ರಾಜಸ್ಥಾನದಲ್ಲಿರುವ ಕೆಲವು ಸ್ಥಳಗಳು ಪ್ರೇತ ಮತ್ತು ದೆವ್ವದ ಕಥೆಗಳಿಗೆ ಹೆಸರುವಾಸಿಯಾಗಿದೆ. ಇಂತಹ ಮೋಸ್ಟ್ ಹಾಂಟೆಡ್ ಸ್ಥಳಗಳ ಪೈಕಿ ರಾಜಸ್ಥಾನದಲ್ಲಿರುವ ಕುಲ್ಧಾರಾ ಕೂಡ ಒಂದು. ಕುಲ್ಧಾರಾ ರಾಜಸ್ಥಾನದಲ್ಲಿ ಮಾತ್ರವಲ್ಲದೆ, ಭಾರತದಲ್ಲೇ ಅತ್ಯಂತ ಗೀಳುಹಿಡಿದ ಸ್ಥಳಗಳಲ್ಲಿ ಒಂದಾಗಿದೆ. ಅಂದಹಾಗೆ ಕುಲ್ಧಾರಾ ನಿರ್ಜನವಾದ, ಕಿರಿದಾದ ಪ್ರಾಚೀನ ಬೀದಿಗಳು, ಭಯಾನಕ ಜಾನಪದ ಕಥೆಗಳು ಮತ್ತು ದೆವ್ವಗಳು ಹಾಗೂ ಅಧಿಸಾಮಾನ್ಯ ಚಟುವಟಿಕೆಗಳ ಮೂಲವಾಗಿದೆ. ನಿಜ ಹೇಳಬೇಕೆಂದರೆ ಜೈಸಲ್ಮೇರ್‌ನಿಂದ 17 ಕಿಲೋಮೀಟರ್ ದೂರದಲ್ಲಿರುವ ಕುಲ್ಧಾರಾ ಒಂದು ಕಾಲದಲ್ಲಿ ಸಮೃದ್ಧವಾಗಿತ್ತು. ಆದರೆ ಈಗ ಮಾತ್ರ ಅದು ಪಾಳುಬಿದ್ದಿದೆ. ಸದ್ಯ ವಿವಿಧ ತೆರೆದ ಮನೆಗಳು ಮಾತ್ರ ಉಳಿದಿವೆ. ಕುಲ್ಧಾರಾ ಬಗ್ಗೆ ಕಥೆ ಕೇಳಿದರೆ ಜನರಿಗೆ ತಮ್ಮ ಊರನ್ನು ತೊರೆಯುವಾಗ ಅದೆಷ್ಟು ನೋವಾಗಿರಬಹುದು ಅನಿಸುತ್ತದೆ.
ಮೊದಲ ನೋಟಕ್ಕೆ ಈ ಪಟ್ಟಣ, ವಿಚಿತ್ರ ಚಿಂತನೆಗೆ ದಾರಿ ಮಾಡಿಕೊಟ್ಟರೂ, ತಕ್ಷಣವೇ ಆಧ್ಯಾತ್ಮಿಕ ಮತ್ತು ಅಧಿಸಾಮಾನ್ಯ ಚಟುವಟಿಕೆಗಳಲ್ಲಿ ಜನರ ನಂಬಿಕೆಯನ್ನು ಹೆಚ್ಚಿಸುತ್ತದೆ. ಈ ಸ್ಥಳದ ಬಗ್ಗೆ ದಂತಕಥೆಗಳನ್ನು ಹೊರತುಪಡಿಸಿದರೆ ನಮಗೆ ಯಾವುದೇ ಕಾರಣಕ್ಕೂ ಹೆದರಿಕೆಯಾಗುವಂತೆ ಕಾಣುವುದಿಲ್ಲ. ಈ ಕಥೆಗಳ ಆಧಾರದ ಮೇಲೆ ನಾವು ಸ್ವಂತ ಗ್ರಹಿಕೆ ಮಾಡಿಕೊಳ್ಳಬೇಕಷ್ಟೇ. ಈ ಸ್ಥಳದಲ್ಲಿ ನಡೆಯುತ್ತಿರುವ ಅನೇಕ ಚಿತ್ರ ವಿಚಿತ್ರ ಚಟುವಟಿಕೆಗಳನ್ನು ಘಟನೆಗಳನ್ನು ನೋಡಿ ಇಲ್ಲಿ ಪ್ರೇತಗಳಿವೆ ಎನ್ನುತ್ತಾರೆ ಜನರು. ಪ್ರವಾಸಿಗರು ಕೂಡ ಈ ನಿಗೂಢತೆಯ ಬಗ್ಗೆ ತಿಳಿಯಲು ಪ್ರಪಂಚದ ವಿವಿಧ ಭಾಗಗಳಿಂದ ರಾಜಸ್ಥಾನದಲ್ಲಿರುವ ಕುಲ್ಧಾರಾಕ್ಕೆ ಭೇಟಿ ನೀಡುತ್ತಾರೆ. ಜೈಸಲ್ಮೇರ್‌ನ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಕುಲ್ಧಾರಾವೂ ಒಂದಾಗಿದೆ.

ದಿವಾನ್ ಗೆ ಹೆದರಿದ ಸ್ಥಳೀಯರು
ಸುಮಾರು 200 ವರ್ಷಗಳ ಹಿಂದೆ, ಹಳ್ಳಿಯ ಜನರು ಜೈಸಲ್ಮೇರ್‌ನ ದಿವಾನ್ (ಸಚಿವರು)ಗೆ ಮಾತ್ರ ಹೆದರುತ್ತಿದ್ದರು. ಅವರು ಸಚಿವರಾಗಿದ್ದರಿಂದ ತೆರಿಗೆಯನ್ನು ಅವರಿಗೆ ಪಾವತಿಸಬೇಕಾಗಿತ್ತು. ಒಂದು ದಿನ ದಿವಾನ್ ತನ್ನ ಗ್ರಾಮಕ್ಕೆ ತೆರಿಗೆ ಸಂಗ್ರಹಿಸಲು ಬಂದಾಗ, ಅವನ ಕಣ್ಣು ಹಳ್ಳಿಯ ಮುಖ್ಯಸ್ಥರ ಮಗಳ ಮೇಲೆ ಬಿತ್ತು. ದುಷ್ಟ ದಿವಾನ್ ಆ ಸುಂದರವಾದ ಹುಡುಗಿಯನ್ನುಇಷ್ಟಪಡುತ್ತಾನೆ. ನಂತರ ಅವನು ಈ ಹುಡುಗಿಯನ್ನು ಮದುವೆಯಾಗುವುದಾಗಿ ಹೇಳುತ್ತಾನೆ. ಒಂದು ವೇಳೆ ಯಾರಾದರೂ ನನ್ನನ್ನು ತಡೆದರೆ, ನಾನು ಇಡೀ ಸಮುದಾಯದ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸುತ್ತೇನೆ. ನಾನು ಅವಳನ್ನು ಕರೆದುಕೊಂಡು ಹೋಗಲು ನಾಳೆ ಬರುತ್ತೇನೆ ಎಂದು ಹೇಳುತ್ತಾನೆ.

ರಾತ್ರೋ ರಾತ್ರಿ ನಾಪತ್ತೆಯಾದ ಜನರು
ಮುಖ್ಯಸ್ಥರ ಮಗಳು ಈ ದಿವಾನ್ ಜೊತೆ ಮದುವೆಯಾಗುವುದು ಗ್ರಾಮಸ್ಥರಿಗೆ ಇಷ್ಟವಿರಲಿಲ್ಲ. ಅವರು ಬಹಳ ಬೇಗ ಈ ವಿಚಾರದ ಬಗ್ಗೆ ನಿರ್ಧಾರ ಮಾಡಬೇಕಿತ್ತು. ಇಡೀ ಸಮುದಾಯವು ಕುಲ್ಧಾರಾ ಮತ್ತು ಹತ್ತಿರದ 84 ಹಳ್ಳಿಗಳಿಂದ ಪಲಾಯನ ಮಾಡಬೇಕೆಂದು ಮುಖ್ಯಸ್ಥರು ನಿರ್ಧರಿಸಿದರು. ಈ ವಿಷಯವನ್ನು ಎಲ್ಲರಿಗೂ ತಿಳಿಸಲು ಅವನು ತನ್ನ ದೂತರನ್ನು ಕಳುಹಿಸಿದನು. ಅಂತೆಯೇ ಆ ರಾತ್ರಿ ಎಲ್ಲಾ ಗ್ರಾಮಸ್ಥರು ದುಷ್ಟ ದಿವಾನ್ ನನ್ನು ಶಪಿಸುತ್ತಾ ಮನೆ, ಸಾಮಾನುಗಳನ್ನು ತೊರೆದು ಯಾರಿಗೂ ತಿಳಿಯದ ಸ್ಥಳಕ್ಕೆ ತೆರಳಿದರು. ಆದರೆ ಹೊರಡುವ ಮುನ್ನ ಅಲ್ಲಿ ಮತ್ತೆ ಯಾರೂ ವಾಸ ಮಾಡದಂತೆ ಶಪಿಸಿದರಂತೆ. ಇಲ್ಲಿಯವರೆಗೆ ಈ ಗ್ರಾಮದಲ್ಲಿ ಇದುವರೆಗೆ ಯಾರೂ ವಾಸಿಸಲೂ ಇಲ್ಲ, ರಾತ್ರಿಯನ್ನು ಕಳೆಯುವುದಿಲ್ಲ. ಮರುದಿನ, ದಿವಾನ್ ಹುಡುಗಿಯನ್ನು ಕರೆದುಕೊಂಡು ಹೋಗಲು ಬಂದನು. ಆದರೆ ಹಳ್ಳಿಯು ಖಾಲಿಯಾಗಿರುವುದನ್ನು ಕಂಡನು. ಆದರೆ ಒಂದೇ ರಾತ್ರಿಯಲ್ಲಿ ಇಷ್ಟು ಗ್ರಾಮಸ್ಥರು ನಾಪತ್ತೆಯಾಗಿರುವುದು ಇನ್ನೂ ನಿಗೂಢವಾಗಿದೆ.

ಮತ್ತೆರೆಡು ಕಥೆಗಳು ಹೀಗಿವೆ…
ಒಮ್ಮೆ ಈ ಗ್ರಾಮದಲ್ಲಿ ಸುಮಾರು 1,500 ಪಲಿವಾಲ್ ಸಮುದಾಯದವರು ನೆಲೆಸಿದ್ದರು. ಅವರು ಐದು ಶತಮಾನಗಳಿಗೂ ಹೆಚ್ಚು ಕಾಲ ಈ ಸಮುದಾಯದಲ್ಲಿ ಶಾಂತಿಯುತವಾಗಿ ಮತ್ತು ಆರಾಮದಾಯಕವಾಗಿ ವಾಸಿಸುತ್ತಿದ್ದರು. ಆದರೆ ಒಂದು ರಾತ್ರಿ ಕತ್ತಲೆಯಲ್ಲಿ ಕುಲ್ಧಾರಾ ಸೇರಿದಂತೆ 85 ಹಳ್ಳಿಗಳ ಸಂಖ್ಯೆಯ ಜನರು ರಾತ್ರೋರಾತ್ರಿ ಕಣ್ಮರೆಯಾದರು. ಆದರೆ ಅವರು ಎಲ್ಲಿ ಹೋದರು ಎಂದು ಯಾರಿಗೂ ತಿಳಿದಿಲ್ಲ. ಶತ ಶತಮಾನಗಳಿಂದ ವಾಸಿಸುತ್ತಿದ್ದ ಜನರು ರಾತ್ರೋರಾತ್ರಿ ಓಡಿಹೋಗಲು ಕಾರಣವೇನು ಎಂಬುದು ಕೆಲವರ ಅನಿಸಿಕೆ. ಕೆಲವು ಕಥೆಗಳ ಪ್ರಕಾರ, ನೀರಿನ ಕೊರತೆಯಿರುವ ಕಾರಣ ಜನರು ಹೀಗೆ ಮಾಡಿರಬಹುದು.
ಮತ್ತೆ ಕೆಲವರ ಪ್ರಕಾರ, ಪಲಿವಾಲ್ ಸಮುದಾಯದ ಮೇಲೆ ಭಾರೀ ತೆರಿಗೆಗಳನ್ನು ವಿಧಿಸಿದ್ದರ ಪರಿಣಾಮವಾಗಿ, ಅವರಿಗೆ ಯಾವುದೇ ಆಯ್ಕೆ ಇರಲಿಲ್ಲ. ಹಾಗಾಗಿ ಇಲ್ಲಿಂದ ತೆರಳಿದರು ಎನ್ನಲಾಗಿದೆ. ಈ ಘಟನೆ ನಡೆದು ಹಲವು ವರ್ಷಗಳ ನಂತರವೂ, ಜೈಸಲ್ಮೇರ್ ನಿವಾಸಿಗಳು ಇಲ್ಲಿ ಉಳಿಯಲು ಪ್ರಯತ್ನಿಸಿದರು. ಆದರೆ ಅವರು ಇಲ್ಲಿ ಯಶಸ್ವಿ ಕಾಣದ ಕಾರಣ ಗ್ರಾಮವು ಶಾಪಕ್ಕೆ ತುತ್ತಾಗಿದೆ ಎನ್ನುತ್ತಾರೆ.

ಪರೀಕ್ಷಿಸಲು ಹೋದ ತಂಡ ನೋಡಿದ್ದೇನು?
ಕುಲ್ಧಾರಾ ಕ್ರಮೇಣ ಭೂತಗಳ ತಾಣವೆಂದು ಖ್ಯಾತಿ ಗಳಿಸಿತು. ರಾಜಸ್ಥಾನ ರಾಜ್ಯ ಸರ್ಕಾರವು ಇದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿತು. ಗ್ರಾಮದಲ್ಲಿ ಈಗ 410 ಕಟ್ಟಡಗಳ ಅವಶೇಷಗಳನ್ನು ಕಾಣಬಹುದು. ದೆಹಲಿಯ ಪ್ಯಾರಾನಾರ್ಮಲ್ ಸೊಸೈಟಿಯ ತಂಡವು ಒಮ್ಮೆ ಈ ಸ್ಥಳದಲ್ಲಿ ನಿಜವಾಗಿಯೂ ದೆವ್ವವಿದೆಯೇ ಎಂದು ಕಂಡುಹಿಡಿಯಲು ನಿರ್ಧರಿಸಿತು. ರಾತ್ರಿ ವೇಳೆ ಕುಲ್ಧಾರಾದಲ್ಲಿ ಸುಮಾರು 12 ಗಂಟೆಗಳ ಕಾಲ ಕಳೆದರು. ತಮ್ಮ ಗ್ಯಾಜೆಟ್‌ಗಳು ಮತ್ತು ಸಲಕರಣೆಗಳೊಂದಿಗಿದ್ದ ಅವರು ಆ ಹಳ್ಳಿಯಲ್ಲಿ ಅಸಾಮಾನ್ಯ ಚಟುವಟಿಕೆಯನ್ನು ಗುರುತಿಸಿದರು. ಸುತ್ತಮುತ್ತ ಯಾರೂ ಇರದಿದ್ದರೂ ಯಾರೋ ತಮ್ಮ ಭುಜವನ್ನು ತಟ್ಟುವಂತೆ ಹಲವರು ಭಾವಿಸಿದರು. ಕೆಲವು ಆತ್ಮಗಳು ತಮ್ಮ ಹೆಸರನ್ನು ಕೂಡ ಬಹಿರಂಗಪಡಿಸಿದವಂತೆ. ಅವರು ನೆರಳಿನಲ್ಲಿ ಕೆಲವು ವ್ಯಕ್ತಿಗಳು ಮತ್ತು ಚಲನೆಗಳನ್ನು ನೋಡಿದರಂತೆ.

ಕುಲ್ಧಾರಾದಲ್ಲಿ ಇವೆಲ್ಲಾ ನೋಡಬಹುದು…
ಕುಲ್ಧಾರಾದ ಅವಶೇಷಗಳು ಆ ಯುಗದ ವಾಸ್ತುಶಿಲ್ಪದ ಶ್ರೇಷ್ಠತೆಗೆ ಉತ್ತಮ ಉದಾಹರಣೆಯಾಗಿದೆ. ಇವು ಛಾಯಾಗ್ರಾಹಕರು ಮತ್ತು ಚಲನಚಿತ್ರ ತಯಾರಕರನ್ನು ಸೆಳೆಯುತ್ತವೆ. ಈ ಗ್ರಾಮವನ್ನು ತಲುಪಿದಾಗ, ಗ್ರಾಮವನ್ನು ತ್ಯಜಿಸುವ ಮೊದಲು ನಿರ್ಮಿಸಲಾದ ಮರಳುಗಲ್ಲಿನ ಗೇಟ್ ನಿಮ್ಮನ್ನು ಸ್ವಾಗತಿಸುತ್ತದೆ. ಧೂಳಿ ಹಿಡಿದಿರುವ ರಸ್ತೆಗಳು ಮತ್ತು ರಸ್ತೆಗಳ ಎರಡೂ ಬದಿಯಲ್ಲಿರುವ ಮರಳುಗಲ್ಲಿನ ಮನೆಗಳು ಪಾಲಿವಾಲ್ ಬ್ರಾಹ್ಮಣರ ವಾಸ್ತುಶಿಲ್ಪದ ಅದ್ಭುತವನ್ನು ಚಿತ್ರಿಸುತ್ತವೆ. ಕೆಲವು ಮನೆಗಳನ್ನು ಪುನಃಸ್ಥಾಪಿಸಲಾಗಿದೆ. ಈ ಮರುಸ್ಥಾಪಿತ ಮನೆಗಳಲ್ಲಿ ಪ್ರಾಂಗಣಗಳು, ಅಡುಗೆಮನೆ, ಇತರ ಕೊಠಡಿಗಳನ್ನು ನೋಡಬಹುದು. ಕುಲ್ಧಾರಾ ಗ್ರಾಮದಲ್ಲಿ ದೇವಾಲಯಗಳನ್ನು ಸಹ ಕಾಣಬಹುದು. ಇಂದು ಈ ಗ್ರಾಮವು ಭಾರತೀಯ ಪುರಾತತ್ವ ಸಮೀಕ್ಷೆಯ (ASI) ಅಧಿಕಾರದ ಅಡಿಯಲ್ಲಿ ಸಂರಕ್ಷಿತ ಸ್ಮಾರಕವಾಗಿದೆ.


Click it and Unblock the Notifications

















