ತುಂಬು ಕುಟುಂಬ ಅಥವಾ ಅವಿಭಕ್ತ ಕುಟುಂಬ ಸಮೇತ ಪ್ರವಾಸ ಮಾಡಬೇಕೆಂದಾಗ ಧಾರ್ಮಿಕ ಸ್ಥಳಕ್ಕೊ, ಪ್ರಸಿದ್ಧ ದೇವಾಲಯಕ್ಕೊ ಭೇಟಿ ನೀಡುವುದು ಸಾಮಾನ್ಯ. ಹೌದು ಕೆಲ ಜನರು ವಾರದ ಐದು ದಿನಗಳ ಒತ್ತಡದ ಜೀವನದ ನಂತರ ಮಾಲ್, ಶಾಪಿಂಗ್, ಪಾರ್ಕ್ ಅಥವಾ ಟ್ರೆಕ್ಕಿಂಗ್ ಇಲ್ಲವೆ ರಿಸಾರ್ಟ್ ಅಂತ ತೆರಳಿದರೆ ಇನ್ನು ಕೆಲವರು ನಂಟರೊಂದಿಗೆ ಕಲೆತು ದೇವಸ್ಥಾನ ತಾಣಗಳಿಗೆ ಭೇಟಿ ನೀಡಿ ತೃಪ್ತರಾಗುತ್ತಾರೆ.
ಸ್ಥಳ ಯಾವುದೆ ಆಗಿರಲಿ ಪ್ರವಾಸ ಮಾಡುವುದು ಪ್ರಮುಖವಾದ ಚಟುವಟಿಕೆಯಾಗಿರುತ್ತದೆ ಅಂದರೆ ತಪ್ಪಿಲ್ಲ. ಇನ್ನು ಬೆಂಗಳೂರಿನ ಕುರಿತು ಹೇಳುವುದಾದರೆ ಇದರ ಸುತ್ತಮುತ್ತಲಿನಲ್ಲಿ ಸಾಕಷ್ಟು ದೈವಿ ಪ್ರಾಮುಖ್ಯತೆಯಿರುವ ಸ್ಥಳಗಳು, ಪೌರಾಣಿಕ ಮಹತ್ವ ಪಡೆದಿರುವ ದೇವಸ್ಥಾನಗಳಿರುವುದನ್ನು ಕಾಣಬಹುದು.
ವಿಶೇಷ ಲೇಖನ : ಜೆಜುರಿಯ ಖಂಡೋಬ

ಚಿತ್ರಕೃಪೆ: Gopal Venkatesan
ಇಂತಹ ಕೆಲವು ಧಾರ್ಮಿಕ ಮಹತ್ವವುಳ್ಳ ಸ್ಥಳಗಳನ್ನು ಬೆಂಗಳೂರಿನ ಸುತ್ತ ಮುತ್ತ ಪಟ್ಟಿ ಮಾಡುತ್ತ ಸಾಗಿದಾಗ ಸಿಗುವ ಒಂದು ಸುಂದರ ಸ್ಥಳವೆ ಬೆಂಗಳೂರಿನ ಶಿಲ್ಪಿಯಾದ ಕೆಂಪೇಗೌಡರ ಮಾಗಡಿ ಪಟ್ಟಣ. ಕರ್ನಾಟಕದ ರಾಮನಗರ ಜಿಲ್ಲೆಯಲ್ಲಿರುವ ಮಾಗಡಿಯು ವೆಂಕಟೇಶ್ವರನ ದೇವಸ್ಥಾನದಿಂದಾಗಿ ಅಪಾರವಾದ ಖ್ಯಾತಿಗಳಿಸಿದ್ದು ಸಾಕಷ್ಟು ಕೌಟುಂಬಿಕ ಜನರು ರಜಾ ದಿನಗಳಲ್ಲಿ ಇಲ್ಲಿಗೆ ವೆಂಕಟೇಶ್ವರನ ದರುಶನ ಕೋರಿ ಬರುತ್ತಾರೆ.

ಚಿತ್ರಕೃಪೆ: Dineshkannambadi
ಸಾಮಾನ್ಯವಾಗಿ ವೆಂಕಟೇಶ್ವರನ ದೇವಸ್ಥಾನಗಳಲ್ಲಿ ವೆಂಕಪ್ಪನು ಶಯನಾವಸ್ಥೆಯ ಭಂಗಿಯಲ್ಲಿರುವುದು ಕಂಡುಬಂದರೆ ಇಲ್ಲಿನ ವೆಂಕಟೇಶ್ವರನು ತಿರುಮಲದ ವೆಂಕಪ್ಪನ ಹಾಗೆ ನಿಂತ ಭಂಗಿಯಲ್ಲಿ ಭಕ್ತರನ್ನು ಆಶೀರ್ವದಿಸುತ್ತಿರುವುದು ಕಂಡುಬರುತ್ತದೆ. ಅಲ್ಲದೆ ಇಲ್ಲಿ ಬೆಳೆಯುವ ರಂಗಪ್ಪನ ಸನ್ನಿಧಿಯನ್ನೂ ಸಹ ಕಾಣಬಹುದಾಗಿದೆ.
ವಿಶೇಷ ಲೇಖನ : ಆದಿ ಮಧ್ಯ ಅಂತ್ಯರಂಗಗಳ ಶ್ರೀರಂಗನಾಥ
ಮುಖ್ಯ ದೇವಾಲಯದ ಪ್ರಾಂಗಣದಲ್ಲಿ ಇತರೆ ದೇವತೆಗಳ ಸನ್ನಿಧಿಗಳಲ್ಲದೆ, ಸೋಮೇಶ್ವರನ ದೇಗುಲವನ್ನೂ, ಬೆಳೆಯುವ ರಂಗನ ಸನ್ನಿಧಿಯನ್ನೂ ಸಹ ಕಾಣಬಹುದಾಗಿದೆ. ಕಪ್ಪು ಶಿಲೆಯಲ್ಲಿ ಒಡಮೂಡಿದ ರಂಗನಾಥನ ಆಕಾರವು ಪ್ರತಿ ವರ್ಷವೂ ಬೆಳೆಯುತ್ತಿದೆ ಎಂದು ಹೇಳಲಾಗಿದೆ.

ಬೆಳೆಯುತ್ತಿರುವ ರಂಗ
ಚಿತ್ರಕೃಪೆ: Gopal Venkatesan
ಮಾಗಡಿಯು ಬೆಂಗಳೂರಿನಿಂದ ಸುಮಾರು 50 ಕಿ.ಮೀ ಗಳಷ್ಟು ದೂರದಲ್ಲಿದೆ. ಮಾಗಡಿಗೆ ತಲುಪಲು ಎರಡು ಆಯ್ಕೆಗಳಿದ್ದು ಒಂದು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ನಾಲ್ಕರ (ತುಮಕೂರು ರಸ್ತೆ) ಮೂಲಕ ಸಾಗುತ್ತ ಮುಂದೆ ಎಡ ತಿರುವು ಪಡೆದು ಮಂಗಳೂರು - ಬೆಂಗಳೂರು ಹೆದ್ದಾರಿ ಹಿಡಿದು ಮಾಗಡಿಯನ್ನು ತಲುಪಬಹುದಾಗಿದೆ.

ಮಾಗಡಿಯ ಸೋಮೇಶ್ವರನ ದೇಗುಲ
ಚಿತ್ರಕೃಪೆ: Dineshkannambadi
ಇನ್ನೊಂದು ಆಯ್ಕೆ ಬೆಂಗಳೂರಿನಿಂದ ಸುಂಕದಕಟ್ಟೆ ಮಾರ್ಗವಾಗಿ ಮಾಗಡಿ ರಸ್ತೆಯನ್ನು ಹಿಡಿದು ನೇರವಾಗಿ ಮಾಗಡಿಯನ್ನು ತಲುಪಬಹುದಾಗಿದೆ. ಅಲ್ಲದೆ ಬೆಂಗಳೂರಿನ ಕೆ.ಆರ್ ಮಾರುಕಟ್ಟೆ ಪ್ರದೇಶದಿಂದ ಸಾಕಷ್ಟು ಖಾಸಗಿ ಬಸ್ಸುಗಳು ಮಾಗಡಿಗೆ ತೆರಳಲು ದೊರೆಯುತ್ತವೆ. ಮಾಗಡಿ ರಸ್ತೆಯ ಪ್ರವಾಸವು ಬೆಂಗಳೂರಿಗೆ ನೀರು ಸರಬರಾಜು ಮಾಡುವ ತಿಪ್ಪಗೊಂಡನಹಳ್ಳಿ ಜಲಾಶಯದ ಮೂಲಕ ಹಾದು ಹೋಗುವುದರಿಂದ ಈ ಆಯ್ಕೆ ಸೂಕ್ತ. ಆದರೆ ಕಾರಿನಲ್ಲಿ ಸಾಗಿದಾಗ ಮಾತ್ರ ಈ ರೀತಿಯಾಗಿ ಸಾಗುವುದು ಒಳ್ಳೆಯದು.
ವಿಶೇಷ ಲೇಖನ : ತಲಕಾಡುವಿನಿಂದ ಶಿವನಸಮುದ್ರದೆಡೆ

ತಿಪ್ಪಗೊಂಡನಹಳ್ಳಿ ಜಲಾಶಯ ಹಿನ್ನೀರಿನಲ್ಲಿ
ಚಿತ್ರಕೃಪೆ: Phaneesh N
ಸಾಮಾನ್ಯರಿಗೆ ಈ ಜಾಲಶಯ ಪ್ರವೇಶಿಸಲು ಅನುಮತಿಯಿಲ್ಲದಿರುವುದರಿಂದ ಮೊದಲೆ ಬೆಂಗಳೂರಿನ ಕಾವೇರಿ ಭವನದಿಂದ ಇಲ್ಲಿಗೆ ಭೇಟಿ ನೀಡುವ ಕುರಿತು ಮನವಿ ಪತ್ರ ಸಲ್ಲಿಸಿ ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಪತ್ರ ಪಡೆಯುವುದು ಒಳಿತು. ಇಲ್ಲವೆಂದರೆ ದೂರದಿಂದ ಜಲಾಶಯ ತಾಣ ನೋಡುತ್ತ ಸಾಗಬೇಕಾಗುತ್ತದೆ. ಜಲಾಶಯ ತಾಣವು ಶಾಂತಮಯವಾಗಿದ್ದು ಪಕ್ಷಿಗಳ ಚಿಲಿಪಿಲಿಯ ಜೊತೆ ಅದ್ಭುತವಾದ ಸಮಯವನ್ನು ಕಳೆಯಬಹುದು.


Click it and Unblock the Notifications
















