ದೆಹಲಿಯ 'ಗುರುದ್ವಾರ ಬಾಂಗ್ಲಾ ಸಾಹಿಬ್' ದೇಶದ ಅತಿದೊಡ್ಡ ಸಿಖ್ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲ, ದೆಹಲಿಯ ಅತಿ ದೊಡ್ಡ ಪ್ರವಾಸಿ ತಾಣವಾಗಿದೆ. ಇದನ್ನು 1783 ರಲ್ಲಿ ಸಿಖ್ ಜನರಲ್ ಸರ್ದಾರ್ ಭಾಗೇಲ್ ಸಿಂಗ್ ನಿರ್ಮಿಸಿದರು. ನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಇದರ ಆವರಣದಲ್ಲಿ ಪ್ರಾರ್ಥನಾ ಮಂದಿರ, ಆಸ್ಪತ್ರೆ, ಶಾಲೆ, ವಸ್ತುಸಂಗ್ರಹಾಲಯವೂ ಇದೆ. ಇಲ್ಲಿಗೆ ಬರುವ ಜನರಿಗೆ ಕಡ ಪ್ರಸಾದ ಸಹ ಕೊಡಲಾಗುತ್ತದೆ. ಊಟದ ವ್ಯವಸ್ಥೆಯೂ ಇದ್ದು, ಇದನ್ನು ಇಲ್ಲಿ ಲಂಗರ್ ಎಂದು ಕರೆಯಲಾಗುತ್ತದೆ.
ಸುಮಾರು 24 ಗಂಟೆಯೂ ಕೇಳಿಬರುವ ಪವಿತ್ರ ಪಠಣಗಳು ದೈವಿಕ ವಾತವರಣ ಸೃಷ್ಟಿಸಿವೆ. ಇದೆಲ್ಲದರ ಹೊರತಾಗಿ, ದೇವಾಲಯಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ. ಇವುಗಳ ಬಗ್ಗೆ ನೀವು ತಿಳಿಯದಿರಬಹುದು. ಹಾಗಾದರೆ ಗುರುದ್ವಾರ ಬಾಂಗ್ಲಾ ಸಾಹಿಬ್'ಗೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ಸಂಗತಿಗಳ ಬಗ್ಗೆ ತಿಳಿಯೋಣ ಬನ್ನಿ...

ಹಿಂದೆ ಜೈಸಿಂಗ್ ಪುರ ಆಗಿತ್ತು
ಅನೇಕ ಜನರು ಇದನ್ನು ಸಿಖ್ ದೇವಾಲಯವೆಂದು ಪರಿಗಣಿಸುತ್ತಾರೆ. ಆದರೆ ನಿಜ ಹೇಳಬೇಕೆಂದರೆ ಇದು ರಾಜ ಜೈ ಸಿಂಗ್ ಅವರ ಬಂಗಲೆಯಾಗಿತ್ತು. ಅವರು 17 ನೇ ಶತಮಾನದಲ್ಲಿ ಆಡಳಿತಗಾರರಾಗಿದ್ದರು. ಬಂಗಲೆಯನ್ನು ಜೈ ಸಿಂಗ್ ಪುರ ಅರಮನೆ ಎಂದು ಕರೆಯಲಾಗುತ್ತಿತ್ತು. ಹಾಗೆಯೇ ಈ ಸ್ಥಳವನ್ನು ಹಿಂದೆ ಜೈಸಿಂಗ್ ಪುರ ಎಂದು ಕರೆಯಲಾಗುತ್ತಿತ್ತು. ಇದನ್ನು ಈಗ ಕನ್ನಾಟ್ ಪ್ಲೇಸ್ ಎಂದು ಕರೆಯಲಾಗುತ್ತದೆ.

ಸಿಖ್ಖರ 8ನೇ ಗುರುವಿಗೆ ಅರ್ಪಣೆ
ಸಿಖ್ಖರ 8ನೇ ಗುರು ‘ಗುರು ಹರಕೃಷ್ಣ' ಅವರು 1664 ರಲ್ಲಿ ದೆಹಲಿಗೆ ಭೇಟಿ ನೀಡಿದಾಗ, ಅವರು ಅರಮನೆಯಲ್ಲಿಯೇ ಉಳಿದರು. ಆದರೆ ಅದೇ ಸಮಯದಲ್ಲಿ ಈ ಪ್ರದೇಶದಲ್ಲಿ ಜನರು ಸಿಡುಬು ಮತ್ತು ಕಾಲರಾ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದರು. ಗುರು ಹರಕೃಷ್ಣ ಅವರು ಸಿಖ್ ಧರ್ಮದ ಬೋಧನೆಗಳಿಗೆ ಅನುಸಾರವಾಗಿ, ಬಂಗಲೆಯಲ್ಲಿನ ಬಾವಿಯಿಂದ ಶುದ್ಧ ನೀರನ್ನು ನೀಡುವ ಮೂಲಕ ಜನರಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದರು. ಇದರಿಂದ ರೋಗಪೀಡಿತರು ಗುಣವಾದರು. ಆದರೆ ದುರದೃಷ್ಟವಶಾತ್ ಗುರುಗಳು ಈ ಕಾಯಿಲೆಗೆ ತುತ್ತಾಗಿ ಮಾರ್ಚ್ 30, 1664 ರಂದು ನಿಧನರಾದರು. ನಂತರ ರಾಜಾ ಜೈ ಸಿಂಗ್ ಅವರು ಈ ಬಂಗಲೆಯನ್ನು ಎಂಟನೇ ಸಿಖ್ ಗುರುಗಳಿಗೆ ಅರ್ಪಿಸಿದರು.

ಕಾಯಿಲೆಯನ್ನು ಗುಣಪಡಿಸುತ್ತದೆ ಕೊಳದ ನೀರು
ಗುರುಗಳ ಮರಣದ ನಂತರ, ರಾಜ ಜೈ ಸಿಂಗ್ ಬಾವಿಯ ಮೇಲೆ ಒಂದು ಸಣ್ಣ ಕೊಳವನ್ನು ನಿರ್ಮಿಸಿದನು. ಈ ಕೊಳದ ನೀರು ಕಾಯಿಲೆಗಳನ್ನು ಗುಣಪಡಿಸುವ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಆದ್ದರಿಂದ ಪ್ರಪಂಚದಾದ್ಯಂತ ಸಿಖ್ಖರು ಇಲ್ಲಿಗೆ ಬಂದು ಕೊಳದಿಂದ ನೀರನ್ನು ತೆಗೆದುಕೊಳ್ಳುತ್ತಾರೆ. ಇದನ್ನು ಅವರು 'ಅಮೃತ್' ಎಂದೂ ಕರೆಯುತ್ತಾರೆ. ಪ್ರಪಂಚದಾದ್ಯಂತ ಬಾಂಗ್ಲಾ ಸಾಹಿಬ್'ಗೆ ಬರುವ ಭಕ್ತರು ನೀರನ್ನು ಬಾಟಲಿಗಳಲ್ಲಿ ತೆಗೆದುಕೊಂಡು ಹೋಗುತ್ತಾರೆ.

365 ದಿನವೂ ಲಂಗರ್ ಇರುತ್ತದೆ
ನೀವು ಎಂದಾದರೂ ಗುರುದ್ವಾರಕ್ಕೆ ಹೋದರೆ, ಅಲ್ಲಿ ಯಾವುದೇ ಶುಲ್ಕವಿಲ್ಲದೆ ಉಚಿತ ಆಹಾರವನ್ನು ನೀಡುವುದನ್ನು ನೀವು ನೋಡಿರಬೇಕು. ಇದನ್ನು ಲಂಗರ್ ಎಂದು ಕರೆಯಲಾಗುತ್ತದೆ. ಲಂಗರ್ ಆಹಾರವು ತುಂಬಾ ರುಚಿಕರವಾಗಿರುತ್ತದೆ. ಬಾಂಗ್ಲಾ ಸಾಹಿಬ್‌ನ ಸಭಾಂಗಣವು ಎಷ್ಟು ದೊಡ್ಡದಾಗಿದೆ ಎಂದರೆ 800-900 ಜನರು ಒಟ್ಟಿಗೆ ಕುಳಿತು ಲಂಗರ್ ತಿನ್ನಬಹುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಇಲ್ಲಿ ಪ್ರತಿದಿನ 35 ರಿಂದ 75 ಸಾವಿರ ಜನರು ಲಂಗರ್ ಸೇವಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಲಂಗರ್ ಬೆಳಿಗ್ಗೆ 5 ರಿಂದ ಪ್ರಾರಂಭವಾಗುತ್ತದೆ ಮತ್ತು ತಡರಾತ್ರಿಯವರೆಗೆ ನಡೆಯುತ್ತದೆ. ಅಂದಹಾಗೆ ಅಡುಗೆಮನೆಗೆ ಹೋಗುವ ಯಾರಾದರೂ ಲಂಗರ್ ಮಾಡಲು ಸಹಾಯ ಮಾಡಬಹುದು. ಇದು ವರ್ಷದ 365 ದಿನಗಳ ಕಾಲವೂ ತೆರೆದಿರುತ್ತದೆ.

ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ
ಅನೇಕ ವರ್ಷಗಳಿಂದ ಸಾವಿರಾರು ಜನರಿಗೆ ಆಹಾರ ನೀಡಿದ ನಂತರ, ಬಡವರಿಗೆ ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸಲು ಇಲ್ಲಿ ಆರೋಗ್ಯ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಮಾಡುವ ಎಂಆರ್ ಐ ಸ್ಕ್ಯಾನ್ ಗೆ ಇಲ್ಲಿನ ಜನರಿಂದ ಕೇವಲ 50 ರೂಪಾಯಿ ತೆಗೆದುಕೊಳ್ಳುತ್ತಾರೆ. ಡಯಾಗ್ನೋಸ್ಟಿಕ್ ಸೆಂಟರ್ ಕಿಡ್ನಿ ಡಯಾಲಿಸಿಸ್ ಆಸ್ಪತ್ರೆಯನ್ನೂ ಆರಂಭಿಸಿದೆ. ರೋಗಿಗಳನ್ನು ಉಚಿತವಾಗಿ ಇಲ್ಲಿ ದಾಖಲಿಸುವುದರಿಂದ ಯಾವುದೇ ನಗದು ಅಥವಾ ಬಿಲ್ಲಿಂಗ್ ಕೌಂಟರ್ ಇಲ್ಲ. ದೆಹಲಿಯ ಹೊರಗಿನಿಂದ ಬರುವ ಜನರು ಗುರುದ್ವಾರದ ಕೊಠಡಿಗಳಲ್ಲಿ ಉಳಿದುಕೊಳ್ಳಬಹುದು ಮತ್ತು ಲಂಗರ್ ಹಾಲ್'ನಲ್ಲಿ ಆಹಾರ ಸೇವಿಸಬಹುದು.

ಹೋಗುವುದು ಹೇಗೆ?
ಗುರುದ್ವಾರವು ದೆಹಲಿಯ ಹೃದಯದ ಭಾಗ ಎಂದು ಕರೆಯಲ್ಪಡುವ ಕನ್ನಾಟ್ ಪ್ಲೇಸ್‌ನಲ್ಲಿದೆ. ಮೆಟ್ರೋದಲ್ಲಿ ಪ್ರಯಾಣಿಸುವವರು ನೀಲಿ ಮಾರ್ಗ ಮತ್ತು ಹಳದಿ ಮಾರ್ಗದ ಮೂಲಕ ಇಲ್ಲಿಗೆ ಸುಲಭವಾಗಿ ತಲುಪಬಹುದು. ನೀವು ನೀಲಿ ಮಾರ್ಗದ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದರೆ ರಾಜೀವ್ ಚೌಕ್'ನಲ್ಲಿ ಇಳಿಯಿರಿ. ಗುರುದ್ವಾರವನ್ನು ತಲುಪಲು ಆಟೋ ರಿಕ್ಷಾ ಸಹ ಬಳಸಬಹುದು. ಪಟೇಲ್ ಚೌಕ್ ಮೆಟ್ರೋ ನಿಲ್ದಾಣವು ಹಳದಿ ಮಾರ್ಗದ ಹತ್ತಿರದ ಮೆಟ್ರೋ ನಿಲ್ದಾಣವಾಗಿದೆ. ಇದು ಗುರುದ್ವಾರ ಬಾಂಗ್ಲಾ ಸಾಹಿಬ್‌ನಿಂದ 2 ಕಿಲೋಮೀಟರ್ ದೂರದಲ್ಲಿದೆ. ಗುರುದ್ವಾರ ಬಾಂಗ್ಲಾ ಸಾಹಿಬ್ ಅನ್ನು ತಲುಪಲು ನೀವು ಕ್ಯಾಬ್ ಅನ್ನು ಸಹ ಬಾಡಿಗೆಗೆ ಪಡೆಯಬಹುದು.
ಗುರುದ್ವಾರಕ್ಕೆ ಹೋಗುವಾಗ ನಿಮ್ಮ ತಲೆಯನ್ನು ಪೂರ್ತಿಯಾಗಿ ಕವರ್ ಮಾಡಿರಬೇಕು. ಕೈ-ಕಾಲು ಕವರ್ ಆಗುವಂತಹ ಯಾವುದಾದರೂ ದಿರಿಸು ಧರಿಸಿ. ಬೇಸಿಗೆಯಲ್ಲಿ, ಗುರುದ್ವಾರಕ್ಕೆ ಮುಂಜಾನೆ ಅಥವಾ ಸಂಜೆ ಭೇಟಿ ನೀಡಿ. ಏಕೆಂದರೆ ಈ ಆವರಣಗಳು ಮಧ್ಯಾಹ್ನದ ಸಮಯಕ್ಕಿಂತ ಈ ಸಮಯದಲ್ಲಿ ಸ್ವಲ್ಪ ತಂಪಾಗಿರುತ್ತವೆ. ಮದ್ಯ ಮತ್ತು ತಂಬಾಕನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.


Click it and Unblock the Notifications















