ಭಾರತದಲ್ಲಿರುವ ಪ್ರವಾಸಿ ತಾಣಗಳು ಯಾವ ವಿದೇಶಿ ಸ್ಥಳಗಳಿಗೂ ಕಡಿಮೆ ಇಲ್ಲ. ಆದರೂ ಬಹುತೇಕ ಜನರು ತಮ್ಮ ದೇಶವನ್ನು ಬಿಟ್ಟು, ವಿದೇಶಗಳಿಗೆ ಪ್ರವಾಸಕ್ಕೆ ಹೋಗುತ್ತಾರೆ. ಬೇರೆಯವರನ್ನು ಬಿಡಿ, ನೀವು ಕೂಡ ವಿದೇಶಕ್ಕೆ ಪ್ರಯಾಣಿಸುವ ಯೋಜನೆ ಏನಾದರೂ ಹಾಕಿಕೊಂಡಿದ್ದರೆ ಆ ನಿಮ್ಮ ಆಲೋಚನೆಯನ್ನು ಬದಲಾಯಿಸಿ. ನಂತರ ಭಾರತದಲ್ಲಿರುವ ಪ್ರವಾಸಿ ಸ್ಥಳಗಳಿಗೆ ಒಮ್ಮೆ ಭೇಟಿ ಕೊಡಿ. ನಮ್ಮ ಭಾರತದಲ್ಲಿ ಕೂಡ ಅತಿ ಸುಂದರವಾದ, ಅದ್ಭುತ ಸ್ಥಳಗಳಿದ್ದು, ಈ ಎಲ್ಲಾ ತಾಣಗಳು ಕೂಡ ನಮಗೆ ವಿದೇಶದಲ್ಲಿರುವ ಪ್ರಸಿದ್ಧ ಸ್ಥಳಗಳನ್ನು ನೆನಪಿಸುತ್ತವೆ. ಹಾಗೆ ನೋಡಿದರೆ ನೀವಿಲ್ಲಿಗೆ ಹೋಗಲು ಹೆಚ್ಚು ಸಮಯ ಕಾಯಬೇಕಾಗಿಲ್ಲ, ಲಕ್ಷಗಟ್ಟಲೆ ಖರ್ಚು ಮಾಡಬೇಕಿಲ್ಲ.
ಇನ್ನು ವಿಶೇಷವೆಂದರೆ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ನಮ್ಮ ದೇಶದಲ್ಲಿ 2022-23ರ ವೇಳೆಗೆ ಕನಿಷ್ಠ 15 ಪ್ರವಾಸಿ ತಾಣಗಳಿಗೆ ಭೇಟಿ ನೀಡುವಂತೆ ಒತ್ತಾಯಿಸಿದ್ದರು. ಹಾಗಾಗಿ ವಿದೇಶಕ್ಕೆ ಹೋಗಿ, ಅಲ್ಲಿನ ಸೌಂದರ್ಯವನ್ನು ಆನಂದಿಸುವ ಮೊದಲು, ಭಾರತದ ಈ ಸುಂದರ ಪ್ರವಾಸಿ ತಾಣಗಳ ಬಗ್ಗೆ ತಿಳಿದುಕೊಳ್ಳಿ. ಈ ಎಲ್ಲಾ ಸ್ಥಳಗಳು ಕೂಡ ನಿಮಗೆ ವಿದೇಶದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಷ್ಟೇ ಆನಂದವನ್ನು ಖಂಡಿತ ಕೊಡಬಲ್ಲವು.

ಕರ್ನಾಟಕ ರಾಜ್ಯ
ಕರ್ನಾಟಕದಲ್ಲಿ ನೋಡಲು ತುಂಬಾ ಸ್ಥಳಗಳಿವೆ. ಅದರಲ್ಲಿ ಕೂರ್ಗ್ ಒಂದು ಅದ್ಭುತ ತಾಣವಾಗಿದೆ. ಕೂರ್ಗ್ ಪ್ರವಾಸಿ ಪ್ರಿಯರ ನೆಚ್ಚಿನ ತಾಣ. ಇದು ಚಿಕ್ಕ ಸ್ಥಳವಾದರೂ ಅತ್ಯಂತ ಸುಂದರವಾದ ಗಿರಿಧಾಮವಾಗಿದೆ. ಇದನ್ನು ಪ್ರವಾಸಿಗರು ಊಟಿಗೆ ಹೋಲಿಕೆ ಮಾಡುತ್ತಾರೆ. ಮಳೆಗಾಲದಲ್ಲಿ ಅಬ್ಬೆ ಜಲಪಾತ ನೋಡಲು ಹೆಚ್ಚಿನ ಜನರು ಕುತೂಹಲದಿಂದ ಕಾಯುತ್ತಾರೆ. ಇಲ್ಲಿ ನೀರು 70 ಅಡಿ ಎತ್ತರದಿಂದ ಬೀಳುತ್ತದೆ. ಈ ದೃಶ್ಯವನ್ನು ಆನಂದಿಸಲು ಒಮ್ಮೆಯಾದರೂ ಅಬ್ಬೆ ಜಲಪಾತಕ್ಕೆ ಭೇಟಿ ನೀಡಬೇಕಿದೆ.

ಗುಜರಾತ್
ಗುಜರಾತ್ ಕೂಡ ಪ್ರವಾಸಿ ತಾಣಗಳಿಂದಾಗಿ ಬಹಳ ಪ್ರಸಿದ್ಧವಾಗಿದೆ. ಆದರೆ ಗುಜರಾತಿನಲ್ಲಿರುವ ಕೆಲವು ಸ್ಥಳಗಳನ್ನು ನೀವು ನೋಡಿರದೇ ಇರಬಹುದು. ಹೌದು, ಗುಜರಾತಿನ ಪುಟ್ಟ ಹಳ್ಳಿಯಾದ ಪಟಾನ್ ಬಗ್ಗೆ ನೀವು ಅಷ್ಟೇನೂ ಕೇಳಿರುವುದಿಲ್ಲ. ಆದರೆ ಈ ಗ್ರಾಮವು ಆಧ್ಯಾತ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿದ್ದು, ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ‘ರಾಣಿ ಕಿ ವಾವ್'ಗೂ ಹೆಸರುವಾಸಿಯಾಗಿದೆ.

ರಾಜಸ್ಥಾನದಲ್ಲಿರುವ ಬುಂದಿ
ಬುಂದಿಯು ಕೋಟಾದಿಂದ ಸುಮಾರು 36 ಕಿ.ಮೀ. ದೂರದಲ್ಲಿರುವ ಭವ್ಯವಾದ ನಗರವಾಗಿದೆ. ಅರಮನೆಗಳು ಮತ್ತು ಕೋಟೆಗಳಿಂದ ಸುತ್ತುವರಿದಿರುವ ಈ ಸ್ಥಳದ ಬಗ್ಗೆ ಕೆಲವೇ ಜನರಿಗೆ ಮಾತ್ರ ತಿಳಿದಿದೆ. ಕಿತ್ತಳೆ, ಪೇರಲ, ದಾಳಿಂಬೆ ಮತ್ತು ಮಾವಿನ ಮರಗಳಿಂದ ಕೂಡಿದ ಉದ್ಯಾನಗಳು ಬೂಂದಿಯ ಆಕರ್ಷಣೆಯಾಗಿದೆ. ಸದ್ದುಗದ್ದಲಗಳಿಂದ ದೂರವಿರುವ ಈ ಸ್ಥಳವು ಗ್ರಾಮೀಣ ಪ್ರದೇಶದ ರಾಜಸ್ಥಾನಿ ಸಂಸ್ಕೃತಿಯನ್ನು ನೋಡಲು ಬಯಸುವವರಿಗೆ ಉತ್ತಮ ಸ್ಥಳವಾಗಿದೆ.

ಈಶಾನ್ಯ ಭಾರತ
ನೀವು ಸ್ವಿಟ್ಜರ್ಲೆಂಡ್, ಆಸ್ಟ್ರೇಲಿಯಾದ ಸೌಂದರ್ಯವನ್ನು ಆನಂದಿಸಲು ಬಯಸಿದರೆ, ನೀವು ಭಾರತದ ಈಶಾನ್ಯದಲ್ಲಿರುವ ಅಸ್ಸಾಂನ ಮಜುಲಿಗೆ ಭೇಟಿ ನೀಡಬೇಕು. ಅಸ್ಸಾಂನ ಮಜುಲಿ ವಿಶ್ವದ ಅತಿದೊಡ್ಡ ಸಿಹಿನೀರಿನ ನದಿ ದ್ವೀಪಗಳಲ್ಲಿ ಒಂದಾಗಿದೆ. ಹೂವಿನ ಕಣಿವೆ, ನಾಗಾಲ್ಯಾಂಡ್‌ನಲ್ಲಿರುವ ಜುಕೌ ಕಣಿವೆಯು ತನ್ನ ಹಸಿರು ಮತ್ತು ಪ್ರಶಾಂತತೆಗೆ ಹೆಸರುವಾಸಿಯಾಗಿದೆ. ಸಿಕ್ಕಿಂನಲ್ಲಿರುವ ತ್ಸಾಂಗ್ಮೋ ಸರೋವರವು ಸಹ ನೈಸರ್ಗಿಕ ಅದ್ಭುತವಾಗಿದೆ.

ಉತ್ತರಾಖಂಡದ ಚೋಪ್ತಾ
ಉತ್ತರಾಖಂಡ ಕೂಡ ಬಹಳ ಅದ್ಭುತ ಸೌಂದರ್ಯ ಹೊಂದಿದೆ. ಆದ್ದರಿಂದ ನೀವು ಬಹಳ ಕಡಿಮೆ ಜನಕ್ಕೆ ಪರಿಚಯವಿರುವ ಚೋಪ್ತಾ ಸ್ಥಳಕ್ಕೆ ಭೇಟಿ ನೀಡಿ. ಹಿಮದಿಂದ ಆವೃತವಾದ ಪರ್ವತಗಳು, ದೇವದಾರು ಕಾಡುಗಳು ಮತ್ತು ಸಸ್ಯ ಮತ್ತು ಪ್ರಾಣಿಗಳಿಂದ ಸುತ್ತುವರೆದಿರುವ ಇದು ಒಂದು ಸಣ್ಣ ಮತ್ತು ಸುಂದರವಾದ ಹಳ್ಳಿಯಾಗಿದೆ. ಪ್ರತಿಯೊಬ್ಬ ಪ್ರಯಾಣಿಕರು ಇಲ್ಲಿಗೆ ಭೇಟಿ ನೀಡಬೇಕು. ಚೋಪ್ತಾ ಒಂದು ಹಳ್ಳಿಯಾಗಿದ್ದು, ಇಲ್ಲಿಂದ ಹಿಮಾಲಯದ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ತುಂಗನಾಥ ಮತ್ತು ಚಂದ್ರಶಿಲಾ ಕಡೆಗೆ ಹೋಗುವವರಿಗೆ ಇದು ಚಾರಣ ತಾಣವಾಗಿದೆ ಕೂಡ.

ತಮಿಳುನಾಡು
ಪ್ರವಾಸೋದ್ಯಮದ ದೃಷ್ಟಿಯಿಂದ ನೋಡುವುದಾದರೆ ತಮಿಳುನಾಡು ಕೂಡ ಉತ್ತಮ ಪ್ರವಾಸಿ ತಾಣವಾಗಿದೆ. ಇಲ್ಲಿನ ಅನೇಕ ಪ್ರವಾಸಿ ಸ್ಥಳಗಳು ಬಹಳ ಪ್ರಸಿದ್ಧವಾಗಿವೆ. ಇಲ್ಲಿನ ತೇಣಿ ಗ್ರಾಮವು ಚಹಾ ತೋಟಗಳು, ಅಣೆಕಟ್ಟುಗಳು, ದೇವಾಲಯಗಳು ಮತ್ತು ಜಲಪಾತಗಳಿಗೆ ಹೆಸರುವಾಸಿಯಾಗಿದೆ. ಇನ್ನು ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಗಡಿಯಲ್ಲಿರುವ ಪುಲಿಕಾಟ್ ಸರೋವರವು ಅನೇಕ ವಲಸೆ ಹಕ್ಕಿಗಳಿಗೆ ನೆಲೆಯಾಗಿದೆ. ನಿಸರ್ಗ ಪ್ರೇಮಿಗಳು ಇಲ್ಲಿಗೆ ಭೇಟಿ ನೀಡುವುದರಿಂದ ವಿದೇಶಿ ಪ್ರವಾಸಿ ತಾಣವಾದಂತೆ ಭಾಸವಾಗುತ್ತದೆ.

ಕೇರಳದ ‘ಗವಿ’
ಗವಿ ಕೇರಳದ ಹಾಟ್ ಸ್ಪಾಟ್ ಆಗಿದೆ. ಈ ಸ್ಥಳವು ವನ್ಯಜೀವಿಗಳಿಗೆ ಹೆಸರುವಾಸಿಯಾಗಿದೆ. ಇದು ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದ ಒಂದು ಭಾಗವಾಗಿರುವುದರಿಂದ, ನೀವು ಇಲ್ಲಿ ವಿಶಾಲವಾದ ಬಯಲು ಪ್ರದೇಶಗಳು, ಜಲಪಾತಗಳು ಮತ್ತು ಏಲಕ್ಕಿ ತೋಟಗಳನ್ನು ಕಾಣಬಹುದು. ಇಲ್ಲಿಗೆ ಬಂದಾಗ ನೀವು ಬೋಟಿಂಗ್, ಫಾರೆಸ್ಟ್ ಕ್ಯಾಂಪಿಂಗ್, ವನ್ಯಜೀವಿ ವೀಕ್ಷಣೆ, ರಾತ್ರಿ ಸಫಾರಿ, ಪ್ರಕೃತಿಯನ್ನು ನೋಡಿ ಆನಂದಿಸಬಹುದು.
ಇದೇ ರೀತಿ ಪಶ್ಚಿಮ ಬಂಗಾಳದ ಸ್ಯಾಮ್ಸಿಂಗ್, ಆಂಧ್ರಪ್ರದೇಶದ ಗಂಡಿಕೋಟಾ ಮತ್ತು ಮಹಾರಾಷ್ಟ್ರದ ನಾನೇಘಾಟ್‌ಗೆ ವಿದೇಶ ಪ್ರವಾಸದ ಕನಸು ಕಾಣುವ ಪ್ರತಿಯೊಬ್ಬ ಪ್ರಯಾಣಿಕರು ಭೇಟಿ ನೀಡಲೇಬೇಕು.


Click it and Unblock the Notifications


















