. ದೇವಾಲಯದ ಆವರಣದಲ್ಲಿ ಕೆಲವು ವಸತಿಗಳು ಸಹ ಲಭ್ಯವಿದೆ. ಬುಕಿಂಗ್ ಕುರಿತು ಮಾಹಿತಿ ಪಡೆಯಲು ನೀವು ದೇವಾಲಯದ ಆಡಳಿತವನ್ನು ಸಂಪರ್ಕಿಸಬಹುದು

ದೇವಾಲಯದ ಸಂಕೀರ್ಣ ಮತ್ತು ಆಸುಪಾಸಿನಲ್ಲಿ ಹಲವಾರು ರೆಸ್ಟೋರೆಂಟ್ ಗಳನ್ನು ಕಾಣಬಹುದಾಗಿದೆ
ತಪ್ಪಿಸಲೇಬಾರದು : ಕಾಂಪ್ಲೆಕ್ಸ್‌ನಲ್ಲಿರುವ ಹೋಟೆಲ್‌ಗಳಲ್ಲಿ ಒಂದರಲ್ಲಿ ಸೌತೆಕಾಯಿಯನ್ನು ಅದರ ಮೇಲೆ ಮೆಣಸಿನ ಪುಡಿ ಸಿಂಪಡಿಸಿ ಮಾರಟ ಮಾಡುವುದು ಮತ್ತು ಮಜ್ಜಿಗೆಯನ್ನು ಮಾರಾಟ ಮಾಡುವ ಸಣ್ಣ ಹೋಟೇಲುಗಳನ್ನು ಈ ಸಂಕೀರ್ಣದಲ್ಲಿ ಭೇಟಿಕೊಟ್ಟು ಅದರ ರುಚಿಯನ್ನು ಸವಿಯುವುದನ್ನು ತಪ್ಪಿಸಲೇಬಾರದು.
ಪಾರ್ಕಿಂಗ್ ಮತ್ತು ಶೌಚಾಲಯಗಳ ಸೌಲಭ್ಯವೂ ದೇವಾಲಯ ಸಂಕೀರ್ಣದಲ್ಲಿ ಲಭ್ಯವಿದೆ.
ಇಡಗುಂಜಿಗೆ ಹೋಗುವುದು ಹೇಗೆ?
ಇಡಗುಂಜಿಯು ಮುರುಡೇಶ್ವರ ಮತ್ತು ಹೊನ್ನಾವರದ ಮಧ್ಯೆ ನೆಲೆಸಿದೆ. ಈ ಸ್ಥಳವು ಗೋಕರ್ಣಾದಿಂದ ಸುಮಾರು 68 ಕಿ.ಮೀ ಮತ್ತು ಮುರುಡೇಶ್ವರದಿಂದ ಸುಮಾರು 19 ಕಿ.ಮೀ ಅಂತರದಲ್ಲಿದೆ.
ಬಸ್ ಮೂಲಕ: ಹೊನ್ನಾವರ, ಶಿರಸಿ ಮತ್ತು ಕುಮಟಾದಿಂದ ಹಲವಾರು ಬಸ್ಸುಗಳು ಇಡಗುಂಜಿಗೆ ತಲುಪಲು ಲಭ್ಯವಿದೆ. ಆದಾಗ್ಯೂ, ನೀವು ಸುತ್ತಮುತ್ತಲಿನ ಇತರ ಸ್ಥಳಗಳನ್ನು ನೋಡಲು ಅನುಕೂಲವಾಗುವ ಕಾರಣ ಪ್ರಯಾಣಕ್ಕಾಗಿ ಖಾಸಗಿ ವಾಹನಗಳನ್ನು ವ್ಯವಸ್ಥೆ ಮಾಡುವುದು ಉತ್ತಮ.
ರೈಲಿನ ಮೂಲಕ: ಹೊನ್ನಾವರ ಇಡಗುಂಜಿಯಿಂದ ಸುಮಾರು 15 ಕಿ.ಮೀ. ಹೊನ್ನಾವರ ರೈಲು ನಿಲ್ದಾಣವು ಇಡಗುಂಜಿಗೆ ಹತ್ತಿರದ ರೈಲು ನಿಲ್ದಾಣವಾಗಿದೆ.

ಪಶ್ಚಿಮ ಕರಾವಳಿಯಲ್ಲಿರುವ ಆರು ಪ್ರಸಿದ್ಧ ಗಣೇಶ ದೇವಾಲಯಗಳು
ಕಾಸರಗೋಡಿನ ಮಧೂರು ಗಣಪತಿ ದೇವಸ್ಥಾನ, ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನ, ಆನೆಗುಡ್ಡೆಯ ಶ್ರೀ ಮಹಾ ಗಣಪತಿ, ಕುಂದಾಪುರದ ಹಟ್ಟಿಯಂಗಡಿ ಸಿದ್ದಿ ವಿನಾಯಕ ದೇವಸ್ಥಾನ, ಇಡಗುಂಜಿ ವಿನಾಯಕ ದೇವಸ್ಥಾನ ಮತ್ತು ಗೋಕರ್ಣದ ಶ್ರೀ ಮಹಾಗಣಪತಿ ದೇವಸ್ಥಾನಗಳು ಇವು ಪಶ್ಚಿಮ ಕರಾವಳಿಯ 6 ಪ್ರಸಿದ್ಧ ಗಣೇಶ ದೇವಸ್ಥಾನಗಳಾಗಿದ್ದು ಇದಕ್ಕಾಗಿ ಪಶ್ಚಿಮ ಕರಾವಳಿಯನ್ನು 'ಗಣೇಶ ಕರಾವಳಿ' ಎಂದೂ ಕರೆಯುತ್ತಾರೆ.
ಇಡಗುಂಜಿಯ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು
ಮುರುಡೇಶ್ವರ (19 ಕಿಮೀ), ಅಪ್ಸರಕೊಂಡ (12 ಕಿಮೀ), ಗೋಕರ್ಣ (68 ಕಿಮೀ), ಹೊನ್ನಾವರ (15 ಕಿಮೀ) ಮತ್ತು ಭಟ್ಕಳ (30 ಕಿಮೀ) ಇಡಗುಂಜಿ ಸುತ್ತಮುತ್ತಲಿನ ಅತ್ಯುತ್ತಮ ಪ್ರವಾಸಿ ಸ್ಥಳಗಳಾಗಿವೆ.
ಇಡಗುಂಜಿಯು ಹಚ್ಚ ಹಸಿರಿನಿಂದ ಆವೃತವಾಗಿರುವ ಪುಟ್ಟ ಗ್ರಾಮ. ಇದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೇಟಿ ನೀಡಲು ಪ್ರಶಾಂತ ಮತ್ತು ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಇಡಗುಂಜಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಪಂಚಕಜ್ಜಾಯವನ್ನು ದೇವರಿಗೆ ಅರ್ಪಿಸಿ ಭಗವಂತನನ್ನು ಮೆಚ್ಚಿಸಿ!


Click it and Unblock the Notifications
















